ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪ, ಮೇಷ್ಟ್ರು!

ಚಕ್ರವ್ಯೂಹದಲ್ಲಿ ಅಸಹಾಯಕ ಶಿಕ್ಷಕ
Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಇದು ಪ್ರಾಥಮಿಕ ಶಾಲಾಶಿಕ್ಷಕರ ಸಂಯಮದ ಸತ್ವಪರೀಕ್ಷೆಯ ಕಾಲ. ಕ್ಷಣ ಕ್ಷಣಕ್ಕೂ ಇಲ್ಲಿ ಆತ್ಮಾಘಾತಗಳು. ಸವಾಲಿರುವುದು ಕಲಿಸುವುದರಲ್ಲಿ ಅಲ್ಲ, ‘ಕಲಿಸುವವರಾಗಿ’ ಉಳಿಯುವುದರಲ್ಲಿ. ಮಕ್ಕಳ ಪಾಲಿನ ಗುರುಗಳು ಅಧಿಕಾರಶಾಹಿಗೆ ಗುಲಾಮರು! ಈ ಕಾರಣದಿಂದಲೇ ಬಹುತೇಕ ಶಿಕ್ಷಕರು ‘ಸಾಕಪ್ಪಾ ಈ ಕೆಲಸ’ ಎನ್ನುವ ಹತಾಶ ಮನೋಭಾವದಲ್ಲಿದ್ದಾರೆ. ಕೆಲವರಂತೂ ಪರ್ಯಾಯ ಉದ್ಯೋಗದ ಬಗ್ಗೆ ಯೋಚಿಸಿದ್ದಾರೆ. ಯಾವ ಶಿಕ್ಷಕನೂ ಇಂದು ನೆಮ್ಮದಿಯ ಮನೋಭಾವದಲ್ಲಿ ಮಕ್ಕಳಿಗೆ ಕಲಿಸಿ, ತೃಪ್ತಿಯಿಂದ ಮನೆಗೆ ಬರುವ ವಾತಾವರಣ ಇಲ್ಲ.

ಘನತೆಯ, ಆತ್ಮತೃಪ್ತಿಯ ಮಹೋನ್ನತ ಸ್ಥಾನ ಎಂದು ನಂಬಿಕೊಂಡು ಶಿಕ್ಷಕ ವೃತ್ತಿಗೆ ಸೇರಿದ ಒಬ್ಬ ಶಿಕ್ಷಕರ ಅನುಭವ ಕೇಳಿ. ತಾನು ಕೆಲಸ ಮಾಡುವ ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡು ಈ ಮೇಷ್ಟ್ರು, ಹೊಸ ಶಾಲೆಗೆ ಬಂದ ಮೊದಲ ದಿನವೇ ಬಿಇಒ ಅವರಿಂದ ತೊಂದರೆ ಎದುರಿಸಬೇಕಾಯಿತು. ‘ಚಾಲನಾ ಆದೇಶಪತ್ರ’ ಕೊಡಲು ದುಡ್ಡು ಕೇಳಿದಾಗ ಮೇಷ್ಟ್ರು ಹೌಹಾರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೇಬಿಗೇ ಕೈಯಿಟ್ಟು ಇದ್ದುದೆಲ್ಲವನ್ನೂ ಕಸಿದುಕೊಂಡಾಗ ಅಸಹಾಯಕತೆಯಿಂದ ಒದ್ದಾಡುವ ಸ್ಥಿತಿ ಆ ಶಿಕ್ಷಕರದು. ‘ಅದು ತೀರಾ ಒಬ್ಬಂಟಿತನ ಅನುಭವಿಸಿದ ದಿನ. ಹೆತ್ತವರಿಂದ ತುಂಬಾ ದೂರ ಬಂದುಬಿಟ್ಟಿದ್ದೆ. ಕನಿಷ್ಠ ವಿಶ್ವಾಸದಿಂದ ಮಾತನಾಡಿಸಲೂ ಯಾರೂ ಇರಲಿಲ್ಲ. ನನ್ನ ಮೈಮೇಲೆ ಬಿದ್ದ ಮನುಷ್ಯನಿಗೆ ನಾನು ಏನೂ ಹೇಳದ ಸ್ಥಿತಿಯಲ್ಲಿದ್ದೆ. ಮುಂದಿನ ಎರಡು ದಿನ ತುತ್ತು ಅನ್ನಕ್ಕೂ ಪರದಾಡಿದ್ದೆ’ ಎನ್ನುವಾಗ ಮೇಷ್ಟ್ರ ಮಾತುಗಳಲ್ಲಿ ವಿಷಾದ ಸುಳಿದುಹೋಗುತ್ತದೆ.

ತೇಜೋವಧೆ ಮತ್ತು ಲಂಚಾವತಾರ
ಅಧಿಕಾರ ಎನ್ನುವುದು ವ್ಯವಸ್ಥೆಯ ಸತ್ವವನ್ನು ಹೆಚ್ಚಿಸುವ ಪೋಷಕಾಂಶವಾಗಬೇಕು. ಕೆಳಸ್ತರದ ನೌಕರರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಕಾರ್ಯಸಾಧನೆಗೆ ಪ್ರೇರಣೆಯಾಗಬೇಕು. ಆದರೆ, ಶಿಕ್ಷಣ ಇಲಾಖೆಯಲ್ಲಿ ಅಧಿಕಾರ ಎನ್ನುವುದು ದರ್ಪದ ಹಾಗೂ ಶಿಕ್ಷಕರ ತೇಜೋವಧೆ ಮಾಡುವ ಮಾರ್ಗವಾಗಿದೆ.

ಮಾರ್ಗದರ್ಶನ ಆಗಬೇಕಿದ್ದ ಅಧಿಕಾರ, ‘ತಪಾಸಣೆ’ ಎನ್ನುವ ಪೊಲೀಸ್ ಪರಿಭಾಷೆಯನ್ನು ರೂಢಿಸಿಕೊಂಡಿದೆ. ಈ ತಪಾಸಣೆ ಎನ್ನುವುದು ‘ಶಾಲೆಯಲ್ಲಿ ಇರುವವರೆಲ್ಲ ಈಗಾಗಲೇ ತಪ್ಪು ಮಾಡಿದ್ದಾರೆ, ಅವರನ್ನು ಶಿಕ್ಷಿಸಲೇಬೇಕು ಎಂಬ ಪೂರ್ವಕಲ್ಪಿತ ಧೋರಣೆಯೊಂದಿಗೆ ಶಾಲೆಯ ಮೇಲೆ ನಡೆಯುವ ‘ದಾಳಿ’. ಸರ್ಕಾರಿ ಭಾಷೆಯಲ್ಲಿ ಇದರ ಹೆಸರು ‘ಮಿಂಚಿನ ಸಂಚಾರ’. ಮಿಂಚು ವಿನಾಶಕಾರಿ, ಅದು ಸಂಚರಿಸಿದಲ್ಲೆಲ್ಲ ಫಲವತ್ತಾದ ಭೂಮಿ ಬರಡಾಗುತ್ತದೆ. ಇಲ್ಲಿ ಆಗುತ್ತಿರುವುದೂ ಅದೇ.

ಇಲ್ಲೊಬ್ಬ ವಿಷಯ ಪರಿವೀಕ್ಷಕರಿದ್ದಾರೆ. ವರ್ಷಕ್ಕೊಮ್ಮೆ ಅವರು ಶಾಲೆಗಳಿಗೆ ವಿಶೇಷ ಭೇಟಿಗಳನ್ನು ಹಮ್ಮಿಕೊಳ್ಳುತ್ತಾರೆ. ಅವರ ಭೇಟಿಯ ದಿನಾಂಕಗಳು ಬಂದವೆಂದರೆ ಕೆಲ ಶಿಕ್ಷಕರಿಗಂತೂ ಜೀವ ಬಾಯಿಗೆ ಬಂದಂತಾಗುತ್ತದೆ. ಏಕೆಂದರೆ ಅವರು ಶಾಲೆಗೆ ಬಂದು ಬರಿಗೈಲಿ ವಾಪಸ್ ಹೋಗುವುದಿಲ್ಲ. ಕನಿಷ್ಠ ಮೂರು ಸಾವಿರ ರೂಪಾಯಿಯಾದರೂ ಅವರಿಗೆ ಬೇಕೇಬೇಕು. ದುಡ್ಡಿನ ಜೊತೆ ನೆಮ್ಮದಿಯನ್ನೂ ಅವರು ಕೆದಕಿ ಹೋಗುತ್ತಾರೆ.

ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ ಪಾಥಮಿಕ ಶಾಲೆಯಲ್ಲಿ ಸಾವಿರ ಅವಕಾಶಗಳಿವೆ. ಎಲ್ಲವನ್ನೂ ನೆಟ್ಟಗಿಟ್ಟುಕೊಂಡಮೇಲೂ ಈ ಮನುಷ್ಯ ಎಲ್ಲಿಯವರೆಗೂ ಕೆದಕುತ್ತಾರೆಂದರೆ, ಹಿಂದೆ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನ ತರಿಸಿ, ಆಯಾ ಮಕ್ಕಳನ್ನು ಸರದಿಯಲ್ಲಿ ನಿಲ್ಲಿಸಿ, ಪ್ರಶ್ನೆ ಕೇಳಲು ಪ್ರಾರಂಭಿಸುತ್ತಾರೆ! ಇಂಥವರು ಒಂದುಕಡೆಯಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ ಇದ್ದಾರೆ.

ಪ್ರತಿ ಶಾಲೆಯಲ್ಲೂ ವಾರ್ಷಿಕ ‘ತಪಾಸಣೆ’ಯ ನಾಟಕಗಳು ನಡೆಯುತ್ತವೆ. ಅಧಿಕಾರಿಗಳು ಬದಲಾದಂತೆ ಲಂಚದ ಮೊತ್ತಗಳು ಬದಲಾಗುತ್ತವೆ. ಪರಿಶ್ರಮ ಪಟ್ಟು ಮಕ್ಕಳ ಏಳಿಗೆಗೆ ದುಡಿದವರಿರಲಿ, ದುಡಿಯದವರಿರಲಿ – ಎಲ್ಲರೂ ಪಾಲು ಕೊಡಲೇಬೇಕು. ಇದೊಂದು ಮುಕ್ತ ಒಪ್ಪಿತ ಕಹಿಸತ್ಯ.

ತಪ್ಪು ಮಾಡಿದ ಶಿಕ್ಷಕರಿಗೆ ಜ್ಞಾಪನಾ ಪತ್ರ ಬರುವುದು ಒಂದು ಆಡಳಿತಾತ್ಮಕ ಪ್ರಕ್ರಿಯೆ. ಇದಕ್ಕೆ ಉತ್ತರ ಬರೆದುಕೊಂಡು, ಜೊತೆಗೆ ದುಡ್ಡೂ ತೆಗೆದುಕೊಂಡು ಹೋದರೆ ಅಲ್ಲಿಗೆ ಆ ಪ್ರಹಸನ ಅಂತ್ಯ. ಇಲ್ಲಿ ಮಧ್ಯವರ್ತಿಗಳ ಕಾರ್ಯ ಶ್ಲಾಘನೀಯ! ತಮಾಷೆ ಎಂದರೆ, ಶಿಕ್ಷಕರ ಆತ್ಮಗೌರವವನ್ನು ಎತ್ತಿಹಿಡಿಯಬೇಕಾದ ‘ಶಿಕ್ಷಕರ ಸಂಘಟನೆ’ ಇಲ್ಲಿ ಲಂಚ ಕೊಡಿಸಲು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.

ಶಿಕ್ಷಕರಿಗೆ ನ್ಯಾಯವಾಗಿ ದೊರೆಯಬೇಕಾದ ಅನುಕೂಲಗಳನ್ನು ದೊರಕಿಸಿಕೊಡುವುದಕ್ಕಾಗಿ ಸಾಮೂಹಿಕ ಲಂಚ ವಸೂಲಾತಿ ಒಮ್ಮೊಮ್ಮೆ ನಡೆಯುತ್ತದೆ. ನಿಕಟಸೇವಾಪೂರ್ವ ಅವಧಿಯನ್ನು ಘೋಷಿಸುವುದಿರಲಿ, ವರ್ಗಾವಣೆ ಆದೇಶ ಪಡೆಯುವುದಕ್ಕಿರಲಿ, ಹಾಜರಾಗುವುದಕ್ಕಿರಲಿ, ಇಂಕ್ರಿಮೆಂಟ್ ಇರಲಿ, ಟೈಮ್ ಬಾಂಡ್ ಇರಲಿ – ಲಂಚ ಎಲ್ಲದಕ್ಕೂ ಕಡ್ಡಾಯ. ಇದು ಆಡಳಿತಾತ್ಮಕ ಬೇನೆಯಾದರೆ, ಸಂಘಟನೆಯದ್ದು ಮತ್ತೊಂದು ರೀತಿ.

ಯಾವುದೇ ಒಬ್ಬ ಸೇವಾನಿರತನ ಸಂಬಳದಿಂದ ದುಡ್ಡನ್ನು ಕಡಿತ ಮಾಡಬೇಕಾದರೆ ಸೌಜನ್ಯಕ್ಕಾದರೂ ಅವರಿಂದ ಒಪ್ಪಿಗೆ ಪಡೆಯಬೇಕು. ಆದರೆ, ನಮ್ಮ ಶಿಕ್ಷಕರ ಸಂಘಟನೆ ಹಾಗಿಲ್ಲ. ರಾಜ್ಯದ ಲಕ್ಷಾಂತರ ಶಿಕ್ಷಕರ ಸಂಬಳದಿಂದ ಸಂಘಟನೆಗೆ ಹಣ ಕಡಿತ ಮಾಡಿಕೊಳ್ಳಲಾಗುತ್ತದೆ.

ಈ ಹಣ ಯಾಕೆ ಎಂದು ಕೇಳಿದರೆ ಯಾರಲ್ಲಿಯೂ ಉತ್ತರವಿಲ್ಲ. ಶಿಕ್ಷಕರ ಒಳಿತಿಗೇ ಈ ಕಡಿತ ಎನ್ನುವುದಾದರೂ ಅದನ್ನು ವಿವರಿಸುವ ತಾಳ್ಮೆ ಇಲ್ಲಿಲ್ಲ. ಪ್ರಶ್ನಿಸಿದರೆ ಬೆದರಿಕೆ. ಇಡೀ ಶಿಕ್ಷಕ ಸಮುದಾಯ ಅಧಿಕಾರದ ದರ್ಪಕ್ಕೆ ನಲುಗುತ್ತಿರುವಾಗ, ಶಿಕ್ಷಕರು ಸಾಮಾಜಿಕ ಹಲ್ಲೆಗಳಿಗೆ ಒಳಗಾದಾಗ, ದೌರ್ಜನ್ಯದ ಕಾರಣಕ್ಕಾಗಿಯೇ ನಮ್ಮ ಶಿಕ್ಷಕರು ಜೀವ ಬಿಟ್ಟಾಗ, ಒಂದೇ ಒಂದು ಪ್ರತಿರೋಧದ ದನಿ ಹೊರಡಿಸಲಾಗದ ಸಂಘಟನೆ ನಮಗೆ ಬೇಕೆ? ಅಥವಾ ಇದು ಇರುವುದಾದರೂ ಯಾತಕ್ಕೆ?

ಶಿಕ್ಷಕನ ಮೂಲೆಗುಂಪಾಗಿಸಿದ ‘ನಲಿಕಲಿ’
ಕಳೆದ ಏಳೆಂಟು ವರ್ಷಗಳಿಂದ ‘ನಲಿಕಲಿ’ ಎಂಬ ವಿಶಿಷ್ಟ ಯೋಜನೆ ಶಾಲೆಗಳಲ್ಲಿ ಜಾರಿಯಲ್ಲಿದೆ. ಈ ಯೋಜನೆಯಲ್ಲಿ ಹಿಂದೆಂದೂ ಇರದ ವೇಗದಲ್ಲಿ ಮಕ್ಕಳು ಅದ್ಭುತವಾದ ಭಾಷಾಪ್ರಭುತ್ವವನ್ನು ಪಡೆಯಲು ಸಾಧ್ಯವಿದೆ. ಆದರೆ ಇದನ್ನು ಮೇಲ್ವಿಚಾರಕರು ಮತ್ತು ತರಬೇತುದಾರರು ಹಾಳುಮಾಡುತ್ತಿದ್ದಾರೆ. ಇಲ್ಲಿ ಮಕ್ಕಳು ಆಶ್ಚರ್ಯವೆನ್ನುವ ರೀತಿಯಲ್ಲಿ ಕಲಿಯುವ, ವಿಕಾಸ ಹೊಂದುವ ಅವಕಾಶವಿದೆ. ಆದರೆ ಪ್ರಸ್ತುತ ‘ನಲಿಕಲಿ’ ಬೋಧನಾ ಪದ್ಧತಿಯನ್ನು ಶಿಕ್ಷಕನಿಗೆ, ಶಿಕ್ಷಕನ ಅನನ್ಯತೆಗೆ ಯಾವುದೇ ಅವಕಾಶವಿಲ್ಲದಂತೆ ಮಾಡಲಾಗಿದೆ.

ಸಂಕೀರ್ಣವಾಗಿ ರೂಪಾಂತರಗೊಂಡಿರುವ ಈ ಕಲಿಕಾ ಪದ್ಧತಿಯಲ್ಲಿ ಮಕ್ಕಳು ಕಲಿತರೆ ಮಾತ್ರ ಸಾಲದು, ಕಲಿತದ್ದನ್ನು ಅವರೇ ದಾಖಲಿಸಬೇಕು. ಇದು ಸಮಯ ಹಾಳು ಮಾಡುವ ದಾಖಲೀಕರಣ. ಶಿಶುಕೇಂದ್ರಿತ ಪರಿಕಲ್ಪನೆಯೊಂದಿಗೆ ಜಾರಿಗೆ ಬಂದ ‘ನಲಿಕಲಿ’ ಪ್ರಾಯೋಗಿಕವಾಗಿ ವಿಧಾನಕೇಂದ್ರಿತವಾಯಿತು. ಶಿಕ್ಷಕನ ಕಲಿಸುವ ಸೃಜನಶೀಲ ಅವಕಾಶವನ್ನು ಮೂಲೆಗುಂಪಾಗಿಸಿತು.

ಮೇಲ್ವಿಚಾರಣೆ ಎಂಬುದು ಮಕ್ಕಳ ಕಲಿಕೆಯ ಫಲಕ್ಕೆ ಮಹತ್ವ ನೀಡದೆ ಸಂಕೀರ್ಣವಾದ, ಜಟಿಲವಾದ ಗೊಂದಲಮಯವಾದ ವಿಧಾನಕ್ಕೆ ಪ್ರಾಶಸ್ತ್ಯ ಕೊಟ್ಟಿತು. ಹಾಗಾಗಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಸೃಜನಶೀಲ ಮಾಧ್ಯಮವಾಗಬೇಕಿದ್ದ ವಿಧಾನ ಹತ್ತಲು ಹೆಣಗಾಡಬೇಕಾದ ಬೆಟ್ಟವಾಯಿತು. ಇದರಿಂದ ಎರಡೂ ಕಡೆ ಯಾತನಾದಾಯಕ ದಣಿವಾಯಿತೇ ಹೊರತು ಕಲಿತ ತೃಪ್ತಿ, ಕಲಿಸಿದ ಸಂತೃಪ್ತಿ ದೂರವಾಯಿತು. ಶಿಕ್ಷಕರ ಸಾಮರ್ಥ್ಯವನ್ನು ಗೌರವಿಸಿ, ಅವರ ಅನನ್ಯತೆಯನ್ನು ಪೋಷಿಸಿ, ಇರುವ ಕಲಿಕಾ ಸಾಮಗ್ರಿಗಳನ್ನು ಬಳಸಿ ತಮ್ಮದೇ ತಿಳಿವಳಿಕೆ ಸಾಮರ್ಥ್ಯ ಉಪಯೋಗಿಸಿ ಕಲಿಸುವ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇ ಆದರೆ ನಮ್ಮ ಮಕ್ಕಳಿಗೆ ನಿಜವಾದ ಗುಣಾತ್ಮಕ ಶಿಕ್ಷಣ ಸಿಗಬಹುದು.


‘ನಲಿಕಲಿ’ಯಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಮಕ್ಕಳಿಗೆ ಒದಗಿಸಿರುವ ಕಲಿಕಾ ಸಾಮಗ್ರಿಗಳ ಗುಣಮಟ್ಟ. ‘ಅಭ್ಯಾಸ ಪುಸ್ತಕ’ ಮತ್ತು ‘ಕಾರ್ಡು’ ಇಲ್ಲಿ ಮಗುವಿಗೆ ಸಂಗಾತಿ. ಇವುಗಳನ್ನ ಮಗು ಪದೇ ಪದೇ ಬಳಸಬೇಕಾಗುತ್ತದೆ. ಆದರೆ ಅಭ್ಯಾಸ ಪುಸ್ತಕಗಳು ಎಷ್ಟು ಕಳಪೆಯಾಗಿವೆಯೆಂದರೆ ಮಗು ಬಳಸಲು ಪ್ರಾರಂಭಿಸಿದ ತಿಂಗಳಲ್ಲೇ ಅವುಗಳ ಗತಿ ಅಧೋಗತಿಯಾಗಿರುತ್ತದೆ.

ನಾವು ಇಲ್ಲಿ ಹೊರಟಿರುವುದು ಮಕ್ಕಳ ಭವಿಷ್ಯಕ್ಕೇ ಸವಾಲಾಗಿರುವ ಅಜ್ಞಾನವನ್ನು ಸೋಲಿಸಲಿಕ್ಕೆ. ಆದರೆ ನಮ್ಮ ಹತ್ತಿರ ಇರುವುದು ಇದ್ದೂ ಇಲ್ಲದಂತಿರುವ ಕಳಪೆ ಆಯುಧಗಳು. ಆದರೂ ನಾವು ಯುದ್ಧ ಗೆಲ್ಲಲೇಬೇಕು. ಕಾರ್ಡ್‌ಗಳು ಒಂದು ತರಗತಿಯ ಹತ್ತು ಮಕ್ಕಳ ಕೈಗೆ ಹೋಗಿ ಬರುವುದರೊಳಗೆ ನರಳುತ್ತಿರುತ್ತವೆ, ಮುಂದಿನ ಮಕ್ಕಳು ಅದರಲ್ಲೇ ಕಲಿಕೆಯನ್ನ ಮುಂದುವರೆಸಬೇಕು.

ಶಿಕ್ಷಣಕ್ಕಾಗಿ ಪ್ರತಿ ವರ್ಷ ಸಾವಿರ ಸಾವಿರ ಕೋಟಿ ರೂಪಾಯಿ ಲೆಕ್ಕದಲ್ಲಿ ಮಾತನಾಡುವ ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳು ಓದಲು ಗುಣಮಟ್ಟದ ಪುಸ್ತಕಗಳನ್ನು, ಒಳ್ಳೆಯ ಬಟ್ಟೆಗಳನ್ನು ಕೊಡಲಾಗದ ಬಡತನದಲ್ಲಿದೆ.

ಮಕ್ಕಳ ನಾಳೆಗಳ ಮೇಲೆ ಪ್ರಹಾರ
‘ಕಡ್ಡಾಯ ಶಿಕ್ಷಣ ಹಕ್ಕು’ ಜಾರಿಯ ಮೂಲಕ ಎಲ್ಲರಿಗೂ ಶಿಕ್ಷಣ ಎನ್ನುವ ಸಂಭ್ರಮವೊಂದು ಜಾರಿಯಲ್ಲಿದೆ. ಆದರೆ, ಖಾಸಗಿ ಶಾಲೆಗಳಿಗೆ ವರದಾನವಾದ ಈ ಹಕ್ಕು ಸರ್ಕಾರಿ ಶಾಲೆಗಳಿಗೆ ಮರಣಶಾಸನವಾಗಿದೆ. ಇದರಿಂದಾಗಿ ಗಡಿನಾಡು–ನಡುನಾಡು ಎನ್ನದೇ ಹಲವಾರು ಶಾಲೆಗಳು ಕಣ್ಣುಮುಚ್ಚಿದವು. ಈ ಶಾಲೆ ಮುಚ್ಚಿದ ಪ್ರದೇಶಗಳ ಮಕ್ಕಳ ನಾಳೆಗಳನ್ನು ಗೊತ್ತಿದ್ದೂ ಕೊಲ್ಲಲಾಗಿದೆ. ದಮನಿತ ಮಕ್ಕಳ ಬದುಕು ಬೀದಿಗೆ ಬಿದ್ದಾಗಿದೆ.

ಸಮಾನ ಕಡ್ಡಾಯ ಶಿಕ್ಷಣ ಇಂದಿನ ಅಗತ್ಯ. ಇದ್ದವರಿಗೊಂದು ಶಿಕ್ಷಣ ಮತ್ತು ಪದ್ಧತಿ, ಇಲ್ಲದವರಿಗೊಂದು ಶಿಕ್ಷಣ ಮತ್ತು ಪದ್ಧತಿ ಮಾಡಿ ದಮನಿತ ಮಕ್ಕಳ ಬದುಕಿಗೆ ವ್ಯವಸ್ಥೆ ವಂಚಿಸುತ್ತಿದೆಯೇ ಹೊರತು ಬೇರೇನಲ್ಲ. ನಮ್ಮ ನಾಡು, ನಮ್ಮ ಸಂಸ್ಕೃತಿ ಎಂದೆಲ್ಲ ಮಾತನಾಡುವ ಪ್ರಭುತ್ವ ಶಿಕ್ಷಣದ ವಿಷಯದಲ್ಲಿ ಮಾತ್ರ ‘ನಮ್ಮ ಮಕ್ಕಳು’ ಎಂದು ಇಡೀ ನಾಡಿನ ಮಕ್ಕಳನ್ನು ನೋಡುತ್ತಿಲ್ಲ.

ಮಾನವೀಯ ಕಾಳಜಿಯಿಂದ ರೂಪುಗೊಂಡ ‘ಖಾಸಗಿ ಶಿಕ್ಷಣ ಸಂಸ್ಥೆ’ ಪರಿಕಲ್ಪನೆ ಲಾಭಕೋರತನವಾಗಿ ಬದಲಾಗಿ ದಶಕಗಳೇ ಆಗಿಹೋಗಿವೆ. ಸರ್ಕಾರ ದುಡ್ಡು ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತದೆ, ಆದರೆ ಅದೇ ಸರ್ಕಾರ, ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆಯಾದ ಅಭ್ಯಾಸ ಪುಸ್ತಕಗಳನ್ನು ಕೊಡುತ್ತದೆ. ನಮ್ಮ ‘ನಲಿಕಲಿ’ ಮಕ್ಕಳು ಅರ್ಧ ಪುಟ ಬರೆಯುವ ಹೊತ್ತಿಗೆ ಪುಟವೇ ಹರಿಯುತ್ತದೆ, ಉಳಿದ ಜಾಗದಲ್ಲಿ ಮತ್ತೆ ಬರೆಯಲು ಪ್ರಯತ್ನಿಸಿದರೆ ಅದೂ ಹರಿಯುತ್ತದೆ. ಹೀಗೆ ಪೇಚಾಡುತ್ತಿರುವುದು ನಮ್ಮದೇ ಕನ್ನಡದ ಮಗು. ಇಲ್ಲಿ ಹರಿಯುತ್ತಿರುವುದು ಹಾಳೆಯಲ್ಲ, ಮಕ್ಕಳ ಭವಿಷ್ಯ.

ಮಕ್ಕಳಿಗೆ ಒಂದು ಜೊತೆ ಬಟ್ಟೆ ಕೊಡುವ ಸರ್ಕಾಕ್ಕೆ ವಿದ್ಯಾರ್ಥಿಗಳೆಲ್ಲ ಕೃತಜ್ಞರು. ಹೀಗೆ ಕೊಟ್ಟ ಒಂದು ಜೊತೆ ಬಟ್ಟೆಯನ್ನ ಮಕ್ಕಳು ವಾರಪೂರ್ತಿ ಹಾಕಿಕೊಂಡು ಬಂದಾಗ, ಆರು ತಿಂಗಳ ಹೊತ್ತಿಗೆ ಅವುಗಳ ಗತಿ ಏನು? ಬೂಟು ಕೊಡುವ ಬಗ್ಗೆ ಯೋಚಿಸುತ್ತಿರುವ ಸರ್ಕಾರ, ನಮ್ಮ ಮಕ್ಕಳಿಗೆ ಎರಡು ಜೊತೆ ಬಟ್ಟೆ ಕೊಟ್ಟರೆ ಮಹದುಪಕಾರ ಆದೀತೇನೋ.

ಕನ್ನಡ ಶಾಲೆ ಮಾಸ್ತರ ಮೇಲೆ ಗೂಬೆ!
ಕನ್ನಡ ಶಾಲೆಯ ಮಾಸ್ತರಿಗೆ ಬುದ್ಧಿಯಿಲ್ಲ ಎನ್ನುವುದು ಪುರಾತನವಾದ ಪೂರ್ವಗ್ರಹ. ಹಾಗೆಯೇ ಆಧುನಿಕ ಮನಸ್ಸಿನ ಮತ್ತೊಂದು ಕೊಳಕುತನ, ಕನ್ನಡ ಶಾಲೆಯ ಮಕ್ಕಳು ಕಳ್ಳರು–ಕೀಳು ಎಂಬುದು. ಮೊದಲನೆಯ ಮಾತಿಗೆ ಉದಾಹರಣೆಯಾಗಿ ನಮ್ಮ ನಿಕಟಪೂರ್ವ ಶಿಕ್ಷಣ ಸಚಿವರ ನಡವಳಿಕೆಯನ್ನು ಉದಾಹರಿಸಬಹುದು.

ವರ್ಗಾವಣೆಯ ಕೋರಿಕೆಯೊಂದಿಗೆ ಇಬ್ಬರು ಶಿಕ್ಷರು ಭೇಟಿಯಾದಾಗ ಅವರ ಕೋರಿಕೆಯನ್ನ ಮನ್ನಿಸುವುದೋ ತಿರಸ್ಕರಿಸುವುದೋ ಸಚಿವರಿಗೆ ಸಾಧ್ಯವಿತ್ತು. ಆದರೆ, ಅವರು ಶಿಕ್ಷಕರ ಬುದ್ಧಿಮತ್ತೆ ಪರೀಕ್ಷಿಸಲು ಮೂರು ಪ್ರಶ್ನೆ ಕೇಳಿದರು. ಈ ಚಿಕ್ಕ ಘಟನೆ ಮಾಧ್ಯಮಗಳ ಮೂಲಕ ಸುದ್ದಿಯಾಯಿತು. ವಾಹಿನಿಯೊಂದು ಮೂರು ಲಕ್ಷ ಶಿಕ್ಷಕರ ಆತ್ಮಗೌರವವನ್ನ ‘ಟಿಆರ್‌ಪಿ’ಗಾಗಿ ಬಲಿಕೊಟ್ಟು ‘ರಿಯಾಲಿಟಿ ಚೆಕ್’ ಎಂದು ಹೇಳಿಕೊಂಡಿತು. ಇಡೀ ದಿನ ಶಿಕ್ಷಕರನ್ನು ಅದೆಷ್ಟು ಅಜ್ಞಾನಿಗಳಂತೆ ಚಿತ್ರಿಸಲಾಯಿತೆಂದರೆ, ಬೋಧಕವರ್ಗವೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲು ಹಿಂಜರಿಕೆಯಾಯಿತು.

ಶಾಲೆಗೆ ಬರುವ ಮಕ್ಕಳನ್ನು ತಪ್ಪು ಮಾಡಿದಾಗ ಹೊಡೆಯುವುದಿರಲಿ, ಸಿಟ್ಟಿನಿಂದ ನೋಡಲೂಬಾರದು ಎಂಬ ಕಾನೂನು ಮಾಡುವ ವ್ಯವಸ್ಥೆ, ಇಡೀ ಮೂರು ಲಕ್ಷ ಶಿಕ್ಷಕರ ಮಾನವನ್ನು ಹೀಗೆ ಹರಾಜು ಹಾಕಲು ಕಾರಣವಾಗಬಹುದೇ? ಕೆಲವು ಶಿಕ್ಷಕ ಶಿಕ್ಷಕಿಯರನ್ನು ಕಿರುತೆರೆಯಲ್ಲಿ ಬಫೂನ್‌ಗಳಂತೆ ಚಿತ್ರಿಸಲಾಯಿತು.

ಶಿಕ್ಷಕರ ಮನಸ್ಸಿನ ಮೇಲಾದ ಈ ಆಘಾತಕ್ಕೆ ಮದ್ದು ನೀಡುವವರು ಯಾರು? 
ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಪ್ರೇಮಾ (ಮೂಲತಃ ಕೋಲಾರ ಜಿಲ್ಲೆಯವರು) ಎನ್ನುವ ಶಿಕ್ಷಕಿಯೊಬ್ಬರು ಸೀಮೆಎಣ್ಣೆ ಸುರುವಿಕೊಂಡು ಬೆಂಕಿಹಚ್ಚಿಕೊಂಡು ಸುಟ್ಟುಹೋದರು.

ಸಾಯುವ ಮುನ್ನ, ಕುಟುಕು ಜೀವ ಹಿಡಿದುಕೊಂಡಿದ್ದ ಅವರು ತಮ್ಮನ್ನ ಭೇಟಿಮಾಡಲು ಬಂದ ಮಂತ್ರಿಯೊಬ್ಬರಿಗೆ ‘ದಯಮಾಡಿ ನನ್ನನ್ನ ನಮ್ಮೂರ ಕಡೆ ವರ್ಗಾವಣೆ ಮಾಡಿ ಸಾರ್’ ಎಂದು ಕೊನೆಯುಸಿರೆಳೆದರು. ಸಾವಿನ ಸಂದರ್ಭದಲ್ಲೂ ವರ್ಗಾವಣೆಯನ್ನು ಕನವರಿಸಿದ ಆ ಶಿಕ್ಷಕಿಯ ಸನ್ನಿವೇಶ ಏನೆಲ್ಲವನ್ನು ಹೇಳುವಂತಿದೆ. ಆದರೆ, ಆ ಸಂಕಷ್ಟ ನಮ್ಮ ಮಂತ್ರಿಗಳಿಗೆ ಅರ್ಥವಾಗುತ್ತದೆಯೇ?

ಚಿಕ್ಕೋಡಿ ತಾಲ್ಲೂಕಿನ ದಲಿತ ಶಿಕ್ಷಕರೊಬ್ಬರ ಮೇಲೆ ಅಕ್ಕಿ ಕಳ್ಳತನದ ಆರೋಪ ಹೊರಿಸಲಾಯಿತು. ಅವರ ಬೆನ್ನಮೇಲೆ ಮಣಭಾರದ ಚೀಲವನ್ನು ಹೊರಿಸಿ ಊರಲ್ಲಿ ತಿರುಗಿಸಿ ಹಲ್ಲೆ ನಡೆಸಲಾಯಿತು. ಆ ಶಿಕ್ಷಕ ತಪ್ಪಿತಸ್ಥನೆಂದಾಗಿದ್ದರೆ ಇಲಾಖೆ ವಿಚಾರಣೆಗ ಒಳಪಡಿಸಬಹುದಿತ್ತು. ಆದರೆ ಅದಾಗಲಿಲ್ಲ. ಶಿಕ್ಷಕರ ಸಂಘಟನೆ ಕೂಡ ಹಲ್ಲೆಗೊಳಗಾದ ಶಿಕ್ಷಕನ ನೆರವಿಗೆ ಬರಲಿಲ್ಲ.

ಸಂಘಟನೆಗಳು ನಿದ್ದೆಯಿಂದ ಏಳುವುದು ವೇತನನಿಗದಿ ವಿಚಾರ ಬಂದಾಗ ಮಾತ್ರ. ಇಲ್ಲಾದದ್ದೂ ಅಷ್ಟೇ. ಸಂಘಟನೆ ಕೈಕಟ್ಟಿ ನಿಂತು ಅಧಿಕಾರಿಗಳಿಗೆ ಮನವಿ ಅರ್ಪಿಸಿ ಸುಮ್ಮನಾಯಿತು. ನೊಂದ ಶಿಕ್ಷಕರ ನೋವು ಮಾತ್ರ ಅವಮಾನಗೊಂಡ ಜಾಗದಲ್ಲಿಯೇ ಸೇವೆ ಮಾಡುತ್ತ ದಿನೇ ದಿನೇ ಹೆಚ್ಚುತ್ತಾ ಹೋಯಿತು.

ಆತ್ಮತೃಪ್ತಿ ಎನ್ನುವ ಮರೀಚಿಕೆ
ಬೇರೆ ಯಾವ ಕೆಲಸದಲ್ಲೇ ಆದರೂ ಹೊಟ್ಟೆಪಾಡೆಂದು ಸುಮ್ಮನಿದ್ದು ಬಿಡಬಹುದು. ಆದರೆ ಶಿಕ್ಷಕರೆಂದರೆ ಇಲ್ಲಿ ಆತ್ಮತೃಪ್ತಿಯೂ ಬೇಕು. ಅದಾವುದಕ್ಕೂ ಅವಕಾಶ ಕೊಡದಷ್ಟು ಕ್ಷುದ್ರಗೊಂಡ ವಾತಾವರಣದಲ್ಲಿ ಲಾಬಿಗಳು, ಸ್ವಾರ್ಥಗಳು, ಮೇಲರಿಮೆಗಳು ತಾಂಡವವಾಡುತ್ತಿದ್ದರೆ, ಶಿಕ್ಷಕ ಸಮುದಾಯ ಏನೂ ಮಾಡಲಾಗದ ಅಸಹಾಯಕತನದಲ್ಲಿ ಕೀಳರಿಮೆಯನ್ನೇ ತಿಂದುಂಡು ಇಲ್ಲಿ ಬದುಕಬೇಕಾಗುತ್ತದೆ.

ಉತ್ತರ ಕರ್ನಾಟಕದ ಶಾಲೆಯೊಂದರಲ್ಲಿ ಕೆಲಸ ಮಾಡುವ ಶಿಕ್ಷಕರು ವಿಷಾದದಿಂದ ಹೇಳುತ್ತಾರೆ: ‘ಮಹಾಭ್ರಷ್ಟ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನನಗೆ ಪಶ್ಚಾತ್ತಾಪವಿದೆ. ಅರ್ಥಪೂರ್ಣವಾಗಿ ಬದುಕು ಕಟ್ಟಿಕೊಳ್ಳುವ, ಹಲವು ಬದುಕುಗಳನ್ನು ಕಟ್ಟುವ ಅವಕಾಶಗಳಿವೆ ಎನ್ನುವ ಸಂತಸದಿಂದ ಇಲ್ಲಿಗೆ ಬಂದೆ. ಆದರೆ ಇಲ್ಲಿನ ದರ್ಪ, ಲಂಚಕೋರತನ, ವ್ಯಕ್ತಿಗತ ಹಿಂಸೆ ಕಂಡು ರೋಸಿ ಹೋಗಿರುವೆ. ಇಲ್ಲಿ ಹಣದ ಅವ್ಯವಹಾರ ಮಾತ್ರ ನಡೆಯುತ್ತಿಲ್ಲ – ಪ್ರತಿಯೊಬ್ಬ ಶಿಕ್ಷಕರ ಮನಸ್ಸನ್ನು ಇರಿಯಲಾಗುತ್ತದೆ, ಹೃದಯವನ್ನು ಘಾಸಿಗೊಳಿಸಲಾಗುತ್ತದೆ ಮತ್ತು ಬುದ್ಧಿಯನ್ನು ಬಡಿಯಲಾಗುತ್ತದೆ’.

ಶಿಕ್ಷಕರ ಕಷ್ಟಗಳು ಒಂದೆರಡಲ್ಲ. ಆದರೆ ನಮ್ಮ ಗೋಳನ್ನು ಕೇಳುವವರು ಯಾರು? ‘ಇದು ಹೀಗೆಯೇ’ ಎಂದು ಬಹಳ ಜನ ಶಿಕ್ಷಕರಿಗೆ ಮನವರಿಕೆಯಾಗಿದೆ. ಇದ್ದಂತೆಯೇ ಒಪ್ಪಿಕೊಂಡು ಎಲ್ಲವೂ ಸುಮ್ಮನೆ ನಡೆಯುತ್ತ ಹೋಗುತ್ತಿದೆ. ಆದರೂ ನಾವು ಶಿಕ್ಷಣ, ಮಕ್ಕಳ ಭವಿಷ್ಯ, ಸಮಾನತೆ, ಆದರ್ಶ ಎಂದೆಲ್ಲ ದೊಡ್ಡ ದೊಡ್ಡ ಮಾತನಾಡುತ್ತೇವೆ.

ಎರಡು ಮುಖ!
‘ಶಿಕ್ಷಣ ವಾರ್ತೆ’, ‘ಗೋಡೆತೇರು’ ಹೆಸರಿನ ಪತ್ರಿಕೆಗಳನ್ನ ಶಿಕ್ಷಣ ಇಲಾಖೆ ತರುತ್ತದೆ. ಮೊದಲ ಪತ್ರಿಕೆಯಲ್ಲಿ ಸರ್ಕಾರಿ ವಾರ್ತೆಗಳು, ಎರಡನೆಯದರಲ್ಲಿ ಪ್ರಭುಗಳ ಫೋಟೋ ಮತ್ತು ಸಂದೇಶಗಳೇ ತುಂಬಿರುತ್ತವೆ. ನಮ್ಮ ಮಕ್ಕಳ ಪ್ರಜ್ಞೆಗೆ ಹೊಸ ಅನುಭವಗಳ ಮಾತಿಗೆ ಈ ಪತ್ರಿಕೆಗಳಲ್ಲಿ ಅವಕಾಶ ಇದ್ದಂತಿಲ್ಲ. ಇವುಗಳ ಅಣಕ ಎನ್ನುವಂತೆ ರಾಜ್ಯಾದ್ಯಂತ ಹಲವಾರು ಶಿಕ್ಷಕರು ತುಂಬ ಉತ್ಕೃಷ್ಟವಾದ, ಸೃಜನಶೀಲವಾದ ಹಲವಾರು ಪತ್ರಿಕೆಗಳನ್ನ ತಮ್ಮದೇ ಸ್ವಂತ ಖರ್ಚಿನಲ್ಲಿ ತರುತ್ತಿದ್ದಾರೆ. ಮಕ್ಕಳನ್ನ ಸರ್ವತೋಮುಖವಾಗಿ ಬೆಳೆಸುತ್ತಿದ್ದಾರೆ. ನಮ್ಮ ಇಲಾಖೆಯಿಂದ ಇಂಥ ಪತ್ರಿಕೆಗಳನ್ನ ಪೋಷಣೆಮಾಡಬಹುದು ಎಂಬ ಕಲ್ಪನೆಯೂ ತಪ್ಪಾಗಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT