ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಎಂ.ಬಿ.ಅಯ್ಯನಹಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕಿ ಮಾಡಿದ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ವೈರಲ್ ಆಗಿದೆ.
ಹಾರಕಭಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹೊಸೂರಪ್ಪ ಅವರು ‘ಸಾಂಗ್ಲಿಯಾನ’ ಚಿತ್ರದ ‘ಬಂದಳೋ ಬಂದಳೋ ಕಾಂಚನಾ’ ಹಾಡಿಗೆ ಥೇಟ್ ನಟ ಶಂಕರನಾಗ್ ಅವರಂತೆ ಹೆಜ್ಜೆ ಹಾಕಿದ್ದಾರೆ. ಎಂ.ಬಿ. ಅಯ್ಯನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಗೀತಾ ಅವರು ಜನಪದ ಹಾಡಿಗೆ ನೃತ್ಯ ಮಾಡಿದ್ದಾರೆ. ಶಿಕ್ಷಕರಿಬ್ಬರ ಡಾನ್ಸ್ ನೋಡಿ ವಿದ್ಯಾರ್ಥಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಹುರಿದುಂಬಿಸಿದ್ದಾರೆ. ಕೇಕೆ ಹಾಕಿದ್ದಾರೆ.
ಶಿಕ್ಷಕರಿಬ್ಬರೂ ವೇದಿಕೆಯ ಮೇಲೆ ಹೆಜ್ಜೆ ಹಾಕಿ, ಮಕ್ಕಳನ್ನು ಹುರಿದುಂಬಿಸಿದ್ದು ಉತ್ತಮ. ಇದರಿಂದ ವಿದ್ಯಾರ್ಥಿಗಳಲ್ಲಿ ಧೈರ್ಯ ಮೂಡುತ್ತದೆ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.