ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ತಿನಿಸುಗಳ ಅರಮನೆ ಈ ‘ಸಿರಿಮನೆ’

ಸ್ವಾವಲಂಬಿ ಮಹಿಳೆಯರ ಯಶೋಗಾಥೆ
Last Updated 24 ಜುಲೈ 2018, 19:30 IST
ಅಕ್ಷರ ಗಾತ್ರ

ಮದ್ದೂರು: ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಕಾರ್ಯ ಅಗಾಧವಲ್ಲ. ಎಲ್ಲವೂ ಸಾಧ್ಯ ಎಂಬುದನ್ನು ವಳೆಗೆರೆಹಳ್ಳಿಯ ‘ಸಿರಿಮನೆ ಬಳಗ’ದ ಮಹಿಳೆಯರು ಸಾಬೀತು ಮಾಡಿದ್ದಾರೆ.

ಫಿಜ್ಜಾ, ಬರ್ಗರ್, ಗೋಬಿ ಮಂಚೂರಿಗಳ ಹಾವಳಿ ನಡುವೆ ಹಳ್ಳಿ ತಿನಿಸುಗಳಾದ ಚಕ್ಕುಲಿ, ವಡೆ, ಕೋಡುಬಳೆ, ನಿಪ್ಪಟ್ಟು, ಕಜ್ಜಾಯ ಅಪರೂಪವಾಗುತ್ತಿದೆ. ಇಂದಿನ ಬಹುತೇಕ ಮಕ್ಕಳಿಗೆ ಈ ತಿನಿಸುಗಳ ಪರಿಚಯವೇ ಇಲ್ಲ. ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈ ತಿನಿಸುಗಳ ತಯಾರಿಕೆಯೂ ಅಪರೂಪವಾಗುತ್ತಿವೆ. ಇದನ್ನು ಮನಗಂಡ ಸಮೀಪದ ವಳಗೆರೆಹಳ್ಳಿ ಗ್ರಾಮದ ಗೃಹಿಣಿ ರೂಪಾ ಚೆಲುವರಾಜು ಅವರು ಇದೀಗ ‘ಸಿರಿಮನೆ ಬಳಗ’ ಆರಂಭಿಸಿ, ಹಳ್ಳಿಗಾಡಿನ ಮಹಿಳೆಯರನ್ನು ಒಂದುಗೂಡಿಸಿದ್ದಾರೆ. ಅಪರೂಪದ ಈ ಹಳ್ಳಿ ತಿನಿಸು ತಯಾರಿಸಿ ಸ್ವಾವಲಂಬನೆ ಹಾದಿ ತುಳಿದಿದ್ದಾರೆ.

ಈ ತಿನಿಸುಗಳ ಮಾರಾಟಕ್ಕಾಗಿ ಮದ್ದೂರು ಪಟ್ಟಣದ ಸಂಜಯ ಚಿತ್ರಮಂದಿರದ ಬಳಿ ‘ಸಿರಿಮನೆ ಕ್ಯಾಟರರ್ಸ್‌’ ಹೆಸರಿನಲ್ಲಿ ಅಂಗಡಿ ತೆರೆದಿದ್ದಾರೆ. ಇಲ್ಲಿ ಎಲ್ಲಾ ಬಗೆಯ ಹಳ್ಳಿ ತಿನಿಸು ಲಭ್ಯ. ಈ ತಿನಿಸುಗಳ ಮಾರಾಟದಿಂದಾಗಿ ಸಿರಿಮನೆ ಬಳಗದ ತಿಂಗಳ ವಹಿವಾಟು ₹1ಲಕ್ಷ ಮೀರಿದ್ದು, ಗ್ರಾಮೀಣ ಭಾಗದ ಹತ್ತು ಮಂದಿ ಮಹಿಳೆಯರ ಸ್ವಾವಲಂಬನೆಗೆ ಹೊಸ ಮಾರ್ಗ ಸಿಕ್ಕಂತಾಗಿದೆ.

ಘಮ ಘಮ ಪರಿಮಳ: ರೂಪಾ ಅವರ ಮನೆಗೆ ಭೇಟಿ ನೀಡಿದರೆ ಬಿಸಿ ಬಿಸಿ ಕಾಯಿ ಹೋಳಿಗೆ ಘಮ ಘಮ ಮೂಗಿಗೆ ಆವರಿಸುತ್ತದೆ. ಒಳ ಹೋಗುತ್ತದ್ದಂತೆ ಗರಿ ಗರಿ ನಿಪ್ಪಟ್ಟು, ಚಕ್ಕುಲಿ, ಸಿಹಿ ರವೆ ಉಂಡೆ, ಕಜ್ಜಾಯ ತಯಾರಿಕೆ ನಡೆಯುತ್ತಿರುತ್ತದೆ. ಹಿರಿಯರಾದ ಕುಪ್ಪಮ್ಮ, ಜಯಮ್ಮ, ಚೆನ್ನಮ್ಮ ಅವರು ಕಿರಿಯ ಮಹಿಳೆಯರಿಗೆ ಮಾರ್ಗದರ್ಶನ ಮಾಡುತ್ತಾರೆ.

'ಒಮ್ಮೆ ನಾವೇ ಪಡಸಾಲೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದೆವು. ಆ ಸಂದರ್ಭದಲ್ಲಿ ನಾವು ಏಕೆ ಈ ಹಳ್ಳಿ ತಿಂಡಿ ತಯಾರಿಸಿ ಮಾರಾಟ ಮಾಡಿ ಲಾಭಗಳಿಸಬಾರದು ಎಂಬ ವಿಷಯ ಪ್ರಸ್ತಾಪಕ್ಕೆ ಬಂತು. ಕೂಡಲೇ ಅಲ್ಲಿಯೇ ಇದ್ದ ನಾವು ನಾಲ್ವರು ಒಗ್ಗೂಡಿದೆವು. ಅಲ್ಪ ಬಂಡವಾಳದಿಂದ ಹಳ್ಳಿ ತಿನಿಸು ತಯಾರಿಕೆ ಆರಂಭಿಸಿದೆವು. ಮೊದಮೊದಲಿಗೆ ನಿಮ್ಮ ತಿಂಡಿಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ಹಳ್ಳಿ ಹೆಂಗಸರು ಮೂಗು ಮುರಿದಿದ್ದರು. ದಿನಕಳೆದಂತೆ ಹಳ್ಳಿ ತಿನಿಸುಗಳ ಭರ್ಜರಿ ವ್ಯಾಪಾರ ಕಂಡು ಮೂಗು ಮುರಿದ ಹೆಂಗಸರೇ ನಮ್ಮೊಂದಿಗೆ ಸೇರಿ ತಿಂಡಿ ತಯಾರಿಕೆಗೆ ಮುಂದಾದರು. ನಾಲ್ವರಿಂದ ಆರಂಭಗೊಂಡ ಈ ಗುಡಿ ಕೈಗಾರಿಕೆ ಇದೀಗ 10 ಮಂದಿ ಸದಸ್ಯರ ಸಂಖ್ಯೆಗೆ ಹೆಚ್ಚಿದೆ. ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಎಲ್ಲಾ ಖರ್ಚು ಕಳೆದು ₹ 4– 5ಸಾವಿರ ರೂಪಾಯಿ ಲಾಭ ದೊರಕುತ್ತಿದೆ’ ಎಂದು ಸಿರಿಮನೆ ಬಳಗದ ಮುಖ್ಯಸ್ಥೆ ರೂಪಾ ಚಲುವರಾಜು ತಮ್ಮ ಯಶೋಗಾಥೆ ಬಿಚ್ಚಿಟ್ಟರು.

ಕೇವಲ ನಿಪ್ಪಟ್ಟು, ಚಕ್ಕಲಿ, ಮದ್ದೂರು ವಡೆ ಸೇರಿದಂತೆ ಐದಾರು ತಿಂಡಿಗಳನ್ನು ತಯಾರಿಸುತ್ತಿದ್ದ ಸಿರಿಮನೆ ಬಳಗ ಇದೀಗ ಉಪ್ಪಿನಕಾಯಿ, ರಾಗಿ, ಹುರುಳಿ ಹಪ್ಪಳ, ಸೆಂಡಿಗೆ, ಇಡ್ಲಿ, ದೋಸೆ, ಪೊಂಗಲ್‌,ಪುಳಿಯೋಗರೆ ರೆಡಿಮಿಕ್ಸ್ ಸೇರಿದಂತೆ 75 ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇದಲ್ಲದೇ ಸಣ್ಣಪುಟ್ಟ ಶುಭ ಸಮಾರಂಭಗಳಿಗೆ 500 ಮಂದಿಯವರೆಗೆ ಅಡುಗೆ ಮಾಡಿಕೊಡುವ ಕ್ಯಾಟರಿಂಗ್ ಆರಂಭಿಸಿದ್ದಾರೆ. ಹೀಗಾಗಿ ವಾರದ ರಜೆ ಭಾನುವಾರ ಬಿಟ್ಟು ಇನ್ನುಳಿದ 6ದಿನಗಳು ಕೈತುಂಬ ಕೆಲಸ ಹಾಗೂ ಹಣ ಸಿಗುತ್ತಿದೆ. ಸಿರಿಮನೆಯನ್ನು ಸಂಪರ್ಕಕ್ಕೆ ಮೊ: 9164289690.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT