ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ ಹುಡುಕುತ್ತ ಬದುಕಿನ ಸಾಕ್ಷಾತ್ಕಾರ

ನೀರ್‌ದೋಸೆ
Last Updated 2 ಸೆಪ್ಟೆಂಬರ್ 2016, 11:56 IST
ಅಕ್ಷರ ಗಾತ್ರ

ನಿರ್ಮಾಣ: ಪಿ. ಪ್ರಸನ್ನ ಶ್ರೀನಿವಾಸ್‌, ಶಶಿಕಲಾ ಬಾಲಾಜಿ
ನಿರ್ದೇಶನ: ವಿಜಯ್ ಪ್ರಸಾದ್
ತಾರಾಗಣ: ಜಗ್ಗೇಶ್, ಎಚ್‌.ಜಿ. ದತ್ತಾತ್ರೇಯ, ಹರಿಪ್ರಿಯಾ, ಸುಮನ್ ರಂಗನಾಥ್

ದೋಸೆ ಸ್ಪೈಸಿಯಾಗಿದೆ. ದೋಸೆ ಸೆಕ್ಸಿಯಾಗಿದೆ. ಹೀಗೆ ನಾಲ್ಕು ಪದಗಳಲ್ಲಿ ಬಣ್ಣಿಸಿ ಸುಮ್ಮನಾಗಬಹುದಾದ ಸಿನಿಮಾ ‘ನೀರ್‌ದೋಸೆ’. ಆದರೆ, ವಿಜಯಪ್ರಸಾದ್‌ ನಿರ್ದೇಶನದ ಈ ಸಿನಿಮಾದಲ್ಲಿ ಮಾತಿನ ನಂತರದ ಮೌನ ಕುತೂಹಲಕರವಾಗಿದೆ. ರತಿವರ್ಚಸ್ಸಿನ ಆಚೆಗೆ ಇಣುಕುವ ಅಂತರಂಗದ ಸೌಂದರ್ಯ ಚೇತೋಹಾರಿಯಾಗಿದೆ. ದೇಹದ ಹಸಿವನ್ನು ತಣಿಸುವ ದೋಸೆ ಮನಸ್ಸಿನ ಹಸಿವನ್ನೂ ನೀಗುವ ಮೂಲಕ ಅಧ್ಯಾತ್ಮದ ಸ್ಪರ್ಶವನ್ನೂ ಪಡೆದಿದೆ.

ಹೆಣಗಳನ್ನು ಸಾಗಿಸುವ ವಾಹನದಲ್ಲಿ ಶೃಂಗಾರದ ಕನಸುಗಳು ಚಿಗುರುತ್ತವೆ; ಮಸಣದಲ್ಲಿ ಜೀವನಪ್ರೀತಿ ಪುಟಿಯುತ್ತದೆ. ಹೀಗೆ ಸೂತಕದ ಪರಿಸರದಲ್ಲಿ ಬದುಕಿನ ಸಾಧ್ಯತೆಗಳನ್ನು ಚಿತ್ರಿಸುವ ನಿರ್ದೇಶಕರು, ಸಣ್ಣತನಗಳನ್ನು ಮೀರುವ ಮೂಲಕ ಮನುಷ್ಯ ಬದುಕಿನಲ್ಲಿ ಖುಷಿ ಕಂಡುಕೊಳ್ಳಬಹುದು ಎನ್ನುವುದನ್ನು ಸೂಚಿಸಲು ಪ್ರಯತ್ನಿಸಿದಂತಿದೆ.

‘ನೀರ್‌ದೋಸೆ’ ಚಿತ್ರದಲ್ಲಿ ಪ್ರಮುಖವಾಗಿ ಇರುವುದು ನಾಲ್ಕು ಪಾತ್ರಗಳು. ಹೆಣಗಳನ್ನು ಸಾಗಿಸುವ ವಾಹನದ ಚಾಲಕ, ಒಬ್ಬಂಟಿ ವೃದ್ಧ, ಬಾರ್‌ಗಳಲ್ಲಿ ಕುಣಿಯುವ ವಿಟಹೆಣ್ಣು ಹಾಗೂ ಮದುವೆಯ ವಯಸ್ಸು ಮೀರುತ್ತಾ ಬಂದಿರುವ ಜಾತಕದೋಷದ ಹೆಣ್ಣು– ಈ ನಾಲ್ಕು ಪಾತ್ರಗಳೂ ಸುಖವನ್ನು ಹುಡುಕುತ್ತಾ, ಆ ಹುಡುಕಾಟದಲ್ಲಿ ತಂತಮ್ಮ ಸಣ್ಣತನಗಳನ್ನು ಮೀರುವುದು ಚಿತ್ರದ ಕಥೆ.

ಈ ಗಂಭೀರ ಕಥೆಯನ್ನು ವಿಜಯಪ್ರಸಾದ್‌ ಪೋಲಿ ಎನ್ನಬಹುದಾದ ಶೈಲಿಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಈ ಪೋಲಿತನವೂ ಜೀವನದ ಒಂದು ಭಾಗ ಎನ್ನುವುದನ್ನು ಸಿನಿಮಾ ಕೊಂಚ ವಾಚ್ಯವಾಗಿಯೇ ಹೇಳುತ್ತದೆ. ಸಿನಿಮಾ ಆರಂಭವಾಗುವುದೇ ದ್ವಂದ್ವಾರ್ಥದ ಸಂಭಾಷಣೆಗಳ ಮೂಲಕ. ಸಿನಿಮಾದ ಕೊನೆಯಲ್ಲಿ ಕೂಡ ರಸಿಕರ ಕಂಗಳ ತಣಿಸುವ ದೃಶ್ಯಗಳಿವೆ. ಆದರೆ, ಈ ತುದಿಮೊದಲ ರೋಚಕತೆಯ ನಡುವಿನ ವಿಷಾದಭಾವ ಚಿತ್ರದುದ್ದಕ್ಕೂ ಆವರಿಸಿಕೊಂಡಿದೆ. ಆ ವಿಷಾದವೇ ‘ನೀರ್‌ದೋಸೆ’ಗೆ ಘನತೆ ತಂದುಕೊಡುವುದರೊಂದಿಗೆ, ಅದು  ಪೋಲಿ ಚಿತ್ರವಾಗದಂತೆ ಪೊರೆದಿದೆ.

ಚಿತ್ರದ ನಾಲ್ಕೂ ಪಾತ್ರಗಳು ನೋಡುಗರನ್ನು ಕಾಡುವಂತಿವೆ. ಶವವಾಹನದ ಚಾಲಕನ ಪಾತ್ರದಲ್ಲಿ ಜಗ್ಗೇಶ್‌ ಎಂದಿನಂತೆ ಚೇತೋಹಾರಿ. ಕಲಾತ್ಮಕ ಸಿನಿಮಾಗಳ ಏಕತಾನತೆಯ ಪಾತ್ರಗಳ ಮಂಪರಿನಿಂದ ಎದ್ದುಬಂದಂತಿರುವ ದತ್ತಣ್ಣ ಪ್ರೇಕ್ಷಕರ ಕಣ್ಣುಗಳನ್ನು ಒದ್ದೆಯಾಗಿಸಿದಷ್ಟೇ ಸಲೀಸಾಗಿ ಪೋಲಿ ಜೋಕುಗಳನ್ನು ಸಿಡಿಸಿ ನಗಿಸುತ್ತಾರೆ. ವಾರಾಂಗನೆಯ ಪಾತ್ರದಲ್ಲಿ ನಟಿಸುವ ಮೂಲಕ ಹರಿಪ್ರಿಯಾ ತಮ್ಮನ್ನು ತಾವೇ ಪರೀಕ್ಷೆಗೆ ಒಡ್ಡಿಕೊಂಡಂತಿದ್ದಾರೆ. ದೇಹಭಾಷೆಯ ಜೊತೆಗೆ ಕಣ್ಣುಗಳ ಭಾಷೆಯನ್ನೂ ದಕ್ಕಿಸಿಕೊಳ್ಳಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ನಾಯಕನಿಗೆ ‘ಬಾಳು’ ಕೊಡುವ ಶಾರದಾಮಣಿಯ ಪಾತ್ರಧಾರಿ ಸುಮನ್‌ ರಂಗನಾಥ್ ಅವರಿಗೂ ಇದು ವಿಶೇಷ ಪಾತ್ರ.

ಸುಖವನ್ನು ಸೂರೆಗೊಳ್ಳುವ ಸಖರಾಗಲು ಬಂದವರು ಸ್ನೇಹಿತರಾಗುವುದು ಚಿತ್ರದ ಅತ್ಯುತ್ತಮ ಅಂಶಗಳಲ್ಲೊಂದು. ತಂದೆಯ ಸಾವಿನ ಸಂದರ್ಭವನ್ನು ನಾಯಕ ಮಾನವೀಯಗೊಳಿಸುವ ದೃಶ್ಯ ಕೂಡ ವಿಶೇಷವಾಗಿದೆ. ಆ ಸಂದರ್ಭದಲ್ಲಿ ಬಳಕೆಯಾದ ಗಂಗೂಬಾಯಿ ಹಾನಗಲ್‌ರ ಆಲಾಪವನ್ನೊಳಗೊಂಡ ‘ಹೋಗಿ ಬಾ ಬೆಳಕೇ’ ಗೀತೆ ಚಿತ್ರವತ್ತಾಗಿದೆ– ಅರ್ಥವತ್ತಾಗಿದೆ. ಶಾಲಾದಿನಗಳ ಮಕ್ಕಳ ‘ಆಟ’ದ ದೃಶ್ಯಗಳು ಲಂಬಿಸಿದಂತೆ ಕಾಣಿಸುವುದನ್ನು ಹೊರತುಪಡಿಸಿದರೆ, ಇಡೀ ಸಿನಿಮಾ ಲವಲವಿಕೆಯಿಂದ ಕೂಡಿದೆ.

ಅಬ್ಬರವಿಲ್ಲದ, ಎಲ್ಲೂ ಅನಗತ್ಯ ಎನ್ನಿಸದ ಅನೂಪ್‌ ಸೀಳಿನ್‌ ಸಂಗೀತ ದೋಸೆಯ ರುಚಿಯನ್ನು ಹೆಚ್ಚಿಸಿದೆ. ಸುಗುಣ ಅವರ ಛಾಯಾಗ್ರಹಣ ಕೂಡ ಸಿನಿಮಾದ ಪಾತ್ರಗಳ ನೇರವಂತಿಕೆಯಷ್ಟೇ ಸರಳವಾಗಿದೆ. ನಗುನಗುತ್ತಲೇ ಬದುಕಿನ ಕಡುಸತ್ಯಗಳನ್ನು ಹೇಳುವ ನಿರ್ದೇಶಕರ ಪ್ರಯತ್ನ ಮೆಚ್ಚುವಂತಹದ್ದು. ಸಿನಿಮಾದ ಕೊನೆಯಲ್ಲಿ ಪಾತ್ರಧಾರಿಗಳೆಲ್ಲ ‘ನೀರ್‌ದೋಸೆ, ನೀರ್‌ದೋಸೆ’ ಎಂದು ಹಾಡಿಕುಣಿಯುತ್ತಾರೆ. ಆ ಖುಷಿ ನೋಡುಗರ ಮನಸ್ಸಿನಲ್ಲೂ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT