ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಆಲ್‌ರೌಂಡರ್‌ಗಳ ಸುಗ್ಗಿ ಕಾಲ

ಕಪಿಲ್ ಸ್ಥಾನಕ್ಕೆ ಅಶ್ವಿನ್–ಜಡೇಜ ನಡುವೆ ಪೈಪೋಟಿ
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾನ್ಪುರ: ಒಬ್ಬ ಆಲ್‌ರೌಂಡರ್ ಇಬ್ಬರು ಆಟಗಾರರಿಗೆ ಸಮನಾಗಬಲ್ಲ ಎಂಬ ಮಾತು ಕ್ರಿಕೆಟ್ ವಲಯದಲ್ಲಿದೆ. ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದು, ಶತಕ ಅಥವಾ ಅರ್ಧಶತಕ ಗಳಿಸುವ ಆಟಗಾರ ಇಬ್ಬರಿಗೆ ಸಮ ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಅದೇ ಆಟಗಾರ ಫೀಲ್ಡಿಂಗ್‌ನಲ್ಲಿಯೂ 20–30 ರನ್‌ಗಳನ್ನು ಅದು ತಂಡದ ಯಶಸ್ಸಿಗೆ ಮಹತ್ವದ ಕಾಣಿಕೆಯಾಗುತ್ತದೆ. 

ಸದ್ಯ ವಿರಾಟ್‌ ಕೊಹ್ಲಿ ನಾಯಕತ್ವದ ಬಳಗದಲ್ಲಿ ಇಬ್ಬರು ಆಲ್‌ರೌಂಡರ್‌ಗಳು ಬೇರೆ ದೇಶಗಳ ಆಟಗಾರರ ನಿದ್ದೆ ಕೆಡಿಸಿದ್ದಾರೆ. ಸ್ಪಿನ್ ಬೌಲರ್‌ಗಳಾಗಿ ತಂಡಕ್ಕೆ ಕಾಲಿಟ್ಟು ‘ಸವ್ಯಸಾಚಿ’ಗಳಾಗಿ ಬೆಳೆಯುತ್ತಿರುವ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರೇ ಆ ಇಬ್ಬರು ಆಟಗಾರರು.

ಸೋಮವಾರ ಮುಕ್ತಾಯವಾದ ಕಾನ್ಪುರ ಟೆಸ್ಟ್ ಸೇರಿದಂತೆ ಕಳೆದ 12 ಟೆಸ್ಟ್‌ಗಳಲ್ಲಿ (ತವರಿನಲ್ಲಿ ಐದು ಮತ್ತು ವಿದೇಶದಲ್ಲಿ ಏಳು) ಭಾರತವು ಒಂದರಲ್ಲಿಯೂ ಸೋತಿಲ್ಲ. ಒಟ್ಟು 10 ಟೆಸ್ಟ್‌ಗಳಲ್ಲಿ ಜಯ ಗಳಿಸಿದೆ. ಎರಡು ಪಂದ್ಯಗಳು ಮಳೆಯಿಂದಾಗಿ ಡ್ರಾ ಆಗಿದ್ದವು. ಈ ಸಾಧನೆಯಲ್ಲಿ  ಇಬ್ಬರೂ ಆಟಗಾರರ ಕಾಣಿಕೆ ಇದೆ.  2012ರಿಂದ ಈಚೆಗೆ ಭಾರತದಲ್ಲಿ ಮತ್ತೆ ಆಲ್‌ ರೌಂಡರ್‌ಗಳು ಪ್ರವರ್ಧಮಾನಕ್ಕೆ ಬರಲು ಆರಂಭಿಸಿದ  ನಿದರ್ಶನವಾಗಿಯೂ ಇವರಿಬ್ಬರು ಇದ್ದಾರೆ

ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ಮಹೇಂದ್ರಸಿಂಗ್ ದೋನಿ ಅವರಂತಹ ತಾರಾ ವರ್ಚಸ್ಸಿನ ಕ್ರಿಕೆಟಿಗರು ಏಕಕಾಲದಲ್ಲಿ ತಂಡದಲ್ಲಿ ಆಡುತ್ತಿದ್ದಾಗ ಆಲ್‌ರೌಂಡರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರಲಿಲ್ಲ. 

ಯಾರಾದರೂ ಗಾಯಗೊಂಡಾಗ ರಾಬಿನ್ ಸಿಂಗ್, ಇರ್ಫಾನ್ ಪಠಾಣ್ ಮತ್ತು ಯುವರಾಜ್ ಸಿಂಗ್ ಅವರಲ್ಲಿ ಒಬ್ಬರಿಗೆ ಬುಲಾವ್ ಬರುತ್ತಿತ್ತು. ಆದರೆ, ದೀರ್ಘ ಕಾಲದವರೆಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಇವರಿಗೆ ಸಾಧ್ಯವಾಗಿರಲಿಲ್ಲ. ಆರು ಅಥವಾ ಏಳು ವಿಕೆಟ್‌ಗಳು ಪತನವಾದರೆ ನಂತರದ ಆಟಗಾರರನ್ನು ಬಾಲಂಗೋಚಿ ಬ್ಯಾಟ್ಸ್‌ಮನ್ ಎಂದು ಕರೆಯುವ ರೂಢಿಯಿತ್ತು. ಆ ಸಂದರ್ಭದಲ್ಲಿ ಪರಿಣತ ಬೌಲರ್‌ಗಳಾದ ಜಹೀರ್ ಖಾನ್, ಜೆ. ಶ್ರೀನಾಥ್, ಅನಿಲ್ ಕುಂಬ್ಳೆ, ವೆಂಕಟಪತಿ ರಾಜು ಅವರಿಗೆ ಕೊನೆಯಲ್ಲಿ ಬ್ಯಾಟಿಂಗ್‌ಗೆ ಸಿಗುತ್ತಿದ್ದ ಅವಕಾಶ ಕಡಿಮೆ. 

ಆದರೆ, ಈ ಎಲ್ಲ ತಾರೆಗಳು ಒಬ್ಬರ ಹಿಂದೆ ಒಬ್ಬರಂತೆ ನಿವೃತ್ತಿ ಘೋಷಿಸಿದಾಗ ಟೆಸ್ಟ್‌ ತಂಡ ಭಣಗುಟ್ಟಿತು. ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಯಾಗಿ ನೆಲೆಯೂರಲು ಬ್ಯಾಟ್ಸ್‌ಮನ್‌ಗಳು ಈಗಲೂ ಪರದಾಡುತ್ತಿದ್ದಾರೆ.

ನ್ಯೂಜಿಲೆಂಡ್ ಎದುರಿನ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ ಅವರು ಉತ್ತಮ ಆರಂಭ ನೀಡಿದ್ದರು. ಆದರೆ, ಸ್ವತ ವಿರಾಟ್, ಅಜಿಂಕ್ಯ ರಹಾನೆ ಮತ್ತು ವೃದ್ಧಿಮಾನ್ ಸಹಾ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಕೂಡ ವೈಫಲ್ಯ ಅನು ಭವಿಸಿದ್ದರು.

ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ, ಎರಡೂ ಇನಿಂಗ್ಸ್‌ನಲ್ಲಿ ಜಡೇಜ (ಔಟಾಗದೆ 42 ಮತ್ತು ಔಟಾಗದೆ 50) ಮಿಂಚಿದ್ದರು. ಮೊದಲ ಇನಿಂಗ್ಸ್‌ನಲ್ಲಿ 250 ಮೊತ್ತದೊಳಗೆ ಆಲ್ಔಟ್ ಆಗುವ ಅಪಾಯ ಎದುರಿಸಿದ್ದ ತಂಡವು 318 ರನ್‌ಗಳ ಮೊತ್ತ ಗಳಿಸಲು ಜಡೇಜ ಮತ್ತು ಅಶ್ವಿನ್ (40 ರನ್) ಜೊತೆಯಾಟ ಕಾರಣವಾಗಿತ್ತು. 

‘ತಂಡವು ಸಂಕಷ್ಟದಲ್ಲಿದ್ದಾಗ ಪಾರು ಮಾಡಲು ಆಡುವ ಅಶ್ವಿನ್ ಮತ್ತು ಜಡೇಜ ಅಮೂಲ್ಯ ಆಟಗಾರರು. ಅವರು ತಂಡದ ಅಗತ್ಯಕ್ಕೆ ತಕ್ಕಂತೆ ಆಡುತ್ತಾರೆ. ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಶ್ವಿನ್ ಅಗ್ರ ನಾಲ್ಕರಲ್ಲಿ ಅರಾಮವಾಗಿ ಸ್ಥಾನ ಪಡೆಯುತ್ತಾರೆ’ ಎಂದು ನಾಯಕ ಕೊಹ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದು ಇವರಿಬ್ಬರ ಮಹತ್ವವನ್ನು ಎತ್ತಿ ತೋರಿಸುತ್ತದೆ. 

ಪ್ರೇರಣೆ: ಭಾರತದ ಎಂಬತ್ತನಾಲ್ಕು ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹಲವಾರು ದಾಖಲೆ ಗಳನ್ನು ಮಾಡಿರುವ ಹಲವು ದಿಗ್ಗಜರ ಹೆಸರುಗಳು ಬಹಳಷ್ಟು ಕಾಣುತ್ತವೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಆಲ್‌ರೌಂಡರ್‌ಗಳ ಸಂಖ್ಯೆ ಕಡಿಮೆ. 1946ರ ನಂತರದ ಒಂದು ದಶಕದಲ್ಲಿ ಮಿಂಚಿದ ಎಡಗೈ ಸ್ಪಿನ್ನರ್ ವಿನೂ ಮಂಕಡ್ ಅಪ್ಪಟ ಆಲ್‌ರೌಂಡರ್‌.

1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಇದುವರೆಗೂ ಭಾರತದ ಶ್ರೇಷ್ಠ ಆಲ್‌ರೌಂಡರ್ ಪಟ್ಟ ಕಾಯ್ದುಕೊಂಡಿದ್ದಾರೆ. ಮೋಹಿಂದರ್ ಅಮರನಾಥ್, ಮನೋಜ್ ಪ್ರಭಾಕರ್,  ರವಿಶಾಸ್ತ್ರಿ ಅವರಿಗೂ ಕಪಿಲ್ ದಾಖಲೆ ಮುಟ್ಟಲು ಸಾಧ್ಯವಾಗಲಿಲ್ಲ. 2011ರ ವಿಶ್ವಕಪ್ ವಿಜೇತ ರೂವಾರಿ ಯುವರಾಜ್ ಸಿಂಗ್ ಟೆಸ್ಟ್‌ಗೆ ಮರಳಲು ಇನ್ನೂ ಬಹಳ ಶ್ರಮಪಡಬೇಕು.

ಆದರೆ, ಈಗ ಅಶ್ವಿನ್ ಇರುವ ಫಾರ್ಮ್‌ ನೋಡಿದರೆ ಅವರು ಕಪಿಲ್ ದಾಖಲೆಯನ್ನು ಸರಿಗಟ್ಟುವ ನಿರೀಕ್ಷೆ ಮೂಡಿದೆ. ಕೇವಲ 37 ಪಂದ್ಯಗಳಲ್ಲಿ 203 ವಿಕೆಟ್‌ಗಳನ್ನು ಗಳಿಸಿರುವ ನಾಲ್ಕು ಶತಕಗಳಿರುವ 1479 ರನ್‌ಗಳನ್ನು ಗಳಿಸಿದ್ದಾರೆ. ಅದೂ 7 ಅಥವಾ 8ನೇ ಕ್ರಮಾಂಕದಲ್ಲಿ ಬಂದು ಈ ಸಾಧನೆ ಮಾಡಿದ್ದಾರೆ. ವಿಂಡೀಸ್ ಪ್ರವಾಸ ದಲ್ಲಿಯೂ ಅವರು ಶತಕ ಹೊಡೆದಿದ್ದರು.

ಜಡೇಜ ರಾಷ್ಟ್ರೀಯ ತಂಡಕ್ಕೆ ಕಾಲಿಡುವ ಮುನ್ನ ಸೌರಾಷ್ಟ್ರ ತಂಡಕ್ಕೆ ಆಲ್‌ರೌಂಡರ್ ಆಗಿದ್ದರು. ನಂತರ ಏಕದಿನ ಮತ್ತು ಟ್ವೆಂಟಿ–20ಯಲ್ಲಿ ಮಿಂಚಿದರು. ಆದರೆ, ಟೆಸ್ಟ್‌ನಲ್ಲಿ ಸ್ಥಾನ ಪಡೆಯಲು ಏಳು–ಬೀಳುಗಳನ್ನು ಕಾಣಬೇಕಾಯಿತು. ಈಗ ಆಲ್‌ರೌಂಡರ್‌ ಆಗಿ ಉಳಿಸಿಕೊಂಡಿದ್ದಾರೆ.

ಇವರಿಬ್ಬರ ಪ್ರೇರಣೆಯಿಂದಾಗಿ ಎಲ್ಲ ರಾಜ್ಯಗಳ ತಂಡದಲ್ಲಿಯೂ ಈಗ ಪ್ರತಿಭಾವಂತ ಆಟಗಾರರು ಕಾಣಸಿಗುತ್ತಾರೆ. ಸ್ಟುವರ್ಟ್‌ ಬಿನ್ನಿ, ಅಕ್ಷರ್ ಪಟೇಲ್, ಪವನ್ ನೇಗಿ, ಶ್ರೇಯಸ್ ಗೋಪಾಲ್, ಹಾರ್ದಿಕ್ ಪಾಂಡ್ಯ, ರಿಶಿ ಧವನ್ ಅವರು ಅದರಲ್ಲಿ ಪ್ರಮುಖರು. ಇದು ಭಾರತ  ಭವಿಷ್ಯದ ದೃಷ್ಟಿಯಿಂದ ಸುವರ್ಣ ಕಾಲವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT