ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಚಟ್ನಿಯ ಬಗ್ಗೆ ಗೊತ್ತೆ?

Last Updated 7 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬದನೆಕಾಯಿ ಚಟ್ನಿ
ಸಾಮಗ್ರಿ: 5 ಬದನೆಕಾಯಿ, ಒಂದು ಬೆಳ್ಳುಳ್ಳಿ ಗಡ್ಡೆ, 2 ಟೊಮೆಟೊ, ಒಂದೂವರೆ ಲೋಟ ತೆಂಗಿನ ತುರಿ, ಒಂದು ಚಮಚ ಜೀರಿಗೆ, ಒಂದು ಚಮಚ ಇಂಗು, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು

ವಿಧಾನ: ಬದನೆಕಾಯಿಯನ್ನು ಸುಟ್ಟು ಸಿಪ್ಪೆ ತೆಗೆದುಕೊಳ್ಳಿ. ನಂತರ ಮೇಲೆ ಹೇಳಿದ ಎಲ್ಲಾ ಪದಾರ್ಥಗಳಿಂದ ಒಗ್ಗರಣೆ ತಯಾರಿಸಿ ಅದಕ್ಕೆ ಸುಟ್ಟು ಸಿಪ್ಪೆ ತೆಗೆದು ಸಣ್ಣಕ್ಕೆ ಹೆಚ್ಚಿದ ಬದನೆಕಾಯಿ ಹಾಕಿದರೆ ಬದನೆಕಾಯಿ ಚಟ್ನಿ ರೆಡಿ.

ನೆಲ್ಲಿಕಾಯಿ ಚಟ್ನಿ
ಸಾಮಗ್ರಿ: ಹತ್ತು ನೆಲ್ಲಿಕಾಯಿ, ನಾಲ್ಕು ಹಸಿ ಅಥವಾ ಒಣಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, ಸ್ವಲ್ಪ ಇಂಗು, ಒಂದು ಚಮಚ ಮೆಂತ್ಯ, ಒಂದು ಚಮಚ ಸಾಸಿವೆ, ಒಂದು ನಿಂಬೆ.

ವಿಧಾನ: ನೆಲ್ಲಿಕಾಯಿ ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಮೇಲೆ ತಿಳಿಸಿದ ಪದಾರ್ಥಗಳಿಂದ ಒಗ್ಗರಣೆ ಮಾಡಿಕೊಂಡು ಅದಕ್ಕೆ ಈ ಕತ್ತರಿಸಿದ ನೆಲ್ಲಿಕಾಯಿ ಹಾಕಿದರೆ ಆರೋಗ್ಯದಾಯಕ ನೆಲ್ಲಿಕಾಯಿ ಚಟ್ನಿ ಸಿದ್ದಗೊಳ್ಳುತ್ತದೆ.

ಕ್ಯಾರೆಟ್ ಚಟ್ನಿ
ಸಾಮಗ್ರಿ: ನಾಲ್ಕು ಕ್ಯಾರೆಟ್, ನಾಲ್ಕು ಹಸಿಮೆಣಸಿನ ಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಚಿಟಿಕೆಯಷ್ಟು ಇಂಗು, ಒಂದು ಚಮಚದಷ್ಟು ಹುರಿಗಡಲೆ, ರುಚಿಗೆ ಉಪ್ಪು, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು.

ವಿಧಾನ: ಒಗ್ಗರಣೆ ಸಾಮಾನು ಬಿಟ್ಟು ಉಳಿದದ್ದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಟ್ಟುಕೊಳ್ಳಿ. ನಂತರ, ಕ್ಯಾರೆಟ್‌ಗಳನ್ನು ತೊಳೆದು ಅದರ ಸಿಪ್ಪೆಯನ್ನು ತೆಗೆಯಬೇಕು. ಸಿಪ್ಪೆ ತೆಗೆಯುವ ಚಾಕುವನ್ನು ಬಳಸಿದರೆ ಉತ್ತಮ. ನಂತರ ಅದನ್ನು ಚಿಕ್ಕದಾಗಿ ಕತ್ತರಿಸಬೇಕು. ಕತ್ತರಿಸುವ ಬದಲು ತುರಿದುಕೊಂಡರೂ ಆದೀತು. ಒಂದು ಪ್ಯಾನ್‌ನನಲ್ಲಿ ಎಣ್ಣೆಕಾಯಿಸಿ ಅದರಲ್ಲಿ ಸಾಸಿವೆ ಸಿಡಿಸಿ, ಉದ್ದಿನಬೇಳೆ, ಕರಿಬೇವು ಹಾಕಬೇಕು. ಇದರಲ್ಲಿ ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ ಒಗ್ಗರಣೆ ಮಾಡಬೇಕು. ಈ ಒಗ್ಗರಣೆಗೆ ತುರಿದ/ಕತ್ತರಿಸಿದ ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿದರೆ ಕ್ಯಾರೆಟ್ ಚಟ್ನಿ ಸಿದ್ಧ.

ದಂಟಿನ ಸೊಪ್ಪು/ ಪಾಲಕ್ ಸೊಪ್ಪು ಚಟ್ನಿ
ಸಾಮಗ್ರಿ: ಒಂದು ದೊಡ್ಡ ದಂಟಿನ ಸೊಪ್ಪು ಅಥವಾ ಪಾಲಕ್ ಸೊಪ್ಪಿನ ಕಟ್ಟು, ಸ್ವಲ್ಪ ಎಣ್ಣೆ, 6 ಹಸಿಮೆಣಸು, ಒಂದು ಬೆಳ್ಳುಳ್ಳಿ, ಒಂದು ಚಮಚ ಜೀರಿಗೆ, ರುಚಿಗೆ ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು.

ವಿಧಾನ: ಸೊಪ್ಪನ್ನು ಬಿಡಿಸಿ ತೊಳೆದುಕೊಳ್ಳಿ. ಈ ಸೊಪ್ಪು ಸೇರಿದಂತೆ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ ಫ್ರೈ ಆದ ನಂತರ ಅದನ್ನು ತಣ್ಣಗಾಗಲು ಬಿಡಿ, ಆಮೇಲೆ ಮಿಕ್ಸಿಯಲ್ಲಿ ರುಬ್ಬಿ. ಇದರಲ್ಲಿ ಹುಳಿ ಪದಾರ್ಥ ಹಾಕಿಲ್ಲವಾದ ಕಾರಣ, ನಿಂಬೆರಸ ಇಲ್ಲವೇ ಮೊಸರು ಹಾಕಿ ಸೇವಿಸಬಹುದು.

ಮೂಲಂಗಿ ಚಟ್ನಿ
ಸಾಮಗ್ರಿ: ನಾಲ್ಕು ಮೂಲಂಗಿ, ಐದು ಒಣಮೆಣಸಿನಕಾಯಿ, ರುಚಿಗೆ ಉಪ್ಪು, ಅರ್ಧ ನಿಂಬೆಗಾತ್ರದ ಹುಣಸೆಹಣ್ಣು, ಸ್ವಲ್ಪ ಇಂಗು, ಅರ್ಧ ಬಟ್ಟಲು ತೆಂಗಿನ ತುರಿ, ಒಂದು ಚಮಚ ಹುರಿಗಡಲೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ: ಇಂಗು, ಕರಿಬೇವು, ಉದ್ದಿನಬೇಳೆ, ಸಾಸಿವೆ.

ವಿಧಾನ: ಮೂಲಂಗಿಯನ್ನು ಚಿಕ್ಕದಾಗಿ ಕತ್ತರಿಸಿ, ಉಳಿದ ಪದಾರ್ಥಗಳನ್ನು (ಒಗ್ಗರಣೆ ಪದಾರ್ಥ ಬಿಟ್ಟು) ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಈ ಮಿಶ್ರಣಕ್ಕೆ ಮೂಲಂಗಿ ಹಾಕಿ ಕಲಸಿ. ಮೇಲೆ ತಿಳಿಸಿರುವ ಒಗ್ಗರಣೆ ಪದಾರ್ಥಗಳಿಂದ ಒಗ್ಗರಣೆ ಮಾಡಿ ಅದಕ್ಕೆ ಈ ಮೂಲಂಗಿ ಮಿಶ್ರಣ ಹಾಕಿದರೆ ಮೂಲಂಗಿ ಚಟ್ನಿ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT