ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌತಿಯ ವಿಶೇಷ ಖಾದ್ಯ

Last Updated 29 ಆಗಸ್ಟ್ 2019, 5:00 IST
ಅಕ್ಷರ ಗಾತ್ರ

ಅಷ್ಟದ್ರವ್ಯ

ಬೇಕಾಗುವ ವಸ್ತುಗಳು : ಅರಳು 80ಗ್ರಾಂ, 300ಗ್ರಾಮ್ಸ್ ಅವಲಕ್ಕಿ, 1 ಕಬ್ಬು, ½ ಕೆ.ಜಿ. ಬೆಲ್ಲ, 4 ಚಮಚ ಎಳ್ಳು, 2 ತೆಂಗಿನಕಾಯಿ, 4 ಬಾಳೆಹಣ್ಣು, 2 ಚಮಚ ಹಸುವಿನ ತುಪ್ಪ.

ಮಾಡುವ ವಿಧಾನ : ಕಬ್ಬಿನ ಸಿಪ್ಪೆ ತೆಗೆದು ತುಂಡು ಮಾಡಿ ಇಡಿ, ಕಾಯಿಯನ್ನು ತುರಿದು, ಬೆಲ್ಲ ಪುಡಿ ಮಾಡಿ. ನಂತರ ಅವಲಕ್ಕಿ, ಅರಳನ್ನು ಇದಕ್ಕೆ ಹಾಕಿ ಕಲಸಿ. ಕಬ್ಬಿನ ತುಂಡುಗಳನ್ನು, ಬಾಳೆಹಣ್ಣಿನ ತುಂಡುಗಳನ್ನು, ತುಪ್ಪವನ್ನು ಸೇರಿಸಿ. ನಂತರ ಎಳ್ಳನ್ನು ಹುರಿದು ಇದಕ್ಕೆ ಸೇರಿಸಿ.

ಇದನ್ನೆಲ್ಲ ಕಲಸಿ ಗಣಹೋಮಕ್ಕೆ ಇಡಿ. ಹೀಗೆ ಮಾಡಿ ತಿನ್ನಬಾರದು. ಗಣಪತಿಗೆ ನೈವೇದ್ಯ ಮಾಡಿ, ಅರ್ಧಾಂಶ ಹೋಮಕ್ಕೆ ಹಾಕಿ ನಂತರ ಉಳಿದ ಅರ್ಧಾಂಶ ಪ್ರಸಾದವಾಗಿ
ತಿನ್ನಬಹುದು.

ಬೇಸನ್‌ ಲಾಡು

ಬೇಕಾಗುವ ವಸ್ತುಗಳು : 1 ಕಪ್ ಕಡಲೆ ಹಿಟ್ಟು, 2 ಕಪ್ ಸಕ್ಕರೆ ಪುಡಿ, ½ ಕಪ್ ತುಪ್ಪ, ½ ಚಮಚ ಏಲಕ್ಕಿ ಪುಡಿ, 5-6 ಒಣದ್ರಾಕ್ಷೆ, 6-7 ಗೋಡಂಬಿ.
ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಕಡಲೆ ಹಿಟ್ಟು ಹಾಕಿ ಪರಿಮಳ ಬರುವ ವರೆಗೆ ಹುರಿದು ಕೆಳಗಿಳಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ. ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ದ್ರಾಕ್ಷಿ ಚೂರು, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ನಿಂಬೆ ಗಾತ್ರದ ಉಂಡೆ ಮಾಡಿ ಲಾಡು ಕಟ್ಟಿ. ಈ ಲಾಡು ಪರಿಮಳ ದಿಂದ ಕೂಡಿ ಸ್ವಾದಿಷ್ಟವಾಗಿರುತ್ತದೆ.

ಸ್ಪೆಷಲ್ ಚಕ್ಕುಲಿ

ಬೇಕಾಗುವ ವಸ್ತುಗಳು : 2 ಕಪ್ ಗೋಧಿ ಹಿಟ್ಟು, 2 ಚಮಚ ಸಾಸಿವೆ, 2 ಚಮಚ ಕಾರದ ಪುಡಿ, ½ ಚಮಚ ಅರಸಿನ, 2 ಕಪ್ ಮೊಸರು, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ : ಗೊಧಿ ಹಿಟ್ಟನ್ನು ಒಂದು ಬಟ್ಟೆಯಲ್ಲಿ ಕಟ್ಟಿ. ಇದನ್ನು ಪ್ರೆಶರ್ ಕುಕ್ಕರಿನಲ್ಲಿಟ್ಟು ಹಬೆಯಲ್ಲಿ ಬೇಯಿಸಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ. ನಂತರ ಸಾಸಿವೆ, ಅರಸಿನ, ಅಚ್ಚ ಖಾರದ ಪುಡಿ, ಉಪ್ಪು ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಲಸಿ. ನಂತರ ಇದಕ್ಕೆ ಬೇಕಾದಷ್ಟು ಮೊಸರು ಸೇರಿಸಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಚಕ್ಕುಲಿ ಒರಳಿನಲ್ಲಿ ಹಾಕಿ ಚಕ್ಕುಲಿ ಮಾಡಿ ಕಾದ ಎಣ್ಣೆಯಲ್ಲಿ 2 ಬದಿ ಕೆಂಪಗೆ ಕರಿಯಿರಿ. ಎಣ್ಣೆ ಆರಿದ ನಂತರ ಸವಿಯಿರಿ.

ಒಡೆ ಅಪ್ಪ

ಬೇಕಾಗುವ ವಸ್ತುಗಳು : 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ಬೆಲ್ಲ, 1 ಕಪ್ ತೆಂಗಿನ ತುರಿ, ಸ್ವಲ್ಪ ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ : ಅಕ್ಕಿಯನ್ನು 2 ಗಂಟೆ ನೆನೆಸಿ. ನಂತರ ತೆಂಗಿನ ತುರಿ, ಬೆಲ್ಲ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ 2 ಚಮಚ ಹಾಕಿ ರುಬ್ಬಿದ ಹಿಟ್ಟು ಹಾಕಿ ತೊಳಸಿ. ಹಿಟ್ಟು ಗಟ್ಟಿಯಾದಾಗ ಕೆಳಗಿಳಿಸಿ. ನಂತರ 2 ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿ. ನಂತರ ಉಂಡೆ ಮಾಡಿ ಬಾಳೆಲೆಗೆ ಎಣ್ಣೆ ಸವರಿ ವಡೆಯಂತೆ ತಟ್ಟಿ. ಬಿಸಿ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ. ಒಂದೊಂದೆ ಹಾಕಿ ತಳ ಬಿಟ್ಟಾಗ ಕವುಚಿ ಹಾಕಿ ಕರಿಯಿರಿ. ಗಣಪತಿಗೆ ಪ್ರಿಯವಾದ ಒಡೆ ಅಪ್ಪ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT