‘ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಬಾವಿಗಳುಂಟು ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು’

ಎಂದು ದಿಟ್ಟವಾಗಿ ತನ್ನ ಉಡುಗೆಯನ್ನೇ ಅಲ್ಲದೆ ಸಮಸ್ತವನ್ನೂ ಧಿಕ್ಕರಿಸಿ ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನನ್ನು ಹುಡುಕಲು ಹೊರಟ ಅಕ್ಕಮಹಾದೇವಿ ಇಂದಿಗೂ ಜನಮನದಲ್ಲಿ ಒಂದು ಬೆರಗು.

ಆಕೆ ಮೈಮೇಲೆ ಬಟ್ಟೆಯಿಲ್ಲದೆ ತನ್ನ ಉದ್ದವಾದ, ದಟ್ಟವಾದ ಕೂದಲನ್ನೇ ಮುಚ್ಚಿಕೊಂಡು ಹೊರಟಳು ಎನ್ನುವ ಪರಿ ನನಗಂತೂ ವಿಸ್ಮಯ ಉಂಟುಮಾಡುತ್ತಿತ್ತು. 12ನೆಯ ಶತಮಾನದ ಸಮಾಜ ಅವಳನ್ನು ಒಪ್ಪಿಕೊಂಡಿತೋ ಬಿಟ್ಟಿತೋ, ಅವಳು ಅದನ್ನೆಲ್ಲಾ ಗಣನೆಗೇ ತೆಗೆದುಕೊಳ್ಳಲಿಲ್ಲ. ಆದರೂ ಆ ಕಾಲದ ಪ್ರಪಂಚವನ್ನು ಹೇಗೆ ಎದುರಿಸಿದಳು ಎನ್ನುವುದು ನನಗೆ ಯಾವಾಗಲೂ ಕಸಿವಿಸಿ ಉಂಟುಮಾಡುತ್ತಿತ್ತು.

ವೀಣಾ ಬಸವರಾಜಯ್ಯ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಇದೇ ತಿಂಗಳ ಎಂಟನೇ ತಾರೀಖು ಪ್ರಸ್ತುತಿಗೊಂಡ ರೂಪಕ ‘ಕಾಯ’ ರಂಗಶಂಕರದಲ್ಲಿ ಪ್ರದರ್ಶಿತವಾಯಿತು. ಹನ್ನೆರಡನೇ ಶತಮಾನದ ಸ್ತ್ರೀವಾದಿ ಕವಯಿತ್ರಿ ಅಕ್ಕಮಹಾದೇವಿಯ ವಚನಗಳಿಂದ ಸ್ಫೂರ್ತಿಗೊಂಡ ಈ ಪ್ರದರ್ಶನದಲ್ಲಿ ಸಂಭಾಷಣೆಗಳು ಇರಲಿಲ್ಲ. ಎಲ್ಲವೂ ಅಕ್ಕನ ವಚನದ ಮೇಲೇ ಆಧರಿತವಾಗಿತ್ತು. ಕೆಲವು ವಚನಗಳು ಸರಿಯಾಗಿ ಕೇಳಿಸದೇ ಇದ್ದುದರಿಂದ ಪ್ರದರ್ಶನಕ್ಕೂ ಸಂಗೀತಕ್ಕೂ ತಾಳೆ ಹಾಕುವುದು ಸ್ವಲ್ಪ ಕಷ್ಟವಾಯಿತು. ಆದರೂ ಈ ಮೊದಲ ಪ್ರಸ್ತುತಿಯನ್ನು ನೋಡಿದಾಗ ಅಕ್ಕನ ಮಾತಿನಲ್ಲೇ ಹೇಳುವುದಾದರೆ: ‘ಆನು ಬೆರಗಾದೆ’

ಕ್ರಿಯೆಟಿವ್ ಥಿಯೇಟರ್‌ನ ಈ ಪ್ರಸ್ತುತಿಯ ಸಹಪರಿಕಲ್ಪಿತರು ಹಾಗೂ ಅಭಿನಯಿಸಿದವರು ಲಕ್ಷ್ಮೀ ಚಂದ್ರಶೇಖರ್, ಅನಘಾ ಕಶ್ಯಪ್, ದೀಪ್ತಿ ನಾಗೇಂದ್ರ, ಪ್ರಿಯಾಂಕಾ ಚಂದ್ರಶೇಖರ್ ಹಾಗೂ ಶ್ರೀಪ್ರಿಯಾ. ಈ ಪ್ರದರ್ಶನವನ್ನು ನೋಡಿದಾಗ ಅದು ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟಿತು ಎಂದು ಹೇಳಿದರೆ ತಪ್ಪಾಗಲಾರದು.

ಮನೆ ಬಿಟ್ಟು ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಊರೂರು ಅಲೆದ ಅಕ್ಕನ ಮನಸ್ಸು ಪರಿಪಕ್ವವಾಗಿ ವಿರಕ್ತ ಜೀವನದ ಹಂತವನ್ನು ತಲುಪಿದಾಗ ಹಾಡಿದ ಹಾಡೇ ಬೇರೆಯಾಗಿ ಕಂಡಿತು.

‘ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ
ಬೇಡಿದೊಡೆ ಇಕ್ಕದಂತೆ ಮಾಡಯ್ಯ ಇಕ್ಕಿದೊಡೆ ನೆಲಕ್ಕೆ ಬೀಳುವಂತೆ ಮಾಡಯ್ಯ ನೆಲಕ್ಕೆ ಬಿದ್ದೊಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ ಸುನಿಯೆತ್ತಿಕೊಂಬಂತೆ ಮಾಡಯ್ಯ’

ಎನ್ನುವ ಈ ವಚನದಲ್ಲಿ ಆಕೆ ಈ ಲೋಕದ ಯಾವ ಹಂಗೂ ಬೇಡ ಎನ್ನುವ ಗುರಿಯನ್ನು ತಲುಪಿದ ಸ್ಥಿತಿಯನ್ನು ಕಾಣುತ್ತೇವೆ. ಈ ವಚನವನ್ನು ಹಾಡಿಕೊಂಡು ಅಭಿನಯಿಸಿದ ಹೆಣ್ಣನ್ನು ತಕ್ಷಣವೇ ಓಡಿಹೋಗಿ ಎತ್ತಿಕೊಂಡು ಸಮಾಧಾನ ಮಾಡೋಣ ಎನಿಸಿತು ನನಗೆ.

ಪ್ರದರ್ಶನದ ಆರಂಭದಿಂದಲೂ ಹಂತಹಂತವಾಗಿ ಅಕ್ಕನ ತೊಳಲಾಟ, ಅವಳು ಪಟ್ಟ ಪಾಡು, ಪ್ರಪಂಚದ ಮೂಸೆಯಲ್ಲಿ ಅನುಭವಿಸಿ, ಕರಕರಗಿ, ಕನಸಿನಲ್ಲಿ ಕಳವಳಿಸಿ, ಆಪತ್ತಿನಲ್ಲಿ ಯಾವ ಸಖಿಯರನ್ನೂ ಕಾಣದೆ ಬೆಂದು ಹೋದ ರೀತಿಯನ್ನು ಕಣ್ಣಿಗೆ ಕಟ್ಟುವ ಹಾಗೆ, ಮನದಾಳಕ್ಕೆ ಇಳಿಯುವ ಹಾಗೆ ರೂಪಿಸಿ ಪ್ರದರ್ಶಿಸಿದ ಈ ಕಲಾವಿದೆಯರು ತಾವು ಪ್ರತಿಯೊಬ್ಬರೂ ಅಕ್ಕಮಹಾದೇವಿಯೇ ಎಂದು ತೋರಿಸಿಕೊಟ್ಟರು. ಅವತ್ತಿನ ಎಲ್ಲ ಪ್ರೇಕ್ಷಕರಿಗೂ ಅಕ್ಕನ ಗುಂಗು ಹತ್ತಿಕೊಂಡಿರುವುದರಲ್ಲಿ ಆಶ್ಚರ್ಯವೇ ಇಲ್ಲ.

12ನೇ ಶತಮಾನದ ಅದ್ಭುತ ಕವಯಿತ್ರಿ ಅಕ್ಕ ನಾವು ಯಾರೂ ಕಂಡಿರದ, ಕಾಣಲಾಗದ ಪರಮ ವಸ್ತು. ಆಕೆಯ ಅಂತರಾಳವನ್ನು ನಮಗೆಲ್ಲ ತೆರೆದಿಟ್ಟವರು ಲಕ್ಷ್ಮೀ ಚಂದ್ರಶೇಖರ್ ಮತ್ತಿತರ ಹೆಣ್ಣುಮಕ್ಕಳು. ಲಕ್ಷ್ಮೀ ಚಂದ್ರಶೇಖರ್ ಆರಂಭದಿಂದ ಅಂತ್ಯದವರೆಗೂ ವಯಸ್ಕ ಅಕ್ಕನಾಗಿದ್ದರು. ಉಳಿದ ನಾಲ್ವರು ಅವಳ ಬೇರೆ ಬೇರೆ ವಯಸ್ಸುಗಳನ್ನು ಪ್ರತಿನಿಧಿಸಿದ್ದರು.

ಪ್ರಾರಂಭದ ದೃಶ್ಯದಲ್ಲಿ ಅಕ್ಕನ ಪಾತ್ರಧಾರಿಗಳು ಒಬ್ಬೊಬ್ಬರಾಗಿ ಪ್ರವೇಶ ಮಾಡಿದ ರೀತಿ ಅದ್ಭುತವಾಗಿತ್ತು. ಹಿನ್ನೆಲೆಯ ಸಂಗೀತದೊಡನೆ ಪಾರದರ್ಶಕವಲ್ಲದಿದ್ದರೂ ಚರ್ಮದ ಬಣ್ಣದ ಉಡುಗೆ ಧರಿಸಿ ಅವರು ಬಂದರೆ, ಅಕ್ಕನೇ ದಿಗಂಬರಳಾಗಿ ಬಂದಳೋ ಎನಿಸುತ್ತಿತ್ತು. ಅದಕ್ಕೆ ಬೆಂಬಲವಾಗಿ ನೆಳಲು ಬೆಳಕುಗಳ ಆಟ. ಪ್ರತಿಯೊಬ್ಬರೂ ತಲೆಯ ಮೇಲೆ ಕಾಡಿನ ಮರಗಳಂತೆ ಇದ್ದ ತುಂಡನ್ನು ಹೊತ್ತಿದ್ದರು. ಅದರ ಕೆಳಗೆ ಚಿನ್ನದ ಕೂದಲಿನ ಜಡೆ ಭುಜದಿಂದ ಕೆಳಗಿಳಿದು ಅವರನ್ನು ಹಿಂಬಾಲಿಸುತ್ತಿತ್ತು. ಅಕ್ಕ ಕಾಡುಮೇಡುಗಳನ್ನು ಅಲೆಯುವ ಚಿತ್ರಣ ಇದು.

ಅನಂತರ ಒಬೊಬ್ಬರಾಗಿ ಬಂದು ಅಕ್ಕ ಅನುಭವಿಸಿದ ವಿವಿಧ ರೀತಿಯ ಪರೀಕ್ಷೆಗಳನ್ನು ತೋರಿಸಿದರು. ನಟನೆ ಅಲ್ಲ ಎಂದು ಭಾಸವಾಗುವ ಹಾಗಿತ್ತು ಅವರ ಪ್ರಸ್ತುತಿ. ಒಬ್ಬಾಕೆ ‘ನೋಡುವಿರಾ’ ಎಂದು ತನ್ನ ದೇಹದ ಪ್ರತಿಯೊಂದು ಅಂಗವನ್ನೂ ಬೆಟ್ಟು ಮಾಡಿ ತೋರಿಸಿದಾಗ ಮೈ ಝುಮ್ಮೆಂದಿತು. ಅಕ್ಕ ಬಸವೇಶ್ವರರ ಮಹಾಮನೆಯನ್ನು ತಲುಪಿದಾಗ ಅಲ್ಲಿನ ಶರಣರು ಅವಳನ್ನು ಮುಟ್ಟಿ ಮುಟ್ಟಿ ಪರೀಕ್ಷಿಸಿದ ಪರಿ ಇದು.

ಹೀಗೇ ಮುಂದುವರಿದ ಪ್ರಸ್ತುತಿಯ ಒಂದು ಹಂತದಲ್ಲಿ ಅಂಗಸಂಗ ಇಲ್ಲದೆ ಯಾವುದೂ ಹುಟ್ಟದು ಎಂಬ ಜ್ಞಾನ ಅಕ್ಕನ ತಿಳಿವಳಿಕೆಗೆ ಬಂದ ಬಗೆಯನ್ನು ಆಕೆ ಹೀಗೆ ವರ್ಣಿಸಿದ್ದಾಳೆ:

ಸಂಗದಿಂದಲ್ಲದೆ ಅಗ್ನಿ ಹುಟ್ಟದು ಸಂಗದಿಂದಲ್ಲದೆ ಬೀಜ ಮೊಳೆದೋರದು ಸಂಗದಿಂದಲ್ಲದೆ ಹೂವಾಗದು ಸಂಗದಿಂದಲ್ಲದೆ ಸರ್ವಸುಖದೋರದು.

ಈ ಅನುಭವದ ಮೂಸೆಯಲ್ಲಿ ಕರಕರಗಿ ಅನುಭಾವಿಯಾದ ಅಕ್ಕನ ಅಂತ್ಯವನ್ನು ನೋಡುವುದೇ ಒಂದು ಉಸಿರು ಕಟ್ಟುವ ಸನ್ನಿವೇಶ. ಹಿರಿಯಳಾದ ಅಕ್ಕ ತನ್ನ ಬೇರೆ ಬೇರೆ ಅಕ್ಕಂದಿರೊಂದಿಗೆ ಕಾಯಕ್ಕೆ ನೆಳಲಾಗಿದ್ದ ಸ್ಥಳದಲ್ಲಿ ಕರಗಿ ಮಾಯವಾಗುತ್ತಾಳೆ. ಈ ದೃಶ್ಯ ನೋಡಿದಾಗ ಲಕ್ಷ್ಮೀ ಚಂದ್ರಶೇಖರ್ ಅವರ ಜೊತೆಯಲ್ಲಿದ್ದ ಉಳಿದ ನಾಲ್ವರೂ ಅಕ್ಕನೇ ಎಂದು ನನಗೆ ಅರಿವಾದಾಗ ಆನು ಬೆರಗಾದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.