ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹರ್ಷಿ ವಾಲ್ಮೀಕಿ ಮೌಲ್ಯ ಅಳವಡಿಸಿಕೊಳ್ಳಿ: ಶಾಸಕ ಚನ್ನಾರೆಡ್ಡಿ ಪಾಟೀಲ

ವಾಲ್ಮೀಕಿ ಜಯಂತಿ ಅದ್ಧೂರಿ; ಸೂರ್ಯಚಂದ್ರ ಇರುವವರೆಗೂ ರಾಮಾಯಣ ಅಮರ: ಶಾಸಕ
Published 29 ಅಕ್ಟೋಬರ್ 2023, 7:04 IST
Last Updated 29 ಅಕ್ಟೋಬರ್ 2023, 7:04 IST
ಅಕ್ಷರ ಗಾತ್ರ

ಯಾದಗಿರಿ: ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಗ್ರಂಥದಲ್ಲಿ ಅಡಕವಾಗಿರುವಂತಹ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ, ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿ ಇರುತ್ತದೆ. ಆದ್ದರಿಂದ ಸೂರ್ಯಚಂದ್ರ ಇರುವವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರ ಕಾವ್ಯವಾಗಿರುತ್ತದೆ. ಮಹರ್ಷಿ ವಾಲ್ಮೀಕಿಯು ಅಮರಕವಿಯಾಗಿರುತ್ತಾರೆ ಎಂದು ಹೇಳಿದರು.

ಮಹರ್ಷಿಯವರು ಸಂತರು, ದಾರ್ಶನಿಕರು, ನೀತಿ ಶಾಸ್ತ್ರಜ್ಞರು, ತತ್ವಜ್ಞಾನಿಗಳು, ಮಹಾನ್ ಚಿಂತಕರು, ಸಮಾಜ ಸುಧಾರಕರು, ಅತ್ಯುತ್ತಮ ಅರ್ಥಶಾಸ್ತ್ರಜ್ಞರು, ಶ್ರೇಷ್ಠ ಚಿಂತಕರು. ಇವರು ಬರೆದ ರಾಮಾಯಣ ಗ್ರಂಥವು ಪುರಾತನವಾಗಿದೆ. ಇವರನ್ನು ಆದಿಕವಿ ಎಂದು ಕರೆಯಲಾಗುತ್ತಿದೆ ಎಂದು ನುಡಿದರು.

ರಾಮಾಯಣ ಕಾವ್ಯದಲ್ಲಿ ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವದಂತಹ ಮೌಲ್ಯಗಳನ್ನು ಎತ್ತಿಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಗೋಲಪಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಕೇವಲ ವಾಲ್ಮೀಕಿ ಸಮಾಜಕ್ಕೆ ಸೀಮಿತವಾದವರಲ್ಲ. ಇವರು ಸರ್ವಜನಾಂಗದ ತೋಟವಾಗಿದ್ದಾರೆ ಎಂದರು.

ಇವರ ಜಯಂತಿಯನ್ನು ಸರ್ಕಾರ ಆಚರಿಸುತ್ತಿದ್ದು, ಒಳ್ಳೆ ಕಾರ್ಯವಾಗಿದೆ. ರಾಮಾಯಣ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದ್ದು, ಅದರಲ್ಲಿರುವ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತ‌. ಸಮಾಜದಲ್ಲಿ ಜನರು ಸಂಘಟಿತರಾಗಿ ಸಕಾಲಕ್ಕೂ ಮಹಾತ್ಮರ ಸ್ಮರಣೆ ಮಾಡಬೇಕು ಎಂದು ನುಡಿದರು.

ಕಲಬುರಗಿಯ ಕನ್ಯಾಪ್ರೌಢಶಾಲೆಯ ಶಿಕ್ಷಕಿ ಲಕ್ಷ್ಮೀದೇವಿ ಎಸ್. ರತ್ನಗಿರಿ ಅವರು ಮಹರ್ಷಿ ವಾಲ್ಮೀಕಿಯವರ ಚರಿತ್ರೆ ಮತ್ತು ವಾಲ್ಮೀಕಿ ಸಮಾಜದಲ್ಲಿನ ಮಹಾನ್ ಪುರುಷರ ಇತಿಹಾಸ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.

₹1 ಲಕ್ಷ ನಗದು ಬಹುಮಾನ:

ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು 2022-23 ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಶಹಾಪುರದ ವಿನಾಯಕ ಶರಣಪ್ಪ ದೊರೆ ಎಸ್ಸೆಸ್ಸೆಲ್ಸಿಯಲ್ಲಿ 610 (ಶೇ 97) ಅತಿ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದರಿಂದ ₹1ಲಕ್ಷ ನಗದು ಬಹುಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯಾದಗಿರಿಯ ವಾಲ್ಮೀಕಿ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಯಾದಗಿರಿಯ ವಾಲ್ಮೀಕಿ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು

ಇದೇ ವೇಳೆ ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿಗಾಗಿ ಸೇವೆ ಮಾಡಿದ ಶಂಕರಗೌಡ ಕೋಳಿಹಾಳ, ಹಣಮಂತ್ರಾಯ ವನದುರ್ಗ, ವೆಂಕಣ್ಣ ಕೊಂಕಲ್, ದೇವಿಂದ್ರಪ್ಪ ನಾಯಕ ಕೂಡ್ಲೂರು, ಹಣಮಂತ ನಾಯಕ ಯಾದಗಿರಿ ಅವರನ್ನೂ ಸನ್ಮಾನಿಸಲಾಯಿತು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರಶಸ್ತಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಭು ದೊರೆ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ, ಜಿಲ್ಲಾ ಪಂಚಾಯಿತಿ ಸಿಪಿಒ ಗುರುನಾಥ ಗೌಡಪ್ಪನ್ನೋರ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮೀಕಾಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀರನಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ದೀಪಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.

ಯಾದಗಿರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಗಮನ ಸೆಳೆದ ವಿವಿಧ ವೇಷಧಾರಿಗಳು
ಯಾದಗಿರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಗಮನ ಸೆಳೆದ ವಿವಿಧ ವೇಷಧಾರಿಗಳು

ವಾಲ್ಮೀಕಿ ಭಾವಚಿತ್ರ ಅದ್ಧೂರಿ ಮೆರವಣಿಗೆ:

2023ನೇ ಸಾಲಿನ ಯಾದಗಿರಿ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಿಮಿತ್ತ ಶನಿವಾರ ನಗರದ ತಹಶೀಲ್ದಾರ್ ಕಚೇರಿಯಿಂದ ಮಹರ್ಷಿ ವಾಲ್ಮೀಕಿ ಭವನದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ತಮಟೆ ವಿವಿಧ ಕಲಾ ತಂಡಗಳ ಪಾತ್ರಧಾರಿಗಳು ಜನರ ಕಣ್ಮನ ಸೆಳೆಯಿತು. ಮೆರವಣಿಗೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚಾಲನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಭು ದೊರೆ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಸೇರಿದಂತೆ ಸಮಾಜದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT