ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಚರ್ಚೆ: ಹಿಲರಿ ಮೇಲುಗೈ

ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌-–ಹಿಲರಿ ನಡುವೆ ಬಿರುಸಿನ ಸಂವಾದ
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಹೆಂಪ್‌ಸ್ಟೆಡ್‌ (ನ್ಯೂಯಾರ್ಕ್‌): ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್‌ 8ರಂದು ನಡೆಯಲಿರುವ ಚುನಾವಣೆಯಲ್ಲಿ ಡೆಮೊಕ್ರಾಟ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಮತ್ತು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ನಡುವೆ ಸೋಮವಾರ ನಡೆದ ಮೊದಲನೇ ಚರ್ಚೆಯಲ್ಲಿ  ಹಿಲರಿ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ.

ನೀತಿ ನಿರೂಪಣೆ ಬಗ್ಗೆ ಸಂವಾದ ನಡೆಯಬೇಕಿತ್ತು. ಆದರೆ ಚರ್ಚೆಯಲ್ಲಿ ವೈಯಕ್ತಿಕ ಆರೋಪ ಪ್ರತ್ಯಾರೋಪಗಳೇ ಮಹತ್ವ ಪಡೆದವು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹಿಲರಿ ಅವರು ವಿದೇಶಾಂಗ ಕಾರ್ಯದರ್ಶಿ ಮುಂತಾದ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರ ಅವಧಿಯಲ್ಲಿ ಆಗಿರುವ ಪ್ರಯೋಜನ ಅತ್ಯಲ್ಲ. ಹಾಗಾಗಿ ಅವರ ಅನುಭವಕ್ಕೆ ಬೆಲೆ ಇಲ್ಲ. ಅದಲ್ಲದೆ ಅಧ್ಯಕ್ಷ ಹುದ್ದೆಗೆ ಬೇಕಾದ ಚಹರೆ ಅವರಿಗಿಲ್ಲ ಎಂದು ಟ್ರಂಪ್‌ ಟೀಕಿಸಿದರು. ನಂತರ, ಹಾಗಲ್ಲ, ಅಮೆರಿಕದ ಸೇನೆಯ ಮುಖ್ಯಸ್ಥರಿಗೆ ಬೇಕಾದ ಸ್ಥೈರ್ಯ ಇಲ್ಲ ಎಂದು ತಿದ್ದಿಕೊಂಡರು.

ಟಿ.ವಿ. ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದ ಟ್ರಂಪ್‌ ಅವರು ಆರಂಭದಲ್ಲಿ ಪ್ರಬಲರಾಗಿರುವಂತೆ ಕಂಡರು. ಆದರೆ ನಂತರ ಅವರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳತೊಡಗಿದರು. ಅವರ ವಾದ ಸರಣಿಯೂ ಸುಸಂಬದ್ಧವಾಗಿ ಇರಲಿಲ್ಲ.

ತೀವ್ರ ಜ್ವರದಿಂದ ಬಳಲಿರುವ ಮತ್ತು ಇತ್ತೀಚಿನ ಸಮೀಕ್ಷೆಗಳಲ್ಲಿ ಹಿನ್ನಡೆ ಕಂಡಿರುವ ಹಿಲರಿ ಅವರಿಗೆ ಚರ್ಚೆಯಲ್ಲಿ ಮೇಲುಗೈ ಸಾಧಿಸಲೇಬೇಕಾದ ಒತ್ತಡ ಇತ್ತು. ಹಾಗಾಗಿ ಅವರು ಸಾಕಷ್ಟು ಸಿದ್ಧತೆಯೊಂದಿಗೆ ಚರ್ಚೆಗೆ ಬಂದಿದ್ದರು.

ಟ್ರಂಪ್‌ ಅವರ ಮನೋಧರ್ಮ, ವ್ಯಾಪಾರ ಚಾತುರ್ಯ ಮತ್ತು ಜ್ಞಾನದ ಬಗ್ಗೆಯೇ ಮತ್ತೆ ಮತ್ತೆ ಪ್ರಸ್ತಾಪ ಮಾಡಿದರು.

ಹಿಲರಿ ಅವರು ಅಮೆರಿಕದ ಪ್ರಥಮ ಮಹಿಳೆ, ಸೆನೆಟರ್‌ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದರೂ ಸಾಧನೆ ಮಾತ್ರ ಶೂನ್ಯ ಎಂದು ಟ್ರಂಪ್‌ ಹಂಗಿಸಿದರು. ಅಧ್ಯಕ್ಷ ಬರಾಕ್‌ ಒಬಾಮ ಅವರ ಹೊರಗುತ್ತಿಗೆ ಮತ್ತು ಅತಿ ನಿರ್ಬಂಧಗಳ ನೀತಿಯಿಂದಾಗಿ ಮಧ್ಯಮ ವರ್ಗದ ಇಕ್ಕಟ್ಟಿಗೆ ಸಿಲುಕಿದೆ. ಅದೇ ನೀತಿಯನ್ನು ಹಿಲರಿ ಮುಂದುವರಿಸಲಿದ್ದಾರೆ ಎಂದು ಹೇಳಿದರು.

ಅಮೆರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ ಒಬಾಮ ಅವರು ಅಮೆರಿಕದಲ್ಲಿ ಹುಟ್ಟಿದವರಲ್ಲ ಎಂದು ಹೇಳುವ ಮೂಲಕ ಟ್ರಂಪ್‌ ಅವರು ’ಜನಾಂಗೀಯವಾದಿ ಸುಳ್ಳನ್ನು’ ಪ್ರಚಾರ ಮಾಡುತ್ತಿದ್ದಾರೆ ಎಂದು ಹಿಲರಿ ವಾದಿಸಿದರು.

ಬಹಿರಂಗವಾಗದ ತೆರಿಗೆ ಮಾಹಿತಿ: ಇನ್ನಷ್ಟು ಇರುಸು ಮುರುಸು ಉಂಟು ಮಾಡುವುದಕ್ಕಾಗಿ ಟ್ರಂಪ್‌ ಅವರು ತಾವು ಪಾವತಿಸಿರುವ ತೆರಿಗೆ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ ಎಂದು ಹಿಲರಿ ಆರೋಪಿಸಿದರು. ತಾವು ತೆರಿಗೆಯನ್ನೇ ಪಾವತಿಸಿಲ್ಲ ಅಥವಾ ತಾವು ಹೇಳಿಕೊಂಡಷ್ಟು ಶ್ರೀಮಂತ ಅಲ್ಲ ಎಂಬುದು ಜನರಿಗೆ ತಿಳಿಯುವುದು ಬೇಡ ಎಂಬ ಕಾರಣಕ್ಕೆ ಅವರು ತೆರಿಗೆ ವಿವರ ಬಹಿರಂಗಪಡಿಸುತ್ತಿಲ್ಲ ಎಂದು ಹಿಲರಿ ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಟ್ರಂಪ್‌, ಒಬ್ಬ ಉದ್ಯಮಿಯಾಗಿ ಕಡಿಮೆ ತೆರಿಗೆ ಪಾವತಿಸುವುದು ಮುಖ್ಯ. ಅದು ತಮ್ಮ ಚಾತುರ್ಯವನ್ನು ತೋರುತ್ತದೆ ಎಂದರು. ತಮಗೆ ಅಪಾರವಾದ ಆದಾಯ ಇದೆ. ದೇಶವನ್ನು ಮುನ್ನಡೆ ಸುವ ವ್ಯಕ್ತಿಗೆ ಹಣದ ಬಗ್ಗೆ ಅರಿವಿರುವುದು ಬಹಳ ಮುಖ್ಯ ಎಂದೂ ಟ್ರಂಪ್‌ ಪ್ರತಿಪಾದಿಸಿದರು.

ಮಹಿಳೆಯರ ಬಗ್ಗೆ ಕೀಳು ಭಾವನೆ:  ಟ್ರಂಪ್‌ ಅವರು ಸೌಂದರ್ಯ ಸ್ಪರ್ಧೆ ಗಳನ್ನು ಇಷ್ಟಪಡುತ್ತಾರೆ. ಅವುಗಳನ್ನು ಬೆಂಬಲಿಸುತ್ತಾರೆ ಮತ್ತು ಅಂತಹ ಸ್ಪರ್ಧೆಗಳು ನಡೆಯುವಲ್ಲಿ ಇರುತ್ತಾರೆ. ಆದರೆ ಸ್ಪರ್ಧೆಯ ನಂತರ ಅದರಲ್ಲಿ ಗೆದ್ದವರನ್ನು ‘ಮಿಸ್‌ ಪಿಗ್ಗಿ’ (ಹಂದಿ) ಎಂದು ಜರೆಯುತ್ತಾರೆ ಎಂದು ಹಿಲರಿ ಹೇಳಿದರು.

(1996ರಲ್ಲಿ ಭುವನ ಸುಂದರಿ ಯಾಗಿ ಆಯ್ಕೆಯಾಗಿದ್ದ ವೆನೆಜುವೆಲಾದ ಅಲೀಸಿಯಾ ಮಚಾದೊ ಅವರನ್ನು ನಂತರ ಟ್ರಂಪ್‌ ‘ಮಿಸ್‌ ಪಿಗ್ಗಿ’ ಎಂದು ಕರೆದು ವಿವಾದ ಸೃಷ್ಟಿಸಿದ್ದರು).

ಚರ್ಚೆಯ ಸಂದರ್ಭದಲ್ಲಿ ಏನೋ ಹೇಳುವುದಾಗಿ ಟ್ರಂಪ್‌ ಸೂಚನೆ ನೀಡಿದರು. ಆದರೆ ಮಧ್ಯದಲ್ಲಿಯೇ ಅದನ್ನು ತುಂಡರಿಸಿದರು.

ಹಿಲರಿ ಅವರ ಗಂಡ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರ ಲೈಂಗಿಕ ಹಗರಣಗಳನ್ನು ಪ್ರಸ್ತಾಪಿಸಲು ಬಯಸಿದ್ದೆ. ಇದಕ್ಕೆ ತಿರುಗೇಟು ನೀಡುವುದು ಹಿಲರಿಗೆ ಸಾಧ್ಯವಾಗುತ್ತಿರ ಲಿಲ್ಲ ಎಂದು ಚರ್ಚೆಯ ನಂತರ ಟ್ರಂಪ್‌ ಹೇಳಿದರು.

ಸಭಿಕರ ನಡುವೆ ಬಿಲ್‌ ಕ್ಲಿಂಟನ್‌ ಅವರು ತಮ್ಮ ಮಗಳು ಚೆಲ್ಸಿಯಾ ಜತೆಗೆ ಕುಳಿತಿದ್ದರು. ಹಾಗಾಗಿ ಲೈಂಗಿಕ ಹಗರಣ ಪ್ರಸ್ತಾಪಿಸುವುದು ಸರಿಯಲ್ಲ ಅನಿಸಿತು ಎಂದು ತಿಳಿಸಿದರು.

ಹಿಲರಿಗೆ ಶೇ 62 ಮತ
ಚರ್ಚೆಯ ಬಗ್ಗೆ ಸಿಎನ್‌ಎನ್‌/ಒಆರ್‌ಸಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 62ರಷ್ಟು ಜನ ಹಿಲರಿ ಪರ ಮತ ಹಾಕಿದ್ದಾರೆ. ಶೇ 27ರಷ್ಟು ಜನ ಮಾತ್ರ ಟ್ರಂಪ್‌ ಪರವಾಗಿದ್ದಾರೆ.

* 90 ನಿಮಿಷದ ಚರ್ಚೆ: ಆರು ಭಾಗಗಳಾಗಿ ವಿಂಗಡಣೆ, ಪ್ರತಿ ಭಾಗಕ್ಕೆ 15 ನಿಮಿಷ ಸಮಯ

*  ಮೊದಲನೇ ಚರ್ಚೆಯ ವಿಷಯಗಳು: ಅಮೆರಿಕದ ಸಮೃದ್ಧಿ, ಅಮೆರಿಕದ ಮುಂದಿನ ಗುರಿ ಮತ್ತು ಸುರಕ್ಷತೆ
* ಚರ್ಚೆ ಪ್ರಾಯೋಜಕತ್ವ: ಅಧ್ಯಕ್ಷೀಯ ಚರ್ಚೆಗಳ ಆಯೋಗ (ಇದು ಪಕ್ಷಾತೀತ, ಲಾಭರಹಿತ ಸಂಸ್ಥೆ)
* ಕಾರ್ಯಕ್ರಮ ನಿರೂಪಣೆ: ಎನ್‌ಬಿಸಿ ನೈಟ್ಲಿ ನ್ಯೂಸ್‌ನ ಲೆಸ್ಟರ್‌ ಹಾಲ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT