ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುತ್ತಿದೆ ಕಳ್ಳತನ ಭೀತಿ!

Last Updated 17 ಡಿಸೆಂಬರ್ 2014, 5:13 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಅಭಿಯಾನ ಆರಂಭಿಸಿದೆ. ಆದರೆ ಜಿಲ್ಲೆಯ ಗಡಿಭಾಗವೂ ಸೇರಿದಂತೆ ವಿವಿಧೆಡೆ ಗಂಭೀರ ಸ್ವರೂಪದ ಕಳವು ಪ್ರಕರಣ ಹೆಚ್ಚುತ್ತಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

ದಿನೇ ದಿನೇ ಹೆಚ್ಚುತ್ತಿರುವ ಮನೆಗಳ್ಳತನ, ಡಕಾಯಿತಿ ಪ್ರಕರಣಗಳಿಂದ ಗಡಿಭಾಗದ ಜನತೆ ತೀವ್ರ ಆತಂಕಕ್ಕೊಳಗಾಗಿದ್ದು, ಪೊಲೀಸ್ ಇಲಾಖೆ ಕಳ್ಳತನ ನಿಯಂತ್ರಣಕ್ಕೆ ಕಾರ್ಯಾಚರಣೆ ರೂಪಿಸಿದೆ.
ಮೂರು ದಿನಗಳಲ್ಲಿ ಎರಡು ಡಕಾಯಿತಿ, ಮೂರು ಕಳ್ಳತನ ಪ್ರಕರಣ ನಡೆದಿದ್ದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಲೂಟಿಯಾಗಿದೆ. ವಿಜಯಪುರದ ಆದರ್ಶ ನಗರ, ತಾಲ್ಲೂಕಿನ ತಿಕೋಟಾ, ಇಂಡಿ ಹಾಗೂ ಹೊರ್ತಿ ಭಾಗದಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು, ಜನತೆ ಆತಂಕ­ದಲ್ಲಿದ್ದಾರೆ. ಬೈಕ್‌ ಕಳವು ನಿರಂತರವಾಗಿ ನಡೆಯುತ್ತಿವೆ.

ಅಂತರರಾಜ್ಯ ಡಕಾಯಿತರು: ತಾಲ್ಲೂಕಿನ ತಿಕೋಟಾ–-ದಂದರಗಿ ಗ್ರಾಮಗಳ ನಡುವಿನ ಎರಡು ತೋಟದ ವಸತಿಗಳಿಗೆ ಭಾನುವಾರ ಮಧ್ಯರಾತ್ರಿ ಡಕಾಯಿತರು ನುಗ್ಗಿದ್ದಾರೆ. 8–10 ಮಂದಿ ಬಾಗಿಲು ಮುರಿದು ಮನೆ ಪ್ರವೇಶಿಸಿ, ಜೀವ ಬೆದರಿಕೆ ಹಾಕಿ ಆಭರಣ ಲೂಟಿ ಮಾಡಿದ್ದಾರೆ. ಪ್ರತಿರೋಧಿಸಿದ್ದಕ್ಕೆ ತಲವಾರು ಬೀಸಿದ್ದು, ಮಹಿಳೆಗೆ ಗಾಯಗಳೂ ಆಗಿವೆ.

ಗಡಿಭಾಗದ ಇಂಡಿ, ಹೊರ್ತಿಗಳಲ್ಲಿ ದೊಡ್ಡ ಪ್ರಮಾಣ­ದಲ್ಲಿ ಮನೆಗಳ್ಳತನ ಪ್ರಕರಣ ನಡೆದಿದೆ. ಇಂಡಿಯ ವಿದ್ಯಾನಗರ­ದಲ್ಲಿ ಮನೆ ಹಿಂಬಾಗಿಲು ಮುರಿದ ಕಳ್ಳರು ಅಂದಾಜು ₨ 7.18 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ. ಹೊರ್ತಿ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೀಲಿ ಮುರಿದು ₨ 79 ಸಾವಿರ ಮೌಲ್ಯದ ಚಿನ್ನ, ನಗದು ದೋಚಿದ್ದಾರೆ. ಇನ್ನೂ ಜಿಲ್ಲಾ ಕೇಂದ್ರದಲ್ಲೇ ಸರ್ಕಾರಿ ಶಾಲೆಯೊಂದರ ಬಾಗಿಲು ಮುರಿದು ₨ 1,61 ಲಕ್ಷ ಮೌಲ್ಯದ ಸಾಮಗ್ರಿ ಕಳವಾಗಿವೆ. ಈ ಪ್ರಕರಣಗಳಲ್ಲಿ ಅಂತರರಾಜ್ಯ ಡಕಾಯಿತರು ಪಾಲ್ಗೊಂಡಿರುವ ಶಂಕೆ ಬಲವಾಗಿದೆ.

ಜನರ ಸಹಭಾಗಿತ್ವ ಪಡೆಯಲಿ: ‘ಪೊಲೀಸರು ಅಪರಾಧ ತಡೆ ಮಾಸಾಚರಣೆಯನ್ನು ನೆಪ ಮಾತ್ರಕ್ಕೆ ಆಚರಿಸುತ್ತಿದ್ದಾರೆ. ನಗರದ ಗಲ್ಲಿ, ಗಲ್ಲಿ. ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆ ವತಿಯಿಂದ ಮಾಸಾಚರಣೆ ನಡೆಯಬೇಕು. ಆದರೆ ಪೊಲೀಸರು ಕೆಲ ಸಂಘ–ಸಂಸ್ಥೆಗಳ ಸಹಕಾರ ಪಡೆದು ಜಾಹೀರಾತು ಫಲಕಗಳನ್ನು ಅಳವಡಿಸಿದ್ದಾರೆ. ಎಲ್ಲೆಡೆ ಜಾಗೃತಿ ಅಭಿಯಾನ ನಡೆಸುತ್ತಿಲ್ಲ.

ಮುಸ್ಸಂಜೆ 6ರಿಂದ 7 ಗಂಟೆ ಸಮಯದಲ್ಲಿ ಓಣಿ ಓಣಿಯಲ್ಲಿ ಅಭಿಯಾನ ನಡೆಸಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಗಲ್ಲಿ ಗಲ್ಲಿಗೂ ಆ ಭಾಗದ ಕೆಲ ಯುವಕರನ್ನು ‘ಪೊಲೀಸ್‌ ಮಾಹಿತಿದಾರರು’ ಎಂದು ನೇಮಿಸುವ ಕೆಲಸ ತುರ್ತಾಗಿ ನಡೆಸಬೇಕು’ ಎಂದು ಭಾರತ್ ಸ್ಕೌಟ್‌ ಅಂಡ್‌ ಗೈಡ್ಸ್‌ನ ಜಿಲ್ಲಾ ಸಹ ಕಾರ್ಯದರ್ಶಿ ಶರಣು ಸಬರದ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT