ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ: ಸಿದ್ದರಾಮಯ್ಯ

Published 5 ಮೇ 2024, 11:46 IST
Last Updated 5 ಮೇ 2024, 11:46 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿಯ ಲೋಕಸಭೆ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಪ್ರಧಾನಿಯಾದರೂ ನರೇಂದ್ರ ಮೋದಿ ದ್ವೇಷದ ಮಾತು ಬಿಟ್ಟಿಲ್ಲ. ಭಜರಂಗದಳದ ಕಾರ್ಯಕರ್ತರಂತೆ ಮಾತನಾಡುತ್ತಿದ್ದಾರೆ. ಇಂಥವರಿಗೆ ಚಾಟಿ ಬೀಸುವ ವಕಾಶ ಈಗ ಮತದಾರರಿಗೆ ಒದಗಿಬಂದಿದೆ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದಶಕ ಆಡಳಿತ ಮಾಡಿದ ಮೋದಿ ಒಂದೂ ಸಾಧನೆ ಹೇಳಿಕೊಳ್ಳುತ್ತಿಲ್ಲ. ಬದಲಿಗೆ ದೇಶ ಒಡೆಯುವ ಕೆಲಸ ಮುಂದುವರಿಸಿದ್ದಾರೆ. ಧರ್ಮ ಕ್ರೂಢೀಕರಣ, ಮತಗಳ ಕ್ರೂಢೀಕರಣ ನಡೆಸಿದ್ದಾರೆ’ ಎಂದೂ ಹರಿಹಾಯ್ದರು.

‘ಇಂಥ ರಾಜಕಾರಣದಿಂದ ದೇಶ ಉಳಿಸುವ ಸಲುವಾಗಿಯೇ ರಾಹುಲ್‌ ಗಾಂಧಿ ಭಾರತ ಜೋಡೊ ಯಾತ್ರೆ, ನ್ಯಾಯ ಯಾತ್ರೆ ಮಾಡಿದರು. ಯಾತ್ರೆಗಳ ಮೂಲಕ ಜನರ ನೋವು ಏನು ಎಂದು ಅರಿತರು. 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಕೂಡ ದೇಶವನ್ನು ರಕ್ಷಿಸುವುದಕ್ಕಾಗಿ’ ಎಂದರು.

‘ಕಾಂಗ್ರೆಸ್‌ನ ಗ್ಯಾರಂಟಿಗಳಿಂದಾಗಿ ಪ್ರಧಾನಿ ಹತಾಶರಾಗಿದ್ದಾರೆ. ಸೋಲುವ ಭೀತಿ ಕಾಡುತ್ತಿದೆ. ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದವರು ಈಗ ‘ಸಂವಿಧಾನವೇ ನಮ್ಮ ಧರ್ಮಗ್ರಂಥ’ ಎಂದು ಜಾಹೀರಾತು ನೀಡುತ್ತಿದ್ದಾರೆ. ಅಂತರಾಳದಲ್ಲಿ ಒಂದು, ಬಹಿರಂಗದಲ್ಲಿ ಇನ್ನೊಂದು ನಡೆತೆ ಎದ್ದುಕಾಣುತ್ತಿದೆ’ ಎಂದೂ ಟೀಕಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಮಾಂಗಲ್ಯದ ಬಗ್ಗೆ ಮಾತನಾಡುವ ಹಕ್ಕು, ನೈತಿಕತೆ ಈ ಪ್ರಧಾನಿಗೆ ಇಲ್ಲ. ಮನಮೋಹನ ಸಿಂಗ್‌ ಅವರು ಪ್ರಧಾನಿ ಆಗಿದ್ದಾಗ ಒಂದು ತೊಲಿ ಚಿನ್ನಕ್ಕೆ ₹24 ಸಾವಿರ ದರವಿತ್ತು. ಈಗ ₹74 ಸಾವಿರ ಆಗಿದೆ. ಮಾಂಗಲ್ಯ ಕಸಿದುಕೊಂಡಿದ್ದ ಯಾರು ಹಾಗಾದರೆ? ಇದರ ಬಗ್ಗೆ ಮಾತನಾಡುವ ಧೈರ್ಯವಾದರೂ ಹೇಗೆ ಮಾಡುತ್ತೀಯ’ ಎಂದು ಕಿಡಿ ಕಾರಿದರು.

‘ಈ ಚುನಾವಣೆ ‘ಕಾಂಗ್ರೆಸ್‌ನ ಭರವಸೆ– ಬಿಜೆಪಿಯ ಬುರುಡೆ’ ಎಂಬ ತತ್ವದ ಮೇಲೆ ನಡೆಯುತ್ತಿದೆ. ಜನರ ಬದುಕನ್ನು ಮರೆತು ಕೇವಲ ಭಾವನೆಗಳ ಮೇಲೆ ಮಾತನಾಡುತ್ತಿದ್ದಾರೆ. ಒಂದು ವೋಟಿಗೆ ನಾವು ಹತ್ತು ಗ್ಯಾರಂಟಿಗಳನ್ನು ನಾವು ನೀಡುತ್ತಿದ್ದೇವೆ’ ಎಂದರು.

‘ಬಿಜೆಪಿ– ಜೆಡಿಎಸ್‌ನವರು ಈಗ ಒಂದೇ ಮಂಚದ ಮೇಲಿದ್ದಾರೆ. ನಮ್ಮ ಹೆಣ್ಣುಮಕ್ಕಳ ಗೌರವ, ಸ್ವಾಭಿಮಾನಕ್ಕೆ ಧಕ್ಕೆ ತರಲು ನಾವು ಬಿಡುವುದಿಲ್ಲ’ ಎಂದೂ ಹೇಳಿದರು.

ಪ್ರಜ್ವಲ್‌ ಪತ್ತೆಗೆ ಬ್ಲೂ ಕಾರ್ನರ್‌ ನೋಟಿಸ್‌’

‘ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣ ಪತ್ತೆಗಾಗಿ ಇಂಟರ್‌ಪೋಲ್‌ಗೆ ‘ಬ್ಲೂ ಕಾರ್ನರ್‌ ನೋಟಿಸ್‌’ ಜಾರಿ ಮಾಡುತ್ತೇವೆ. ಆತ ಎಲ್ಲೇ ಇದ್ದರೂ ಪತ್ತೆ ಮಾಡಿ ತಂದು ಕಾನೂನು ಕ್ರಮ ಜರುಗಿಸುತ್ತೇವೆ’ ಎಂದೂ ಸಿದ್ದರಾಮಯ್ಯ ಹೇಳಿದರು.

‘ಪ್ರಜ್ವಲ್‌ ಲೈಂಗಿಕ ದೌರ್ಜನ್ಯಗಳನ್ನು ನಡೆಸಿದ ಅವಧಿಯಲ್ಲಿ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಜತೆಗೆ ಸಮ್ಮಿಶ್ರ ಸರ್ಕಾರ ರಚಿಸಿತ್ತು’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕೋಮುವಾದಿಗಳನ್ನು ದೂರ ಇಡೋಣ ಎಂದು ದೇವೇಗೌಡರು ಹೇಳಿದ್ದರು. ಮೋದಿ ಇನ್ನೊಮ್ಮೆ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಇದೇ ದೇವೇಗೌಡ ಹೇಳಿದ್ದರು. ಅವರ ಮಾತು ನಂಬಿ ನಾವು ಮೈತ್ರಿ ಮಾಡಿಕೊಂಡಿದ್ದೇವು. ಆಗ ಪ್ರಜ್ವಲ್‌ ಮೇಲೆ ಯಾವುದೇ ದೂರು ಇರಲಿಲ್ಲ. ಪ್ರಕರಣವೂ ಗೊತ್ತಾಗಿರಲಿಲ್ಲ. ಈಗ ಎಲ್ಲ ಗೊತ್ತಿದ್ದೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT