ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುವ ನೆಲ ಗಟ್ಟಿ ಮಾಡುವ ಯತ್ನ?

ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಹೊಸಪೇಟೆ ಆಯ್ಕೆ–ಕಾರ್ಯಕರ್ತರಲ್ಲಿ ಹುರುಪು ತುಂಬುವ ಹಂಬಲ
Published 28 ಏಪ್ರಿಲ್ 2024, 4:40 IST
Last Updated 28 ಏಪ್ರಿಲ್ 2024, 4:40 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಭಾಷಣವನ್ನು ಹೊಸಪೇಟೆಯಲ್ಲಿ ಆಯೋಜಿಸುವುದಕ್ಕೆ ಕಾರಣ ಏನು ಎಂಬ ಪ್ರಶ್ನೆ ಬಳ್ಳಾರಿ ಕ್ಷೇತ್ರದ ತುಂಬೆಲ್ಲ ಕಾರ್ಯಕರ್ತರ ಮನದಲ್ಲಿ ಮಾರ್ದನಿಸುತ್ತಿದ್ದು, ಕುಸಿಯುತ್ತಿರುವ ನೆಲವನ್ನು ಗಟ್ಟಿಗೊಳಿಸುವ ಕೊನೆಯ ಪ್ರಯತ್ನದ ಭಾಗ ಎಂಬ ಉತ್ತರ ಪಕ್ಷದ ವಲಯದಿಂದ ಕೇಳಿಬಂದಿದೆ.

ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಗಳಲ್ಲಿ ಚಿರಪರಿಚಿತರೇ. ಆದರೆ ಅವರನ್ನು ಇಷ್ಟಪಡುವವರಂತೆ, ವಿರೋಧಿಸುವವರೂ ಪಕ್ಷದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಈ ಬಾರಿ ವಿರೋಧಿಸುವವರ ಪ್ರಮಾಣ ಸ್ವಲ್ಪ ಹೆಚ್ಚೇ ಇದೆ ಎಂಬ ಕಾರಣಕ್ಕೋ ಏನೋ, ಮೋದಿ ಹೆಸರೂ ಅವರ ನೆರವಿಗೆ ಅಷ್ಟಾಗಿ ಬರಲಾರದೆ ಹೋಗಬಹುದು ಎನ್ನುವ ಮಾತು ವ್ಯಾಪಕವಾಗಿತ್ತು. ಪ್ರಚಾರ ಆರಂಭವಾದ ಕೆಲವೇ ದಿನಗಳಲ್ಲಿ ಪಕ್ಷದ ವರಿಷ್ಠರಿಗೆ ಈ ವಿಷಯ ಮನದಟ್ಟಾದ ಕಾರಣ ಪ್ರಧಾನಿ ಮೋದಿ ಅವರನ್ನೇ ಹೊಸಪೇಟೆಗೆ ಕರೆಸಲು ನಿರ್ಧರಿಸಿದರು ಎಂದು ಹೇಳಲಾಗಿದೆ.

ವಿ.ಎಸ್‌.ಉಗ್ರಪ್ಪ ಬದಲಿಗೆ ಇ.ತುಕಾರಾಂ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆತಾಗ ವಿಜಯನಗರ ಭಾಗದಲ್ಲಿ ಬಿಜೆಪಿ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣಿಸಿರಲಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಕೊನೆಗೂ ಮೇಲ್ಮಟ್ಟದಲ್ಲಿ ಕಾಣಿಸಿದ ಒಗ್ಗಟ್ಟು ತಳಮಟ್ಟದಲ್ಲಿ ಬಿಜೆಪಿಯ ತಳಮಳ ಹೆಚ್ಚುವಂತೆ ಮಾಡಿತು, ಮೋದಿ ಹೆಸರಲ್ಲಿ ಸುಲಭವಾಗಿ ಗೆಲುವು ಸಾಧಿಸಲು ಅಸಾಧ್ಯ ಎಂಬಂತಹ ವಾತಾರಣ ನಿರ್ಮಾಣವಾಯಿತು ಎಂದೂ ಹೇಳಲಾಗುತ್ತಿದೆ.

ರಾಯಚೂರಲ್ಲಿ ಅಥವಾ ಕೊಪ್ಪಳದಲ್ಲಿ ಪ್ರಧಾನಿ ಕಾರ್ಯಕ್ರಮ ನಡೆಸುವುದು ಈ ಮೊದಲಿನ ಕಾರ್ಯಕ್ರಮ ಪಟ್ಟಿಯಲ್ಲಿತ್ತು. ಆದರೆ ಬಳ್ಳಾರಿಯಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮವಾಗಿದೆ ಎಂದು ಭಾವಿಸಿದ ವರಿಷ್ಠರು ಮೂರೂ ಜಿಲ್ಲೆಗಳಿಗೆ ಬಹುತೇಕ ಮಧ್ಯಭಾಗದಲ್ಲಿರುವ ಹೊಸಪೇಟೆಯಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಾಲಿ ಸಂಸದರು ದೂರ: ಬಿಜೆಪಿಯ ಹಾಲಿ ಸಂಸದ ವೈ.ದೇವೇಂದ್ರಪ್ಪ ಅವರು ಶ್ರೀರಾಮುಲು ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ. ಕ್ಷೇತ್ರದ ಏಕೈಕ ಬಿಜೆಪಿ ಶಾಸಕ ಕೃಷ್ಣ ನಾಯ್ಕ ಮತ್ತು ಏಕೈಕ ಜೆಡಿಎಸ್ ಶಾಸಕ ನೇಮಿರಾಜ ನಾಯ್ಕ ಅವರು ಸಹ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲಿ ತೊಡಗಿದ್ದು ಕಾಣಿಸಿಲ್ಲ. ಜತೆಗೆ ಬಿಸಿಲಿನ ತಾಪವೂ ಶ್ರೀರಾಮುಲು ಅವರ ಮುಖ ಬಾಡುವಂತೆ ಮಾಡಿಬಿಟ್ಟಿದೆ. ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಏಕೈಕ ಟಾನಿಕ್ ಎಂದರೆ ಮೋದಿ ಮಾತ್ರ ಎಂಬುದನ್ನು ತಿಳಿದ ವರಿಷ್ಠರು, ಕೊನೆಯ ಪ್ರಯತ್ನದ ಭಾಗವಾಗಿ ಮೋದಿ ಅವರನ್ನು ಹೊಸಪೇಟೆಗೆ ಕರೆಸುವ ಯೋಜನೆ ರೂಪಿಸಿದರು ಎಂದು ಪಕ್ಷದ ಆಳ ಅಗಲ ಬಲ್ಲ ನಾಯಕರೊಬ್ಬರು ತಿಳಿಸಿದರು.

‘ಹಾಲಿ ಸಂಸದ ದೇವೇಂದ್ರಪ್ಪ ಅವರು ಅಸಮಾಧಾನ ಹೊಂದಿಲ್ಲ. ಪ್ರಧಾನಿ ಅವರ ಸಮಾವೇಶಕ್ಕೆ ಅವರು ಸಹ ಬರಲಿದ್ದಾರೆ. ಕೃಷ್ಣ ನಾಯ್ಕ್‌, ನೇಮಿರಾಜ ನಾಯ್ಕ್ ಅವರೂ ಇರಲಿದ್ದಾರೆ. ಜೆಡಿಎಸ್‌ ಬೆಂಬಲದೊಂದಿಗೆ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಮಹಾನ್‌ ಮಹಿಳಾ ಶಕ್ತಿ

‘ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದೆ. ಅದನ್ನು ಸರಿಯಾಗಿ ಬಿಂಬಿಸಿದರೆ ಎಲ್ಲಾ ಜಾತಿ ಸಮುದಾಯದ ಮಹಿಳೆಯರ ಒಲವು ಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರದ ಯೋಜನೆಗಳನ್ನು ಮನವರಿಕೆ ಮಾಡಿಸಲು ಗಂಭೀರ ಪ್ರಯತ್ನ ಮಾಡಲಿದ್ದೇವೆ’ ಎಂದು ಪಕ್ಷದ ಬಳ್ಳಾರಿ ಕ್ಷೇತ್ರದ ಪ್ರಭಾರಿ ಪ್ರಮೋದ್ ಕಾರ್ಕೂನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT