ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಾಸ್ಟರ್‌ ಪ್ಲಾನ್‌: ಫುಟ್‌ಪಾತ್‌–ಚರಂಡಿ ನಿರ್ಮಾಣ
Last Updated 23 ಡಿಸೆಂಬರ್ 2014, 6:28 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಮಾಸ್ಟರ್‌ಪ್ಲಾನ್‌ ಅನುಷ್ಠಾನಕ್ಕೆ ದೃಢ ನಿಲುವು ತಳೆದು ಕಟ್ಟಡ ತೆರವು ಕಾರ್ಯಾಚರಣೆ ಆರಂಭಗೊಂಡ (ಸೆ. 23) ಮೂರು ತಿಂಗಳ ನಂತರ ಮೊದಲ ಹಂತದ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ದೊರೆಯುವ ಮುನ್ಸೂಚನೆ ಸಿಕ್ಕಿದೆ.

ಮೊದಲ ಹಂತದಲ್ಲಿ ತೆರವುಗೊಂಡಿರುವ ಅಂಬೇಡ್ಕರ್ ವೃತ್ತದಿಂದ ಶಿವಾಜಿ ವೃತ್ತದ­ವರೆಗೂ ರಸ್ತೆಯ ಎರಡು ಬದಿ ಮೊದಲು ಒಳಚರಂಡಿ, ಫುಟ್‌ಪಾತ್‌ ನಿರ್ಮಿಸಲು ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಪ್ರಸ್ತಾವ ಸಲ್ಲಿಕೆಯಾಗಿದೆ.

₨ 7.5 ಕೋಟಿ ವೆಚ್ಚದಲ್ಲಿ ಒಳಚರಂಡಿ, ಫುಟ್‌ಪಾತ್‌ ನಿರ್ಮಿಸಲು ಯೋಜನೆ ರೂಪಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆ ಕಳುಹಿಸಲಾಗಿದ್ದು, ಕೆಲ ದಿನಗಳಲ್ಲೇ ಮಂಜೂ­ರಾತಿ ದೊರಕುವ ನಿರೀಕ್ಷೆಯಿದೆ. ಪ್ರಸ್ತಾವನೆ ಅಂಗೀಕಾರಗೊಳ್ಳುತ್ತಿದ್ದಂತೆ ಲೋಕೋಪ­ಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಅಧ್ಯಕ್ಷತೆಯ ತಾಂತ್ರಿಕ ಸಮಿತಿ ಒಪ್ಪಿಗೆ ಪಡೆದು ಶಾರ್ಟ್‌ ಟರ್ಮ್‌ ಟೆಂಡರ್‌ ಕರೆಯಲಾಗುವುದು.

ಪ್ರಸ್ತಾವನೆಗೆ ಅನುಮೋದನೆ, ತಾಂತ್ರಿಕ ಸಮಿತಿಯ ಒಪ್ಪಿಗೆ, ಟೆಂಡರ್‌ ಪ್ರಕ್ರಿಯೆ ಜನವರಿ ಎರಡನೇ ವಾರದೊಳಗೆ ಪೂರ್ಣಗೊಳ್ಳಲಿದೆ. ಅಷ್ಟರೊಳಗೆ ವಿದ್ಯುತ್ ಕಂಬ ಬದಲಾವಣೆ ಸೇರಿದಂತೆ ಇನ್ನಿತರ ಪ್ರಕ್ರಿಯೆ ಪೂರ್ಣ ಗೊಳಿಸಲಾಗುವುದು.

ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಗುಣಮಟ್ಟದ ಕಾಮಗಾರಿ ಜತೆ ವೇಗವಾಗಿ ಕೆಲಸ ಪೂರೈಸುವಂತೆ ಗುತ್ತಿಗೆದಾರರಿಗೆ ಸೂಚಿಸಿ ಒಳಚರಂಡಿ, ಫುಟ್‌ಪಾತ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಅಂಬೇಡ್ಕರ್‌ ವೃತ್ತದಿಂದ ಶಿವಾಜಿ ವೃತ್ತದವರೆಗೂ ಮಹಾತ್ಮಗಾಂಧಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ನೀಲನಕ್ಷೆ ರೂಪಿಸಲಾಗಿದೆ. ₨ 10 ಕೋಟಿ ಹಣ ವೆಚ್ಚವಾಗಲಿದ್ದು, 2014–15ನೇ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿ ಮಹಾನಗರ ಪಾಲಿಕೆಗೆ ಬಿಡುಗಡೆಯಾಗಿರುವ ₨ 100 ಕೋಟಿ ಅನುದಾನ ಬಳಸಿಕೊಳ್ಳುವ ಚಿಂತನೆ ನಡೆದಿದೆ.

ಇದರ ಜತೆಗೆ ಇನ್ನೂ ₨ 10–15 ಕೋಟಿಯನ್ನು ಈ ಅನುದಾನದಲ್ಲೇ ಮಾಸ್ಟರ್‌ ಪ್ಲಾನ್‌ ಕಾಮಗಾರಿಗೆ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಒಳಚರಂಡಿ, ಫುಟ್‌ಪಾತ್‌ ನಿರ್ಮಿಸುವುದರೊಳಗಾಗಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಿ, ₨ 10 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ­ಗೊಳಿಸಲಾಗುವುದು ಎಂದು ಹೇಳಿದರು.

ಕಾನೂನು ಬಾಹಿರವಲ್ಲ
ಮಾಸ್ಟರ್‌ ಪ್ಲಾನ್‌ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂಬ ಆರೋಪಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಾನೂನಿಗೆ ಅನುಗುಣವಾಗಿ ಮಾಸ್ಟರ್‌ ಪ್ಲಾನ್‌ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲಿಯೂ ಉಲ್ಲಂಘನೆಯಾಗಿಲ್ಲ.

ನಗರದ ಮಾಸ್ಟರ್‌ಪ್ಲಾನ್‌ಗೆ ರಾಜ್ಯ ಸರ್ಕಾರ 2006ರಲ್ಲಿ ಅನುಮೋದನೆ ಪಡೆದಿದೆ. ಈ ಯೋಜನೆಗೆ 10 ವರ್ಷ ಕಾಲಾವಧಿ. ಅನು­ಮೋದನೆಗೊಂಡ ಯೋಜನೆಯಂತೆ ಕಾಮಗಾರಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.


ಕಾನೂನಿನಡಿ ಜಮೀನು ಮಾಲೀಕರ ಒಪ್ಪಿಗೆ ಪಡೆದು ಕಾಮಗಾರಿ ನಡೆಸಲಾಗಿದೆ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ತಮ್ಮ ಆಸ್ತಿ ತೆರವುಗೊಳಿಸದಂತೆ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ. ಗುಲ್ಬರ್ಗ ಹೈಕೋರ್ಟ್‌ 15 ದಿನ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲಿ ನ್ಯಾಯಾಲಯಕ್ಕೆ ಸರ್ಕಾರಿ ವಕೀಲರು ಸಂಬಂಧ­ಪಟ್ಟ ದಾಖಲೆ ಒದಗಿಸಲಿದ್ದಾರೆ. ನ್ಯಾಯಾ­ಲಯದ ಆದೇಶದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT