ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ಗೆ ಬಿರಿಯಾನಿ ವೈವಿಧ್ಯ

Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ಸೀಗಡಿ ಬಿರಿಯಾನಿ
ಸಾಮಗ್ರಿ: ಬಾಸ್ಮತಿ ಅಕ್ಕಿ - 3 ಬಟ್ಟಲು, ಸೀಗಡಿ - ಕಾಲು ಕೆ.ಜಿ, ಈರುಳ್ಳಿ -3 ದೊಡ್ಡದು, ಟೊಮೆಟೊ - 2 ದೊಡ್ಡದು, ಏಲಕ್ಕಿ - 4, ಕೊತ್ತಂಬರಿ ಸೊಪ್ಪು -ಒಂದು ಕಟ್ಟು, ಬೆಳ್ಳುಳ್ಳಿ - 6-7 ಎಸಳು, ಕೆಂಪು ಮೆಣಸಿನ ಪುಡಿ - ಅರ್ಧ ಚಮಚ, ಗರಂ ಮಸಾಲಾ - ಅರ್ಧ ಚಮಚ, ಅರಿಶಿಣ - ಅರ್ಧ ಚಮಚ, ಶುಂಠಿ - ಅರ್ಧ ಇಂಚು, ತುಪ್ಪ- ಒಂದು ಚಮಚ.

ವಿಧಾನ: ಬಾಣಲೆಯಲ್ಲಿ ಎಣ್ಣೆ  ಬಿಸಿ ಮಾಡಿ ಈರುಳ್ಳಿ, ಏಲಕ್ಕಿ, ಚಕ್ಕೆ, ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ. ಇದಕ್ಕೆ ಅಕ್ಕಿ ಸೇರಿಸಿ. ಉಪ್ಪು ಹಾಕಿ ಕೈಯಾಡಿಸಿ. ಕೆಂಪು ಮೆಣಸಿನ ಪುಡಿ, ಅರಿಶಿಣ ಹಾಗೂ ಗರಂ ಮಸಾಲೆ ಪುಡಿಯನ್ನು ಸೇರಿಸಿ ಕೈಯಾಡಿಸಿ. ಅಕ್ಕಿ ಬೇಯುವಷ್ಟು ನೀರು ಸೇರಿಸಿ. ಅಕ್ಕಿ ಬೇಯುವವರೆಗೆ ಒಲೆಯ ಮೇಲಿಟ್ಟರೆ ಘಮಘಮಿಸುವ ಪ್ರಾನ್ಸ್‌ ಬಿರಿಯಾನಿ ರೆಡಿ.

ಚಿಕನ್‌ ಬಿರಿಯಾನಿ
ಸಾಮಾಗ್ರಿ: ಬಾಸುಮತಿ ಅಕ್ಕಿ- ಅರ್ಧ ಕೆ.ಜಿ, ಈರುಳ್ಳಿ -2 ದೊಡ್ಡದು, ಶುಂಠಿ- ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಪುದೀನ ಎಲೆ- ಒಂದು ಕಟ್ಟು, ಒಣ

ಮೆಣಸು- 5-6, ಗರಂ ಮಸಾಲಾ ಪುಡಿ- ಒಂದು ಚಮಚ, ಕೇಸರಿ ದಳ- 5-6, ನಿಂಬೆ ರಸ- 2 ಚಮಚ, ಕೊತ್ತಂಬರಿ ಸೊಪ್ಪು- ಒಂದು ಕಟ್ಟು, ಅರಿಶಿಣ ಪುಡಿ- 2 ಚಮಚ, ಹಸಿ ಮೆಣಸಿನ ಕಾಯಿ -5, ರುಚಿಗೆ- ಉಪ್ಪು, ನೀರು.

ವಿಧಾನ: ಕಾದ ಎಣ್ಣೆಗೆ ಈರುಳ್ಳಿ, ಅರಿಶೀನ ಪುಡಿ, ಗರಂ ಮಸಾಲ, ಉಪ್ಪು,  ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಕಾಯಿ,  ಕರಿ ಬೇವಿನ ಎಲೆ ಹಾಕಿ ಚೆನ್ನಾಗಿ ಫ್ರೈ  ಮಾಡಿ.  ಅದಕ್ಕೆ ಪುದೀನಾ, ಟೊಮೆಟೊ, ಕೊತ್ತಂಬರಿ ಸೊಪ್ಪು,  ಮೆಣಸಿನ ಹುಡಿ, ಗರಂ ಮಸಾಲಾ ಹುಡಿ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಕತ್ತರಿಸಿದ ಚಿಕನ್‌ ಹಾಕಿ ಮಿಕ್ಸ್ ಮಾಡಿ. ಅಗತ್ಯ ಇರುವಷ್ಟು ನೀರು ಹಾಕಿ ಬೇಯಿಸಿ. ಬೆಂದ ನಂತರ ಅದಕ್ಕೆ ಸ್ವಲ್ಪ ಎಣ್ಣೆ, ಉಪ್ಪು  ಹಾಗೂ  ಬಾಸುಮತಿ ಅಕ್ಕಿಯನ್ನು ಹಾಕಿ ಬೇಯಿಸಿ. ಮುಕ್ಕಾಲು ಬೆಂದಾಗ ಸ್ವಲ್ಪ ತುಪ್ಪ , ಕೇಸರಿ ದಳ, ನಿಂಬೆ ರಸ ಹಾಕಿ ಪಾತ್ರೆಯ ಮುಚ್ಚಳ ಹಾಕಿ ಬೇಯಿಸಿದರೆ ಸುಲಭದಲ್ಲಿ ಮಾಡಬಹುದಾದ ಚಿಕನ್‌ ಬಿರಿಯಾನಿ ಸಿದ್ಧ.

ಕೇರಳ ಸ್ಟೈಲ್‌ ಮಟನ್‌ ಬಿರಿಯಾನಿ
ಇದನ್ನು ಮಾಡಲು ಸ್ವಲ್ಪ ಶ್ರಮ, ತಾಳ್ಮೆ ಅಗತ್ಯ. ಆದರೆ ರುಚಿ ಮಾತ್ರ ನಂ.1

ಮಟನ್‌ ಮಿಶ್ರಣಕ್ಕೆ ಅಗತ್ಯ ಸಾಮಗ್ರಿ: ಮಟನ್ –ಒಂದು ಕೆ.ಜಿ, ಜೀರಿಗೆ- 2 ಚಮಚ, ಧನಿಯಾಪುಡಿ – ಒಂದು ಚಮಚ, ಶುಂಠಿ- ಬೆಳ್ಳುಳ್ಳಿ- ತಲಾ 30 ಗ್ರಾಂ, ಕೊತ್ತಂಬರಿ ಸೊಪ್ಪು – ಒಂದು ಕಟ್ಟು, ಕರಿಬೇವು – 10-–-12 ಎಸಳು, ಹಸಿಮೆಣಸಿನಕಾಯಿ – 6–-7, ಅರಿಶಿನದ ಪುಡಿ –1 ಚಮಚ, ನಿಂಬೆ ರಸ – 1 ಚಮಚ, ಗಸಗಸೆ ಪೇಸ್ಟ್ – 1 ಚಮಚ, ಸೋಂಪು-2 ಚಮಚ, ಮೊಟ್ಟೆ-2. ಅನ್ನಕ್ಕೆ ಅಗತ್ಯ ಸಾಮಗ್ರಿ: ಬಿರಿಯಾನಿ ಅಕ್ಕಿ -ಕಾಲು ಕೆ.ಜಿ, ಈರುಳ್ಳಿ-1, ಬೇ ಲೀಫ್ – 2, ತುಪ್ಪ -4 ಚಮಚ, ಚಕ್ಕೆ -6, ಕರಿಬೇವು- 5 ಎಸಳು, ಏಲಕ್ಕಿ –5, ನೀರು –ಅಗತ್ಯಕ್ಕೆ ತಕ್ಕಷ್ಟು.

ಮಸಾಲೆಗೆ: ಟೊಮೆಟೊ-1, ಏಲಕ್ಕಿ, ಲವಂಗ- ತಲಾ 5, ತುಪ್ಪ- 3 ಚಮಚ, ಚಕ್ಕೆ – 6, ಬೇ ಲೀಫ್–1, ಲವಂಗ -4, ಏಲಕ್ಕಿ –4, ಜಾಕಾಯಿ – 100 ಗ್ರಾಂ.
ವಿಧಾನ: ಪೀಸ್‌ ಮಾಡಿಟ್ಟ ಮಟನ್‌ಗೆ ಪುಡಿ ಮಾಡಿದ ಸೋಂಪು, ಪುದೀನಾ ಎಲೆ, ಜೀರಿಗೆ, ಏಲಕ್ಕಿ, ಧನಿಯಾ ಪುಡಿ,ಲವಂಗ, ಶುಂಠಿ- ಬೆಳ್ಳುಳ್ಳಿ ಪೇಸ್ಟ್‌, ಚಕ್ಕೆ, ಹಸಿಮೆಣಸಿನಕಾಯಿ, ಅರಿಶಿಣದಪುಡಿ, ಗಸಗಸೆ ಪೇಸ್ಟ್, ಜಾಕಾಯಿ, ಬೇ ಲೀಫ್,  ನಿಂಬೆ ರಸ, ಕರಿಬೇವು, ಮೊಟ್ಟೆ, ಉಪ್ಪು ಎಲ್ಲಾ ಮಿಕ್ಸ್‌ ಮಾಡಿಸಿ. ಬಾಣಲೆಯಲ್ಲಿ ತುಪ್ಪ ಕಾಯಿಸಿ ಗೋಡಂಬಿ, ಒಣದ್ರಾಕ್ಷಿ ಹುರಿಯಿರಿ. ಈರುಳ್ಳಿ ತುಂಡಿಗೆ ಉಪ್ಪು ಸೇರಿಸಿ ಹುರಿಯಿರಿ. ಪುನಃ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಈರುಳ್ಳಿ ಫ್ರೈ ಮಾಡಿ. ಟೊಮೆಟೊ ಹಾಕಿ ಫ್ರೈ ಮಾಡಿ. ಮಿಕ್ಸ್‌ ಮಾಡಿದ ಮಟನ್ ಸೇರಿಸಿ ನೀರು ಹಾಕಿ ಬೇಯಿಸಲು ಇಡಿ.

ಇನ್ನೊಂದೆಡೆ, ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ. ಲವಂಗ, ಸೋಂಪು, ಚಕ್ಕೆ, ಜೀರಿಗೆ ಪುಡಿ ಮತ್ತು ಕರಿಬೇವು ಹಾಕಿ ಕೈಯಾಡಸಿ. ಏಲಕ್ಕಿ ಹಾಗೂ ಈರುಳ್ಳಿ ಸೇರಿಸಿ ಕಲಕಿ. ಅಕ್ಕಿ ಹಾಕಿ ಕಲಕಿ. ಸಾಕಷ್ಟು ನೀರು ಹಾಕಿ ಉಪ್ಪು ಸೇರಿಸಿ. ಮುಚ್ಚಳ ಮುಚ್ಚಿ, ಬೇಯಿಸಿ. ಈಗ ಮಟನ್ ಬೇಯುತ್ತಿರುವ ಬಾಣಲೆ ಮುಚ್ಚಳ ತೆಗೆದು ಕೈಯಾಡಿಸಿ. ಪಾತ್ರೆಯಿಂದ ಬೇಯುತ್ತಿರುವ ಅನ್ನದಲ್ಲಿ ಸ್ವಲ್ಪ ಭಾಗ ತೆಗೆದು ಪಾತ್ರೆಗೆ ಹಾಕಿ. ಸ್ವಲ್ಪ ಮಟನ್ ತುಂಡು ತೆಗೆದು, ಪಾತ್ರೆಯಲ್ಲಿರುವ ಅನ್ನದ ಮೇಲೆ ಹಾಕಿ. ಪಾತ್ರೆಯಲ್ಲಿ ಉಳಿದ ಅನ್ನವನ್ನು ಮಟನ್ ತುಂಡುಗಳ ಮೇಲೆ ಹಾಕಿ. ಉಳಿದ ಮಟನ್ ತುಂಡುಗಳನ್ನು ಅನ್ನದ ಮೇಲೆ ಹಾಕಿ. ಕೊನೆಯಲ್ಲಿ ಗೋಡಂಬಿ, ಒಣದ್ರಾಕ್ಷಿ ಮತ್ತು ಹುರಿದ ಈರುಳ್ಳಿಯನ್ನು ಸೇರಿಸಿ. ಸ್ವಲ್ಪ ಕೊತ್ತಂಬರಿ ಸೇರಿಸಿ, ಕೆಲವು ನಿಮಿಷ ಬೇಯಿಸಿ.

ವೆಜಿಟಬಲ್‌ ಬಿರಿಯಾನಿ
ಸಾಮಗ್ರಿ: ಅಕ್ಕಿ - ಅರ್ಧ ಕೆ.ಜಿ, ಇಷ್ಟವಾದ ತರಕಾರಿ- ಎಲ್ಲವೂ 3 ಕಪ್‌, ಕೆಂಪು ಮೆಣಸಿನಕಾಯಿ-7, ಪಲಾವ್ ಎಲೆ 5, ಈರುಳ್ಳಿ 4 ಚಿಕ್ಕದು, ಬೆಳ್ಳುಳ್ಳಿ, ಶುಂಠಿ ಪೇಸ್ಟ್  2 ಚಮಚ, ದಾಲ್ಚಿನ್ನಿ, ಲವಂಗ, ಏಲಕ್ಕಿ ಗೋಡಂಬಿ - ಸ್ವಲ್ಪ, ಕೊಬ್ಬರಿ- ಅರ್ಧ ಬಟ್ಟಲು, ರುಚಿಗೆ ಉಪ್ಪು.

ವಿಧಾನ: ಅಕ್ಕಿಯನ್ನು  ಅರ್ಧ ಮುಕ್ಕಾಲು ಗಂಟೆ ನೆನೆ ಹಾಕಿ.  ತರಕಾರಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿ ಅರಿಶಿಣ ಹಾಕಿ ಈರುಳ್ಳಿ, ಒಣ ಮೆಣಸಿನಕಾಯಿ, ತರಕಾರಿ, ದಾಲ್ಚಿನ್ನಿ, ಪಲಾವ್ ಎಲೆ, ಗೋಡಂಬಿ ಹಾಕಿ ಹುರಿಯಿರಿ.  ತುಸು ನೀರು ಹಾಕಿ ಐದು ನಿಮಿಷದ ಬೇಯಿಸಿ. ನೆನೆಯಿಟ್ಟ ಅಕ್ಕಿ ಹಾಕಿ ಪುನಃ ನೀರು ಹಾಕಿ.  ಉಪ್ಪು, ಕೊಬ್ಬರಿ, ಏಲಕ್ಕಿ ಮತ್ತು ಲವಂಗ ಹಾಕಿ ಅರ್ಧ ಗಂಟೆ ಬೇಯಿಸಿದರೆ ವೆಜಿಟೇಬಲ್‌ ಬಿರಿಯಾನಿ ರೆಡಿ.

ಫಿಶ್ ಬಿರಿಯಾನಿ
ಸಾಮಾಗ್ರಿ: ಮುಳ್ಳು ತೆಗೆದ ಮೀನು ಅರ್ಧ ಕೆಜಿ, ಟೊಮೆಟೊ 3 ದೊಡ್ಡದು, ಈರುಳ್ಳಿ 5 ದೊಡ್ಡದು, ಹಸಿ ಮೆಣಸಿನಕಾಯಿ ಪೇಸ್ಟ್ ಮುಕ್ಕಾಲು ಚಮಚ,

ಬೆಳ್ಳುಳ್ಳಿ -ಶುಂಠಿ ಪೇಸ್ಟ್ -5 ಚಮಚ, ಮೊಸರು 5 ಚಮಚ, ನಿಂಬೆ ರಸ 4 ಚಮಚ, ಅರಿಶಿಣ 1 ಚಮಚ, ತುಪ್ಪ ಅರ್ಧ ಕಪ್, ಗರಂ ಮಸಾಲ ಪುಡಿ 1 ಚಮಚ, ಗರಂ ಮಸಾಲ 1 ಚಮಚ, ಕೊತ್ತಂಬರಿ ಸೊಪ್ಪು 1 ಕಟ್ಟು, ಪುದೀನಾ ಅರ್ಧ ಕಪ್, ಜೀರಿಗೆ ಪುಡಿ ಅರ್ಧ ಚಮಚ, ಖಾರದ ಪುಡಿ 2 ಚಮಚ. ಅನ್ನಕ್ಕೆ: ಬಾಸುಮತಿ ಅಕ್ಕಿ -3 ಕಪ್, ಅರಿಶಿಣ - ಅರ್ಧ ಚಮಚ, ಸ್ವಲ್ಪ ಚಕ್ಕೆ ಲವಂಗ 3-4, ತುಪ್ಪ 2 ಚಮಚ.

ವಿಧಾನ: ತೊಳೆದ ಮೀನಿನ ತುಂಡಿಗೆ ಅರಿಶಿಣ ಪುಡಿ, ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಜೀರಿಗೆ ಪುಡಿ ಹಾಕಿ ಮಿಕ್ಸ್  ಮಾಡಿ ಒಂದೂವರೆ ಗಂಟೆ ನೆನೆ ಇಡಿ. ಬಾಣಲೆಗೆ ತುಪ್ಪ ಬಿಸಿ ಮಾಡಿ ಅದರಲ್ಲಿ ಇದನ್ನು ಹಾಕಿ ತೆಗೆದಿಡಿ.  ಬಾಣಲಿಯಲ್ಲಿ ಪುನಃ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಟೊಮೆಟೊ, ಗರಂ ಮಸಾಲ, ಉಪ್ಪು, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿಸಿ. ಮೊಸರು ಸೇರಿಸಿ, ಫ್ರೈ ಮಾಡಿದ ಮೀನನ್ನು ಆ ಮಸಾಲೆಗೆ ಹಾಕಿ, ಫ್ರೈ ಮಾಡಿ.

ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಉಪ್ಪು, ಅರಿಶಿಣ ಪುಡಿ, ಚಕ್ಕೆ, ಲವಂಗ, ತುಪ್ಪ ಹಾಕಿ ನೀರನ್ನು ಕುದಿಸಿ. ಈಗ ಅಕ್ಕಿಯನ್ನು ತೊಳೆದು ಬೇಯಿಸಿ. ಅನ್ನ ಮುಕ್ಕಾಲು ಭಾಗದಷ್ಟು ಬೆಂದ ಮೇಲೆ ಅದರ ನೀರು ಬಸಿಯಿರಿ. ಈಗ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ, ಅದರಲ್ಲಿ ಬೇಯಿಸಿದ ಮೀನಿನ ಮಸಾಲ 2 ಚಮಚ ಹಾಕಿ ಹರಡಿ, ಅದರ ಮೇಲೆ ಸ್ವಲ್ಪ ಅನ್ನ ಹಾಕಿ ಮತ್ತೆ ನಿಂಬೆ ರಸ ಹಿಂಡಿ, ಮೀನಿನ ಮಸಾಲೆ ಹಾಕಿ ನಂತರ ಅನ್ನವನ್ನು ಪದರ-ಪದರವಾಗಿ ಹಾಕಿ ಅದರ ಮೇಲೆ ಉಳಿದ ಮಸಾಲೆಯನ್ನು ಮೇಲ್ಭಾಗದಲ್ಲಿ ಹಾಕಿ. ಇದರ ಮೇಲೆ ನಿಂಬೆ ರಸ ಹಿಂಡಿ ಪಾತ್ರೆಯ ಬಾಯಿ ಮುಚ್ಚಿ. ಕಡಿಮೆ ಉರಿಯಲ್ಲಿ ಮತ್ತೆ 6-7 ನಿಮಿಷ ಬೇಯಿಸಿ. ನಂತ ಉರಿಯಿಂದ ಇಳಿಸಿ, ಬಿರಿಯಾನಿಯನ್ನು ಒಮ್ಮೆ ಮಿಕ್ಸ್ ಮಾಡಿದರೆ ಫಿಶ್  ಬಿರಿಯಾನಿ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT