ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್‌: ನೀವೂ ಸಲಹೆ ನೀಡಿ

ಜನಾಭಿಪ್ರಾಯ ಸಂಗ್ರಹಕ್ಕೆ ಅಭಿಯಾನ
Last Updated 3 ಅಕ್ಟೋಬರ್ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಪಾಲಿಕೆಯ 2017–18ನೇ ಸಾಲಿನ ಆಯವ್ಯಯ ಹೇಗಿರಬೇಕು? ಯಾವ ಅಂಶಗಳಿಗೆ  ಆದ್ಯತೆ ನೀಡಬೇಕು ಎಂಬ ಬಗ್ಗೆ ನೀವೇನಾದರೂ ಸಲಹೆ ನೀಡುತ್ತೀರಾ? ಹಾಗಿದ್ದರೆ, ನಿಮ್ಮ ಸಲಹೆಯನ್ನು ಬಿಬಿಎಂಪಿಗೆ ತಲುಪಿಸುವುದಕ್ಕೆ ವೇದಿಕೆ ಸಿದ್ಧವಾಗಿದೆ.

ಬಿಬಿಎಂಪಿ ಬಜೆಟ್‌ಗೆ ನಾಗರಿಕರ ಸಲಹೆಗಳನ್ನು ಸಂಗ್ರಹಿಸುವ ಸಲುವಾಗಿ ಜನಾಗ್ರಹ ಸಂಸ್ಥೆಯು ‘ಮೈ ಸಿಟಿ ಮೈ ಬಜೆಟ್‌–2016’ ಅಭಿಯಾನವನ್ನು ಹಮ್ಮಿಕೊಂಡಿದೆ. ಈ  ಅಭಿಯಾನಕ್ಕೆ ಮೇಯರ್‌ ಜಿ.ಪದ್ಮಾವತಿ ಅವರು ಸೋಮವಾರ ಚಾಲನೆ ನೀಡಿದರು.

‘ಈ ಹಿಂದೆಯೂ  ನಾಗರಿಕರು,  ಸರ್ಕಾರೇತರ ಸಂಘಟನೆಗಳಿಂದ ಸಲಹೆ  ಪಡೆದೇ ಬಜೆಟ್‌ ರೂಪಿಸುತ್ತಿದ್ದೆವು. ಬಜೆಟ್‌ಗೆ ಮುನ್ನ ಮಾಜಿ ಮೇಯರ್‌ಗಳು,  ಬಿಬಿಎಂಪಿಯ ಹಿರಿಯ ಸದಸ್ಯರು ಮತ್ತು ಇತರ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆಯುತ್ತೇವೆ. ಅವುಗಳನ್ನು ಕ್ರೋಡೀಕರಿಸಿ, ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇವೆ. ಅವರಿಂದ ಸಲಹೆ ಪಡೆದು ಬಜೆಟ್‌ಗೆ ಅಂತಿಮ ರೂಪ ನೀಡುತ್ತೇವೆ. ಮೈ ಸಿಟಿ ಮೈ ಬಜೆಟ್‌ (ಎಂಬಿಎಂಸಿ) ಕಾರ್ಯಕ್ರಮ ನಾಗರಿಕರಿಂದ ಸಲಹೆ ಪಡೆಯುವ ಪ್ರಕ್ರಿಯೆಯನ್ನು  ಇನ್ನಷ್ಟು ಸುಲಭಗೊಳಿಸಲಿದೆ’ ಎಂದು ಮೇಯರ್‌ ತಿಳಿಸಿದರು.

‘ಮೈ ಸಿಟಿ ಮೈ ಬಜೆಟ್‌ ಅಭಿಯಾನದ ಮೂಲಕ ನಾಗರಿಕರು ನೀಡುವ ಸಲಹೆಗಳನ್ನು ಈಡೇರಿಸುವ ಸಲುವಾಗಿಯೇ 2017–18ರ ಬಜೆಟ್‌ನಲ್ಲಿ ₹ 5 ಕೋಟಿ ಮೊತ್ತವನ್ನು ಕಾದಿರಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಜನರು ವಾಸಿಸುವ ಆಸುಪಾಸಿನ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ  ಅವರ ಅಭಿಮತದಂತೆಯೇ ಆಗಬೇಕು. ಇದಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ಬಿಬಿಎಂಪಿ ಸಹಯೋಗದಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದೇವೆ’ ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸ್ವಪ್ನಾ ಕರೀಮ್‌ ತಿಳಿಸಿದರು.

‘ಬಜೆಟ್‌ ಬಗ್ಗೆ ಜನರ ಅಭಿಪ್ರಾಯಗಳನ್ನು ಡಿಸೆಂಬರ್‌ನಲ್ಲಿ ಬಿಬಿಎಂಪಿಗೆ ತಲುಪಿಸುತ್ತೇವೆ. ಬಳಿಕ ನಾವು ಸುಮ್ಮನೆ ಕೂರುವುದಿಲ್ಲ. ಬಜೆಟ್‌ನಲ್ಲಿ ಯಾವೆಲ್ಲ ಸಲಹೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂಬ ಬಗ್ಗೆಯೂ ಪರಿಶೀಲನೆ ಮಾಡಲಿದ್ದೇವೆ’ ಎಂದರು.

‘2017ರಲ್ಲಿ ವಾರ್ಡ್‌ ಮಟ್ಟದಲ್ಲಿ ಸಭೆಗಳನ್ನು ನಡೆಸುವ ಮೂಲಕ ಬಜೆಟ್‌ ಕುರಿತು ಸಾರ್ವಜನಿಕರ ಸಮ್ಮುಖದಲ್ಲೇ ಪರಾಮರ್ಶೆ ಮಾಡುತ್ತೇವೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಾರ್ವಜನಿಕ ಯೋಜನೆಗಳ ಅನುಷ್ಠಾನದ ಪರಿಶೀಲಿಸಲು ಸಭೆ ನಡೆಸಲಿದ್ದೇವೆ. ಈ ಸಭೆಯಲ್ಲಿ ಬಿಬಿಎಂಪಿ  ಸದಸ್ಯರು, ಅಧಿಕಾರಿಗಳು ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ ಮತ್ತಿತರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.

‘ಯೋಜನೆಗಳ ಸ್ಥಿತಿಗತಿಯ ಬಗ್ಗೆ ನಾಗರಿಕರಿಗೆ, ಪಾಲಿಕೆ ಸದಸ್ಯರಿಗೆ, ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡುವ  ಕೆಲಸವನ್ನು ಜನಾಗ್ರಹ ಮಾಡಲಿದೆ. ನಾಗರಿಕರು ಸೂಚಿಸಿದ ಯೋಜನೆಗಳಿಗೆ ಅನುದಾನ ಒದಗಿಸಲಾಗಿದೆಯೇ?  ಹಣ ಪಾವತಿ ಆಗಿದೆಯೇ, ಕಾಮಗಾರಿಯ ಗುಣಮಟ್ಟ ಹೇಗಿದೆ ಎಂಬ ಬಗ್ಗೆಯೂ ಚರ್ಚಿಸಲಾಗುತ್ತದೆ’ ಎಂದರು.

‘ಕಳೆದ ವರ್ಷವೂ ನಾಗರಿಕರ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು. ನಾವು ಒಟ್ಟು 74,371 ನಾಗರಿಕರನ್ನು ಸಂಪರ್ಕಿಸಿ 6,037 ಅಭಿಪ್ರಾಯ ಸಂಗ್ರಹಿಸಿದ್ದೆವು. ಈ ಪೈಕಿ ಶೇಕಡಾ 24ರಷ್ಟು ಸಲಹೆಗಳನ್ನು ಬಿಬಿಎಂಪಿ ಪರಿಗಣಿಸಿತ್ತು’ ಎಂದು ಅವರು ತಿಳಿಸಿದರು.

ನಾಗರಿಕ ಸಂಘಟನೆಗಳು ಬಜೆಟ್‌ ಬಗ್ಗೆ ಕಾರ್ಯಕ್ರಮ ಆಯೋಜಿಸಲು ಬಯಸಿದಲ್ಲಿ mycitymybudget@ichangemycity.com ಮೂಲಕ ಸಂಪರ್ಕಿಸಬಹುದು.
ಸಂಪರ್ಕ: 9845320409
*

ಜನಾಭಿಪ್ರಾಯ ಸಂಗ್ರಹ ಹೇಗೆ?
* ಎಂಬಿಎಂಸಿ ತಂಡವು ಬಡಾವಣೆ ನಿವಾಸಿಗಳ ಸಂಸ್ಥೆಗಳು, ಶಾಲಾ ಕಾಲೇಜು, ನಗರದ ಬಡವರು ಹೆಚ್ಚಾಗಿ ವಾಸಿಸುವ ಪ್ರದೇಶಗಳು, ಕಾರ್ಮಿಕರ ಗುಂಪುಗಳು ಹಾಗೂ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಬಜೆಟ್‌ ಬಗ್ಗೆ  ನಾಗರಿಕರ ಅಭಿಪ್ರಾಯ ಸಂಗ್ರಹಿಸುತ್ತದೆ. ಅಲ್ಲಿ ನಿಗದಿತ ನಮೂನೆಯನ್ನು ಭರ್ತಿ ಮಾಡುವ ಮೂಲಕ ನಾಗರಿಕರು ಬಜೆಟ್‌ಗೆ ಸಲಹೆ ನೀಡಬಹುದು

* ಅಭಿಪ್ರಾಯ ಸಂಗ್ರಹಿಸಲೆಂದೇ ವಿಶೇಷ ವಾಹನವನ್ನು ರೂಪಿಸಲಾಗಿದ್ದು, ಅದು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತದೆ.

* ಸಾರ್ವಜನಿಕರು ichangemycity.com  ಮೂಲಕವೂ ಸಲಹೆಗಳನ್ನು ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಇತರರು ನೀಡುವ ಸಲಹೆಯನ್ನು ಬೆಂಬಲಿಸಿ ಸಹಿ ಹಾಕುವುದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ.
*
ಮೈ ಸಿಟಿ ಮೈ ಬಜೆಟ್‌ ಒಂದು ಉತ್ತಮ ಕಾರ್ಯಕ್ರಮ. ಇದರಿಂದಾಗಿ ಯಾವ ಸೌಕರ್ಯ ಬೇಕೆಂದು ಹೇಳಿಕೊಳ್ಳುವ ಅವಕಾಶ ನಾಗರಿಕರಿಗೂ ಸಿಗಲಿದೆ. ಇದನ್ನು ಜನ ಬಳಸಿಕೊಳ್ಳಬೇಕು
ಚಿತ್ರಾ ವೆಂಕಟೇಶ್‌
ಕುಮಾರಪಾರ್ಕ್‌ (ಪಶ್ಚಿಮ) ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ
*
ಅಂಕಿ–ಅಂಶ
60 ದಿನ ನಡೆಯಲಿದೆ ಅಭಿಯಾನ
2500 ಕಿ.ಮೀ ಸಂಚರಿಸಲಿದೆ ‘ಮೈ ಸಿಟಿ ಮೈ ಬಜೆಟ್‌’ ಬಸ್‌
250 ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT