ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್‌ ಮುಖರ್ಜಿ ಭೇಟಿಗೆ ಭಾರದ್ವಾಜ್‌ ಸಿದ್ಧತೆ

Last Updated 5 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ಕಾಂಗ್ರೆಸ್‌ ಸರ್ಕಾರ ನೇಮಿಸಿದ ರಾಜ್ಯಪಾಲರು ಹೊಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ವರದಿಗಳು ದಟ್ಟವಾಗಿರುವುದರಿಂದ ಈ ಸಂಬಂಧ ಕರ್ನಾಟಕದ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಸೇರಿದಂತೆ ಹಲವು ರಾಜ್ಯಗಳ ರಾಜ್ಯಪಾಲರುಗಳು  ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಶೀಘ್ರ ಭೇಟಿಯಾಗಿ  ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ.

ಭಾರದ್ವಾಜ್‌ ಅವರ ಐದು ವರ್ಷಗಳ ಅಧಿಕಾರಾ­ವಧಿ 2014ರ ಜೂನ್‌ 23ಕ್ಕೆ ಕೊನೆಗೊಳ್ಳಲಿದೆ. ಅಧಿಕಾರ­ದಲ್ಲಿ ಮುಂದುವರೆಯುವ ವಿಚಾರವಾಗಿ ಇತರ ರಾಜ್ಯಗಳ ರಾಜ್ಯಪಾಲರ ಸಮಾಲೋಚನೆ ನಡೆಸಿದ್ದಾಗಿ ತಿಳಿದುಬಂದಿದೆ.ಇವರಲ್ಲಿ ನೆರೆಯ ರಾಜ್ಯದ ರಾಜ್ಯಪಾಲರೊಬ್ಬರು ಚುನಾವಣೆಯ ನಂತರ ರಾಷ್ಟ್ರಪತಿ ಅವರ ಸಲಹೆ ಪಡೆ­ಯು­ವಂತೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಾಗಾಗಿ ಚುನಾವಣೆಯ ನಂತರ ರಾಷ್ಟ್ರಪತಿ­ಗಳನ್ನು ಭೇಟಿಮಾಡುವ ರಾಜ್ಯಪಾಲರುಗಳಲ್ಲಿ ಭಾರ­ದ್ವಾಜ್‌ ಮೊದಲಿಗರಾಗಲಿದ್ದಾರೆ ಎನ್ನಲಾಗಿದೆ. ಈ ವಿಷಯ­ದಲ್ಲಿ ಪ್ರಣವ್‌ ಮುಖರ್ಜಿ ಅವರು ತಮ್ಮ ಅಭಿ­ಪ್ರಾಯ ತಿಳಿಸಿದ್ದು, ಹೊಸ ಸರ್ಕಾರದ ಪ್ರಧಾ­ನಿಯ ಸಲಹೆ ಪಡೆಯುವತನಕ ಆತುರ ಬೇಡ ಎಂದು ತಿಳಿಸಿದ್ದಾಗಿ ರಾಷ್ಟ್ರಪತಿ ಭವನದ ಮೂಲಗಳು ಖಚಿತಪಡಿಸಿವೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ಬಂದಲ್ಲಿ ಆರು ರಾಜ್ಯಗಳ ರಾಜ್ಯಪಾಲರ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನುವ ಕೆಲ ಪತ್ರಿಕಾ­ವರದಿ­ಗಳ ಹಿನ್ನೆಲೆ­­ಯಲ್ಲಿ ರಾಜ್ಯಪಾಲರುಗಳು ಪರಸ್ಪರ ಸಮಾ­ಲೋ­ಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ಸರ್ಕಾರ ನೇಮಿಸಿದ್ದ ಹಲವು ರಾಜ್ಯ­ಪಾಲರನ್ನು 2004ರಲ್ಲಿ ಕಿತ್ತೆಸೆದ ಮಾಜಿ ಕೇಂದ್ರ ಗೃಹ ಸಚಿವ , ಸದ್ಯ ಪಂಜಾಬ್‌ ರಾಜ್ಯ­ಪಾಲ­ರಾಗಿರುವ ಶಿವರಾಜ್‌ ಪಾಟೀಲ, ಉತ್ತರಾ­ಖಂಡ್‌ ರಾಜ್ಯ­ಪಾಲ  ಅಜೀಜ್‌ ಖುರೇಷಿ,ರಾಜಸ್ತಾನದ ರಾಜ್ಯ­ಪಾಲೆ ಮಾರ್ಗರೇಟ್‌ ಆಳ್ವ ಹಾಗೂ ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಅವರುಗಳು ಸಹ ಹೊಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವವರ ಪಟ್ಟಿ­ಯಲ್ಲಿ­ದ್ದಾರೆ ಎಂದು ತಿಳಿದುಬಂದಿದೆ. 2004ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ–1 ಅಧಿಕಾರಕ್ಕೆ ಬಂದ ಸಂದರ್ಭ ಆರ್‌ಎಸ್‌ಎಸ್‌ ಹಿನ್ನೆಲೆ­ಯುಳ್ಳ ಕೆಲವು ರಾಜ್ಯ­ಪಾಲ­ರು­ಗಳನ್ನು ತೆಗೆದು­ಹಾಕ­ಲಾಗಿತ್ತು. ಆದಾಗ್ಯೂ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಬಿಜೆಪಿ ಮುಖಂಡ­ರೊ­ಬ್ಬರು, ತಮ್ಮ ಸರ್ಕಾರ ಅಧಿ­ಕಾರಕ್ಕೆ ಬಂದಲ್ಲಿ ರಾಜ್ಯ­ಪಾಲರನ್ನು ಕಿತ್ತೆಸೆ­ಯು­ವುದಿಲ್ಲ ಎಂದರು.

ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ಮೇಲೆ ರಾಜ್ಯಪಾಲ­ರನ್ನು ಬದಲಾಯಿ ಸುವ ಪ್ರವೃತ್ತಿ ವಿರೋ­ಧಿಸಿ 2010ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಅವರು ಉಲ್ಲೇಖಿಸಿದರು. ಈಗಿರುವ ರಾಜ್ಯಪಾಲರುಗಳು ತಮ್ಮ ಅಧಿಕಾರಾವಧಿ ಪೂರ್ಣ­ಗೊಳಿಸಲು  ತಮ್ಮ ಸರ್ಕಾರ ಅಡ್ಡಿಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಕೆಂಗಣ್ಣಿನ ಪಟ್ಟಿಯಲ್ಲಿ ರಾಜ್ಯಪಾಲರು..
ಹೊಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವವರ ಪಟ್ಟಿಯಲ್ಲಿ ಭಾರದ್ವಾಜ್‌ ಅವರೊಂದಿಗೆ ಮಹಾರಾಷ್ಟ್ರದ ಕೆ. ಶಂಕರ ನಾರಾಯಣ (ಕೇರಳ ಮಾಜಿ ಸಚಿವ), ಗುಜರಾತ್‌ನ ಕಮಲಾ ಬೆನಿವಾಲ್‌ (ರಾಜಸ್ತಾನದ ಮಾಜಿ ಸಚಿವೆ), ಜಾರ್ಖಂಡ್‌ನ ಸೈಯದ್‌ ಅಹ್ಮದ್‌ (ಮಹಾರಾಷ್ಟ್ರದ ಮಾಜಿ ಸಚಿವ) ಹಾಗೂ ಕೇರಳದ ಶೀಲಾ ದೀಕ್ಷಿತ್‌ (ದೆಹಲಿಯ ಮಾಜಿ ಮುಖ್ಯಮಂತ್ರಿ) ಅವರು ಸೇರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT