ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿಯಿರಿ ತರಕಾರಿ ‘ಕಬಾಬ್‌

ನಮ್ಮೂರ ಊಟ
Last Updated 12 ಜೂನ್ 2015, 19:30 IST
ಅಕ್ಷರ ಗಾತ್ರ

ಕಬಾಬ್‌ ಎಂದಾಕ್ಷಣ ಚಿಕನ್‌, ಮಟನ್‌ ಕಬಾಬ್‌ಗಳೇ ನೆನಪಾಗುತ್ತವೆ. ಆದರೆ ವೆಜಿಟಬಲ್‌ ಕಬಾಬ್‌ಗಳೂ ಇವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಸಸ್ಯಾಹಾರಿಗಳಿಗಾಗಿಯೇ ಕೆಲವೊಂದು ಕಬಾಬ್‌ಗಳ ರೆಸಿಪಿ ತಿಳಿಸಿದ್ದಾರೆ 

ಸೋಯಾ ಬೀನ್ ಕಬಾಬ್

ಸಾಮಗ್ರಿ: 20-25 ಸೋಯಾ ಬೀನ್, 2 ಚಮಚ ಬೆಳ್ಳುಳ್ಳಿ ಪೇಸ್ಟ್, 2 ಚಮಚ ಹಸಿ ಮೆಣಸಿನಕಾಯಿ, 3 ದೊಡ್ಡ ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಒಂದು ಚಮಚ ಖಾರದ ಪುಡಿ, ಒಂದೂವರೆ ಚಮಚ ಗರಂ ಮಸಾಲ, 1 ಚಮಚ ಕಾಳು ಮೆಣಸಿನ ಪುಡಿ, ಸ್ವಲ್ಪ ಎಣ್ಣೆ, ರುಚಿಗೆ ಉಪ್ಪು.

ವಿಧಾನ: ಸೋಯಾ ಬೀನ್ ಅನ್ನು 20-25 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ಈ ವೇಳೆಯಲ್ಲಿ ಹಸಿ ಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ಅದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಖಾರದ ಪುಡಿ, ಗರಂ ಮಸಾಲ, ಮೊಸರು, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ. ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸೋಯಾ ಬೀನ್ ಅನ್ನು 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಸ್ನ್ಯಾಕ್ಸ್ ರೆಡಿ.

ಬೀಟ್‌ರೂಟ್‌ ಕಬಾಬ್

ಸಾಮಗ್ರಿ: 2  ಬೀಟ್‌ರೂಟ್, 3 ಚಮಚ ರವಾ, 1 ದೊಡ್ಡ ಈರುಳ್ಳಿ, 2 ಚಮಚ ಶೆಜ್ವಾನ್ ಸಾಸ್, 2 ಆಲೂಗಡ್ಡೆ, ಒಂದು ಕಪ್ ಮೈದಾ ಹಿಟ್ಟು, 4 ಚಮಚ ಅಕ್ಕಿ ಹಿಟ್ಟು, 4 ಚಮಚ ಕಡಲೆ ಹಿಟ್ಟು, 4 ಚಮಚ ಕಾರ್ನ್ ಫ್ಲೋರ್, ಸ್ವಲ್ಪ ಕೊತ್ತೊಂಬರಿ ಸೊಪ್ಪು, ರುಚಿಗೆ ಉಪ್ಪು, ಒಂದು ಚಮಚ ಜೀರಿಗೆ, ಎಣ್ಣೆ ಕರಿಯಲು, 1 ಚಮಚ ಬೆಣ್ಣೆ.


ವಿಧಾನ: ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಬೀಟ್‌ರೂಟ್‌ ತುರಿದುಕೊಳ್ಳಿ. ಬೆಂದ ಮೇಲೆ ಅದನ್ನು ಹಿಸುಕಿ ಅದಕ್ಕೆ ತುರಿದ ಬೀಟ್‌ರೂಟ್‌  ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. 15-20 ನಿಮಿಷ ಬಿಡಿ. ನಂತರ ಅದಕ್ಕೆ ರವಾ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ, ಕಾರ್ನ್ ಫ್ಲೋರ್ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಬೆಣ್ಣೆ, ಕೊತ್ತೊಂಬರಿ ಸೊಪ್ಪು, ಜೀರಿಗೆ ಹಾಗೂ ಸಾಸ್ ಸೇರಿಸಿ ಮಿಕ್ಸ್‌ ಮಾಡಿ. ಚಿಕ್ಕಚಿಕ್ಕ ಉಂಡೆ ಮಾಡಿ (ಕಬಾಬ್‌ ರೀತಿಯಲ್ಲಿ) ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.

ಕಾರ್ನ್‌ ಕಬಾಬ್‌

ಸಾಮಗ್ರಿ: 3 ಚಮಚ ಅಕ್ಕಿಹಿಟ್ಟು, 3 ಕಪ್‌ -ಸ್ವೀಟ್ ಕಾರ್ನ್, 5 ಹಸಿಮೆಣಸಿನ ಕಾಯಿ, 4 ದೊಣ್ಣೆ ಮೆಣಸು (ಕ್ಯಾಪ್ಸಿಕಂ), ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಮೊದಲಿಗೆ ಮಿಕ್ಸಿಯಲ್ಲಿ ಸ್ವೀಟ್ ಕಾರ್ನ್ಅನ್ನು ನೀರು ಹಾಕದೇ ಹಾಕಿ, ತರಿ ತರಿಯಾಗಿ ರುಬ್ಬಿ ಪಕ್ಕಕ್ಕಿಡಿ. ಹಸಿಮೆಣಸು, ಕ್ಯಾಪ್ಸಿಕಂ ಮತ್ತು ಅಕ್ಕಿ ಹಿಟ್ಟು ಮತ್ತು ಉಪ್ಪು ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ರುಬ್ಬಿದ ಸ್ವೀಟ್‌ ಕಾರ್ನ್‌ ಹಾಕಿ ಚಿಕ್ಕ ಚಿಕ್ಕ ಉಂಡೆ ಮಾಡಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಇದನ್ನು ಟೊಮೆಟೊ ಸಾಸ್‌ ಜೊತೆ ತಿಂದರೆ ರುಚಿ ಹೆಚ್ಚುತ್ತದೆ.

ಬನಾನಾ ಕಬಾಬ್

ಸಾಮಗ್ರಿ: ಒಂದು ಕೆ.ಜಿ ಬಾಳೆಹಣ್ಣು (ನೇಂದ್ರ ಬಾಳೆಯಾದರೆ ಒಳ್ಳೆಯದು), ಮೂರು ಕಪ್‌ ಮೈದಾ ಹಿಟ್ಟು, 1 ಚಮಚ ಜೀರಿಗೆ, 1 ಚಮಚ ಏಲಕ್ಕಿ ಪುಡಿ, 5-6 ಚಮಚ ಸಕ್ಕರೆ, ರುಚಿಗೆ ಉಪ್ಪು, ಚಿಟಿಕೆ ಅರಿಶಿಣ ಪುಡಿ, ಚಿಟಿಕೆ ಸೋಡಾ, ಕರಿಯಲು ಎಣ್ಣೆ.

ವಿಧಾನ: ಸಿಪ್ಪೆ ಸುಲಿದ ಬಾಳೆಹಣ್ಣನ್ನು ಚಿಕ್ಕದಾಗಿ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಮೈದಾ ಹಿಟ್ಟಿಗೆ ಏಲಕ್ಕಿ ಪುಡಿ, ಜೀರಿಗೆ, ಅರಿಶಿಣ ಪುಡಿ, ಸಕ್ಕರೆ, ಉಪ್ಪು, ಸೋಡಾ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.

ಮಿಕ್ಸ್‌ ಮಾಡುವಾಗ ಸ್ವಲ್ಪ ನೀರು ಸೇರಿಸಿ ಗಂಟುಗಂಟಾಗದಂತೆ ದೋಸೆ ಹಿಟ್ಟಿನಷ್ಟು ತಿಳುವಾಗುವಷ್ಟು ಮಿಕ್ಸ್‌ ಮಾಡಿ. ಬಾಳೆಹಣ್ಣನ್ನು ಈ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT