ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧುಮ್ಮಿಕ್ಕಿತು ಕ್ಷೀರಸಾಗರ

Last Updated 30 ಜುಲೈ 2022, 19:31 IST
ಅಕ್ಷರ ಗಾತ್ರ

ಭೂಮಿ, ಬೆಟ್ಟ, ಬಾನು 3ಡಿ ಚಿತ್ರರೂಪದಲ್ಲಿ ನೋಡಿದರೆ ಹೇಗಿರುತ್ತದೆ? ಅದನ್ನೇ ಇಲ್ಲಿ ನಿಸರ್ಗ ನೈಜವಾಗಿ ಬಿಡಿಸಿದೆ. ಮಳೆಯಲ್ಲಿ ದಟ್ಟ ಮಂಜಿನ ಸಿಂಚನ, ಹಾಲ್ನೊರೆ ಅಭಿಷೇಕ, ಬೆಟ್ಟದೊಳಗಿನ ತೂಬಿನೊಳಗೆ ಸಾಗುವ ರೈಲಿನ ಯಾನದ ಅನುಭವವನ್ನು ಒಮ್ಮೆಯಾದರೂ ಪಡೆಯಬೇಕು

***

ಹನಿಹನಿಯಾಗಿ ಹೆಜ್ಜೆ ಇಟ್ಟ ಮುಂಗಾರು ಭೋರ್ಗರೆಯುತ್ತಿದೆ. ತಣ್ಣಗೆ ಹರಿಯುತ್ತಿದ್ದ ತೊರೆಗಳು ಓಟಕ್ಕಿಳಿದು ಕಡಲೊಳಗೊಂದಾಗಲು ಮೈದುಂಬಿ ಹರಿಯುತ್ತಿವೆ. ಹರಿಯುವ ರಭಸದಲ್ಲಿ ತಮಗರಿವಿಲ್ಲದಂತೆಯೇ ಹಲವು ರುದ್ರರಮಣೀಯ ಜಲಧಾರೆಗಳಿಗೆ ಜನ್ಮ, ಜೀವವೀಯುತ್ತಿವೆ.

ಹೀಗೊಮ್ಮೆ ಕಲ್ಪಿಸಿಕೊಳ್ಳಿ... ಪಶ್ಚಿಮ ಘಟ್ಟದ ದಟ್ಟ ಅರಣ್ಯ. ದಟ್ಟ ಹಸಿರು ಕಾಡು ಕಣಿವೆಯ ಮೇಲೆ ಲಂಗರುಹಾಕಿದೆ ಮೋಡ. ಜಿಟಿಜಿಟಿ ಮಳೆ. ಮೈಮನ ಕೊರೆಯುವಂತೆ ಸುಳಿಯುವ ತಂಗಾಳಿ. ಎದುರಿಗೊಂದು ಆಕಾಶದಿಂದಲೇ ಧುಮುಕುವಂತೆ ತೋರುವ ಜಲಪಾತ. ಕಣ್ಮುಂದೆ ಇಂಥ ಚಿತ್ರಣವೊಂದು ಗಂಗಾವತರಣವನ್ನೇ ನೆನಪಿಗೆ ತರುವುದು. ಈ ದೃಶ್ಯ ಒಮ್ಮೆ ಮಾತು ಕಟ್ಟಿಸೀತು. ಕಣ್ಣು ತುಂಬಿಸೀತು. ಹೌದು, ಮೋಡಗಳು ಕ್ಷೀರಧಾರೆಯನ್ನೇ ಧರೆಗಿಳಿಸಿದರೆ ಹೇಗಿದ್ದೀತು? ಅದನ್ನು ಖುದ್ದಾಗಿ ಅನುಭವಿಸಲು ನೀವು ದೂದ್‌ ಸಾಗರ ಜಲಪಾತದವರೆಗೆ ಬರಬೇಕು.

ಮಹದಾಯಿ ನದಿಯ ದೂದ್ ಸಾಗರ ಜಲಪಾತ ಈಗ ಮೈದುಂಬಿ ಕಾಡು ಕಣಿವೆಯ ನಡುವೆ ಹಾಲು ಸುರಿದಂತೆ ಧುಮ್ಮಿಕ್ಕುತ್ತಿದೆ. ಹೆಸರಿಗೆ ತಕ್ಕಂತೆ ಈ ಜಲಪಾತ ಕ್ಷೀರ ಸಾಗರವೇ ಆಗಿದೆ.

ದೂದ್‌ ಸಾಗರ(ಹಾಲಿನ ಸಮುದ್ರ) ಮಹದಾಯಿ ನದಿಯಿಂದ ಬೀಳುವ ನಾಲ್ಕು ಹಂತದ ಜಲಪಾತ. ಇದು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿದೆ. 1,017 ಅಡಿ ಎತ್ತರದಿಂದ ಧುಮುಕುವ ಇದು, ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದೆನಿಸಿದೆ.

ಹೋಗುವುದು ಹೇಗೆ?

ಈ ಜಲಪಾತ ವೀಕ್ಷಣೆಗೆ ಸಂಪೂರ್ಣ ಒಂದು ದಿನವನ್ನು ಮೀಸಲಿಡಬೇಕು. ರೈಲೊಂದೇ ಜಲಪಾತ ತಲುಪಲು ಇರುವ ಏಕೈಕ ಸಂಚಾರ ಸೌಲಭ್ಯ. ಬೆಟ್ಟದ ನಡುವಿನ ಈ ಮಾರ್ಗದಲ್ಲಿ ನೀವು ರೈಲು ಅಥವಾ ಕಾಲ್ನಡಿಗೆ (ಟ್ರೆಕ್ಕಿಂಗ್) ಮೂಲಕವಾಗಿ ಜಲಪಾತ ತಲುಪಬಹುದು. ಪ್ರಯಾಣ ಆರಂಭಿಸುವ ಮೊದಲು ಬೆಳಗಾವಿಗೆ ಹತ್ತಿರದ ಕ್ಯಾಸಲ್ ರಾಕ್ ಎಂಬ ರೈಲು ನಿಲ್ದಾಣ ತಲುಪಬೇಕು. ಇಲ್ಲಿಂದ ಬೆಳಗ್ಗೆ 11.30ಕ್ಕೆ ಹೊರಡುವ ರೈಲು ದೂದ್ ಸಾಗರದ ಎದುರು ಒಂದು ಕ್ಷಣ ನಿಲ್ಲುತ್ತದೆ. ಇದು ಬಿಟ್ಟರೆ ಸಂಜೆ ಅತ್ತಲಿಂದ ಮರಳಿ ಕ್ಯಾಸಲ್ ರಾಕ್‌ಗೆ ಬರಲು 5 ಗಂಟೆಗೆ ಒಂದು ರೈಲಿದೆ. ಅದು ಕೂಡ ಒಂದು ಕ್ಷಣ ದೂದ್ ಸಾಗರದೆದುರು ನಿಲ್ಲುತ್ತದೆ. ಇದರ ಹೊರತಾಗಿ ಕೆಲವು ಗೂಡ್ಸ್ ರೈಲುಗಳು ಆಗಾಗ ಸಂಚರಿಸುತ್ತವೆ. ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಸಮಯಕ್ಕೆ ಜನ ಸಂಚಾರದ ರೈಲುಗಳಿವೆ.

ಕ್ಯಾಸಲ್ ರಾಕ್‌ನಿಂದ ಟ್ರೆಕ್ಕಿಂಗ್ ಆರಂಭಿಸುವುದಾದರೆ ಬೆಳಗ್ಗೆಯೇ ಹೊರಟು ಸಂಜೆಗೆ ಮರಳಿ ಬರುವುದು ಉತ್ತಮ. ಹೋಗಿಬರುವ ಪ್ರಯಾಣದ ಒಟ್ಟು ದೂರ ಅಂದಾಜು 24 ಕಿ.ಮೀ.

ನೆನಪಿಡಿ, ಕ್ಯಾಸಲ್ ರಾಕ್‌ನಿಂದ ದೂದ್ ಸಾಗರ ಎಂಬುದು ಕೇವಲ ಕೋರಿಕೆಯ ರೈಲು ನಿಲುಗಡೆ ತಾಣವಾಗಿದ್ದು, ಅಧಿಕೃತ ನಿಲ್ದಾಣವಲ್ಲ. ಜೋರು ಮಳೆ, ದಟ್ಟಮಂಜು ಕವಿದ ವಾತಾವರಣವಿದ್ದಲ್ಲಿ ಸುರಕ್ಷತಾ ದೃಷ್ಟಿಯಿಂದ ರೈಲು ಸಿಬ್ಬಂದಿ ನಿಮ್ಮನ್ನು ಯಾವುದೇ ಕಾರಣಕ್ಕೂ ಜಲಪಾತ ವೀಕ್ಷಣೆಗೆ ಬಿಡುವುದಿಲ್ಲ. ಎಷ್ಟೋ ಬಾರಿ ಜಲಪಾತ ನೋಡಲು ಹೋಗಿ ನಿರಾಸೆಯಾಗಿ ಮರಳಿ ಬಂದವರಿದ್ದಾರೆ. ಹೀಗಾಗಿ ಈ ಜಲಪಾತದ ವೀಕ್ಷಣೆಗೆ ಅದೃಷ್ಟವೂ ಅಗತ್ಯವೆನ್ನಬಹುದು. ಆದರೆ ಸಂಚರಿಸುವ ರೈಲಿನಲ್ಲಿ ಕುಳಿತು ಈ ಜಲಪಾತ ವೀಕ್ಷಿಸಲು ಯಾವುದೇ ತೊಂದರೆ ಇರುವುದಿಲ್ಲ, ಮುಂದೆ ಕುಲೆಂ ಎಂಬ ರೈಲು ನಿಲ್ದಾಣದಲ್ಲಿ ಇಳಿದು ಕ್ಯಾಸಲ್ ರಾಕ್‌ಗೆ ರೈಲಿನಲ್ಲಿ ಮರಳಬಹುದು.

ಜೋರು ಹರಿವಿರುವಾಗ, ಮುಸುಕಿದ ಮಂಜಿನ ನಡುವೆ ಜಲಪಾತ ಒಮ್ಮೊಮ್ಮೆ ಹಿಮಾಲಯದಂತೆ ತೋರುವುದು. ಒಂದು ಬದಿ ಬೆಟ್ಟ, ಒಂದು ಬದಿ ಕಣಿವೆ, ನಡುವೆ ರೈಲು ಹಾದಿ, ಮಳೆ ಬೀಳುವಾಗ ಹೆಜ್ಜೆಗೊಂದೊಂದು ಪುಟ್ಟ ಝರಿ ನಿಮ್ಮನ್ನು ಸ್ವಾಗತಿಸುತ್ತವೆ. ಈ ಪ್ರವಾಸ ಮರಳಿ ಹೋಗುವ ತನಕ ಆಯಾಸವನ್ನು ಮಾಡುವುದಿಲ್ಲ ಎನ್ನುವುದು ಸ್ವಂತ ಅನುಭವ.

ಅತ್ತ ಗೋವಾ ರಾಜ್ಯದಿಂದಲೂ ಜಲಪಾತ ವೀಕ್ಷಣೆಗೆ ಬರಬಹುದಾಗಿದ್ದು, ಜಲಪಾತದ ನಾಲ್ಕನೇ ಹಂತದಲ್ಲಿ ಈಜಾಟಕ್ಕೆ ಗೋವಾ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅವಕಾಶ ಕಲ್ಪಿಸಿದೆ. ಆದರೆ ಮಳೆ ತೀವ್ರವಾಗಿದ್ದಲ್ಲಿ ಇಲ್ಲಿಗೆ ಅವಕಾಶವಿಲ್ಲ. ಮಳೆಗಾಲದ ಕೊನೆ-ಚಳಿಗಾಲದ ಆರಂಭದಲ್ಲಿ ಇಲ್ಲಿಗೆ ಪ್ರವಾಸ ಹೋಗುವುದು ಹೆಚ್ಚು ಸೂಕ್ತ. ನಾವು ತುಂಬು ಮಳೆಗಾಲದಲ್ಲಿ ಹೋಗಿ, ಈ ಕ್ಷೀರಸಾಗರದ ರುದ್ರರಮಣೀಯ ದರ್ಶನ ಪಡೆದೆವು. ಸರಿಯಾದ ಸಿದ್ಧತೆಯೊಂದಿಗೆ, ಕ್ಷೇಮವಾಗಿ ಹೋಗಿ ನೋಡಿಕೊಂಡು ಬನ್ನಿ.

ಬೇಕಾದ ಸಿದ್ಧತೆ

ಈ ಪ್ರದೇಶದಲ್ಲಿ ಮಳೆ ಯಾವ ಹೊತ್ತು ಗೊತ್ತಿಲ್ಲದೇ ಸುರಿಯುತ್ತದೆ. ಹೀಗಾಗಿ ಕೊಡೆ, ರೇನ್ ಕೋಟ್ ಒಯ್ದಿರಿ. ಕ್ಯಾಮೆರಾಗಳಿಗೆ ನೀರು ಬೀಳದಂತೆ ಕವರ್ ಒಯ್ದಿರಿ. ಕ್ಯಾಸಲ್ ರಾಕ್‌ನಿಂದಲೇ ಊಟ, ಉಪಹಾರ, ನೀರು ಒಯ್ಯಬೇಕು. ಮಾರ್ಗ ಮಧ್ಯೆ ಏನೂ ಸಿಗುವುದಿಲ್ಲ. ಉಳಿಯಲು ವ್ಯವಸ್ಥೆ ಬೇಕೆಂದರೆ ಕ್ಯಾಸಲ್ ರಾಕ್‌ನಲ್ಲಿ ಐ.ಬಿ.-ವಸತಿ ಗೃಹಗಳು ಲಭ್ಯ. ಅವು ಕೂಡ ಸೀಮಿತ ಸಂಖ್ಯೆಯಲ್ಲಿವೆ.

ಹೆಚ್ಚು ಮಳೆ-ನೀರ ಹರಿವು ಇಲ್ಲದೇ ಇದ್ದಲ್ಲಿ ನೀವು ರೈಲು ಸೇತುವೆಯ ಕೆಳಭಾಗಕ್ಕೆ ಇಳಿದು ಜಲಪಾತ ವೀಕ್ಷಿಸಬಹುದು. ಜಲಪಾತ ವೀಕ್ಷಣೆಗೆ ಹತ್ತಿರದಲ್ಲಿ ಮೂರು ವೀಕ್ಷಣಾ ಸ್ಥಳಗಳಿದ್ದು, ಅಲ್ಲಿಂದಲೇ ಜಲಪಾತವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT