ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mango Pickle | ಮಾವಿನಕಾಯಿ ಬಗೆಬಗೆಯ ಉಪ್ಪಿನಕಾಯಿ

ಪುಷ್ಪ ಎನ್. ಕೆ. ರಾವ್
Published 3 ಮೇ 2024, 23:30 IST
Last Updated 3 ಮೇ 2024, 23:30 IST
ಅಕ್ಷರ ಗಾತ್ರ
ಉಪ್ಪಿನಕಾಯಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.ಅದರ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರೂರುತ್ತದೆ. ಹುಷಾರಿಲ್ಲದೆ ಬಾಯಿರುಚಿ ಕೆಟ್ಟಾಗ ಅದು ಇದ್ದರೇನೆ ಊಟ ಸೇರುವುದು. ಅದರಲ್ಲೂ ಮಾವಿನಕಾಯಿಯ ಉಪ್ಪಿನಕಾಯಿ ಎಲ್ಲರಿಗೂ ಬಹಳ ಇಷ್ಟ.ಮಾವಿನಕಾಯಿಯಿಂದ ಅನೇಕ ರೀತಿಯ ಉಪ್ಪಿನಕಾಯಿಯನ್ನು ತಯಾರಿಸಬಹುದು. ಅದರ ರೆಸಿಪಿಗಳನ್ನು ನೀಡಿದ್ದಾರೆ ಪುಷ್ಪ ಎನ್. ಕೆ. ರಾವ್

ಸಾದಾ ಉಪ್ಪಿನಕಾಯಿ


ಬೇಕಾಗುವ ಸಾಮಗ್ರಿಗಳು:
  ಮಾವಿನಕಾಯಿ - ಹತ್ತು - ಹದಿನೈದು.(ಬಲಿತ ಕಾಯಿ) ಸಾಸಿವೆ - ನೂರು ಗ್ರಾಂ. ಉಪ್ಪು - ಕಾಲು ಕೆ ಜಿ. ಖಾರದ ಮೆಣಸಿನಕಾಯಿ -  ನೂರು ಗ್ರಾಂ. ಬ್ಯಾಡಗಿ - ಐವತ್ತು ಗ್ರಾಂ.


ಮಾಡುವ ವಿಧಾನ: ಮಾವಿನಕಾಯಿಯನ್ನು ತೊಳೆದು ಒಣಗಿದ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿ,ಸಣ್ಣ ಸಣ್ಣ ಹೋಳುಗಳನ್ನಾಗಿ ಸಿಪ್ಪೆ ಇರುವಂತೆ ಕತ್ತರಿಸಿಕೊಳ್ಳಿ. ಒಂದು ಡಬ್ಬಿಗೆ ಸ್ವಲ್ಪ ಉಪ್ಪಿನ ಜೊತೆ ಹೋಳುಗಳನ್ನು ತುಂಬಿ ಚೆನ್ನಾಗಿ ಕುಲುಕಿ. ಎರಡು ದಿನದ ನಂತರ  ಹೋಳುಗಳನ್ನು ಹಿಂಡಿ ತೆಗೆದು ಉಪ್ಪಿನ ನೀರನ್ನು ಕುದಿಸಿ. ಮೇಲೆ ಹೇಳಿದ ರೀತಿಯಲ್ಲಿ ತಣ್ಣಗಾದ ಉಪ್ಪು ನೀರಿನೊಂದಿಗೆ ಖಾರದ ಪುಡಿಯನ್ನು ರುಬ್ಬಿ ,ನಂತರ ಹೋಳುಗಳನ್ನು ಸೇರಿಸಿ,ಕಲೆಸಿ ತೆಗೆದಿಡಿ. ಫ್ರಿಡ್ಜ್ ನಲ್ಲಿಟ್ಟರೆ ವರ್ಷದವರೆಗೂ ಉಪಯೋಗಿಸಬಹುದು.


ಮಾವಿನಕಾಯಿಯ ಹಿಂಡಿ

‌ಬೇಕಾಗುವ ಸಾಮಗ್ರಿಗಳು: ಹಣ್ಣಾಗಲು ಸಜ್ಜಾಗಿರುವ ಮಾವಿನ ಕಾಯಿಗಳು ಹತ್ತು, ಮೆಣಸಿನಕಾಯಿ - ಗುಂಟೂರು, ಬ್ಯಾಡಗಿ, ನೂರೈವತ್ತು ಗ್ರಾಂ.
ಸಾಸಿವೆ - ನೂರು ಗ್ರಾಂ. ಅರಿಶಿನದ ಕೊಂಬು - ಎರಡು, ಇಂಗು - ಸ್ವಲ್ಪ. ಉಪ್ಪು  - ಒಂದು ಬಟ್ಟಲು.

ಮಾಡುವ ವಿಧಾನ: ಮಾವಿನಕಾಯಿಯನ್ನು ಸ್ವಚ್ಚಗೊಳಿಸಿ,ಒಣಗಿದ ನಂತರ ತುರಿಮಣೆಯಲ್ಲಿ ತುರಿದುಕೊಳ್ಳಬೇಕು.ಉಪ್ಪು ಒತ್ತಿಟ್ಟು ಒಂದು ದಿನ ಬಿಡಬಹುದು.ನಂತರ ಮೆಣಸಿನಕಾಯಿ, ಸಾಸಿವೆ, ಇಂಗು, ಅರಿಶಿನದ ಕೊಂಬು ಪುಡಿ ಮಾಡಿಕೊಂಡು ತೆಗೆದಿಡಿ. ಮಾವಿನ ಕಾಯಿಯ ತುರಿಯನ್ನು ಹಿಂಡಿ, ಮಿಕ್ಸಿ ಜಾರಿಗೆ ಹಾಕಿ, ರುಬ್ಬಿಕೊಳ್ಳಿ. ಸಣ್ಣಗಾದ ನಂತರ ಮಸಾಲೆ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ,ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಿ.ಹೊರಗಡೆ ಇಟ್ಟರೂ ಎಷ್ಟು ದಿನವಾದರೂ ಕೆಡುವುದಿಲ್ಲ. ದೋಸೆ, ಇಡ್ಲಿಗಳಿಗೆ ಬಿಸಿ ಅನ್ನಕ್ಕೆ ತುಪ್ಪದ ಜೊತೆ ತಿನ್ನಲು ರುಚಿಯಾಗಿರುತ್ತದೆ. ಉಪ್ಪಿನಕಾಯಿಗಳಿಗೆ ತಣ್ಣೀರನ್ನು ಮಾತ್ರ ಸೋಕಿಸಲೇಬಾರದು.

ದಿಢೀರ್ ಉಪ್ಪಿನಕಾಯಿ / ಬಿಸಿ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: ಮಾವಿನ ಕಾಯಿಹತ್ತು, ಮೆಣಸಿನಕಾಯಿ ನೂರೈವತ್ತು ಗ್ರಾಂ, ಸಾಸಿವೆ ಎರಡು ಟೇಬಲ್ ಸ್ಪೂನ್, ಮೆಂತ್ಯ ಎರಡು ಚಮ, ಎಣ್ಣೆ ಎರಡು ಚಮಚ, ಇಂಗು ಸ್ವಲ್ಪ, ಉಪ್ಪು ಎರಡು ಟೇಬಲ್ ಚಮಚ, ಅರಿಶಿನ ಪುಡಿ  - ಒಂದು ಚಮಚ.

ಮಾಡುವ ವಿಧಾನ: ಮಾವಿನಕಾಯಿಗಳನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಡಿ. ಒಂದು ಬಾಣಲೆಗೆ  ಸ್ವಲ್ಪ ಎಣ್ಣೆ ಹಾಕಿ ಮೆಣಸಿನ ಕಾಯಿ, ಇಂಗು, ಸಾಸಿವೆ,ಮೆಂತ್ಯವನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಗೆ ಉಪ್ಪು,ಸ್ವಲ್ಪ ನೀರು ಹಾಕಿ, ಕುದಿಯಲು ಇಡಿ. ಸ್ವಲ್ಪ ಅರಸಿನ ಪುಡಿ ಹಾಕಿ.ಚೆನ್ನಾಗಿ ಕುದಿದ ನಂತರ  ಅದಕ್ಕೆ ಕತ್ತರಿಸಿಟ್ಟ ಹೋಳುಗಳನ್ನು ಅದಕ್ಕೆ ಹಾಕಿ. ಐದು ನಿಮಿಷದ ನಂತರ ಕೆಳಗಿಳಿಸಿ. ಆರಿದ ಮೇಲೆ ಅದಕ್ಕೆ ಮೆಣಸಿನ ಪುಡಿಯ  ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ.ಈ ಉಪ್ಪಿನಕಾಯಿಯನ್ನು ಆಗಲೇ ಮಾಡಿ ತಕ್ಷಣ ಉಪಯೋಗಿಸಬಹುದು.ಮದುವೆ ಮನೆಗಳಲ್ಲಿ ತರಕಾರಿಗಳನ್ನು ಹಾಕಿ ದಿಢೀರ್ ಎಂದು ಇದನ್ನು ತಯಾರಿಸುತ್ತಾರೆ. ಕರಾವಳಿ ಕಡೆ ಬೆಳಗಿನ ಗಂಜಿ ಊಟಕ್ಕೆ ಇದು ಹಿತವಾಗಿರುತ್ತದೆ.

ಕೊಚ್ಚಿದ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: ಹಿಂಡಿಗೆ ತೆಗೆದುಕೊಂಡ ರೀತಿಯ  ಮಾವಿನಕಾಯಿ - ಹತ್ತು, ಇಂಗು - ಸ್ವಲ್ಪ. ಉಪ್ಪು - ಒಂದು ಬಟ್ಟಲು.(ಯಾವುದೇ ಉಪ್ಪಿನ ಕಾಯಿಗೂ ಅದರ ಹುಳಿಯ ಆಧಾರದ ಮೇಲೆ ಉಪ್ಪು,ಖಾರವನ್ನು ಹಾಕ ಬೇಕಾಗುತ್ತದೆ.) ಎರಡು ರೀತಿಯ ಮೆಣಸಿನಕಾಯಿ - ಮೇಲೆ ಹಿಂಡಿಗೆ ಹಾಕಿದಷ್ಟು ಪ್ರಮಾಣದಲ್ಲಿ  (ಒಂದು ಖಾರಕ್ಕೆ,ಮತ್ತೊಂದು ಬಣ್ಣಕ್ಕೆ ) ಎಣ್ಣೆ - ನಾಲ್ಕು ದೊಡ್ಡ ಚಮಚ. ಅರಸಿನ ಪುಡಿ - ಸ್ವಲ್ಪ. ಸಾಸಿವೆ - ನೂರು ಗ್ರಾಂ ( ಸ್ವಲ್ಪ ಜಾಸ್ತಿಯೇ ಹಾಕಿಕೊಳ್ಳಬಹುದು.)

ಮಾಡುವ ವಿಧಾನ: ಹಿಂಡಿಯ ರೀತಿಯಲ್ಲಿಯೇ ಮಾವಿನ ಕಾಯಿಗಳನ್ನು ತುರಿದಿಟ್ಟುಕೊಳ್ಳಿ. ಉಪ್ಪನ್ನು ಪುಡಿಮಾಡಿ.ಈಗ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮೆಣಸಿನಕಾಯಿ,ಇಂಗು ಸಾಸಿವೆಯನ್ನು ಹುರಿದು ,ಪುಡಿ ಮಾಡಿಡಿ. ಅದೇ ಬಾಣಲೆಗೆ ಉಳಿದ ಎಣ್ಣೆಯನ್ನು ಹಾಕಿ ತುರಿದ ಕಾಯಿಯ ಮಿಶ್ರಣವನ್ನು ಹಾಕಿ ನಿಧಾನ ಉರಿಯಲ್ಲಿ ಕೈಯಾಡಿಸುತ್ತಿರಿ.ಸ್ವಲ್ಪ ಬೆಂದಮೇಲೆ  ಅದಕ್ಕೆ ಅರಸಿನ,ಉಪ್ಪಿನ ಪುಡಿ,ಮೆಣಸಿನಕಾಯಿಯ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ನಿಧಾನ ಉರಿಯಲ್ಲಿ ಐದು ನಿಮಿಷ ಮೊಗಚುತ್ತಿರಿ.ಎಣ್ಣೆಯ ಪರಿಮಳದೊಂದಿಗೆ ಊಟಕ್ಕೆ ರುಚಿಕರವಾಗಿರುತ್ತದೆ.ಮೊಸರನ್ನದ ಜೊತೆ ಸ್ವಾದಿಷ್ಟ ಅನುಭವ. ಹಿಂಡಿ ಮತ್ತು ಕೊಚ್ಚಿದ ಉಪ್ಪಿನಕಾಯಿ ನೋಡಲು ಒಂದೇ ತರಹ ಇದ್ದರೂ ಮಾಡುವ ವಿಧಾನವೂ ಬೇರೆ ರುಚಿಯೂ ಬೇರೆ ಬೇರೆ

ಮಿಡಿ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: ಮಿಡಿ ಮಾವಿನಕಾಯಿ  -  ನೂರು ಸಣ್ಣದು. ಉಪ್ಪು , ಒಂದು ಅಳತೆ ಸೇರು, ಮೆಣಸಿನಕಾಯಿ - ಗುಂಟೂರು, ಬ್ಯಾಡಗಿ, ಅರಿಶಿನದ ಕೊಂಬು - ನಾಲ್ಕೈದು ತುಂಡು. ಸಾಸಿವೆ - ಇನ್ನೂರು ಗ್ರಾಂ.

ಮಾಡುವ ವಿಧಾನ: ಮೊದಲಿಗೆ ಗುಂಟೂರು ಮೆಣಸಿನಕಾಯಿ, ಬ್ಯಾಡಗಿ ಮೆಣಸಿನ ಕಾಯಿ,  ಅರಿಶಿನದ ಕೊಂಬು,  ಸಾಸಿವೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನುಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಿ. ಮಾವಿನ ಮಿಡಿಯ ತೊಟ್ಟು ತೆಗೆದು, ಒದ್ದೆ ಬಟ್ಟೆಯಲ್ಲಿ ಒರೆಸಿ ಸ್ವಲ್ಪಹೊತ್ತು ಬಿಟ್ಟು,ನಂತರ ಅವುಗಳನ್ನು ಪಿಂಗಾಣಿ ಜಾಡಿಗೆ ಸ್ವಲ್ಪ ಕಾಯಿ ,ಸ್ವಲ್ಪ ಉಪ್ಪು ಮತ್ತೆ ಸ್ವಲ್ಪ ಕಾಯಿ  ಉಪ್ಪು ಹೀಗೇ ಪದರ ಪದರವಾಗಿ ತುಂಬಿಸಬೇಕು. ನೂರು ಮಿಡಿಗೆ ಒಂದು ಸೇರು ಉಪ್ಪು ಬೇಕಾಗುತ್ತದೆ. ನಂತರ ಗಟ್ಟಿಯಾಗಿ ಬಾಯಿ ಮುಚ್ಚಿಡಬೇಕು. ಸುಮಾರು ಎಂಟು ,ಹತ್ತು ದಿನಗಳ ಕಾಲ ಕೈಯಾಡುತ್ತಿರಬೇಕು. ಕಾಯಿಗಳೆಲ್ಲಾ ಸುಕ್ಕುಸುಕ್ಕಾಗಿ, ಸಣ್ಣಗಾಗಿ ,ಉಪ್ಪು ನೀರಾಗಿರುತ್ತದೆ.ಹತ್ತು ದಿನಗಳ ನಂತರ ಎಲ್ಲವನ್ನೂ ಒಂದು ರಂಧ್ರವಿರುವ ಪಾತ್ರೆಗೆ ಹಾಕಿ ಸೋಸಿ. ಉಪ್ಪಿನನೀರನ್ನು ಹತ್ತು ನಿಮಿಷ ಕುದಿಸಿ, ಆರಿಸಬೇಕು.ಆರಿದ ನಂತರ ಮೇಲೆ ಹೇಳಿದ ಮೆಣಸಿನ ಪುಡಿ,ಸಾಸಿವೆ ಪುಡಿಯನ್ನು ಮಿಕ್ಸಿ ಜಾರಿಗೆ ಹಾಕಿ,ಸ್ವಲ್ಪ ಸ್ವಲ್ಪ ಉಪ್ಪುನೀರು ಹಾಕುತ್ತಾ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಮಿಡಿಯನ್ನು ಹಾಕಿ ಕಲೆಸಬೇಕು .ಸಾಧಾರಣ ಎಷ್ಟು ಪುಡಿ ಹಿಡಿಸುತ್ತದೆಯೋ ಅಷ್ಟು ಹಾಕಬೇಕು.ರಸ ಎಷ್ಟು ನೀರಾಗಿರಬೇಕು ಎಂದು ತೀರ್ಮಾನಿಸಿ, ಅಷ್ಟು ಉಪ್ಪು ನೀರನ್ನು ಸೇರಿಸಿ.ಯಾವುದೇ ಕಾರಣಕ್ಕೂ ತಣ್ಣೀರನ್ನು ಸೋಕಿಸಲೆಬಾರದು.ಅಪ್ಪಿ ತಪ್ಪಿ ತಣ್ಣೀರು ಸೋಕಿತೋ ಉಪ್ಪಿನಕಾಯಿಯಲ್ಲಿ ಹುಳವಾಗುತ್ತದೆ. ಇದನ್ನು ಜಾಡಿಯಲ್ಲಿ ಅಥವಾ ಗಾಳಿಯಾಡದ ಬಾಟಲಿನಲ್ಲಿ ಹಾಕಿಟ್ಟರೆ ಎರಡು ಮೂರು  ವರ್ಷವಾದರೂ ಹಾಳಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT