ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಕಾಂಗ್ರೆಸ್‌ ವಿರುದ್ಧದ ಜನಾಕ್ರೋಶ ‘ಮೈತ್ರಿ’ಗೆ ವರ: ಜಿ.ಟಿ.ದೇವೇಗೌಡ

Published 9 ಏಪ್ರಿಲ್ 2024, 0:30 IST
Last Updated 9 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ. ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಮುಗಿ ಬೀಳುತ್ತಿವೆ. ಮೈತ್ರಿಯ ಅಗತ್ಯವಿತ್ತೇ, ಮುಂದುವರಿಯುತ್ತದೆಯೇ, ಕಾರ್ಯತಂತ್ರವೇನು ಎಂಬಿತ್ಯಾದಿ ವಿಷಯಗಳ ಕುರಿತು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ಪ್ರ

ಬಿಜೆಪಿ–ಜೆಡಿಎಸ್‌ ಮೈತ್ರಿ ಅಗತ್ಯವಿತ್ತೆ?

ರಾಜ್ಯದಲ್ಲಿ ಜೆಡಿಎಸ್‌ ಗಟ್ಟಿಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆಯೇ ಸಿಕ್ಕಿದೆ. ಆದರೆ, ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು, ಅದಕ್ಕಾಗಿ ಕೈಜೋಡಿಸಬೇಕು ಎಂಬ ಪಕ್ಷದ ವರಿಷ್ಠ ದೇವೇಗೌಡರ ಅಭಿಲಾಷೆಯಂತೆ ಒಂದಾಗಿದ್ದೇವೆ. ಮೋದಿ ದೇಶದಲ್ಲಿ ಸುಭದ್ರತೆ, ಶಾಂತಿ ಕಾಪಾಡಿಕೊಂಡಿದ್ದಾರೆ. ಅಭಿವೃದ್ಧಿಯನ್ನೂ ಮಾಡುತ್ತಿದ್ದಾರೆ. ನೆರೆಯ ದೇಶಗಳಲ್ಲಿ ನೆಮ್ಮದಿಯ ವಾತಾವರಣವಿಲ್ಲ. ಅಲ್ಪಸಂಖ್ಯಾತರು ಕೂಡ ನಮ್ಮಲ್ಲಿ ನೆಮ್ಮದಿಯಿಂದ ಇದ್ದಾರೆ. ಇದು ಮುಂದುವರಿಯಲು ಎರಡೂ ಪಕ್ಷಗಳೂ ಒಂದಾಗಬೇಕು ಎಂಬ ಭಾವನೆ ಜನರಲ್ಲೂ ಇತ್ತು. ಅದರಂತೆ ನಡೆದುಕೊಂಡಿದ್ದೇವೆ. ಕಾಂಗ್ರೆಸ್‌ನಿಂದ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ, ಬದಲಿಗೆ ತುಂಬಾ ಹಿಂದಕ್ಕೆ ಹೋಗುತ್ತಿದೆ. ಆದ್ದರಿಂದ ಕಾಂಗ್ರೆಸ್‌ ಸರ್ಕಾರ ತೆಗೆಯುವ ಉದ್ದೇಶ ಮತ್ತು ಅನಿವಾರ್ಯತೆಯಿಂದ ಒಗ್ಗೂಡಿದ್ದೇವೆ.

ಪ್ರ

ಕೆಲವೇ ಕ್ಷೇತ್ರಗಳನ್ನು ಪಡೆದುಕೊಳ್ಳಲು ಬಿಜೆಪಿ ಸಖ್ಯ ಬೇಕಿತ್ತೇ?

ಜೆಡಿಎಸ್‌ನವರು ಗೆಲ್ಲುವುದು ಮುಖ್ಯವಲ್ಲ. 28 ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವುದು ನಮ್ಮ ಉದ್ದೇಶ. ನಮ್ಮ ಪಕ್ಷವೂ ಉಳಿಯಬೇಕು. ಬಿಜೆಪಿಯೂ ಉಳಿಯಬೇಕು. ಇದಕ್ಕಾಗಿ ಸಖ್ಯ.

ಪ್ರ

ಒಂದು ಕಾಲದಲ್ಲಿ ಟೀಕಿಸುತ್ತಿದ್ದವರ ಜೊತೆಗೇ ಹೋಗಿ ಮತ ಕೇಳಲು ಮುಜುಗರವಿಲ್ಲವೇ?

ಚುನಾವಣಾ ರಾಜಕಾರಣದಲ್ಲಿ ಬದಲಾವಣೆಗಳು ಸಹಜ. ಕಾಂಗ್ರೆಸ್‌ನವರು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲವೇ? ದೇಶದ ಭವಿಷ್ಯಕ್ಕಾಗಿ ನಾವು ಒಂದಾಗಿದ್ದೇವೆ. ಟೀಕೆಗಳು ಸಹಜ. ಕಾಂಗ್ರೆಸ್‌ ಸರ್ಕಾರದ ನಡೆಯು ಅಭಿವೃದ್ಧಿಗೆ ಪೂರಕ ಆಗಿಲ್ಲವಾದ್ದರಿಂದ ಮುಜುಗರವನ್ನೆಲ್ಲ ಮರೆತು ಒಂದಾಗಿದ್ದೇವೆ.

ಪ್ರ

ಈ ಮೈತ್ರಿ ತಾತ್ಕಾಲಿಕವೋ, ಮುಂದುವರಿಯುತ್ತದೆಯೋ?

ಮೈತ್ರಿ ಗಟ್ಟಿ ಇದೆ. ಮುಂದೆಯೂ ಒಟ್ಟಾಗಿ ಹೋಗುತ್ತದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಹೊಂದಾಣಿಕೆಗೆ ನಿರ್ಣಯಿಸಲಾಗಿದೆ.

ಪ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸವಾಲನ್ನು ಅವರ ತವರಿನಲ್ಲೇ ಮೆಟ್ಟಿ ನಿಲ್ಲಲು ಮೈತ್ರಿಕೂಟ ಯಶಸ್ವಿಯಾಗುವುದೇ?

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲೂ ಬಿಜೆಪಿಯೇ ಗೆದ್ದಿದೆ. ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡಬೇಕು ಎಂಬ ಪ್ರಶ್ನೆ ಇಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿಕೂಟದ ಯದುವೀರ್ ಗೆಲುವಿಗೆ ಶ್ರಮಿಸಲಿದ್ದೇವೆ.

ಪ್ರ

ಮೈಸೂರಿನಲ್ಲಿ ಸಿಎಂ, ಡಿಸಿಎಂ ಒಕ್ಕಲಿಗ ಅಸ್ತ್ರ ಬಳಸುತ್ತಿದ್ದಾರಲ್ಲಾ?

ಒಕ್ಕಲಿಗ ಸಮಾಜದ ಮೇಲೆ ಸಿದ್ದರಾಮಯ್ಯ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ಈ ರಾಜ್ಯದ ಜನರು ನೋಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯು ಪ್ರೀತಿಯ ಮಾತನಾಡುತ್ತಿದ್ದಾರೆ. ಈ ಸಮಾಜ ನನ್ನನ್ನು ನಂಬುವುದಿಲ್ಲ ಎನ್ನುವುದು ಅವರಿಗೂ ಗೊತ್ತು. ಒಕ್ಕಲಿಗರು ಎಂದಿಗೂ ಜಾತಿವಾದಿಗಳಲ್ಲ.

ಪ್ರ

ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಪದೇ ಪದೇ ಹೇಳುತ್ತಿದ್ದಿರಲ್ಲಾ?

ಕಾಂಗ್ರೆಸ್‌ ಅಭ್ಯರ್ಥಿಗೆ ಲೀಡ್ ಬಂದರೆ ನನ್ನನ್ನು ಯಾರೂ ಮುಟ್ಟಕ್ಕಾಗಲ್ಲ ಎಂದು ಮುಖ್ಯಮಂತ್ರಿಯು ಸ್ವಕ್ಷೇತ್ರ ವರುಣದಲ್ಲೇ ಹೇಳಿದ್ದಾರೆ. ಇದರ ಅರ್ಥವೇನು? ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿ ಅವರಲ್ಲೇ ಇದೆ. ಅಧಿಕಾರದಿಂದ ಇಳಿಸುವ ಪ್ರಯತ್ನವನ್ನು ನಾವು ಮಾಡುವುದಿಲ್ಲ. ಅವರಲ್ಲೇ ಕಿತ್ತಾಟ ನಡೆಯುತ್ತಿದೆ. ಅದೇ ಈ ಸರ್ಕಾರಕ್ಕೆ ಮುಳುವಾಗಲಿದೆ.

ಪ್ರ

ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರದ ಸ್ಥಿತಿ ಏನಾಗಲಿದೆ?

ಅವರ ಭಾರದಿಂದಲೇ ಸರ್ಕಾರ ಕುಸಿಯಲಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿದರೆ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಲ್ಲವೇ? ಮುಂದೆ ಈ ಸರ್ಕಾರದ ಸ್ಥಿತಿ ತುಂಬಾ ಗಂಭೀರವಾಗಲಿದೆ.

ಪ್ರ

ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾರ್ಯತಂತ್ರವೇನು?

ಗೆಲ್ಲವುದೇ ಎರಡೂ ಪಕ್ಷದವರ ಕಾರ್ಯಸೂಚಿ ಆಗಿದೆ. ಎರಡೂ ಪಕ್ಷಗಳ ನಾಯಕರೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರುವುದು ರಾಜ್ಯದ ರಾಜಕಾರಣದ ಇತಿಹಾಸದಲ್ಲೇ ಇದು ಮೊದಲು. ಸಮನ್ವಯದಿಂದ ಹೋಗುತ್ತಿದ್ದೇವೆ.

ಪ್ರ

ಮೈತ್ರಿಕೂಟದ ಪರಸ್ಪರ ಸಹಕಾರ ತೃಪ್ತಿಕರವಾಗಿದೆಯೇ?

ಶೇ 100ರಷ್ಟು ತೃಪ್ತಿ ಇದೆ. ಎರಡೂ ಪಕ್ಷದವರಲ್ಲೂ ನಂಬಿಕೆ–ವಿಶ್ವಾಸ ಬಂದಿದೆ. ಒಟ್ಟಾಗಿ ಹೋಗುತ್ತಿದ್ದೇವೆ.

ಪ್ರ

ನಾಯಕರು ಒಂದಾಗುತ್ತೀರಿ, ಕಾರ್ಯಕರ್ತರು ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲವಲ್ಲ.

ಎಲ್ಲರೂ ಒಂದಾಗಿದ್ದೇವೆ. ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಮುಗಿದಿದೆ. ಎರಡೂ ಪಕ್ಷಗಳ ಶಕ್ತಿ ಪ್ರದರ್ಶನ ಏ.10ರಿಂದ ಗೊತ್ತಾಗಲಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನರಲ್ಲಿರುವ ಆಕ್ರೋಶ ನಮಗೆ ವರವಾಗಲಿದೆ.

ಪ್ರ

ಜೆಡಿಎಸ್ ಎಲ್ಲಿದೆ ಎಂದು ಸಿಎಂ ಡಿಸಿಎಂ ಕೇಳುತ್ತಿದ್ದಾರಲ್ಲಾ?

ಜೆಡಿಎಸ್‌ ಶಾಸಕರೆಲ್ಲ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಕಾಂಗ್ರೆಸ್‌ನವರು ಸರ್ಕಾರ ರಚನೆಯಾದ ಆರಂಭದಲ್ಲಿ ಹೇಳುತ್ತಿದ್ದರು. ಅದು ನಡೆಯಿತೇ? ಪಕ್ಷಕ್ಕೆ ನೆಲೆ ಇರುವ ಕಾರಣದಿಂದಲೇ ಎಲ್ಲರೂ ನಮ್ಮಲ್ಲೇ ಉಳಿದಿದ್ದಾರೆ. ಗಟ್ಟಿಯಾದ ತಳಹದಿಯ ಪಕ್ಷವಿದು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ ಬಿಟ್ಟು ಬಂದು ಪ್ರಾದೇಶಿಕ ಪಕ್ಷ ಕಟ್ಟಿ 10 ಮಂದಿಯನ್ನು ಗೆಲ್ಲಿಸಿಕೊಳ್ಳಲಿ ನೋಡೋಣ. ಜೆಡಿಎಸ್‌ ಜನರ ಮನಸ್ಸಿನಲ್ಲಿದೆ. ಫಲಿತಾಂಶವೇ ಎಲ್ಲದಕ್ಕೂ ಉತ್ತರ ಕೊಡಲಿದೆ.

ಪ್ರ

ಎಚ್‌.ಡಿ. ದೇವೇಗೌಡರ ಅಳಿಯ ಡಾ.ಸಿ.ಎನ್. ಮಂಜುನಾಥ್‌ ಅವರನ್ನೇಕೆ ಜೆಡಿಎಸ್‌ನಿಂದ ಕಣಕ್ಕಿಳಿಸಲಿಲ್ಲ?

ಮಂಜುನಾಥ್‌ ಅವರ ಸಾಧನೆಯ ಅರಿವಿದ್ದರಿಂದಲೇ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಇಷ್ಟಪಟ್ಟು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‌ನವರ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಪ್ರ

ಈ ಮೈತ್ರಿ ತಾತ್ಕಾಲಿಕವೋ, ಮುಂದುವರಿಯುತ್ತದೆಯೋ?

ಮೈತ್ರಿ ಗಟ್ಟಿ ಇದೆ. ಮುಂದೆಯೂ ಒಟ್ಟಾಗಿ ಹೋಗುತ್ತದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ
ಹೊಂದಾಣಿಕೆ ಮುಂದುವರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT