ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ: ಅವರಿಗೆ 85 ವರ್ಷ ವಯಸ್ಸಾಗಿತ್ತು.
Published 8 ಡಿಸೆಂಬರ್ 2023, 12:55 IST
Last Updated 8 ಡಿಸೆಂಬರ್ 2023, 12:55 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ನಟ ವಿನೋದ್ ರಾಜ್ ಅವರ ತಾಯಿ ಲೀಲಾವತಿ ಅವರು ಶುಕ್ರವಾರ ಸಂಜೆ ಕೊನೆಯುಸಿರೆಳೆದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು.

ಉಸಿರಾಟ ಏರುಪೇರಾಗಿದ್ದರಿಂದ ಲೀಲಾವತಿ ಅವರನ್ನು ಸೋಲದೇವನಹಳ್ಳಿಯ ಫಾರ್ಮ್ ಹೌಸ್‌ನಿಂದ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತರಾದರು.

ಕನ್ನಡದಲ್ಲಿ 400, ತಮಿಳು, ತೆಲುಗಿನಲ್ಲಿ 200 ಚಿತ್ರಗಳು ಸೇರಿದಂತೆ ಲೀಲಾವತಿ ಅವರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

‘ಭಕ್ತ ಕುಂಬಾರ’, ‘ಸಂತ ತುಕಾರಾಂ’ ಚಿತ್ರಗಳಲ್ಲಿ ಅಭಿನಯದ ಮೂಲಕ ಲೀಲಾವತಿ ಮಿಂಚಿದ್ದರು.

ದಕ್ಷಿಣ ಕನ್ನಡದ ಬೆಳ್ತಂಗಡಿ ಲೀಲಾವತಿ ತವರು. ಮಹಾಲಿಂಗ ಭಾಗವತರ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯನ್ನು ಅವರು ಚಿಕ್ಕ ವಯಸ್ಸಿನಲ್ಲೇ ಸೇರಿಕೊಂಡಿದ್ದರು. ಶಂಕರ್‌ಸಿಂಗ್ ನಿರ್ಮಾಣದ ‘ನಾಗಕನ್ನಿಕಾ’ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ 1949ರಲ್ಲಿ ನಟಿಸಿದ್ದ ಅವರು, 1958ರಲ್ಲಿ ಸುಬ್ಬಯ್ಯನಾಯ್ಡು ಅವರ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ರಾಣಿ ಹೊನ್ನಮ್ಮ’ ಪೂರ್ಣಪ್ರಮಾಣದ ನಾಯಕಿಯಾಗಿ ಅವರು ಗಮನಸೆಳೆದ ಮೊದಲ ಚಿತ್ರ. ‘ರಣಧೀರ ಕಂಠೀರವ’ ಅವರಿಗೆ ಹೆಸರು ತಂದುಕೊಟ್ಟ ಚಿತ್ರ. ‘ಕಣ್ತೆರೆದು ನೋಡು’, ’ಗಾಳಿಗೋಪುರ’, ‘ಕನ್ಯಾರತ್ನ’ , ‘ಕುಲವಧು’ ಎಲ್ಲ ಸಿನಿಮಾಗಳಲ್ಲೂ ಅವರ ನಟನೆಯ ಕೌಶಲ ಕಣ್ಣಿಗೆ ಕಟ್ಟಿದೆ.

ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. 1958 ರಲ್ಲಿ ತೆರೆಕಂಡಿದ್ದ ಭಕ್ತ ‘ಪ್ರಹ್ಲಾದ’ ಅವರ ಮೊದಲ ಚಿತ್ರ. 2009ರಲ್ಲಿ ಬಿಡುಗಡೆಯಾಗಿದ್ದ ‘ಯಾರದು?’ ಅವರ ಕೊನೆಯ ಚಿತ್ರ.

ವಯಸ್ಸು ಮಾಗಿದ ಮೇಲೆ ಪೋಷಕ ಪಾತ್ರಗಳಲ್ಲೂ ಅವರು ಸತತವಾಗಿ ಅಭಿನಯಿಸಿದರು. ‘ಗೆಜ್ಜೆಪೂಜೆ’ ಚಿತ್ರದಿಂದ ಇಂತಹ ಪಾತ್ರಗಳು ಅವರಿಗೆ ಬರತೊಡಗಿದವು. ‘ಡಾಕ್ಟರ್‌ ಕೃಷ್ಣ’ ಸಿನಿಮಾದ ಪೋಷಕ ಪಾತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಂದಿತ್ತು.

ಲೀಲಾವತಿ ಅವರು ನಟನೆ ಅಷ್ಟೇ ಅಲ್ಲದೇ ಕನ್ನಡದ ಕೆಲ ಚಿತ್ರಗಳನ್ನೂ ನಿರ್ಮಿಸಿದ್ದರು.

ಡಾ. ರಾಜಕುಮಾರ್, ವಿಷ್ಣುವರ್ಧನ್ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜ ನಟರ ಜೊತೆ ಲೀಲಾವತಿ ಅವರು ಬಣ್ಣ ಹಚ್ಚಿದ್ದರು. ರಾಜ್‌ಕುಮಾರ್‌ ಜೊತೆಯಲ್ಲಿ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗ ಹಾಗೂ ಕನ್ನಡದ ಅವರ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಜೀವಮಾನದ ಸಾಧನೆಗಾಗಿ ಡಾ. ರಾಜ್‌ಕುಮಾರ್‌ ಪ್ರಶಸ್ತಿಗೂ ಭಾಜನರಾಗಿದ್ದರು. ತೋಟಗಾರಿಕೆಯಲ್ಲಿ ಆಸಕ್ತಿ ಇದ್ದ ಲೀಲಾವತಿ, ಬೆಂಗಳೂರು–ಮಂಗಳೂರು ರಸ್ತೆಯ ಸೋಲದೇವನಹಳ್ಳಿಯಲ್ಲಿ, ಸುತ್ತಮುತ್ತಲ ಜನರಿಗೆ ಅನುಕೂಲವಾಗಲಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಟ್ಟಿಸಿಕೊಟ್ಟಿದ್ದರು. ಅವರು ನಿರ್ಮಿಸಿಕೊಟ್ಟಿದ್ದ ಪಶು ಚಿಕಿತ್ಸಾ ಆಸ್ಪತ್ರೆ ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿತ್ತು.

ಲೀಲಾವತಿ

ಲೀಲಾವತಿ

ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT