ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಬಸವೇಶ್ವರ ಜಿಲ್ಲೆ, ಇಂಡಿ ಪ್ರತ್ಯೇಕಕ್ಕೂ ಪಣ

Published 6 ನವೆಂಬರ್ 2023, 5:25 IST
Last Updated 6 ನವೆಂಬರ್ 2023, 5:25 IST
ಅಕ್ಷರ ಗಾತ್ರ

ವಿಜಯಪುರ: ‘ಕರ್ನಾಟಕ’ ರಾಜ್ಯೋತ್ಸವ ಸಂದರ್ಭದಲ್ಲೇ ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ಹಾಗೂ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿಬಂದಿದೆ. ಇದು ಕೇಳಿಬಂದಿರುವುದು ಜನಸಾಮಾನ್ಯರಿಂದಲ್ಲ, ಆಡಳಿತರೂಢ ಕಾಂಗ್ರೆಸ್‌ ಶಾಸಕರು, ಸಚಿವರಿಂದ ಎಂಬುದು ವಿಶೇಷ. 

ಹೌದು, ‘ಬಿಜಾಪುರ’ವು ವಿಜಯಪುರವಾಗಿ ಬದಲಾಗಿ ಕೇವಲ 10 ವರ್ಷಗಳಾಗಿವೆ. ಅದಾಗಲೇ ಮತ್ತೆ ಜಿಲ್ಲೆಯ ಹೆಸರು ಬದಲಾವಣೆಯ ಚರ್ಚೆ ಆರಂಭವಾಗಿದೆ. ವಿಶ್ವಗುರು ಬಸವಣ್ಣನವರ ಹೆಸರನ್ನು ಜಿಲ್ಲೆಗೆ ನಾಮಕರಣ ಮಾಡಬೇಕು ಎಂಬ ಬೇಡಿಕೆ ದಿಢೀರನೆ ವ್ಯಕ್ತವಾಗಿದ್ದು, ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ವಿಶೇಷ ಆಸಕ್ತಿ ಇದೆ ಎಂಬ ಮಾತು ಕೇಳಿಬರುತ್ತಿದೆ.

ವಿಜಯಪುರ ಹೆಸರು ಬದಲಾವಣೆ ವಿಷಯವಾಗಿ 15 ದಿನಗಳ ಒಳಗಾಗಿ ಅಭಿಪ್ರಾಯ, ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಅವಕಾಶ ಕಲ್ಪಿಸಿದ್ದು, ಗಡುವು ಮುಗುಯುತ್ತಾ ಬಂದಿದೆ. ಜಿಲ್ಲೆಯ ಹಿರಿಯ ವಿದ್ವಾಂಸರು, ಸಾಹಿತಿಗಳು, ಜನಪ್ರತಿನಿಧಿಗಳು, ಇತಿಹಾಸ ತಜ್ಞರು, ಸಂಘ, ಸಂಸ್ಥೆಗಳ ಮುಖಂಡರು ಹೆಸರು ಬದಲಾವಣೆ ಪರ, ವಿರುದ್ಧ ಈಗಾಗಲೇ ಹೇಳಿಕೆ, ಮನವಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ಇಂಡಿ ಪ್ರತ್ಯೇಕ ಜಿಲ್ಲೆ ವಿಷಯದ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ಬೇಡ ಎಂಬ ಅಭಿಪ್ರಾಯ ಹೆಚ್ಚು ವ್ಯಕ್ತವಾಗಿದೆ. ಒಂದಷ್ಟು ಸಂಘಟನೆಗಳ ಮುಖಂಡರು ಮಾತ್ರ ಬಸವಣ್ಣನ ಹೆಸರನ್ನು ನಾಮಕರಣ ಮಾಡುವ ಮೂಲಕ ಬಸವಣ್ಣನಿಗೆ ಗೌರವ ಸಲ್ಲಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆಡಳಿತಾತ್ಮಕ ಉದ್ದೇಶದಿಂದ ಪದೇ ಪದೇ ಹೆಸರು ಬದಲಾವಣೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.  

ಜಿಲ್ಲೆಯ ಹೆಸರು ಬದಲಾವಣೆಗಿಂತ ಬಸವಣ್ಣನವರ ಹೆಸರು ಮುನ್ನೆಲೆಗೆ ಬಂದಿರುವುದರಿಂದ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ವಿಷಯವಾಗಿ ಪರಿಣಮಿಸಿದೆ. ಇದು ಮುಂದೆ ಯಾವ ಬಣ್ಣ ಬಳಿದುಕೊಳ್ಳುತ್ತದೆಯೋ ಎಂಬ ಕಾರಣಕ್ಕೆ ಈ ವಿಷಯವಾಗಿ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ.

ಇಂಡಿ ಪ್ರತ್ಯೇಕ ಜಿಲ್ಲೆ

ಅದೇ ರೀತಿ, ಇಂಡಿ ತಾಲ್ಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ. ಇಂಡಿ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಜನತೆ ಕೇಳದೇ ಇದ್ದರೂ ‘ಪ್ರತ್ಯೇಕ ಜಿಲ್ಲೆ ಮಾಡಿಯೇ ತೀರುತ್ತೇನೆ, ಇಲ್ಲವೇ 2028ರ ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ‘ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ಕ್ಷೇತ್ರದ ಮತದಾರರಿಗೆ ವಾಗ್ದಾನ ಮಾಡಿದ್ದಾರೆ.

ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬುದು ಈ ಭಾಗದ ಜನತೆಯ ಬಹು ವರ್ಷದ ಬೇಡಿಕೆಯಾಗಿದೆ. ಈ ಪ್ರಸ್ತಾವಕ್ಕೆ ಈಗಾಗಲೇ ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದ್ದಾರೆ.
ಯಶವಂತರಾಯವಗೌಡ ಪಾಟೀಲ, ಶಾಸಕ ಇಂಡಿ

ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಈಗಾಗಲೇ ತಿಳಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಪ್ರತ್ಯೇಕ ಜಿಲ್ಲೆ, ವಿಜಯಪುರ ಹೆಸರು ಬದಲಾವಣೆ ಕೂಗು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ಕಾದುನೋಡಬೇಕಿದೆ.

ತಾಲ್ಲೂಕು ಹಂಚಿಕೆ

ಇಂಡಿ ಪ್ರತ್ಯೇಕ ಜಿಲ್ಲೆ ಮಾಡಲು ಅಗತ್ಯ ತಾಲ್ಲೂಕುಗಳ ಹೊಂದಾಣಿಕೆ ಮಾಡಬೇಕಾಗುತ್ತದೆ.

ಇಂಡಿ ಸೇರಿದಂತೆ ಚಡಚಣ, ದೇವರಹಿಪ್ಪರಗಿ, ಆಲಮೇಲ ಮತ್ತು ಸಿಂದಗಿ ಸೇರಿಸಿ ಇಂಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕಾಗುತ್ತದೆ. ಇನ್ನುಳಿದ ವಿಜಯಪುರ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ತಿಕೋಟಾ, ಬಬಲೇಶ್ವರವನ್ನು ವಿಜಯಪುರ ಜಿಲ್ಲೆಯಲ್ಲಿ ಉಳಿಸಬೇಕಾಗುತ್ತದೆ ಎಂಬ ಲೆಕ್ಕಾಚಾರ ಇದೆ.

ಇಂಡಿ ಪ್ರತ್ಯೇಕ ಜಿಲ್ಲೆಗೆ ಸೇರ್ಪಡೆಯಾಗಲು ಈ ತಾಲ್ಲೂಕುಗಳ ಜನರ ಅಭಿಪ್ರಾಯವೇನು ಆಲಿಸಬೇಕಾಗುತ್ತದೆ. ಅಲ್ಲದೇ, ಇಂಡಿ ಪ್ರತ್ಯೇಕ ಜಿಲ್ಲೆಯಾದರೆ ಆಡಳಿತಾತ್ಮಕವಾಗಿ ಆಗುವ ಲಾಭ, ನಷ್ಟವೇನು, ಜನಸಾಮಾನ್ಯರಿಗೆ ಅನುಕೂಲಗಳೇನು ಎಂಬ ಬಗ್ಗೆ ಚರ್ಚೆ ಇನ್ನಷ್ಟೇ ನಡೆಯಬೇಕಿದೆ.

ವಿಜಯಪುರ ಹೆಸರು ಬದಲಾವಣೆ ಮತ್ತು ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ವಿಷಯವಾಗಿ ಇದುವರೆಗೂ ಜನ ಹೋರಾಟದ ಸ್ವರೂಪ ಪಡೆದಿಲ್ಲ, ಮುಂದಿನ ದಿನಗಳಲ್ಲಿ ಈ ವಿಷಯಗಳು ಜನರ ಧ್ವನಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT