ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500ನೇ ಟೆಸ್ಟ್‌: ಭಾರತಕ್ಕೆ ಜಯದ ಹಾರ

ಕ್ರಿಕೆಟ್‌: ಅಶ್ವಿನ್ ಕೈಚಳಕಕ್ಕೆ ಕಮರಿದ ಕಿವೀಸ್ ಹೋರಾಟ, ವಿಜೃಂಭಿಸಿದ ಕೊಹ್ಲಿ ಪಡೆ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾನ್ಪುರ: ಭಾರತದ 500ನೇ ಟೆಸ್ಟ್ ಸಂಭ್ರಮಕ್ಕೆ  ರವಿಚಂದ್ರನ್ ಅಶ್ವಿನ್ ಗೆಲುವಿನ ಮೆರುಗು ತುಂಬಿದರು. ಗ್ರೀನ್ ಪಾರ್ಕ್ ಅಂಗಳದಲ್ಲಿ ದಿಟ್ಟ ಹೋರಾಟ ನಡೆಸಿದ ನ್ಯೂಜಿಲೆಂಡ್ ಎದುರು ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಜೇಬಿಗಿಳಿಸಿಕೊಂಡ ಅಶ್ವಿನ್ ಭಾರತ ತಂಡಕ್ಕೆ 197 ರನ್‌ಗಳ ಜಯದ ಕಾಣಿಕೆ ನೀಡಿದರು. ಭಾರತಕ್ಕೆ ಇದು 130ನೇ ಜಯ ಮತ್ತು ನ್ಯೂಜಿಲೆಂಡ್ ಎದುರು 19ನೇ ಗೆಲುವು.

ಭಾನುವಾರ ಕಿವೀಸ್ ತಂಡಕ್ಕೆ  ಭಾರತವು 434 ರನ್‌ಗಳ ಗುರಿ ನೀಡಿತ್ತು. ದಿನದಾಟದ ಕೊನೆಗೆ 4 ವಿಕೆಟ್‌ ಕಳೆದುಕೊಂಡು 93 ರನ್ ಗಳಿಸಿತ್ತು. ಸೋಮವಾರದ ಬೆಳಗಿನ ಅವಧಿಯಲ್ಲಿಯೇ  ಆರು ವಿಕೆಟ್‌ಗಳನ್ನು ಪಡೆದು ಜಯಶಾಲಿಯಾಗುವ ಕೊಹ್ಲಿ ಬಳಗದ ನಿರೀಕ್ಷೆ ಈಡೇರಲಿಲ್ಲ.

ಇದಕ್ಕೆ ಕಾರಣವಾಗಿದ್ದು ಪ್ರವಾಸಿ  ತಂಡದ ಲೂಕ್ ರೊಂಚಿ (80; 120ಎ, 9ಬೌಂ, 1ಸಿ)  ಮತ್ತು ಮಿಷೆಲ್ ಸ್ಯಾಂಟನರ್ (71; 179ಎ, 7ಬೌಂ, 2ಸಿ) ಅವರ ಛಲದ ಆಟ.  ಇದರಿಂದಾಗಿ ಊಟದ ನಂತರದ 25 ನಿಮಿಷಗಳವರೆಗೂ ಆಟ ಲಂಬಿಸಿತು. ಈ ಅವಧಿಯಲ್ಲಿ ಒಟ್ಟು 50.3 ಓವರ್‌ಗಳನ್ನು ಆಡಿದ ‘ಬ್ಲ್ಯಾಕ್ ಕ್ಯಾಪ್ಸ್‌’ ತಂಡವು 236 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕರ ಸನ್ಮಾನದೊಂದಿಗೆ ಆರಂಭವಾಗಿದ್ದ ಐತಿಹಾಸಿಕ ಪಂದ್ಯವು ನಾಲ್ಕೂವರೆ ದಿನಗಳವರೆಗೆ ಕ್ರಿಕೆಟ್ ರಸದೌತಣ ನೀಡಿ ಇತಿಹಾಸದ ಪುಟದಲ್ಲಿ ದಾಖಲಾಯಿತು.

ಸ್ಪರ್ಧಾತ್ಮಕ ಪಿಚ್‌ನಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದ ಕಿವೀಸ್ ಬಳಗಕ್ಕೆ ಆತಿಥೇಯ ಬಳಗದಲ್ಲಿದ್ದ ಕೇವಲ ಇಬ್ಬರು ಮೋಡಿಗಾರರು ತಿರುಗೇಟು ನೀಡಿದರು. ಒಟ್ಟು ಪತನವಾದ 35 ವಿಕೆಟ್‌ಗಳಲ್ಲಿ 26 ಸ್ಪಿನ್ನರ್‌ಗಳ ಪಾಲಾದವು. ಹತ್ತು ಅರ್ಧಶತಕಗಳು (ಭಾರತದ ಆಟಗಾರರು ಆರು ಮತ್ತು ಕಿವೀಸ್ ನಾಲ್ಕು) ದಾಖಲಾದ ಪಂದ್ಯದಲ್ಲಿ  1139 ರನ್‌ಗಳು ಹರಿದುಬಂದವು. ಆದರೆ, ಒಂದೂ ಶತಕ ದಾಖಲಾಗಲಿಲ್ಲ!

ಮುದ ನೀಡಿದ ಚೆಂಡು–ಬ್ಯಾಟ್ ಪೈಪೋಟಿ
ಪಂದ್ಯದ ನಾಲ್ಕನೇ ದಿನ ಸಂಜೆ ಸುದ್ದಿಗೋಷ್ಠಿಯಲ್ಲಿ ಕಿವೀಸ್ ಬೌಲಿಂಗ್ ಕೋಚ್ ಶೇನ್ ಜಗರಮನ್ ಅವರು, ‘ಕೊನೆಯ ಹಂತದವರೆಗೂ ಹೋರಾಟ ಮಾಡುತ್ತೇವೆ. ಹತಾಶೆಯಿಂದ ಕೈಚೆಲ್ಲುವುದಿಲ್ಲ. ನಗುನಗುತ್ತಲೇ ಆಡುತ್ತೇವೆ’ ಎಂದು ಹೇಳಿದ್ದರು. 

ನಿನ್ನೆ ದಿನದಾಟದ ಅಂತ್ಯಕ್ಕೆ 38 ರನ್ ಗಳಿಸಿದ್ದ ಲೂಕ್ ರೊಂಚಿ ಮತ್ತು 8 ರನ್ ಹೊಡೆದಿದ್ದ ಸ್ಯಾಂಟನರ್ ಅವರು ಜಗರಮನ್ ಮಾತುಗಳನ್ನು ಬಹುಪಾಲು ನಿಜಗೊಳಿಸಿದರು.

ತಂಡವನ್ನು ಸೋಲಿನಿಂದ ತಪ್ಪಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಎಸೆತಗಳನ್ನು ಚಾಣಾಕ್ಷತೆಯಿಂದ ಎದುರಿಸಿದರು.

ಮೋಡ ಕವಿದ ವಾತಾವರಣದಲ್ಲಿ ನಡೆದ ಕೊನೆಯ ದಿನದ ಮೊದಲ ಅವಧಿಯಲ್ಲಿ ಭಾರತದ ಸ್ಪಿನ್ ಜೋಡಿ ಮತ್ತು ರೊಂಚಿ ನಡುವಣ  ಪೈಪೋಟಿ ತಾರಕಕ್ಕೇರಿತು. ಅಶ್ವಿನ್ ಅವರ ಕೇರಂ ಬಾಲ್‌ಗಳಿಗೂ ಬಲಗೈ ಬ್ಯಾಟ್ಸ್‌ಮನ್ ರೊಂಚಿ ತಕ್ಕ ಪ್ರತ್ಯುತ್ತರ ನೀಡಿದರು. ದೂಳು ಹಾರುತ್ತಿದ್ದ ಪಿಚ್‌ನಲ್ಲಿ ಜಡೇಜ ಹಾಕುತ್ತಿದ್ದ ನೇರ ಎಸೆತಗಳು ಹೆಚ್ಚು ಎತ್ತರ ಪುಟಿಯುತ್ತಿರಲಿಲ್ಲ. ಅವುಗಳಿಗೂ  ತಕ್ಕ ಗೌರವ ನೀಡಿದರು. ಎಲ್‌ಬಿಡಬ್ಲ್ಯು ಆಗುವ ಅಪಾಯವನ್ನು ತಪ್ಪಿಸಿಕೊಳ್ಳಲು ರಕ್ಷಣಾತ್ಮಕ ಪಾದಚಲನೆಯ ಮೊರೆ ಹೋದರು.

ಇಬ್ಬರು ಸ್ಲಿಪ್, ಶಾರ್ಟ್‌ಲೆಗ್, ಪಾಯಿಂಟ್, ಕವರ್ ಫೀಲ್ಡರ್‌ಗಳು ಸೇರಿದಂತೆ 30 ಯಾರ್ಡ್ ವೃತ್ತದೊಳಗೆ ಒಟ್ಟು ಎಂಟು ಕ್ಷೇತ್ರರಕ್ಷಕರು ಜಮಾಯಿಸಿದ್ದರೂ ಏಕಾಗ್ರತೆಯಿಂದ ಆಡಿ ಅವಕಾಶ ಸಿಕ್ಕಾಗ ಮಾತ್ರ ರನ್ ಪಡೆಯುತ್ತಿದ್ದರು.

ರಾಂಚಿ ತಾವೆದುರಿಸಿದ  80ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು.  ಇನ್ನೊಂದೆಡೆ ಸ್ಯಾಂಟನರ್ ಶಾಂತಚಿತ್ತದಿಂದ ನಿಧಾನವಾಗಿ ಆಡುತ್ತಿದ್ದರು. ಇಬ್ಬರೂ ಸೇರಿ ಬೌಲರ್‌ಗಳ ತಾಳ್ಮೆಗೆ ಪರೀಕ್ಷೆ ಒಡ್ಡಿದರು. ತಂಡದ ಮೊತ್ತವನ್ನು 150ರ  ಗಡಿ ದಾಟಿಸಿದರು. ಇನಿಂಗ್ಸ್‌ನ 58ನೇ ಓವರ್‌ನಲ್ಲಿ ಜಡೇಜ ತಂತ್ರಕ್ಕೆ ರಾಂಚಿ ಆಘಾತ ಅನುಭವಿಸಿದರು.

ಆ ಓವರ್‌ನ ಮೂರು ಎಸೆತಗಳನ್ನು ನೇರವಾಗಿ ಹಾಕಿದ್ದ ಜಡೇಜ ನಾಲ್ಕನೇ ಎಸೆತವನ್ನು ಟಾಪ್‌ಸ್ಪಿನ್ ಮಾಡಿದರು. ಚೆಂಡಿನ ತಿರುವನ್ನು ಅರಿಯದ ರಾಂಚಿ ಲಾಂಗ್‌ ಆನ್‌ಗೆ ಹೊಡೆಯಲು ಯತ್ನಿಸಿದರು.  ಅವರ ಲೆಕ್ಕಾಚಾರ ಕೈಕೊಟ್ಟಿತು. ಗಾಳಿಯಲ್ಲಿ ಎದ್ದ ಚೆಂಡನ್ನು ಪಾಯಿಂಟ್‌ನಲ್ಲಿದ್ದ  ಆಶ್ವಿನ್ ಸ್ವಲ್ಪ ಹಿಂದೆ ಓಡಿ ಹೋಗಿ ಹಿಡಿದರು. ಅದರೊಂದಿಗೆ 102 ರನ್‌ಗಳ ಜೊತೆಯಾಟ ಮುರಿಯಿತು.

ನಂತರ ಸ್ಯಾಂಟನರ್ ರನ್‌ ಗಳಿಕೆಯ ವೇಗ ಹೆಚ್ಚಿಸಿದರು. ಅವರ ಜೊತೆ ಸೇರಿದ ಜಾನ್ ವಾಟ್ಲಿಂಗ್ ವಿಕೆಟ್ ಪತನಗೊಳ್ಳದಂತೆ ಎಚ್ಚರಿಕೆಯ        ಆಟವಾಡಲು ಪ್ರಯತ್ನಿಸಿದರು. ಸ್ಪಿನ್ ಎದುರು ಆಡುವ ಸಾಮರ್ಥ್ಯ ಇರುವ ವಾಟ್ಲಿಂಗ್ ಹೆಜ್ಜೆ ಊರುವ ಪ್ರಯತ್ನ ಮಾಡಿದರು.

ಜಡೇಜ ಬದಲಿಗೆ ದಾಳಿಗಿಳಿದ ಮಧ್ಯಮವೇಗಿ ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ಮೂಲಕ  ವಾಟ್ಲಿಂಗ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.ಇನ್ನೊಂದು ಓವರ್‌ನಲ್ಲಿ ಮಾರ್ಕ್ ಕ್ರೇಗ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಅವರಿಗೆ ವಿಕೆಟ್ ಲಭಿಸಿರಲಿಲ್ಲ.

ಇತ್ತ ಏಕಾಂಗಿ ಹೋರಾಟ ನಡೆಸುತ್ತಿದ್ದ ಸ್ಯಾಂಟನರ್ ಅರ್ಧಶತಕ ಪೂರೈಸಿದರು. ಬೌಲರ್‌ಗಳನ್ನು ಪೀಡಿಸಲು ತಮ್ಮ ಎಲ್ಲ ಸಾಮರ್ಥ್ಯವನ್ನೂ ವಿನಿಯೋಗಿಸಿದರು.

80ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎರಡು ವಿಕೆಟ್‌ಗಳನ್ನು ಗಳಿಸಿದ ಅಶ್ವಿನ್ ಸಂಭ್ರಮಿಸಿದರು. ಪಂದ್ಯದಲ್ಲಿ ಒಟ್ಟು ಆರು ವಿಕೆಟ್ ಮತ್ತು 92 ರನ್ ಗಳಿಸಿದ ಜಡೇಜ ಪಂದ್ರಶ್ರೇಷ್ಠ ಗೌರವ ಪಡೆದರು.

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಕಾನ್ಪುರದಲ್ಲಿ ಸಾಧಿಸಿದ 197 ರನ್‌ಗಳ  ಹಾಗೂ ಮೂರನೇ ಹೆಚ್ಚು ಅಂತರದ ಗೆಲುವು ಇದಾಗಿದೆ.
ಕಿವೀಸ್ ತಂಡದ ವಿರುದ್ಧ 1967–68 ರಲ್ಲಿ 272 ರನ್ ಮತ್ತು 1976–77ರಲ್ಲಿ ಚೆನ್ನೈನಲ್ಲಿ 216 ರನ್‌ಗಳಿಂದ ಭಾರತ ಗೆದ್ದಿತ್ತು.

ಸೋಲಿಲ್ಲದ ಸತತ 12ನೇ ಪಂದ್ಯ ಭಾರತ ತಂಡವು ಕಳೆದ ನಾಲ್ಕು ವರ್ಷಗಳಲ್ಲಿ ತವರು ನೆಲದಲ್ಲಿ ಆಡಿದ ಸತತ 12 ಟೆಸ್ಟ್‌ಗಳಲ್ಲಿ ಸೋತಿಲ್ಲ. ಒಟ್ಟು 10 ಟೆಸ್ಟ್ ಪಂದ್ಯಗಳಲ್ಲಿ ಗೆದ್ದು, ಎರಡರಲ್ಲಿ ಡ್ರಾ ಮಾಡಿಕೊಂಡಿದೆ. 

2012ರಲ್ಲಿ ಕೋಲ್ಕತ್ತದಲ್ಲಿ ಇಂಗ್ಲೆಂಡ್ ಎದುರು ಸೋತ ನಂತರ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿ ನಿರಾಸೆ ಕಂಡಿಲ್ಲ. 1977 ರಿಂದ 1980ರ ಅವಧಿಯಲ್ಲಿ ಸತತ 20 ಟೆಸ್ಟ್ ಮತ್ತು 1960–164ರ ಅವಧಿಯಲ್ಲಿ ಸತತ 16 ಟೆಸ್ಟ್‌ಗಳಲ್ಲಿ ಭಾರತ ಸೋತಿರಲಿಲ್ಲ.

*
ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಅಶ್ವಿನ್ ಶ್ರೇಷ್ಠ ಬೌಲರ್. ಅವರು ನಮ್ಮ ತಂಡದ ಶಕ್ತಿಯಾಗಿದ್ದಾರೆ. ಅಶ್ವಿನ್‌ ಇನ್ನಷ್ಟು ಉತ್ತಮ ಸಾಧನೆಗಳನ್ನು ಮಾಡಿ ತಂಡದ ಗೆಲುವಿಗೆ ಕಾಣಿಕೆ ನೀಡಲಿ.
–ವಿರಾಟ್‌ ಕೊಹ್ಲಿ
ಭಾರತ ತಂಡದ ನಾಯಕ

*
ಉಪಖಂಡದಲ್ಲಿ ಆಡುವಾಗ  ಸ್ಪಿನ್ ಬೌಲಿಂಗ್ ಎದುರಿಸಲು ಎಷ್ಟು ಸಿದ್ಧತೆ ಮಾಡಿ ಕೊಂಡು ಬಂದರೂ ಕಡಿಮೆಯೇ. ಈ ಪಂದ್ಯದಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ.
–ಕೇನ್ ವಿಲಿಯಮ್ಸನ್,
ನ್ಯೂಜಿಲೆಂಡ್ ತಂಡದ ನಾಯಕ

ಸ್ಕೋರ್‌ಕಾರ್ಡ್‌
ಭಾರತ ಮೊದಲ ಇನಿಂಗ್ಸ್  318 ,ನ್ಯೂಜಿಲೆಂಡ್‌ ಪ್ರಥಮ ಇನಿಂಗ್ಸ್  262
ಭಾರತ  ದ್ವಿತೀಯ ಇನಿಂಗ್ಸ್  5 ಕ್ಕೆ 377 ಡಿಕ್ಲೇರ್ಡ್‌, ನ್ಯೂಜಿಲೆಂಡ್‌ ದ್ವಿತೀಯ ಇನಿಂಗ್ಸ್ 236
(87.3 ಓವರ್‌ಗಳಲ್ಲಿ)

ಲೂಕ್ ರೊಂಚಿ ಸಿ ಅಶ್ವಿನ್ ಬಿ ರವೀಂದ್ರ ಜಡೇಜ  80
ಮಿಷೆಲ್ ಸ್ಯಾಂಟನರ್ ಸಿ ರೋಹಿತ್ ಶರ್ಮಾ ಬಿ ಅಶ್ವಿನ್  71
ಜಾನ್ ವಾಟ್ಲಿಂಗ್ ಎಲ್‌ಬಿಡಬ್ಲ್ಯು ಬಿ ಮೊಹಮ್ಮದ್ ಶಮಿ  18
ಮಾರ್ಕ್ ಕ್ರೇಗ್ ಬಿ ಮೊಹಮ್ಮದ್ ಶಮಿ  01
ಈಶ್ ಸೋಧಿ ಬಿ ಅಶ್ವಿನ್  17
ಟ್ರೆಂಟ್ ಬೌಲ್ಟ್ ಔಟಾಗದೆ  02
ನೀಲ್ ವಾಗ್ನರ್ ಎಲ್‌ಬಿಡಬ್ಲ್ಯು ಬಿ ಅಶ್ವಿನ್  00
ಇತರೆ: (ಲೆಗ್‌ಬೈ 2, ನೋಬಾಲ್ 1)  03

ವಿಕೆಟ್‌ ಪತನ: 5–158 (ರೊಂಚಿ; 57.4), 6–194 (ವಾಟ್ಲಿಂಗ್; 67.6), 7–196 (ಕ್ರೇಗ್; 69.1), 8–223 (ಸ್ಯಾಂಟನರ್; 79.2), 9–236 (ಸೋಧಿ; 83.3), 10–236 (ವಾಗ್ನರ್; 87.3)

ಬೌಲಿಂಗ್‌: ಮೊಹಮ್ಮದ್ ಶಮಿ 8–2–18-–2, ಆರ್. ಅಶ್ವಿನ್ 35.3–5–132–6, ರವೀಂದ್ರ ಜಡೇಜ 34–17–58–1 (ನೋಬಾಲ್1), ಉಮೇಶ್ ಯಾದವ್ 8–1–23–0, ಮುರಳಿ ವಿಜಯ್ 2–0–3–0

ಫಲಿತಾಂಶ: ಭಾರತಕ್ಕೆ 197 ರನ್‌ಗಳ ಜಯ. ಸರಣಿಯಲ್ಲಿ 1–0 ರಲ್ಲಿ ಮುನ್ನಡೆ. ಪಂದ್ಯಶ್ರೇಷ್ಠ: ರವೀಂದ್ರ ಜಡೇಜ (ಭಾರತ)

ಮುಂದಿನ ಪಂದ್ಯ: ಸೆ. 30 ರಿಂದ ಅ.4, ಸ್ಥಳ: ಈಡನ್ ಗಾರ್ಡನ್, ಕೋಲ್ಕತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT