ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸುಂದರಿಗೆ ಸೌಂದರ್ಯ ಕಿರೀಟ

ಚೆಲುವಿನ ಚಿತ್ತಾರ
Last Updated 21 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ತಿದ್ದಿ ತೀಡಿದಂಥ ಮೈಮಾಟದ ಚೆಲುವೆ ವೈಷ್ಣವಿ ತಿಳಿ ಗುಲಾಬಿ ಮತ್ತು ಕೇಸರಿ ಬಣ್ಣದ ಪ್ಲೇನ್ ಸೀರೆಯಲ್ಲಿ ಬಳ್ಳಿಯಂತೆ ಬಳಕುತ್ತ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರೆ ಸಭಾಂಗಣದಲ್ಲಿ ವಿದ್ಯುತ್ ಸಂಚಾರವಾದ ಅನುಭವ.

ಬೆಂಗಳೂರಿನಲ್ಲಿ ಇತ್ತೀಚೆಗೆ ಫ್ಯಾಷನ್ ಎಬಿಸಿಡಿ ಸಂಸ್ಥೆ ಆಯೋಜಿಸಿದ್ದ ’ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ಸೀಸನ್-3’ರಲ್ಲಿ ಐದು ಅಡಿ ಹತ್ತು ಇಂಚು ಎತ್ತರ ನೀಳಕಾಯದ ಚೆಲುವೆ ಸಹಜವಾಗಿ ಎಲ್ಲರ ಗಮನ ಸೆಳೆದಳು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಲವು ರಾಜ್ಯಗಳ ಚೆಂದುಳ್ಳಿ ಚೆಲುವೆಯರು ಮತ್ತು ವೃತ್ತಿಪರ ರೂಪದರ್ಶಿಗಳ ಜೊತೆ ಮೊದಲ ಬಾರಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಬೆಂಗಳೂರಿನ ವೈಷ್ಣವಿ ಮೊದಲ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.

ಕೊಚ್ಚಿಯಲ್ಲಿ ನಡೆಯಲಿರುವ ‘ಮಿಸ್ ಟೀನ್ ಇಂಟರ್‌ನ್ಯಾಷನಲ್ 2018’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸುವರ್ಣ ಅವಕಾಶ ಗಿಟ್ಟಿಸಿದ್ದಾಳೆ. ಈ ಸ್ಪರ್ಧೆಯಲ್ಲಿ ದೇಶ, ವಿದೇಶಗಳ 28 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಕೊಚ್ಚಿಯಲ್ಲಿ ನಡೆಯಲಿರುವ ಸೌಂದರ್ಯ ಸಮರಕ್ಕೆ ವೈಷ್ಣವಿ ಭರ್ಜರಿ ತಯಾರಿ ನಡೆಸಿದ್ದಾಳೆ. ಆಕೆಯ ತಾಯಿ ಮನೆಯಲ್ಲಿಯೇ ಸ್ಪರ್ಧೆಗೆ ತರಬೇತಿ ನೀಡುತ್ತಿದ್ದಾರೆ.

ಮುದ್ದಾದ ನಗುವಿನ ಸಹಜ ಸುಂದರಿ ವೈಷ್ಣವಿ ಇನ್ನೂ ದ್ವಿತೀಯ ಪಿಯು ಓದುತ್ತಿದ್ದಾಳೆ. ಚಿಕ್ಕಂದಿನಿಂದಲೂ ಮಾಡೆಲಿಂಗ್‌ನಲ್ಲಿದ್ದ ಆಸಕ್ತಿಯೇ ಆಕೆಯನ್ನು ‘ರ‍್ಯಾಂಪ್ ವಾಕ್‌’ಗೆ ಕರೆ ತಂದಿದೆ. ಇದು ಆಕೆಯ ಮೊದಲ ಸೌಂದರ್ಯ ಸ್ಪರ್ಧೆ!

ಆತ್ಮವಿಶ್ವಾಸದ ಹೆಜ್ಜೆ: ಮುಗುಳ್ನಗೆ ಸೂಸುತ್ತ ಆತ್ಮವಿಶ್ವಾಸದಿಂದ ವೈಷ್ಣವಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದರೆ... ಇದು ಆಕೆಯ ಮೊದಲ ಸೌಂದರ್ಯ ಸ್ಪರ್ಧೆ ಇರಬಹುದು ಎಂಬ ಸಂಶಯ ತೀರ್ಪುಗಾರರು ಸೇರಿದಂತೆ ಯಾರಿಗೂ ಬರಲಿಲ್ಲ.

ಎಲ್ಲಿಯೂ ತರಬೇತಿ ಪಡೆಯದೆ ಮೊದಲ ಬಾರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೈಷ್ಣವಿಯ ಆತ್ಮವಿಶ್ವಾಸ ಯಾವ ವೃತ್ತಿಪರ ರೂಪದರ್ಶಿಗೂ ಕಡಿಮೆ ಇರಲಿಲ್ಲ. ಇದರಿಂದಾಗಿಯೇ ಮೊದಲ ಪ್ರಯತ್ನದಲ್ಲಿಯೇ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.

‘ರೂಪದರ್ಶಿಗಳಿಗೆ ಆಕರ್ಷಕ ಹೆಜ್ಜೆಗಳ ಗುಟ್ಟು ಹಾಗೂ ನೃತ್ಯ ಸಂಯೋಜನೆಯ ಅರಿವಿರಬೇಕು. ರ‍್ಯಾಂಪ್ ವಾಕ್‌ನಲ್ಲಿ ಹೆಜ್ಜೆ ಹಾಕುವುದರ ಜೊತೆಗೆ ಇಂಪಾದ ಹಿನ್ನೆಲೆ ಸಂಗೀತ ಹಾಗೂ ಆಕರ್ಷಕ ವಿನ್ಯಾಸದ ವಸ್ತ್ರಗಳ ಆಯ್ಕೆಯ ಅರಿವಿರಬೇಕು’ ಎಂದು ಆಕೆ ನಗು ಬೀರುತ್ತಾಳೆ.

‘ವೇದಿಕೆಯಲ್ಲಿ ರೂಪದರ್ಶಿಗಳು ತಮ್ಮನ್ನು ತಾವು ಹೇಗೆ ಬಿಂಬಿಸಿಕೊಳ್ಳಬೇಕು ಎನ್ನುವ ಸೂಕ್ಷ್ಮಗಳನ್ನು ಅರಿತಿರಬೇಕು. ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಸೌಂದರ್ಯ ಸ್ಪರ್ಧೆಗಳ ಈ ಎಲ್ಲ ಸೂಕ್ಷ್ಮ ಪಾಠಗಳನ್ನು ಅಮ್ಮ ಮನೆಯಲ್ಲಿಯೇ ಹೇಳಿಕೊಟ್ಟರು. ಅಮ್ಮನೇ ನನ್ನ ಮೊದಲ ಮಾಡೆಲಿಂಗ್‌ ಮತ್ತು ಫಿಟ್ನೆಸ್‌ ಗುರು’ ಎನ್ನುತ್ತಾಳೆ ವೈಷ್ಣವಿ.

ಸ್ಪರ್ಧೆಯಲ್ಲಿ ವೈಷ್ಣವಿ ತೊಟ್ಟಿದ್ದ ವಿನೂತನ ಶೈಲಿಯ ಆಕರ್ಷಕ ಉಡುಗೆಗಳನ್ನು ವಿನ್ಯಾಸ ಮಾಡಿದ್ದು ಆಕೆಯ ತಾಯಿ ಅನಿತಾ. ಅವರು ಎಂಜಿನಿಯರಿಂಗ್‌ ಪದವೀಧರೆಯಾಗಿದ್ದರೂ ಪ್ರವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿ ಮತ್ತು ಏರೋಬಿಕ್‌ ತರಬೇತುದಾರರು. ಇತ್ತೀಚಿನ ದಿನಗಳಲ್ಲಿ ವರ್ಕೌಟ್ ಮತ್ತು ಫಿಟ್ನೆಸ್‌ಗಾಗಿ ಹೆಚ್ಚು ಜನಪ್ರಿಯವಾಗಿರುವ ಝುಂಬಾ ಏರೋಬಿಕ್ ಡಾನ್ಸ್‌ ಕೂಡಾ ಕಲಿತಿದ್ದಾರೆ.

‘ಮಿತ ಆಹಾರ, ಫಿಟ್ನೆಸ್‌, ವರ್ಕೌಟ್‌ ಮಂತ್ರಗಳು ಗೊತ್ತಿರುವ ಕಾರಣ ಮಗಳನ್ನು ಸ್ಪರ್ಧೆಗೆ ಸಿದ್ಧಪಡಿಸುವುದು ಹೆಚ್ಚು ಕಷ್ಟವೇನಲ್ಲ’ ಎಂಬ ವಿಶ್ವಾಸದಲ್ಲಿರುವ ತಾಯಿಗೆ ಮಗಳ ಸಾಧನೆಯ ಬಗ್ಗೆ ಹೆಮ್ಮೆ ಮತ್ತು ಖುಷಿ ಇದೆ.

ಮಗಳ ಆಸೆ ಮತ್ತು ಪ್ರತಿಭೆಯನ್ನು ಅಮ್ಮ ಕೂಡ ಪೋಷಿಸುತ್ತಿದ್ದಾರೆ. ಕರುಳ ಕುಡಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಅವರು ವಸ್ತ್ರವಿನ್ಯಾಸ, ಆಕರ್ಷಕ ಉಡುಪುಗಳ ಆಯ್ಕೆಗೆ ನೆರವು ನೀಡುತ್ತಿದ್ದಾರೆ.ಮಗುವಿದ್ದಾಗ ಮೊಳಕೆಯೊಡೆದ ಬಯಕೆ: ‘ಚಿಕ್ಕ ಮಗುವಿದ್ದಾಗಿನಿಂದ ಟಿವಿಯಲ್ಲಿ ಬರುವ ಫ್ಯಾಷನ್ ಶೋ ನೋಡಿ ಮನೆಯಲ್ಲಿ ಅನುಕರಿಸುತ್ತಿದ್ದೆ. ರೂಪದರ್ಶಿಗಳಂತೆಯೇ ಹೆಜ್ಜೆ ಹಾಕುತ್ತಿದ್ದೆ. ಅಪ್ಪ, ಅಮ್ಮ ಸೇರಿದಂತೆ ಎಲ್ಲರೂ ಪ್ರೋತ್ಸಾಹಿಸುತ್ತಿದ್ದರು. ಆಕರ್ಷಕ ಉಡುಗೆ ತೊಟ್ಟು ಮೇಕಪ್ ಮಾಡಿಕೊಳ್ಳುವುದು ಬಾಲ್ಯದಿಂದಲೂ ಅಂಟಿಕೊಂಡಿರುವ ಹವ್ಯಾಸ’ ಎನ್ನುವಾಗ ವೈಷ್ಣವಿಯ ಕಣ್ಣು ಅರಳುತ್ತವೆ.

ಆಟ ಮತ್ತು ಪಾಠ ಎರಡರಲ್ಲೂ ಮುಂದಿರುವ ಈ ಜಿಂಕೆ ಕಂಗಳ ಚೆಲುವೆಗೆ ಸ್ಕೇಟಿಂಗ್ ಎಂದರೆ ಪಂಚಪ್ರಾಣ. ಶಾಲೆ, ಕಾಲೇಜುಗಳ ಪಂದ್ಯಗಳಲ್ಲಿ ಗಳಿಸಿರುವ ಹತ್ತು, ಹಲವು ಪ್ರಶಸ್ತಿ, ಪದಕಗಳು ವೈಷ್ಣವಿ ಮನೆಯನ್ನು ಅಲಂಕರಿಸಿವೆ. ಈಜು, ಸ್ಕೇಟಿಂಗ್‌ ಸೇರಿದಂತೆ ಎಲ್ಲ ಆಟಗಳಲ್ಲೂ ಸದಾ ಮುಂದಿರುವ ಈ ಲಾವಣ್ಯವತಿಗೆ ವೃತ್ತಿಪರ ರೂಪದರ್ಶಿಯಾಗುವ ಎಲ್ಲ ಅರ್ಹತೆಗಳಿವೆ. ಆದರೂ, ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ಎನ್ನುವುದು ಆಕೆಯ ಮಂತ್ರ.

ಸದಾ ಲವಲವಿಕೆ ಮತ್ತು ಚೂಟಿಯಾಗಿರುವ ಈ ಹುಡುಗಿ ಉತ್ತಮ ವೇದಿಕೆಗಳಲ್ಲಿ ಅವಕಾಶ ಸಿಕ್ಕರೆ ಮಾತ್ರ ಹೆಜ್ಜೆ ಹಾಕುವ ನಿರ್ಣಯ ಮಾಡಿದ್ದಾಳೆ. ಪಿಯುಸಿ ನಂತರ ಓದಿನ ಜತೆಗೆ ಸ್ಪೋರ್ಟ್ಸ್ ಮತ್ತು ಮಾಡೆಲಿಂಗ್‌ ಲೋಕದಲ್ಲಿ ಹೆಸರು ಮಾಡುವ ಮಹದಾಸೆಯೂ ಇದೆ.

ನಗರದಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆ, ಡಿಸೈನರ್ ಶೋಗಳಲ್ಲಿ ಭಾಗವಹಿಸಲು ಆಹ್ವಾನ ಬರತೊಡಗಿವೆ. ಪಕ್ಕದ ಮನೆಯ ಹುಡುಗಿಯಂತೆ ಸರಳವಾಗಿ ಕಾಣುವ ಈ ಚೆಲುವಿಗೆ ಧಾರವಾಹಿಗಳಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿವೆ. ಒಳ್ಳೆಯ ಆಫರ್‌ ಬಂದರೆ ಸಿನಿಮಾಗಳಲ್ಲಿ ನಟಿಸುವಾಸೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT