ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ ಪಟ್ಟಣ ಪಂಚಾಯಿತಿ: ಮೀಸಲಾತಿ ಘೋಷಣೆಯತ್ತ ಎಲ್ಲರ ಚಿತ್ತ

16 ಸದಸ್ಯ ಬಲದ ಹುಣಸಗಿ ಪಟ್ಟಣ ಪಂಚಾಯಿತಿ: 14 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್
Published 3 ಜನವರಿ 2024, 6:12 IST
Last Updated 3 ಜನವರಿ 2024, 6:12 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣ ಪಂಚಾಯಿತಿ ಚುನಾವಣೆ ಮುಗಿದಿದ್ದು, ಈಗ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗಾಗಿ ಕಸರತ್ತು ನಡೆದಿದೆ.

ಮೂರುವರೆ ವರ್ಷಗಳ ಹಿಂದೆ ಹುಣಸಗಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಚುನಾವಣೆ ನಡೆದಿರಲಿಲ್ಲ. ಕೇವಲ ಅಧಿಕಾರಿಗಳೇ ಅಧಿಕಾರ ನಡೆಸಿದ್ದರು. ಕಳೆದ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅತ್ಯಂತ ಉತ್ಸಾಹದಿಂದಲೇ ಎರಡೂ ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳು, ಕಾರ್ಯಕರ್ತರು ಚುನಾವಣೆ ಎದುರಿಸಿದ್ದರು.

ಡಿ.30 ರಂದು ಮತ ಎಣಿಕೆ ನಡೆದಿದ್ದು, 16 ರಲ್ಲಿ 14 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಅಧ್ಯಕ್ಷ ಸ್ಥಾನದ ಮೇಲೆ ಎಲ್ಲರೂ ಕಣ್ಣಿಟ್ಟಿದ್ದು, ಮೀಸಲಾತಿ ಘೋಷಣೆಗಾಗಿ ಕಾಯುತ್ತಿದ್ದಾರೆ. ಚುನಾಯಿತ ಪುರ ಪಿತೃಗಳು ಪ್ರಮುಖರ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವ ಕೆಲಸ ಸದ್ದಿಲ್ಲದೆ ಮಾಡುತ್ತಿದ್ದಾರೆ. ಮಹಿಳಾ ಸದಸ್ಯೆಯರ ಕುಟುಂಬಸ್ಥರು ನಾಯಕರನ್ನು ಭೇಟಿ ಮಾಡಿ ಗೆಲುವಿಗೆ ಶ್ರಮಿಸಿದ ಎಲ್ಲರನ್ನೂ ಗೌರವಿಸುವ ಜೊತೆಯಲ್ಲಿ ಮೀಸಲಾತಿ ಬಂದಲ್ಲಿ ಅಧ್ಯಕ್ಷ ಸ್ಥಾನ ತಮ್ಮವರಿಗೆ ನೀಡಬೇಕು ಎಂದು ಲಾಬಿ ಮಾಡುತ್ತಿದ್ದಾರೆ.

ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಚಂದ್ರಶೇಖರ ದಂಡಿನ್ ಅವರ ಸಹೋದರ ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಶರಣು ದಂಡಿನ್ ಹಾಗೂ ಸಿದ್ದಪ್ಪ (ಸಿದ್ದು) ಮುದಗಲ್ ಅವರು ಈ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ. ಹಾಗೂ ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಅವರ ಪತ್ನಿ ಅನ್ನಮ್ಮ ಸಿದ್ದಣ್ಣ ಮಲಗಲದಿನ್ನಿ ಹಾಗೂ ಅವರ ಸಹೋದರ ಶಾಂತಣ್ಣ ಮಲಗಲದಿನ್ನಿ ಅವರು ಕೂಡಾ ಚುನಾಯಿತರಾಗಿದ್ದು, ಮೀಸಲಾತಿ ಮೇಲೆ ಎಲ್ಲರ ಕಣ್ಣು ಸಹಜವಾಗಿಯೇ ಇದೆ ಎನ್ನಲಾಗುತ್ತಿದೆ.

ಹಲವಾರು ಸಭೆಗಳ ಬಳಿಕ ಅಳೆದು ತೂಗಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರಿಂದ ಹಾಗೂ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಿದ್ದರಿಂದಾಗಿ ನಮ್ಮ ಪಕ್ಷದ ಅಭ್ಯರ್ಥಿಗಳು 14 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಅದರಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಹಾಗೂ ನಮ್ಮ ಪಕ್ಷದ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಮೀಸಲಾತಿಯಂತೆ ಒಮ್ಮತದ ಅಭ್ಯರ್ಥಿಯನ್ನೇ ಆಯ್ಕೆ ಮಾಡುತ್ತೇವೆ. ಸದ್ಯ ಅಲ್ಲಿವರೆಗೂ ರಿಲೀಫ್ ಮೂಡ್‌ನಲ್ಲಿರುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT