ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮದ್ದಿಗೆ ವಿಧವಿಧ ಕಷಾಯ

ನಮ್ಮೂರ ಊಟ
Last Updated 5 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಕೈ ನೋವಿಗೆ ರಾಮಬಾಣ  
ಸಾಮಗ್ರಿಗಳು: ಹವೀಜ (ಧನಿಯಾ) 1ಕಪ್, ನೆಗಲಿ ಮುಳ್ಳು, 4 ಟೀ ಚಮಚ, ವಾಯಿವಡಂಗ ಸ್ವಲ್ಪ, ಗೋರಕಷ್ಟಿ ಸ್ವಲ್ಪ, ಅಶ್ವಗಂಧ 2 ಇಂಚು.
ವಿಧಾನ: ಎಲ್ಲವನ್ನೂ ಬೇರೆ ಬೇರೆಯಾಗಿ ಬಿಸಿ ಮಾಡಿಕೊಳ್ಳಬೇಕು. ಮಿಕ್ಸಿಯಲ್ಲಿ ಸಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಬೇಕು. ಅರ್ಧ ಲೋಟ ನೀರು, ಅರ್ಧ ಲೋಟ ಹಾಲು, ಕಲ್ಲು ಸಕ್ಕರೆ, ಒಂದು ಚಮಚ ಕಷಾಯದ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ದಿನಕ್ಕೆ ಎರಡರಿಂದ ಮೂರು ಸಲ ಬಿಸಿಯಾಗಿರುವಾಗಲೇ ಕುಡಿಯಿರಿ.

ಕಫ ಕರಗಿಸಲು
ಸಾಮಗ್ರಿಗಳು: 2 ಕತ್ತರಿಸಿದ ಈರುಳ್ಳಿ, 1 ಚಮಚ ಜಜ್ಜಿದ ಕಾಳುಮೆಣಸು, 1 ಹಿಡಿ ತುಳಸಿ ಎಲೆ, 2 ಇಂಚು ಹಸಿಶುಂಠಿ, ನಿಂಬೆ ಗಾತ್ರದ ಬೆಲ್ಲ, 2 ಟೀ ಚಮಚ ಅರಿಶಿನ ಪುಡಿ.

ಇವಿಷ್ಟನ್ನು 2 ಲೋಟದಷ್ಟು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಹಾಲು ಹಾಕದೆ ಕುಡಿದರೆ ಘಾಟು ತರುವ, ಘಮ್ಮೆನ್ನುವ ಈ ಕಷಾಯದಿಂದ ಒಂದೇ ಸಲಕ್ಕೆ ಶೀತ ಮಾಯ.

ನೆಗಡಿಗೆ ಕುಡಿಯಿರಿ ಈ ಕಷಾಯ
4 ಟೀ ಚಮಚ ಜೀರಿಗೆ ಹುರಿದು ಪುಡಿ ಮಾಡಿ, ಅರಿಶಿಣಪುಡಿ, ಕಲ್ಲುಸಕ್ಕರೆ, ಹಾಲು ಹಾಕಿ ಕುದಿಸಿದರೆ ಕಷಾಯ ರೆಡಿ.
ದಿನವೂ ಚಹಾ, ಕಾಫಿ ಹೆಚ್ಚಾಗಿ ಸೇವಿಸುವುದಕ್ಕಿಂತ ದಿನಕ್ಕೆ ಒಂದು ಬಾರಿಯಾದರೂ. ಕಷಾಯವನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಸಾಮಗ್ರಿ: 2 ಕಪ್ ಹವೀಜ, ಕಾಲು ಕಪ್ ಜೀರಿಗೆ, 4 ಚಮಚ ಬಡೆಸೋಪು, 2 ಚಮಚ ಮೆಂತ್ಯ, 4 ಲವಂಗ, 1 ಚಮಚ ಕಾಳುಮೆಣಸು. ಇವಿಷ್ಟನ್ನು ಬಾಣಲೆಯಲ್ಲಿ ಬೇರೆ ಬೇರೆಯಾಗಿ ಬಿಸಿ ಮಾಡಿ ಸಣ್ಣಗೆ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಬೇಕು. ದೇಹದ ಸಮಶಿತೋಷ್ಣವನ್ನು ಕಾಪಾಡುವಲ್ಲಿ ಇದು ಔಷಧಿಯಾಗಿ ಕೆಲಸ ಮಾಡುತ್ತದೆ.

ಒಣಕೆಮ್ಮಿನ ಉಪಶಮನಕ್ಕೆ...
ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬರುವ ಒಣಕೆಮ್ಮು ಮನೆಯವರೆಲ್ಲರ ನಿದ್ರೆಗೆಡಿಸುತ್ತದೆ. ತಕ್ಷಣ ಗಂಟಲಿಗೆ ರಿಲೀಫ್ ಸಿಗಲು ಹೀಗೆ ಮಾಡಿ.
ಸಾಮಗ್ರಿ: ಕಾಳುಮೆಣಸಿನ ಪುಡಿ, ಹಸಿಶುಂಠಿ ರಸ, ಹಾಗೂ ತೆಳುಬೆಲ್ಲ ಸೇರಿಸಿ ಒಲೆ ಮೇಲಿಟ್ಟು ಕುದಿಸಿ ಗಟ್ಟಿಯಾದ ಮೇಲೆ ಕೆಳಗಿಳಿಸಿ ಆರಿದ ಮೇಲೆ ಚಿಕ್ಕ ಚಿಕ್ಕ ಗುಳಿಗೆಗಳನ್ನು ಮಾಡಿ ಕೆಮ್ಮು ಬಾಧಿಸಿದಾಗೆಲ್ಲ ಬಾಯಲ್ಲಿಟ್ಟು ಚೀಪಿದರೆ ಕೂಡಲೆ ಕೆಮ್ಮು ಉಪಶಮನವಾಗುತ್ತದೆ. ಮಕ್ಕಳಿಗೆ ಶಾಲೆ ಹೋಗುವಾಗಲೂ ಕೊಟ್ಟು ಕಳಿಸಬಹುದು.

ಚಿಕ್ಕ ಮಕ್ಕಳಿಗೆ ಹಸಿರು ಬಣ್ಣದ ಕಷಾಯ.
ಸಾಮಗ್ರಿ: ಒಂದು ಹಿಡಿ ತುಳಸಿ ಎಲೆ, ಒಂದು ಹಿಡಿ ಅಜ್ವಾನದ ಎಲೆ, ಹಾಲು, ಕಲ್ಲು ಸಕ್ಕರೆ, ಕರಿಬೇವು, ಜೇನುತುಪ್ಪ. ಎಲ್ಲವನ್ನೂ ಕುದಿಸಿ ಆರಿಸಿ ಕುಡಿಸಿದರೆ ಅಜೀರ್ಣ, ಕೆಮ್ಮು, ಶೀತ ಕಡಿಮೆಯಾಗುತ್ತದೆ.

ಪಿತ್ತ ಶಮನಕ್ಕೆ ನಿಂಬೆಹಣ್ಣಿನ ಬಿಸಿ ಪಾನಕ
ಒಂದು ಲೋಟ ನೀರಿಗೆ 2 ಚಮಚ ಕಲ್ಲು ಸಕ್ಕರೆ, ಚಿಟಿಕೆ ಉಪ್ಪು, ಅರ್ಧ ಇಂಚು ತುರಿದ ಶುಂಠಿ, ಪುಡಿ ಮಾಡಿದ 2 ಕಾಲುಮೆಣಸು ಎಲ್ಲವನ್ನೂ ಚೆನ್ನಾಗಿ ಕುದಿಸಿ ಗ್ಯಾಸ್ ಆರಿಸಿದ ಬಳಿಕ ಅರ್ಧ ಹೋಳು ನಿಂಬೆರಸ ಹಾಕಿ ಶೋಧಿಸಿ ಕುಡಿದರೆ ಮನಸ್ಸಿಗೆ, ದೇಹಕ್ಕೆ ಆಹ್ಲಾದ ಸಿಗುತ್ತದೆ.

ಪದೇ ಪದೇ ಸೀನು ಬಂದು ಮೂಗು ಸೋರುತ್ತಿದ್ದರೆ ಗಂಟಲು ನೋವಿದ್ದರೆ ಈ ಕಷಾಯ ಕುಡಿಯಿರಿ
2ಟೀ ಚಮಚ ಹವೀಜ, 8-10 ಕರಿಬೇವು, ಒಂದಷ್ಟು ತುಳಸಿ ಎಲೆ, ಅರಿಶಿನಪುಡಿ, 1/2 ಇಂಚು ಒಣಶುಂಠಿ, 2-3 ಕಾಳುಮೆಣಸು, ಬೆಲ್ಲ, ಹಾಲು, ಇವಿಷ್ಟನ್ನು ಚೆನ್ನಾಗಿ ಕುದಿಸಿದರೆ ಘಮ್ಮೆನ್ನುವ ಕಷಾಯ ರೆಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT