ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ವಿತರಣೆಗೆ ಸೂಕ್ತಕ್ರಮ: ರಾಜಶೇಖರ ಬಿ.ಪಾಟೀಲ್ ಭರವಸೆ

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ
Last Updated 17 ಸೆಪ್ಟೆಂಬರ್ 2018, 12:49 IST
ಅಕ್ಷರ ಗಾತ್ರ

ಯಾದಗಿರಿ: ‘ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಬರ ಪರಿಹಾರ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದುಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ್ ಭರವಸೆ ನೀಡಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಮಿತಿ, ಭಾವೈಕ್ಯತಾ ಸಮಿತಿ ಹಮ್ಮಿಕೊಂಡಿದ್ದ 71ನೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘₹49 ಸಾವಿರ ಕೋಟಿ ಸಾಲಮನ್ನಾ ಮಾಡಿರುವ ಸರ್ಕಾರ ರೈತರ ಪರವಾಗಿಯೇ ಇದೆ. ಆದ್ದರಿಂದ, ರೈತರು ಆತ್ಮಹತ್ಯೆ ಹಾದಿ ತುಳಿಯಬಾರದು. ಹಿಂದುಳಿದ ಪ್ರದೇಶವನ್ನು ಗಮನದಲ್ಲಿರಿಸಿಕೊಂಡಿರುವ ಸರ್ಕಾರ, ಜಿಲ್ಲೆಗೆ ಸಾಕಷ್ಟು ಅನುದಾನ ಒದಗಿಸಿದೆ. ವಿಶೇಷವಾಗಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣದಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಎಂದರು.

‘ನಿಜಾಮರ ಕಾಲದಿಂದಲೂ ಹೈದರಾಬಾದ್-ಕರ್ನಾಟಕ ಪ್ರದೇಶ ಹಿಂದುಳಿದಿದೆ. ಅದರ ಅಭಿವೃದ್ಧಿಗಾಗಿಯೇ ಸಂವಿಧಾನದ ತಿದ್ದುಪಡಿ ಕಲಂ 371ಜೆ ಪ್ರಕಾರ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2013ರ ನ. 6ರಂದು ಪುನರ್‌ರಚಿತಗೊಂಡು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದ್ದೇವೆ. ಹಿಂದುಳಿದ ನಮ್ಮ ಪ್ರದೇಶದ ಅಭಿವೃದ್ಧಿಗಾಗಿ ಈ ಭಾಗದ ಸರ್ವ ಪಕ್ಷಗಳ ರಾಜಕೀಯ ಧುರೀಣರು, ಜನಪ್ರತಿನಿಧಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಹಿಂದಿನ ಕಾಂಗ್ರೆಸ್‌ ಸರ್ಕಾರ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹1,500ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈ ವರ್ಷವೂ ₹1,500ಕೋಟಿ ಬಿಡುಗಡೆಯಾಗಲಿದೆ. ಎಚ್‌ಕೆಆರ್‌ಡಿಬಿ ವತಿಯಿಂದ ಜಿಲ್ಲೆಗೆ 2013–14ನೇ ಸಾಲಿನಿಂದ 2017–18ರ ವರೆಗೆ ₹445.90 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಸದ್ಯ ₹ 353.34 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹124.14ಕೋಟಿ ವೆಚ್ಚ ಮಾಡಲಾಗಿದೆ. ಶೇ 68ರಷ್ಟು ಪ್ರಗತಿ ಸಾಧಿಸಿದ್ದೇವೆ’ ಎಂದು ವಿವರಿಸಿದರು.

ನಿಜಾಮನಿಂದ ಹೈದರಾಬಾದ್-ಕರ್ನಾಟಕ ಪ್ರದೇಶ ಸ್ವಾತಂತ್ರ್ಯ ಪಡೆಯಲು ಹಲವು ಮಂದಿ ಶ್ರಮಿಸಿದ್ದಾರೆ. ಕೊಲ್ಲೂರ ಮಲ್ಲಪ್ಪ, ಈಶ್ವರ್ ಲಾಲ್ ಭಟ್ಟಡ್, ಸರದಾರ ಶರಣಗೌಡ ಪಾಟೀಲ್ ಇನಾಂದಾರ, ವಿಶ್ವನಾಥರೆಡ್ಡಿ ಮುದ್ನಾಳ, ಜಗನ್ನಾಥರಾವ ಚಂಡ್ರಿಕಿ, ಕಿಶನರಾವ ಮಹೇಂದ್ರಕರ್ ಗುರುಮಠಕಲ್, ಕೊಪ್ಪಳದ ಕಾಶಿನಾಥರಾವ್, ಚಂದ್ರಶೇಖರ ಪಾಟೀಲ್ ಮುಂತಾದ ಹೋರಾಟದ ಫಲದಿಂದ ಹೈದರಾಬಾದ್ ಕರ್ನಾಟಕ ವಿಮೋಚನೆಗೊಂಡು ನಾವು ಭಾರತದ ಒಕ್ಕೂಟಕ್ಕೆ ಸೇರಿದ್ದೇವೆ ಎಂದು ಹೋರಾಟಗಾರರ ಶ್ರಮ, ತ್ಯಾಗ, ಬಲಿದಾನ ಸ್ಮರಿಸಿದರು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ್ ಅನಪುರ, ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ವಿ.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT