ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತಲ ಸಮರ ಮರೆತರೆ ಗೆಲುವಿನ ಹೊನಲು

ಡೇವಿಸ್ ಕಪ್
Last Updated 4 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ ಒಲಿಂಪಿಕ್ಸ್‌ ಇತಿಹಾಸದ ಪುಟಗಳನ್ನು ಸೇರಿದೆ.  ಪದಕ ಗೆದ್ದ ಪಿ.ವಿ. ಸಿಂಧು ಮತ್ತು ಸಾಕ್ಷಿ  ಮಲಿಕ್ ಅವರು ಖುಷಿಯ ಹೊನಲು ಹರಿಸಿದ್ದರು. ಆ ಎರಡು ಪದಕಗಳ ಸಿಹಿ ಹೊರತುಪಡಿಸಿದರೆ ನಮಗೆ ಸಿಕ್ಕಿದ್ದು ಬಹುಪಾಲು ಕಹಿ ಅನುಭವ.

ಅದರಲ್ಲೂ ಟೆನಿಸ್ ಕ್ಷೇತ್ರದ ದಿಗ್ಗಜರು ಮೂಡಿಸಿದ ನಿರಾಸೆ ಸಣ್ಣದಲ್ಲ. ಪುರುಷರ ಡಬಲ್ಸ್‌ನಲ್ಲಿ ಅನುಭವದ ಹೆಮ್ಮರ ಲಿಯಾಂಡರ್ ಪೇಸ್ ಮತ್ತು ಉತ್ಸಾಹದ ಚಿಲುಮೆ ರೋಹನ್ ಬೋಪಣ್ಣ ಜೋಡಿಯು ಪದಕ ಗೆದ್ದು ಬರುತ್ತದೆ  ಎಂದು ಭಾರತದ ಕ್ರೀಡಾಪ್ರೇಮಿಗಳು ನಂಬಿದ್ದರು.  ಆದರೆ ಅವರಿಬ್ಬರ ನಡುವಣ ಭಿನ್ನಾಭಿಪ್ರಾಯವೇ ಮೇಲುಗೈ ಸಾಧಿಸಿತು. ಮೊದಲ ಸುತ್ತಿನ ಪಂದ್ಯದಲ್ಲಿಯೇ ಸೋತು ಹೊರಬಿದ್ದರು. ಇದೀಗ ಅವರ ಮೇಲೆ  ಮತ್ತೊಮ್ಮೆ ಭಾರತದ ಟೆನಿಸ್‌ ಪ್ರೇಮಿಗಳ ಕುತೂಹಲದ ಕಣ್ಣುಗಳು ನೆಟ್ಟಿವೆ.

ಸೆಪ್ಟೆಂಬರ್ 16 ರಿಂದ 18ರವರೆಗೆ ನವದೆಹಲಿಯಲ್ಲಿ ಸ್ಪೇನ್ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್ ಹಂತದ ಟೂರ್ನಿ ನಡೆಯಲಿದೆ. ಅದರಲ್ಲಿ ಭಾರತ ತಂಡದಲ್ಲಿ ಮತ್ತೆ ಡಬಲ್ಸ್‌ ಜೋಡಿ ಪೇಸ್ ಮತ್ತು ಬೋಪಣ್ಣ ಕಣಕ್ಕಿಳಿಯಲಿದ್ದಾರೆ, ಈ ಟೂರ್ನಿಯಲ್ಲಿಯೂ ಅವರ ಆಟದ ಸೊಬಗು ಗರಿಗೆದರುವುದೋ ಅಥವಾ  ಮನದಾಳದಲ್ಲಿ ಮಡುಗಟ್ಟಿರುವ ಹಾಲಾಹಲ ಉಕ್ಕಿ ತಂಡವನ್ನು ಮುಳುಗಿಸುವುದೋ? ಎಂಬ ಆತಂಕ ಟೆನಿಸ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಟೆನಿಸ್‌ ಕ್ರೀಡೆಯ ‘ವಿಶ್ವಕಪ್’ ಎಂದೇ ಪರಿಗಣಿಸ ಲಾಗಿರುವ ಡೇವಿಸ್ ಕಪ್ ಇದುವರೆಗೂ ಭಾರತಕ್ಕೆ ಒಲಿದಿಲ್ಲ. 1921ರಿಂದ ಡೇವಿಸ್‌ ಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಭಾರತ ಮೂರು ಬಾರಿ (1966, 1974 ಮತ್ತು 1987) ರನ್ನರ್ಸ್ ಅಪ್ ಆಗಿದ್ದು ಮಾತ್ರ ಸಾಧನೆ. 

ಈಗ ದೆಹಲಿಯ ಟೂರ್ನಿಯಲ್ಲಿ ಗೆದ್ದರೆ ಅಂತಿಮ 16ರ ಘಟ್ಟಕ್ಕೆ ಅರ್ಹತೆ ಪಡೆಯುವ ಅವಕಾಶ ಭಾರತಕ್ಕೆ ಇದೆ. ಆದರೆ ಕಠಿಣ ಎದುರಾಳಿ ಸ್ಪೇನ್ ತಂಡವನ್ನು ಹಣಿಯಲು ಉತ್ತಮ ಆಟದ ಜೊತೆಗೆ ತಂಡದ ಸಂಘಟಿತ ಪ್ರಯತ್ನವೂ ಮುಖ್ಯವಾಗುತ್ತದೆ.  ವೃತ್ತಿಪರ ಟೆನಿಸ್ ಆಟಗಾರರ ತಂಡ ಸ್ಪೇನ್ ಸುಲಭಕ್ಕೆ ಮಣಿಯುವಂತದ್ದಲ್ಲ.

ಅದರಲ್ಲೂ ಅಗ್ರಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಕೂಡ ತಂಡದೊಂದಿಗೆ ಬರುವ ಸಾಧ್ಯತೆ ಇದೆ. ತಂಡದಲ್ಲಿರುವ ಇನ್ನುಳಿದ ಆಟಗಾರರಾದ ರಾಬರ್ಟ್ ಬಾಟಿಸ್ಟಾ ಅಗಟ್, ಡೇವಿಡ್ ಫೆರರ್ ಮತ್ತು ಫೆಲಿಸಿಯಾನೊ ಲೊಪೆಜ್ ಅವರ  ಶರವೇಗದ ಸರ್ವ್‌ಗಳು, ಬಲಶಾಲಿ ರಿಟರ್ನ್‌ಗಳಿಗೆ ತಕ್ಕ ಉತ್ತರ ನೀಡುವುದು ಸುಲಭದ ಮಾತಲ್ಲ.

ಐದು ಬಾರಿ ಡೆವಿಸ್ ಕಪ್ ಚಾಂಪಿಯನ್  ಸ್ಪೇನ್ ತಂಡವನ್ನು ಎದುರಿಸುವ ಸಮರ್ಥ ಆಟಗಾರರು ಭಾರತ ತಂಡದಲ್ಲಿದ್ದಾರೆ. ಅಮೆರಿಕ ಓಪನ್ ಟೆನಿಸ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿದ ಸಾಕೇತ್ ಮೈನೇನಿ, ಪ್ರತಿಭಾನ್ವಿತ ಆಟಗಾರ ರಾಮಕುಮಾರ್ ರಾಮ ನಾಥನ್ ಅವರ ಮೇಲೆ ವಿಶ್ವಾಸ ಇಡಬ ಹುದು. ಗಾಯಗೊಂಡು ಹೊರಗುಳಿದಿ ರುವ ಸೋಮದೇವ್ ದೇವವರ್ಮನ್ ಮತ್ತು ಅಗ್ರಶ್ರೇಯಾಂಕದ ಆಟಗಾರ ಯೂಕಿ ಬಾಂಭ್ರಿ ಅವರ ಕೊರತೆಯನ್ನು ನೀಗಿಸಬಲ್ಲ ಸಾಮರ್ಥ್ಯ ರಾಮಕುಮಾರ್ ಮತ್ತು ಸಾಕೇತ್ ಅವರಿಗೆ ಇದೆ. 

ಹೋದ ಜುಲೈನಲ್ಲಿ ಡೇವಿಸ್ ಕಪ್ ಪ್ಲೇ ಆಫ್ ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4–1ರಿಂದ ಸಾಧಿಸಿದ ಗೆಲುವಿನಲ್ಲಿ ಇವರಿಬ್ಬರ ಆಟ ರಂಗೇರಿತ್ತು. ಆದರೆ, ಚಿಂತೆ ಇರುವುದು ಡಬಲ್ಸ್ ವಿಭಾಗದಲ್ಲಿ ಪೇಸ್ ಮತ್ತು ಬೋಪಣ್ಣ ತಮ್ಮ ಭಿನ್ನಾಭಿಪ್ರಾಯ ಮತ್ತು ರಿಯೊದ ಕಹಿ ಸೋಲನ್ನು ಅಂಗಳದ ಹೊರಗೆ ಬಿಟ್ಟು ಬಂದರೆ ಮಾತ್ರ ಭಾರತಕ್ಕೆ ಲಾಭ. 

‘ರಿಯೊಗೆ ತೆರಳುವ ಮುನ್ನ ರೋಹನ್ ಮತ್ತು ಲಿಯಾಂಡರ್ ಜೊತೆಗೂಡಿ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಅವರು ಹೆಚ್ಚು ಟೂರ್ನಿಗಳಲ್ಲಿ ಜೊತೆಯಾಗಿ ಆಡಿದರೆ ಯಶಸ್ಸು ಖಚಿತ’ ಎಂದು ಹಿರಿಯ ಟೆನಿಸ್ ಆಟಗಾರ ಮಹೇಶ್ ಭೂಪತಿ ಹೇಳಿದ್ದಾರೆ.

ಇನ್ನೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ಪೇಸ್ ಜೊತೆಗೆ ಆಡಿದ್ದವರು ಭೂಪತಿ. ಆದರೆ ಅವರು ಕೂಡ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪೇಸ್ ಜೊತೆ ಕಣಕ್ಕಿಳಿಯಲು ಒಪ್ಪಿರಲಿಲ್ಲ.ರೋಹನ್ ಅವ ರೊಂದಿಗೆ ಭೂಪತಿ ಮತ್ತು ಪೇಸ್ ಅವರೊಂದಿಗೆ ವಿಷ್ಣುವರ್ಧನ್ ಕಣಕ್ಕಿಳಿದಿದ್ದು ಈಗ ಇತಿಹಾಸ.

ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್‌ ಪದಕದ ಕಾಣಿಕೆ ನೀಡಿದ ಏಕೈಕ ಆಟಗಾರ ಲಿಯಾಂಡರ್ ಪೇಸ್. 1952ರಲ್ಲಿ ಕಶಾಬಾ ಜಾಧವ್ ಅವರು ಕುಸ್ತಿಯಲ್ಲಿ ಕಂಚು ಗೆದ್ದು ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು.     

43 ವರ್ಷದ ಪೇಸ್ ಇವತ್ತಿಗೂ ಬಲಶಾಲಿ ಸರ್ವಿಸ್‌ಗಳು ಮತ್ತು ನೆಟ್‌ ಬಳಿ ಚುರುಕಾದ ರಿಟರ್ನ್‌ಗಳ ಮೂಲಕ ಎದುರಾಳಿಗಳಿಗೆ ಸವಾಲೊಡ್ಡಬಲ್ಲ ಛಲಗಾರ. ಏಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಪೇಸ್‌ ಸಾಧನೆಯ ಪಟ್ಟಿಯಲ್ಲಿ ಹಲವು ಮಹತ್ವದ ಪ್ರಶಸ್ತಿಗಳಿವೆ. ಆದರೆ, ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ಪದಕ ಮತ್ತು  ಡೇವಿಸ್‌ ಕಪ್‌ನ ಕೊರತೆ ಇದೆ.

ವೃತ್ತಿ ಪರ ಟೆನಿಸ್ ಆಟಗಾರನಾಗಿ 27 ವರ್ಷಗಳ ಸುದೀರ್ಘ ಪ್ರಯಾಣ ಮಾಡಿರುವ ಅವರ ಡೇವಿಸ್ ಕಪ್ ಗೆಲ್ಲುವ ಗುರಿ ಈಡೇರಿಸಿಕೊಳ್ಳಲು ಇದು ಸೂಕ್ತ ಸಮಯ. ಬೋಪಣ್ಣ ಸೇರಿದಂತೆ ತಂಡದಲ್ಲಿರುವ ಯುವ ಆಟಗಾರರಿಗೂ ಈಗ ಸದವಕಾಶ ಲಭಿಸಿದೆ. ಈ ತಂಡವನ್ನು ಹೊಂದಾಣಿಕೆಯ ಮೂಲಕ ಯಶಸ್ಸಿನ ದಾರಿಗೆ ತರುವ ಸವಾಲು ಅನುಭವಿ ಕೋಚ್ ಜೀಶನ್ ಅಲಿ ಮತ್ತು ಆಟವಾಡದ ನಾಯಕ ಆನಂದ್ ಅಮೃತರಾಜ್  ಅವರ ಮುಂದೆ ಇದೆ.

ಭಾರತ ಮತ್ತು ಡೇವಿಸ್ ಕಪ್
ಪದಾರ್ಪಣೆ 1921(ಇಲ್ಲಿಯವರೆಗೆ ಒಟ್ಟು 78 ವರ್ಷಗಳು)
ಐಟಿಎಫ್ ಶ್ರೇಯಾಂಕ 

20ಆಡಿದ  ಪಂದ್ಯ ಒಟ್ಟು 187 (112 ಜಯ, 75ಸೋಲು)

ರನ್ನರ್ಸ್ ಅಪ್ ಮೂರು ಸಲ (1966, 1974, 1987)

ಅತಿ ಹೆಚ್ಚು ವರ್ಷ ಪ್ರತಿನಿಧಿಸಿದ ಆಟಗಾರ
ಲಿಯಾಂಡರ್ ಪೇಸ್ (25 ವರ್ಷ)
ಅತಿ ಹೆಚ್ಚು ಪಂದ್ಯಗಳಲ್ಲಿ ಜಯ
ಲಿಯಾಂಡರ್ ಪೇಸ್ (88)
ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಗೆಲುವು
ರಾಮನಾಥನ್ ಕೃಷ್ಣನ್ (50)
ಡಬಲ್ಸ್‌ನಲ್ಲಿ ಅತಿ ಹೆಚ್ಚು ಜಯ
ಲಿಯಾಂಡರ್ ಪೇಸ್ (40)
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT