ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ರಾಮಾಯಣಕ್ಕೆ ಪ್ರಕಾಶಮಾನ ಕನ್ನಡಿ

Last Updated 24 ಸೆಪ್ಟೆಂಬರ್ 2016, 9:58 IST
ಅಕ್ಷರ ಗಾತ್ರ

ಪ್ರತಿಯೊಬ್ಬ ಮನುಷ್ಯನಲ್ಲಿ ರಾಮ ಇರುತ್ತಾನೆ. ಅಷ್ಟು ಮಾತ್ರವಲ್ಲ – ರಾವಣನೂ ಇರುತ್ತಾನೆ, ಕುಂಭಕರ್ಣನೂ ಜೊತೆಗಿರುತ್ತಾನೆ. ಇವರೆಲ್ಲ ಸನ್ನಿವೇಶಕ್ಕೆ ತಕ್ಕಂತೆ ಪ್ರಕಟಗೊಳ್ಳುತ್ತಿರುತ್ತಾರೆ. ಮಗು ಎಂಟನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಗುಟ್ಟು ಮಾಡುವುದು ಶುರುವಾಗುತ್ತದೆ. ಹಾಗೆನೋಡಿದರೆ, ಎಲ್ಲರ ಬದುಕಿನಲ್ಲೂ ಗುಟ್ಟುಗಳಿರುತ್ತವೆ. ಒಬ್ಬೊಬ್ಬರದು ಒಂದೊಂದು ದಿಗಂತ. ಅಪ್ಪ ಮತ್ತು ಮಗನ ಕಾಮ ಬೇರೆ ಬೇರೆ. ತಾಯಿ ಮತ್ತು ಮಗಳ ಕನಸು ಬೇರೆಯಾಗಿರುತ್ತವೆ...

‘ನಿಮ್ಮ ಸಿನಿಮಾದ ಕಥೆಯೇನು?’ ಎನ್ನುವ ಸರಳ ಪ್ರಶ್ನೆಗೆ ಪ್ರಕಾಶ್‌ ರೈ ಉತ್ತರಿಸತೊಡಗಿದ್ದು ಹೀಗೆ. ಅವರ ಉತ್ತರವನ್ನು ಕೇಳಿ ‘ಇದೊಳ್ಳೆ ರಾಮಾಯಣ’ ಎಂದು ಗೊಣಗುವಂತಿಲ್ಲ. ಏಕೆಂದರೆ, ಹಾಗೆ ಹೇಳುವುದು ಕೂಡ ರೈ ಅವರ ಸಿನಿಮಾ ಹೆಸರನ್ನೇ ಮತ್ತೆ ಹೇಳಿದಂತಾಗುತ್ತದೆ.

ತಮ್ಮ ನಿರ್ದೇಶನದ ಮೂರನೇ ಕನ್ನಡ ಸಿನಿಮಾ ‘ಇದೊಳ್ಳೆ ರಾಮಾಯಣ’ಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಪ್ರಕಾಶ್‌ ರೈ, ಚಿತ್ರದ ಕಥೆಯ ನೆಪದಲ್ಲಿ ಮನುಷ್ಯ ಸ್ವಭಾವವನ್ನು ವಿಶ್ಲೇಷಿಸಿದಂತಿತ್ತು. ‘ನಮ್ಮನ್ನೇ ನಾವು ನೋಡಿಕೊಂಡು ನಗುವಂಥ ಹ್ಯೂಮರ್‌ ಚಿತ್ರದಲ್ಲಿದೆ. ಈ ಹ್ಯೂಮರ್‌ ನಗುವಿನ ಜೊತೆಗೆ ಆತಂಕವನ್ನೂ ಹುಟ್ಟಿಸುತ್ತದೆ. ಪ್ರೇಕ್ಷಕ ತನ್ನನ್ನು ತಾನೇ ಸಿನಿಮಾದ ಪಾತ್ರದಲ್ಲಿ ಕಂಡು, ಅದರಿಂದ ಪಾರಾಗಲು ಯೋಚಿಸತೊಡಗುತ್ತಾನೆ’ ಎಂದರು.

‘ಇದೆಲ್ಲವೂ ಸರಿ. ಈ ರಾಮಾಯಣಕ್ಕೂ ರಾಜಕಾರಣಕ್ಕೂ ಸಂಬಂಧ ಇದೆಯೇ?’ – ಕಥೆಯ ಬಿಲ್ಲನ್ನು ಮತ್ತಷ್ಟು ಹುರಿಗೊಳಿಸಲಿಕ್ಕಾಗಿ ಕೇಳಿದ ಈ ಪ್ರಶ್ನೆಗೆ ರೈ ಹೇಳಿ ದ್ದು – ‘‘ರಾಮನವಮಿಯ ಎರಡು ದಿನಗಳಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳು ಚಿತ್ರದ ಕಥೆ. ಹಬ್ಬದ ಸಜ್ಜನಿಕೆಯ ನೆಪದಲ್ಲಿ ಅಸಜ್ಜನಿಕೆ ತನ್ನ ಇರುವನ್ನು ವ್ಯಕ್ತಪಡಿಸುವ ಸಂದರ್ಭ ಸಿನಿಮಾದಲ್ಲಿದೆ’’.

ರೈ ಅವರ ಮಾತಿನ ಜಾಡನ್ನು ಹಿಡಿಯುವುದಾದರೆ, ಈ ಸಿನಿಮಾ ಮನುಷ್ಯರ ಜೊತೆಗೆ ಒಂದು ಊರಿನ ಕಥೆಯನ್ನೂ ಹೇಳುವಂತಿದೆ. ಸಶಕ್ತ ಗ್ರಾಮೀಣ ಕಥನಗಳು ಅಪರೂಪವಾಗುತ್ತಿರುವ ಸಂದರ್ಭದಲ್ಲಿ ‘ರೈ ರಾಮಾಯಣ’ ನಿರೀಕ್ಷೆಗಳನ್ನು ಹುಟ್ಟಿಸಿದೆ.

ಕನ್ನಡ ಮನಸುಗಳೊಂದಿಗೆ, ಕನ್ನಡ ನೆಲದೊಂದಿಗೆ ಮತ್ತೆ ಮತ್ತೆ ಒಡನಾಡುವ ಹಂಬಲ ಕೂಡ ಪ್ರಕಾಶ್‌ ರೈ ಅವರನ್ನು ನಿರ್ಮಾಣ–ನಿರ್ದೇಶನಕ್ಕೆ ಒಡ್ಡುತ್ತಿರುವಂತಿದೆ. ಇದರಾಚೆಗೆ, ನಿರ್ದೇಶಕರಾಗಿ ಪ್ರಕಾಶ್‌ ರೈ ಪಾಲಿಗೆ ಪ್ರತಿಯೊಂದು ಚಿತ್ರವೂ ಒಂದು ಪ್ರಯೋಗವೇ. ಯಾವುದೋ ಸಿನಿಮಾದಲ್ಲಿನ ಅಥವಾ ಕೃತಿಯಲ್ಲಿನ ಒಂದು ಎಳೆ ಅವರನ್ನು ಕಾಡತೊಡಗಿದರೆ, ಆ ಎಳೆಗೆ ಸಂಬಂಧಿಸಿದಂತೆ ತನಗೂ ಹೇಳಲಿಕ್ಕೆ ಏನೋ ಇದೆ ಅನ್ನಿಸಿದರೆ ಅವರು ನಿರ್ದೇಶನದ ಯೋಚನೆ ಮಾಡುತ್ತಾರಂತೆ. 

‘ನಾನೂ ನನ್ನ ಕನಸು’, ‘ಒಗ್ಗರಣೆ’ ಹಾಗೂ ‘ಇದೊಳ್ಳೆ ರಾಮಾಯಣ’ – ಎಲ್ಲ ಚಿತ್ರಗಳಿಗೂ ಹೀಗೆ ಮತ್ತೆ ಯಾವುದೋ ಒಂದು ಸಿನಿಮಾದ ಕಥೆ ಪ್ರೇರಣೆ ಒದಗಿಸಿದೆ. ಹಾಗೆಂದು ರೈ ಅವರಿಗೆ ರೀಮೇಕ್‌ನಲ್ಲಿ ಖುಷಿಯಿಲ್ಲ. ಕಾಡಿದ ಸಂಗತಿಯೊಂದನ್ನು ತಮ್ಮ ಭಾವಕೋಶದಲ್ಲಿ ಬಟ್ಟಿ ಇಳಿಸಿ ಹೊಸದಾಗಿ ನಿರೂಪಿಸುವುದು ಅವರಿಗಿಷ್ಟದ ಕೆಲಸ. ಇದೊಂದು ರೀತಿಯಲ್ಲಿ ‘ಪುರುಷೋತ್ತಮ ರೂಪರೇಖೆ’ಯನ್ನು ಕೆತ್ತುವ ಸೃಜನಶೀಲ ಕೆಲಸ.

‘ಇದೊಳ್ಳೆ ರಾಮಾಯಣ’ ಕೂಡ ಪ್ರಕಾಶ್‌ ರೈ ಅವರೊಳಗೆ ಹೆಚ್ಚೂ ಕಡಿಮೆ ನಾಲ್ಕು ವರ್ಷಗಳ ಕಾಲ ಮಾಗಿ ರೂಪುಗೊಂಡ ಕಥೆ. ಈ ಅವಧಿಯಲ್ಲಿ ಅವರು ನೂರಾರು ಜನರಿಗೆ ಕಥೆ ಹೇಳಿದ್ದಾರೆ. ಕೇಳುಗರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗೆ, ಪ್ರತಿಯೊಬ್ಬರಿಗೆ ಕಥೆ ಹೇಳುವಾಗಲೂ ಅದು ರೈ ಅವರಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತಾ ಹೋಗಿದೆ. ಕೊನೆಗೆ, ಕಥೆಯನ್ನು ಸಿನಿಮಾ ರೂಪಕ್ಕೆ ತರುವ ಸಂದರ್ಭದಲ್ಲೂ ಅವರು ಚಿತ್ರತಂಡಕ್ಕೆ ಅನೇಕ ಸಲ ಕಥೆ ಹೇಳಿದ್ದಾರೆ. ಹಾಗೆಂದು ತಮ್ಮ ಕಥೆ ಯಥಾವತ್‌ ತೆರೆಗೆ ಬರಬೇಕೆಂಬ ಹಟವೇನೂ ಅವರಿಗಿಲ್ಲ.

‘ಕಥೆ ಹೇಳುವುದು ನಿರ್ದೇಶಕನ ಕೆಲಸವಾದರೂ – ನನ್ನ ಚಿತ್ರದಲ್ಲಿ ಪ್ರತಿಯೊಬ್ಬರೂ ಕಥೆ ಹೇಳುತ್ತಿರುತ್ತಾರೆ. ನಟ–ನಟಿ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ – ಹೀಗೆ, ಪ್ರತಿಯೊಬ್ಬರೂ ಒಂದೇ ಕಥೆಯನ್ನು ಬೇರೆ ಬೇರೆ ರೀತಿಗಳಲ್ಲಿ ಹೇಳುತ್ತಿರುತ್ತಾರೆ’ ಎನ್ನುತ್ತಾರೆ. ತಮ್ಮ ಮಾತಿಗೆ ಉದಾಹರಣೆಯಾಗಿ ಅವರು ಚಿತ್ರದ ಶೀರ್ಷಿಕೆಯ ವಿನ್ಯಾಸವನ್ನು ಸೂಚಿಸುತ್ತಾರೆ. ಚಿತ್ರದ ಕಥೆಯನ್ನು ಕಲಾವಿದ ಸುದೇಶ್‌ ಮಹಾನ್‌ ಅವರು ಈ ವಿನ್ಯಾಸದ ಮೂಲಕ ಹೇಳಿದ್ದಾರೆ ಎನ್ನುವುದು ರೈ ಅವರ ನಂಬಿಕೆ.

‘ಇದೊಳ್ಳೆ ರಾಮಾಯಣ’ ಚಿತ್ರದಲ್ಲಿ ಒಂದಷ್ಟು ವಿಶೇಷಗಳೂ ಇವೆ. ಮೊದಲನೆಯದು, ಅನೇಕ ಪ್ರತಿಭಾವಂತರು ಒಂದೆಡೆ ನೆರೆದಿರುವುದು. ಪ್ರಿಯಾಮಣಿ, ಜಯಂತ ಕಾಯ್ಕಿಣಿ, ಜೋಗಿ, ಇಳೆಯರಾಜ, ಶಶಿಧರ ಅಡಪ, ಶ್ರೀಕರ್ ಪ್ರಸಾದ್, ಅಚ್ಯುತಕುಮಾರ್ – ಹೀಗೆ ಹೊಸತಿಗಾಗಿ ಹಂಬಲಿಸುವ ಪ್ರತಿಭಾವಂತರ ದಂಡನ್ನೇ ಪ್ರಕಾಶ್ ರೈ ಕಲೆಹಾಕಿದ್ದಾರೆ. 

ಸಂಗೀತದ ಮಟ್ಟಿಗೆ ‘ಇದೊಳ್ಳೆ ರಾಮಾಯಣ’ ಭಿನ್ನವಾದ ಪ್ರಯೋಗ. ಚಿತ್ರೀಕರಣದ ಸಂದರ್ಭದಲ್ಲೇ ‘ಲೈವ್‌ ಮ್ಯೂಸಿಕ್‌’ ಬಳಸುವ, ವಿಶೇಷವಾಗಿ ಹಾರ್ಮೋನಿಯಂ ಬಳಸುವ ಪ್ರಯೋಗಕ್ಕೆ ಚಿತ್ರತಂಡ ಎದೆಗಿಟ್ಟಿದೆ. ಇದರಿಂದಾಗಿ, ಪರಿಸರದ ಸಹಜ ಧ್ವನಿಗಳು ಸೇರಿಕೊಂಡು ಸಿನಿಮಾದ ಸೌಂದರ್ಯ ಹೆಚ್ಚಾಗಿದೆಯಂತೆ. ಸಾಮಾನ್ಯವಾಗಿ ನಮ್ಮ ಸಿನಿಮಾಗಳಲ್ಲಾಗುವಂತೆ ಸಂದರ್ಭ ಸೂಚಿಸಿ, ರಾಗ ಸಂಯೋಜಿಸಿದ ನಂತರ ಗೀತೆ ಬರೆಸುವ ಸೂತ್ರವನ್ನೂ ಇಲ್ಲಿ ಅನುಸರಿಸಿಲ್ಲ. ಇದರ ಬದಲಿಗೆ ಸಿನಿಮಾ ಸಿದ್ಧವಾದ ನಂತರ ಹಾಡುಬರೆಸಲಾಗಿದೆ. ‘ಹರಿಕಥೆ ಧಾಟಿಯ ಗೀತೆಯ ಮೂಲಕವೂ ಜಯಂತ ಕಾಯ್ಕಿಣಿ’ ಸಿನಿಮಾದ ಕಥೆಯನ್ನು ಹೇಳಿದ್ದಾರೆ.

ಅ. 7ರಂದು, ದಸರೆಯ ಸಂದರ್ಭದಲ್ಲಿ ‘ಇದೊಳ್ಳೆ ರಾಮಾಯಣ’ ತೆರೆಕಾಣುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಈ ಸಿನಿಮಾ ರೂಪುಗೊಂಡಿದೆ. ಪ್ರಕಾಶ್‌ ರೈ ಅವರಂತೂ ಪ್ರೇಕ್ಷಕರನ್ನು ಕೂಡ ಕಥೆ ಕಟ್ಟುವ ಮಾಂತ್ರಿಕ ಕ್ಷಣಗಳ ಪಾಲುದಾರಿಕೆಯಲ್ಲಿ ಒಳಮಾಡಿಕೊಳ್ಳುವವರು. ತನ್ನನ್ನು ಕಾಡಿದ ಕಥೆ ಪ್ರೇಕ್ಷಕರನ್ನು ಹೇಗೆ ಕಾಡುತ್ತದೆ ಎನ್ನುವ ಬಗ್ಗೆ ಅವರಿಗೆ ಅಪಾರ ನಿರೀಕ್ಷೆಯಿದೆ. 

ಇದು ರೈ ರಾಮಾಯಣ!
ಬಹುಭಾಷಾ ನಟನಾಗಿ ಸದಾ ಬಿಜಿಯಾಗಿರುವ ನಟ ಪ್ರಕಾಶ್ ರೈ. ಚೆನ್ನೈ, ಹೈದರಾಬಾದ್, ಬೆಂಗಳೂರು ಎಂದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಲೇ ನಟನೆಯ ಆಚೆಗೂ ತಮ್ಮನ್ನು ತೊಡಗಿಸಿಕೊಳ್ಳುತ್ತ ‘ಒಳ್ಳೆಯ ನಿರ್ದೇಶಕ’ ಎಂದೂ ಗುರ್ತಿಸಿಕೊಂಡವರು. ಅವರ ನಿರ್ದೇಶನದ ಹೊಸ ಚಿತ್ರ ‘ಇದೊಳ್ಳೆ ರಾಮಾಯಣ’ ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸುವಂತಿದೆ.

ರಾಮನವಮಿ ಹಬ್ಬದ ಎರಡು ದಿನಗಳ ಅವಧಿಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆಯಂತೆ. ‘ಒಬ್ಬ ವ್ಯಕ್ತಿ ತನಗೆ ಗೊತ್ತಿಲ್ಲದೇ ಯಾವುದೋ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾನೆ. ಯಾರಿಗೂ ಗೊತ್ತಾಗದಂತೆ ಒಮ್ಮೆ ಆ ಇಕ್ಕಟ್ಟಿನಿಂದ ಪಾರಾಗಿಬಿಟ್ಟರೆ ಸಾಕು, ಮತ್ತೆ ಅತ್ತ ತಲೆ ಹಾಕುವುದಿಲ್ಲ ಎಂದುಕೊಳ್ಳುತ್ತಾನೆ.

ಅದರಿಂದ ಹೊರಬರುವ ಮುನ್ನವೇ ಎಲ್ಲರಿಗೂ ಗೊತ್ತಾದರೆ, ಜನರು ಜೀವನ ಪೂರ್ತಿ ಇವನು ಹೀಗೇ ಎಂದು ನಿರ್ಧರಿಸಿಬಿಡುತ್ತಾರೆ. ವ್ಯಕ್ತಿ ಆ ಸಂಕಷ್ಟದಿಂದ ಹೊರಬಂದ ನಂತರ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಕಥೆ’ ಎನ್ನುತ್ತಾರೆ ಪ್ರಕಾಶ್ ರೈ.

ಪ್ರಿಯಾಮಣಿ ಕಥಾನಾಯಕಿ. ಇಲ್ಲಿ ಅವರ ಪಾತ್ರಕ್ಕೆ ಹೆಸರೇ ಇಲ್ಲ. ‘ಚಿತ್ರದಲ್ಲಿ ಆ ಹೆಣ್ಣು ನದಿಯಂತೆ. ಆ ನದಿ ಪಾತ್ರದಲ್ಲಿ ಇರುವ ಮೂರು ಪಾತ್ರಗಳ ಬದುಕಿನಲ್ಲಿ ಒಂದಷ್ಟು ಬದಲಾವಣೆ ಆಗುತ್ತಿರುತ್ತವೆ’ ಎಂದು ಪ್ರಿಯಾಮಣಿ ಪಾತ್ರದ ಬಗ್ಗೆ ಪ್ರಕಾಶ್ ರೈ ವಿವರಿಸಿದರು. ತನ್ನ ಪಾಲಿಗೆ ಇದು ವಿಶೇಷ ಚಿತ್ರ ಎನ್ನುವ ಪ್ರಿಯಾಮಣಿ ಪ್ರಕಾಶ್ ರೈ ಜತೆ ಕೆಲಸ ಮಾಡುವ ಅವಕಾಶಕ್ಕಾಗಿ ಈ ಸಿನಿಮಾ ಒಪ್ಪಿಕೊಂಡಿದ್ದಾರೆ.

ಮಲಯಾಳಂನ ‘ಶಟರ್’ ಚಿತ್ರದ ಕಥೆಯಿಂದ ಪ್ರೇರಣೆ ಪಡೆದಿದ್ದರೂ ತಮ್ಮದೇ ಶೈಲಿಯಲ್ಲಿ ಹೊಸ ರೂಪದಲ್ಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ ಪ್ರಕಾಶ್ ರೈ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣ ಆಗಿರುವ ಚಿತ್ರ ಅಕ್ಟೋಬರ್ 7ರಂದು ಬಿಡುಗಡೆ ಆಗಲಿದೆ. ಪ್ರಕಾಶ್ ರೈ, ಜೋಗಿ ಸಂಭಾಷಣೆ, ಮುಖೇಶ್ ಛಾಯಾಗ್ರಹಣ, ಶಶಿಧರ್ ಅಡಪ ಕಲಾ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ ಇದೆ. ನಿರ್ಮಾಣದಲ್ಲಿ ಪ್ರಕಾಶ್ ರೈ ಅವರಿಗೆ ರಾಮ್‌ಜಿ ಸಾಥ್ ನೀಡಿದ್ದಾರೆ. ಹೊಸ ವಿನ್ಯಾಸದಲ್ಲಿ ಗಮನ ಸೆಳೆಯುವ ಪೋಸ್ಟರ್‌ಗಳನ್ನು ಕೋಲ್ಕತ್ತಾದ ಶಿಫ್ರಾ ಅವರು ಡಿಸೈನ್ ಮಾಡಿದ್ದಾರೆ.

ಚಿತ್ರದ ಮೇಕಿಂಗ್ ವೀಡಿಯೊ, ಟೀಸರ್ ಹಾಗೂ ಹಾಡಿನ ಬಿಡುಗಡೆ ಸಂಭ್ರಮಕ್ಕೆ ಚಿತ್ರತಂಡ ಸಾಕ್ಷಿಯಾಗಿತ್ತು. ಚಿತ್ರದಲ್ಲಿ ಒಂದೇ ಒಂದು ಹಾಡು ಇದೆ. ಜಯಂತ ಕಾಯ್ಕಿಣಿ ಅವರು ಬರೆದ ಸಾಹಿತ್ಯಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜ ಸ್ವರ ಸಂಯೋಜಿಸಿ ಹಾಡಿದ್ದಾರೆ. ‘ಡಿ ಬೀಟ್ಸ್’ ಸಂಸ್ಥೆಯ ಮೂಲಕ ಹಾಡುಗಳನ್ನು ಹೊರತರಲಾಗಿದೆ. ಯೋಗರಾಜ್ ಭಟ್, ಚಿತ್ರದಲ್ಲಿ ನಟಿಸಿರುವ ಅಚ್ಯುತಕುಮಾರ್, ಅರವಿಂದ, ರಮೇಶ್ ಪಂಡಿತ್ ಮಾತನಾಡಿದರು.

ಇದೊಳ್ಳೆ ರಾಮಾಯಣ ಚಿತ್ರದ ಹೊಸ ಟ್ರೇಲರ್‌

 www.youtube.com/watch?v=Iig4cLytZEw

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT