ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
Actress Leelavathi | ಮರೆಯಾದ ಕುಲವಧು
Actress Leelavathi | ಮರೆಯಾದ ಕುಲವಧು
Published 8 ಡಿಸೆಂಬರ್ 2023, 22:53 IST
Last Updated 8 ಡಿಸೆಂಬರ್ 2023, 22:53 IST
ಅಕ್ಷರ ಗಾತ್ರ

ಲೀಲಾವತಿ ಸಿನಿಮಾ ನಟಿಯಾದಾಗ ಇನ್ನೂ ಷೋಡಶಿ. ಆಗೆಲ್ಲ ನಾಯಕಿಯರು ಚಿತ್ರಕತೆ ಏನು ಎಂದೆಲ್ಲ ವಿಚಾರಿಸುವ ಹಾಗಿರಲಿಲ್ಲ. ‘ಇಂಥ ನಾಯಕನಿಗೆ ನಾಯಕಿ’ ಎಂದು ನಿರ್ಮಾಪಕರು ಹೇಳಿದರಾಯಿತು. ಕತೆಯ ಎಳೆ ಇದು ಎಂದು ಕೇಳಿಸಿಕೊಂಡು ಒಪ್ಪಿಕೊಳ್ಳಬೇಕು ಅಥವಾ ಬಿಡಬೇಕು. ನಿರ್ದೇಶಕ ಯಾರು, ಕ್ಯಾಮೆರಾಮನ್ ಯಾರು ಎಂದೆಲ್ಲ ಕೇಳಿದರೆ ನಿರ್ಮಾಪಕರು ಕೆಂಡಾಮಂಡಲ ಆಗುತ್ತಿದ್ದರು. ಸಂಭಾಷಣೆ ಹೇಳಲು ತಡವರಿಸಿದರೆ, ‘ಏನು ಮಸಾಲೆ ದೋಸೆ ತಿಂತೀರಾ’ ಎಂದೆಲ್ಲ ದೂರದಿಂದ ಯಾರು ಯಾರೋ ಹಂಗಿಸುತ್ತಿದ್ದರು. ಒಂದೂವರೆ ದಶಕದ ಹಿಂದೆ ‘ಮಯೂರ’ ಮಾಸಪತ್ರಿಕೆಗೆ ಸುದೀರ್ಘ ಸಂದರ್ಶನ ನೀಡಿದಾಗ ಲೀಲಾವತಿ ಖುದ್ದು ಈ ಅನುಭವಗಳನ್ನು ಹಂಚಿಕೊಂಡಿದ್ದರು.

ಕಷ್ಟಗಳ ಮಳೆಯಲ್ಲಿ ಕಲ್ಲಾಗಿ…

ತಂದೆ-ತಾಯಿಯನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡ ದುಃಖವನ್ನು ನುಂಗಿಯೇ ಲೀಲಾವತಿ ನಟಿಯಾಗಿ ಅಡಿಯಿಟ್ಟಿದ್ದರು. ನಾಟಕ ಕಂಪನಿಯಲ್ಲಿ ಕಲಿತ ಸಂಭಾಷಣೆಯನ್ನು ಗಟ್ಟಿಯಾಗಿ ಹೇಳುವ ವರಸೆಯನ್ನು ಕಣ್ಣಿಗೊತ್ತಿಕೊಂಡಿದ್ದರು. ಪ್ರತ್ಯೇಕವಾಗಿ ಡಬ್ಬಿಂಗ್ ಮಾಡದೇ, ಚಿತ್ರೀಕರಣದ ಸಂದರ್ಭದಲ್ಲಿಯೇ ಸಂಭಾಷಣೆ ಹೇಳಬೇಕಾದ ಕಾಲಮಾನದ ನಟಿ ಅವರು. ‘ಪಾದುಕಾ ಪಟ್ಟಾಭಿಷೇಕ’ ಎಂಬ ತೆಲುಗು ಸಿನಿಮಾದಲ್ಲಿ ಏಳು ಪುಟಗಳ ಒಂದೇ ಸುದೀರ್ಘ ಸಂಭಾಷಣೆ ಇತ್ತಂತೆ. ಅದನ್ನು ಉರುಹೊಡೆದು, ಒಂದಿನಿತೂ ತೊದಲದಂತೆ ಹೇಳಿ, ಸೈ ಎನಿಸಿಕೊಂಡಿದ್ದನ್ನು ಅವರು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು. ‘ಚಂದ್ರಹಾಸ’ ಚಿತ್ರದಲ್ಲಿ ಬಿ.ಎಸ್. ರಂಗ ಒಂದೇ ಶಾಟ್‍ನಲ್ಲಿ ಒಂದಿಡೀ ಹಾಡನ್ನು ಮುಗಿಸಿದ್ದ ಪ್ರಯೋಗದ ಭಾಗವಾಗಿದ್ದ ಲೀಲಾವತಿ, ರೀಟೇಕ್ ಇಲ್ಲದೆ ಅಭಿನಯಿಸುವುದೇ ಶ್ರೇಷ್ಠ ಎಂದು ನಂಬಿದ್ದರು.

ಮೇಕಪ್ ಹುಚ್ಚು

ಲೀಲಾವತಿ ಅವರಿಗೆ ಮೊದಮೊದಲು ತಾವೇ ಮೇಕಪ್ ಮಾಡಿಕೊಳ್ಳುವ ಹುಚ್ಚು ಇತ್ತು. ಜೋಸಪಿನ್ ಎಂಬೊಬ್ಬರು ಹೇರ್‌-ಸ್ಟೈಲಿಸ್ಟ್‌ ಆ ಕಾಲದಲ್ಲೇ ಸಿನಿಮಾ ಸೆಟ್‍ನಲ್ಲಿ ಇರುತ್ತಿದ್ದರು. ಸುಬ್ಬಣ್ಣ ಹಾಗೂ ದೊರೆಸ್ವಾಮಿ ಇಬ್ಬರೂ ಲೀಲಾವತಿ ಅವರ ಮೇಕಪ್‍ಮನ್‍ಗಳು. ಆದರೆ, ಅವರನ್ನು ದೂರದಲ್ಲಿ ಎಲ್ಲೋ ಕೂರಿಸಿ, ಖುದ್ದು ಲೀಲಾವತಿ ಅವರೇ ಮೇಕಪ್‍ ಮಾಡಿಕೊಳ್ಳುತ್ತಿದ್ದರು. ಬೆಂಕಿಕಡ್ಡಿಯ ತುದಿಯನ್ನು ಬ್ರಶ್‍ನಂತೆ ಮಾಡಿಕೊಂಡು ಅದನ್ನು ಮೇಕಪ್‍ ಪರಿಕರವಾಗಿ ಬಳಸಿದ್ದರು. ನಿರ್ಮಾಪಕರು ಮೇಕಪ್‍ಮನ್‍ಗಳಿಗೆ ಎಂದು ಕೊಡುತ್ತಿದ್ದ ಸಂಭಾವನೆಯನ್ನು ಸಲ್ಲಬೇಕಾದವರಿಗೆ ಕೊಟ್ಟುಬಿಡುತ್ತಿದ್ದರು.

ಲೀಲಾವತಿ ಅವರದ್ದು ಜಿಡ್ಡಿನ ಚರ್ಮ. ಹಬೆ ತೆಗೆದುಕೊಂಡರೆ ಮುಖದ ಜಿಡ್ಡು ಹೋಗುತ್ತದೆ ಎಂದು ಯಾರೋ ಒಬ್ಬರು ಸಲಹೆ ಕೊಟ್ಟಿದ್ದರು. ಕೊತಕೊತ ಕುದಿಯುವ ನೀರಿನ ಪಾತ್ರೆಗೆ ಮುಖವನ್ನು ತುಂಬಾ ಹತ್ತಿರವಿಟ್ಟ ನಟಿಗೆ ಕ್ಷಣಮಾತ್ರದಲ್ಲಿ ಉರಿ ಕಾಡತೊಡಗಿತು. ಮುಖವೆಲ್ಲ ಹಬೆಯ ಶಾಖಕ್ಕೆ ಊದಿಕೊಂಡಂತಾಗಿತ್ತು. ಚಿಕ್ಕಪ್ರಾಯದಲ್ಲಿ ಸೌಂದರ್ಯದ ವಿಷಯದಲ್ಲಿ ಯಾರು ಯಾರೋ ಕೊಡುತ್ತಿದ್ದ ಸಲಹೆಗಳನ್ನೆಲ್ಲ ಹೀಗೆ ಜಾರಿಗೆ ತರಲು ಹೋಗಿ ಪಟ್ಟ ಪಡಿಪಾಟಲನ್ನು ಅವರು ಚಿತ್ರವತ್ತಾಗಿ ಹೇಳಿಕೊಳ್ಳುತ್ತಿದ್ದರು.

‘ಕಿತ್ತೂರು ಚನ್ನಮ್ಮ’ ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ಒಂದು ಕ್ಲೋಸಪ್ ದೃಶ್ಯದಲ್ಲಿ ತಮ್ಮ ಮುಖವನ್ನು ಲೀಲಾವತಿ ತಾವೇ ತೆರೆಮೇಲೆ ನೋಡಿದ್ದರು. ತಮ್ಮದು ದಪ್ಪ ಮುಖ ಎನಿಸಿತು. ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡು, ತಮ್ಮ ಮುಖ ಅಷ್ಟು ದಪ್ಪ ಇಲ್ಲವಲ್ಲ; ತೆರೆಮೇಲೆ ಯಾಕೆ ಹಾಗೆ ಕಂಡಿದೆ ಎಂದು ಒಂದಿಡೀ ರಾತ್ರಿ ಕಣ್ಣೀರು ಹಾಕಿದ್ದರು.

ದಿಗ್ಗಜ ನಾಯಕರ ಜೊತೆ ತೆರೆ ಮೇಲೆ

ರಾಜ್‍ಕುಮಾರ್, ಎಂ.ಜಿ.ಆರ್,

ಎನ್‍.ಟಿ.ಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಇಂತಹ ಘಟಾನುಘಟಿ ನಾಯಕರ ಜೊತೆ ತೆರೆ ಹಂಚಿಕೊಂಡವರು ಲೀಲಾವತಿ. ಬಡತನ ಮೀರಿ ನಟಿಯಾಗಬೇಕೆಂದು ಮಂಗಳೂರಿನಿಂದ ಮೈಸೂರಿಗೆ ವಲಸೆ ಬಂದ ಲೀಲಾ ಕಿರಣ್, ದೊಡ್ಡ ನಟಿಯಾದದ್ದೇ ಸಿನಿಮೀಯ. ನಾಯಕಿಯಾಗುವ ವಯಸ್ಸು ಮೀರಿದ ಮೇಲೆ ಅವರು ಪೋಷಕ ಪಾತ್ರಗಳಿಗೆ ಜೀವತುಂಬಲೂ ಹಿಂದೇಟು ಹಾಕಲಿಲ್ಲ. ಅಲ್ಲಿಯೂ ಅವರದ್ದು ಭರ್ಜರಿ ಇನಿಂಗ್ಸ್. ವಿಷ್ಣುವರ್ಧನ್, ರವಿಚಂದ್ರನ್, ಶಂಕರ್‌ನಾಗ್, ಟೈಗರ್ ಪ್ರಭಾಕರ್, ಕಮಲ ಹಾಸನ್, ರಜನಿಕಾಂತ್, ಚಿರಂಜೀವಿ ಹೀಗೆ ದೊಡ್ಡ ನಾಯಕರ ಜೊತೆ ಅಭಿನಯಿಸಿದರು. ನಾಯಕಿಯಾಗಿ ಅವರು ರಾಜ್‍ಕುಮಾರ್ ಜೋಡಿಯಾಗಿ ಮಾಡಿರುವ ಮೋಡಿಗೆ ಅಸಂಖ್ಯ ಉದಾಹರಣೆಗಳಿವೆ. ‘ಭಕ್ತ ಕುಂಬಾರ’ ಸಿನಿಮಾದಲ್ಲಿ ಮಣ್ಣು ತುಳಿಯುವಾಗ ಅಂಬೆಗಾಲಿಟ್ಟು ಕಾಲಡಿಗೆ ಬರುವ ಮಗುವನ್ನೂ ಕೆಲಸದಲ್ಲಿ ಮೈಮರೆತು ತುಳಿಯುವ ಸನ್ನಿವೇಶವಿದೆ. ಮಗುವನ್ನು ಕಳೆದುಕೊಂಡಾಗ ದುಃಖ ಒತ್ತರಿಸಿ ಬರಬೇಕು. ಆ ದೃಶ್ಯದಲ್ಲಿ ನಟಿಸಲು ಪರದಾಡುತ್ತಿದ್ದಾಗ, ‘ನಿನ್ನದೇ ಮಗುವನ್ನು ಕಳೆದುಕೊಂಡೆ ಎಂದು ಭಾವಿಸಿ ಅಭಿನಯಿಸು. ಚೆನ್ನಾಗಿ ಆಗುತ್ತದೆ’ ಎಂದು ರಾಜ್‍ಕುಮಾರ್ ಸಲಹೆ ನೀಡಿದ್ದನ್ನು ಅವರು ಸ್ಮರಿಸಿಕೊಂಡಿದ್ದರು.

ತಮ್ಮ ಮಗ ಚಿತ್ರನಟ ಆಗುವುದು ಅವರಿಗೆ ಇಷ್ಟವಿರಲಿಲ್ಲ. ಅದಕ್ಕೆಂದೇ ದೂರದ ಕಾಲೇಜಿಗೆ ಸೇರಿಸಿದ್ದರು. ಅಲ್ಲಿ ಡೊನೇಷನ್ ಕೇಳಿದಾಗ, ಕೊಡಲು ಹಣವಿಲ್ಲ ಎಂದು ಹಣ್ಣು ಕೊಟ್ಟು ಬಂದಿದ್ದರು. ಲೀಲಾವತಿ ಅವರಿಗೆ ಕೃಷಿ ಎಂದರೆ ಪ್ರೀತಿ. ಪ್ರಾಣಿಗಳೆಂದರೆ ಇಷ್ಟ. ಕೊನೆಗೆ ತಮ್ಮ ಮಗ ವಿನೋದ್ ರಾಜ್ ನಟನೇ ಆಗಲು ಬಯಸಿದಾಗ, ದ್ವಾರಕೀಶ್ ‘ಡಾನ್ಸ್‌ ರಾಜಾ ಡಾನ್ಸ್’ ಚಿತ್ರದ ಮೂಲಕ ಕನಸು ಈಡೇರಿಸಿದ್ದರ ಕುರಿತು ಅವರಿಗೆ ಅಭಿಮಾನ, ಹೆಮ್ಮೆ ಇತ್ತು.

ಕಾಡುವ ಆ ಸಾವಿನ ಅಭಿನಯ

ಒಂದೊಮ್ಮೆ ವೀರಾಸ್ವಾಮಿ ನಿರ್ಮಾಣದ ಚಿತ್ರವೊಂದರಲ್ಲಿ ಲೀಲಾವತಿ ಅವರು ವಿಷ್ಣುವರ್ಧನ್‌ ಅವರಿಗೆ ತಾಯಿಯಾಗಿ ನಟಿಸಿದ್ದರು. ಸತ್ತಂತೆ ನಟಿಸಬೇಕಾದ ಸನ್ನಿವೇಶದ ಚಿತ್ರೀಕರಣ ನಡೆದಿತ್ತು. ವಿಷ್ಣುವರ್ಧನ್ ದುಃಖ ತುಂಬಿಕೊಂಡು ತಮ್ಮ ಮೇಲೆ ಬಿದ್ದಾಗಲೂ ಉಸಿರನ್ನು ಬಿಗಿಹಿಡಿದೇ ನಟಿಸಬೇಕಾದ ಅನಿವಾರ್ಯ ಸ್ಥಿತಿ. ಕೆಲವು ರೀಟೇಕ್‍ಗಳ ನಂತರ ದೃಶ್ಯ ‘ಓಕೆ’ ಆಯಿತು. ಅಷ್ಟು ಹೊತ್ತಿಗೆ ಲೀಲಾವತಿ ಹಲವು ಟೇಕ್‌ಗಳಲ್ಲಿ ಉಸಿರುಗಟ್ಟಿ ಸುಸ್ತಾಗಿದ್ದರು. ಖುದ್ದು ವೀರಾಸ್ವಾಮಿ ಆ ಅಭಿನಯವನ್ನು ಶ್ಲಾಘಿಸಿದ್ದರು. ಇತ್ತೀಚೆಗೆ ಅವರು ಸುದೀರ್ಘಾವಧಿ ಅನಾರೋಗ್ಯದಿಂದ ಬಳಲಿದ ಸಂದರ್ಭದ ರೂಪಕದಂತೆ ಆ ಸಿನಿಮಾ ದೃಶ್ಯ ಕಾಡುತ್ತದೆ.

ಈಗ ಲೀಲಾವತಿ ನಿಜ ಬದುಕಿನಲ್ಲೂ ಕೊನೆಯುಸಿರು ಚೆಲ್ಲಿ, ನೆನಪುಗಳ ಫಸಲನ್ನು ಜೋಡಿಸಿಟ್ಟು ಹೋಗಿದ್ದಾರೆ.

ಬೆಳ್ತಂಗಡಿಯಿಂದ ಬೆಂಗಳೂರುವರೆಗೆ...
ದಕ್ಷಿಣ ಕನ್ನಡದ ಬೆಳ್ತಂಗಡಿ ಲೀಲಾವತಿ ತವರು. ಮಹಾಲಿಂಗ ಭಾಗವತರ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯನ್ನು ಅವರು ಚಿಕ್ಕ ವಯಸ್ಸಿನಲ್ಲೇ ಸೇರಿಕೊಂಡಿದ್ದರು. ಶಂಕರ್‌ಸಿಂಗ್ ನಿರ್ಮಾಣದ ‘ನಾಗಕನ್ನಿಕಾ’ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ 1949ರಲ್ಲಿ ನಟಿಸಿದ್ದ ಅವರು, 1958ರಲ್ಲಿ ಸುಬ್ಬಯ್ಯನಾಯ್ಡು ಅವರ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ರಾಣಿ ಹೊನ್ನಮ್ಮ’ ಪೂರ್ಣಪ್ರಮಾಣದ ನಾಯಕಿಯಾಗಿ ಅವರು ಗಮನಸೆಳೆದ ಮೊದಲ ಚಿತ್ರ. ‘ರಣಧೀರ ಕಂಠೀರವ’ ಅವರಿಗೆ ಹೆಸರು ತಂದುಕೊಟ್ಟ ಚಿತ್ರ. ‘ಕಣ್ತೆರೆದು ನೋಡು’, ‘ಗಾಳಿಗೋಪುರ’, ‘ಕನ್ಯಾರತ್ನ’ , ‘ಕುಲವಧು’, ‘ನಂದಾದೀಪ’, ‘ಮನ ಮೆಚ್ಚಿದ ಮಡದಿ’, ‘ಮಾಂಗಲ್ಯ ಯೋಗ’, ‘ಭಕ್ತ ಕುಂಬಾರ’ ‘ಸಂತ ತುಕಾರಾಂ’, ‘ತುಂಬಿದ ಕೊಡ’, ‘ಮದುವೆ ಮಾಡಿ ನೋಡು’, ‘ಗಂಗೆ ಗೌರಿ’, ‘ನಾ ನಿನ್ನ ಮರೆಯಲಾರೆ’ ಸಿನಿಮಾಗಳಲ್ಲೂ ಅವರ ನಟನೆಯ ಕೌಶಲ ಕಣ್ಣಿಗೆ ಕಟ್ಟಿದೆ. ವಯಸ್ಸು ಮಾಗಿದ ಮೇಲೆ ಪೋಷಕ ಪಾತ್ರಗಳಲ್ಲೂ ಅವರು ಸತತವಾಗಿ ಅಭಿನಯಿಸಿದರು. ‘ಗೆಜ್ಜೆಪೂಜೆ’ ಚಿತ್ರದಿಂದ ಇಂತಹ ಪಾತ್ರಗಳು ಅವರಿಗೆ ಬರತೊಡಗಿದವು. ‘ಡಾಕ್ಟರ್‌ ಕೃಷ್ಣ’ ಸಿನಿಮಾದ ಪೋಷಕ ಪಾತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಂದಿತ್ತು. ಪುತ್ರ ವಿನೋದ್‌ ರಾಜ್‌ ಜೊತೆಗೂ ಅವರು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಾವೇ ನಿರ್ಮಿಸಿ ಮಗನೊಟ್ಟಿಗೆ ಅಭಿನಯಿಸಿದ್ದ ‘ಯಾರದು?’ ಅವರು ಬಣ್ಣ ಹಚ್ಚಿದ ಕೊನೆಯ ಚಿತ್ರವಾಗಿತ್ತು. ಜೀವಮಾನದ ಸಾಧನೆಗಾಗಿ ಡಾ. ರಾಜ್‌ಕುಮಾರ್‌ ಪ್ರಶಸ್ತಿಗೆ ಭಾಜನರಾಗಿದ್ದರು. ತೋಟಗಾರಿಕೆಯಲ್ಲಿ ಲೀಲಾವತಿ ಅವರಿಗೆ ಅಪಾರ ಆಸಕ್ತಿ ಇತ್ತು. ಬೆಂಗಳೂರು–ಮಂಗಳೂರು ರಸ್ತೆಯ ಸೋಲದೇವನಹಳ್ಳಿಯಲ್ಲಿ, ಸುತ್ತಮುತ್ತಲ ಜನರಿಗೆ ಅನುಕೂಲವಾಗಲಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಟ್ಟಿಸಿಕೊಟ್ಟಿದ್ದರು. ಅವರು ನಿರ್ಮಿಸಿಕೊಟ್ಟಿದ್ದ ಪಶು ಚಿಕಿತ್ಸಾ ಆಸ್ಪತ್ರೆ ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿತ್ತು.

ಪ್ರಾಣಿಪ್ರೀತಿ, ಕೃಷಿ ಬದುಕಿನ ರೀತಿ

ಸಪೋಟಾ, ಚೀನಾ ಸೇಬು ಮೊದಲಾದ ಹಣ್ಣುಗಳನ್ನು ಲೀಲಾವತಿ ಖುಷಿಯಿಂದ ಬೆಳೆಯುತ್ತಿದ್ದರು. ನೆಲಮಂಗಲ ಬಳಿಯ ಮೈಲನಹಳ್ಳಿ ಹತ್ತಿರ ಮೊದಲು ಅವರ ಫಾರ್ಮ್‌ಹೌಸ್ ಇತ್ತು. ಸೋಲದೇವನಹಳ್ಳಿಯ ಜಾಗದಲ್ಲೂ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಫಸಲು ಚೆನ್ನಾಗಿ ಬಂದರೆ ಲೀಲಾವತಿ-ವಿನೋದ್‍ ರಾಜ್ ಇಬ್ಬರಿಗೂ ಬಲು ಖುಷಿ. ಕೈಕೊಟ್ಟರೆ ಕಣ್ಣಂಚಲ್ಲಿ ನೀರು. ಚಿಕ್ಕಂದಿನಲ್ಲೇ ಬೀದಿನಾಯಿಗಳನ್ನು ಸಲಹುವ ಮಾತೃಹೃದಯ ಲೀಲಾವತಿ ಅವರದ್ದಾಗಿತ್ತು. ಅದೇ ಮುಂದುವರಿದು, ಅವರು ಒಂದೇ ಸಮಯದಲ್ಲಿ ಹತ್ತು ನಾಯಿಗಳನ್ನು ಸಾಕಿದ್ದರು. ಮನೆಯ ಗೋಡೆಗಳ ಸಂದಿನಲ್ಲಿ ಇರುವೆಗಳು ಸರತಿಯಲ್ಲಿ ಸಾಗುತ್ತಿದ್ದರೆ, ಅವಕ್ಕೂ ಸಕ್ಕರೆಯ ಹರಳುಗಳ ಮೇವು ಕೊಡುವಷ್ಟು ಔದಾರ್ಯ ಅವರದ್ದಾಗಿತ್ತು. ಸ್ವರದ ತಲೆಮೇಲೆ ಕೂತಂತೆ ಅವರು ಹೇಳುತ್ತಿದ್ದ ಸಂಭಾಷಣೆಯ ಏರಿಳಿತ ನಮ್ಮೆಲ್ಲರ ಕಿವಿಗಳಲ್ಲಿ ತುಂಬಿರುವಂತೆ ಅವರು ಸಾಕಿ-ಸಲಹಿದ ಪ್ರಾಣಿಗಳ ಹೃದಯವನ್ನೂ ತುಂಬಿರಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT