ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದನೇ ತಲೆಮಾರು ಕಂಡ ಗೌರಮ್ಮಜ್ಜಿ

Last Updated 2 ಜೂನ್ 2014, 6:33 IST
ಅಕ್ಷರ ಗಾತ್ರ

ಎಲ್ಲೆಡೆ ಅಜ್ಜ –ಅಜ್ಜಿಯರು ನೂರು ವಸಂತ ಪೂರೈಸಿದ ನಂತರ ಮಮ್ಮಕ್ಕಳು, ಮರಿಮಮ್ಮಕ್ಕಳನ್ನು ಕಂಡು ನಗೆ ಬೀರಿರುವರನ್ನು ಕಂಡಿದ್ದೇವೆ. ಆದರೆ ಅಪರೂಪವೆಂಬಂತೆ ಇಲ್ಲೊಬ್ಬ ಅಜ್ಜಿ 80ರ ಪ್ರಾಯದಲ್ಲಿ ಗಿರಿಮೊಮ್ಮಗಳನ್ನು ಕಂಡು ನೋಡುಗರನ್ನಷ್ಟೆ ಅಲ್ಲ, ವೈದ್ಯರನ್ನೂ ಕೂಡ ಅಚ್ಚರಿ ಮೂಡಿಸಿದ್ದಾರೆ.

ತಾಲ್ಲೂಕಿನ ಮಿಂಚನಾಳ ಗ್ರಾಮದ ಗೌರಮ್ಮ ಅಜನಾಳಕರ (80) ಎಂಬ ಮಹಿಳೆಯೇ ಗಿರಿಮೊಮ್ಮಗಳನ್ನು ಕಂಡ ಗಟ್ಟಿಗಿತ್ತಿ. ಈ ವೃದ್ಧೆಯ ಮರಿಮೊಮ್ಮಗಳು ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಸವಿತಾ ಮಾಳಿ ಎಂಬುವರು ಕಳೆದ 4 ದಿನಗಳ ಹಿಂದೆ ನಗರದ ಸೊಲ್ಲಾಪುರ ರಸ್ತೆಯ ಈಶ್ವರ ಆಸ್ಪತ್ರೆಯಲ್ಲಿ 5ನೇ ತಲೆಮಾರಿನ ಹೆಣ್ಣು ಮಗುವಿಗೆ ಜನ್ಮ ನೀಡಿರುವುದೆ ಈ ಅಜ್ಜಿಯ ಸಂತಸವನ್ನು ಇಮ್ಮಡಿಗೊಳಿಸಿದೆ.

ಮಿಂಚನಾಳದ ಅಜನಾಳಕರ ಮನೆತನದ ಈ ಗೌರಮ್ಮ ಉದರದಿಂದ ಜಕ್ಕವ್ವ (62)ಳಿಗೆ ಇದೇ ಗ್ರಾಮದ ಮಂದರೂಪ ಎಂಬುವರ ಮನೆತನಕ್ಕೆ ಮದುವೆ ಮಾಡಿ ಕೊಟ್ಟಿದ್ದಾರೆ. ಈ ಮಹಿಳೆಯ ಉದರದಿಂದ ಜನಿಸಿದ ಶೋಭಾ (45) ಎಂಬುವರನ್ನು ಮರಳಿ ಅಜನಾಳಕರ ಮನೆತನಕ್ಕೆ ಮದುವೆ ಮಾಡಿ ಕೊಟ್ಟಿದ್ದಾರೆ. ಈ ಮಹಿಳೆಯ ಉದರದಿಂದ ಜನಿಸಿದ ಸವಿತಾ (20) ಎಂಬುವರನ್ನು ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಮಾಳಿ ಮನೆತನದ ನಿಜಗುಣಿ ಎಂಬುವರಿಗೆ ಕಳೆದ ಒಂದು ವರೆ ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದಾರೆ.

ಸವಿತಾ ಕೂಡ ನಾಲ್ಕು ದಿನಗಳ ಹಿಂದೆ ಹೆಣ್ಣುಗಳಿಗೆ ಜನ್ಮ ನೀಡಿದ್ದಾಳೆ. ಅಂದರೆ ಸದ್ಯ ಜನಿಸಿರುವ ಮಗು 5ನೇ ತಲೆ ಮಾರಿನ ಮಗುವಾಗಿದೆ. ಈ ಮಗುವಿಗೆ ಜನ್ಮ ನೀಡಿದ ಸವಿತಾಳ ಅಜ್ಜಿ, ಮುತ್ತಜ್ಜಿ ಸದೃಢ­ವಾಗಿರುವುದಷ್ಟೇ ಅಲ್ಲ, ಯುವಕರಂತೆ  ನಿತ್ಯ ಮನೆಗೆಲಸ ಮಾಡುತ್ತಾ ನೆರೆ ಹೊರೆ­ಯವರಲ್ಲೂ ಅಚ್ಚರಿ ಮೂಡಿಸಿದ್ದಾರೆ.

‘ನನ್ನ ಹುಟ್ಟೂರು ಹುಲಜಂತಿ ಹತ್ತಿರದ ಸೊಡ್ಡಗಿ ನನ್ನ ತಂದೆ ಈ ಗ್ರಾಮದ ಹತ್ತಿರದ ಕಾಡಿನಲ್ಲಿ ಹಿಂದಿನ ಕಾಲದಲ್ಲಿ ಒಂಟೆ ಕಾಯುವ ಕೆಲಸ ಮಾಡುತ್ತಿದ್ದ. ಇದರಿಂದ ಬಂದ ಹಣದಲ್ಲಿ ನಾವು ಜೀವನ ಸಾಗಿಸುತ್ತಿದ್ದೆವು. ಈ ಸಂದರ್ಭದಲ್ಲಿ ನಾನು ಚಿಕ್ಕವಳಿದ್ದಾಗ ಈ ಒಂಟೆಗಳ ಹಾಲು ಕುಡಿದು ಬೆಳೆದಿದ್ದೆನೆ. ಮುಂದೆ ಗಂಡನ ಮನೆ ಮಿಂಚನಾಳಕ್ಕೆ ಬರುವ ವರೆಗೂ ಈ ಹಾಲು ಕುಡಿದು ಬೆಳೆದಿರುವದೆ ನನ್ನ ಶರೀರ ಗಟ್ಟಿಮುಟ್ಟಾಗಿರಲು ಕಾರಣ. ಸದ್ಯ ಗಿರಿ­ಮೊಮ್ಮಗಳನ್ನು ಕಂಡ ನನ್ನ ಸಂತಸಕ್ಕೆ ಪಾರವೇ ಇಲ್ಲ‘ ಎಂದು ನಗೆ ಚೆಲ್ಲಿದರು.

‘ಈ ಇಳಿ ವಯಸ್ಸಿನಲ್ಲೂ ಯುವಕರಂತೆ ಎಲ್ಲ ಕೆಲಸಗಳನ್ನು ಮಾಡಬಲ್ಲೆ. ಮನೆಯಲ್ಲಿ ನೀರು ತರುವ ಕೆಲಸ ಮಾಡುತ್ತೇನೆ. ಹಿಟ್ಟಿನ ಗಿರಣಿಗೆ ಭಾರದ ಚೀಲವನ್ನು ಹೊತ್ತುಕೊಂಡು ಜೋಳ, ಗೋಧಿ ಬೀಸಿಕೊಂಡು ಬರುತ್ತೇನೆ. ಇದಲ್ಲದೆ ಜಮೀನಲ್ಲಿ ದನಕರುಗಳನ್ನು ಕಾಯುತ್ತೇನೆ. ಇನ್ನೂ ವರೆಗೂ ಆಸ್ಪತ್ರೆಗೆ ಹೆಜ್ಜೆ ಇಟ್ಟಿಲ್ಲ. ನನಗೆ ಯಾವುದೇ ರೋಗ ರುಜಿನದ ಬಾಧೆಯೂ ಇಲ್ಲ’ ಎಂದು ಆರೋಗ್ಯದ ಗುಟ್ಟು ಬಿಚ್ಚಿಟ್ಟರು.

ಈ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶೈಲಜಾ ಇನಾಂದಾರ ಮಾತನಾಡಿ, ‘ನನ್ನ ಸೇವಾ ಅವಧಿಯಲ್ಲಿ ಇಲ್ಲಿಯ ವರೆಗೆ 4ನೇ ಸಂತತಿ ಮಗು ಜನಿಸಿರುವುದನ್ನು ಕಂಡಿದ್ದೇನೆ. ಇಂದಿನ ದಿನಮಾನದಲ್ಲಿ ಈ ರೀತಿ ಹಿಂದಿನ 4 ತಲೆ ಮಾರಿನ ಜನರು ಬದುಕಿರುವುದು ವಿರಳ. ಆಸ್ಪತ್ರೆಯಲ್ಲಿ ಜನ್ಮ ತಾಳಿದ ಈ ಮಗು 5ನೇ ತಲೆ ಮಾರಿನದ್ದಾಗಿದೆ. ಮಗು ಸೇರಿದಂತೆ ಹಿಂದಿನ 4 ತಲೆ ಮಾರಿನ ಎಲ್ಲರೂ ಆರೋಗ್ಯದಿಂದ ಇದ್ದಾರೆ. ಇದೊಂದು ಅಪರೂಪದ ಸಂಗತಿ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT