ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೆ ಬೇಕು ಈ ಹೋಲಿಕೆ?

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಅಕ್ಟೋಬರ್‌ ಕೊನೆಯ ವಾರ ಕರ್ನಾಟಕ ಮತ್ತು ದೆಹಲಿ ತಂಡಗಳು ಕೋಲ್ಕತ್ತದಲ್ಲಿ ರಣಜಿ ಪಂದ್ಯವಾಡಿದವು. ಈ  ಪಂದ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ದೆಹಲಿ ತಂಡದ ಕೋಚ್‌ ಕೆ.ಪಿ. ಭಾಸ್ಕರ್‌ ‘ನಮ್ಮದು ಅಮೋಘ ತಂಡ. ಎಲ್ಲಾ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದ್ದರು.
 
ಈ ಹೇಳಿಕೆ ನೀಡಿ ಎರಡೂವರೆ ದಿನ ಕಳೆದಿರಲಿಲ್ಲ. ಆಗಲೇ ದೆಹಲಿ ತಂಡ ಇನಿಂಗ್ಸ್‌ ಮತ್ತು 160 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.ಪಂದ್ಯದ ಬಳಿಕ ಭಾಸ್ಕರ್‌ ‘ನಮ್ಮ ತಂಡದವರು ಅಭ್ಯಾಸವೇ ಮಾಡಿಲ್ಲ. ಅಭ್ಯಾಸ ಮಾಡದೇ ಹೋದರೆ ಗೆಲುವಿನ ನಿರೀಕ್ಷೆಯಾದರೂ ಹೇಗೆ’ ಎಂದು ಟೀಕಾ ಪ್ರಹಾರ ನಡೆಸಿದ್ದರು.
 
ಈ ಎಲ್ಲಾ ಪ್ರಸಂಗಗಳು ಮುಗಿದ ಬಳಿಕ ದೆಹಲಿ ತಂಡದ ಭರವಸೆಯ ಬ್ಯಾಟ್ಸ್‌ಮನ್‌ ರಿಷಬ್‌ ಪಂತ್ ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗದ ಶತಕ ಹೊಡೆದು ಗಮನ ಸೆಳೆದರು. ಆಗ ಮತ್ತೆ ಮಾತನಾಡಿದ್ದ ಭಾಸ್ಕರ್‌ ‘ರಿಷಭ್‌ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಎನ್ನುವುದು ಗೊತ್ತಿತ್ತು. ಭಾರತ ತಂಡಕ್ಕೆ ಒಬ್ಬ ಸಮರ್ಥ ವಿಕೆಟ್‌ ಕೀಪರ್‌ ಈಗ ಹುಟ್ಟಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ. 
 
ಇದು ಒಂದು ಉದಾಹರಣೆಯಷ್ಟೇ. ಒಬ್ಬ ಕ್ರಿಕೆಟಿಗ ಉತ್ತಮ ಪ್ರದರ್ಶನ ನೀಡಿದಾಗ ಅತಿಯಾಗಿ ಹೊಗಳುವುದು, ವೈಫಲ್ಯ ಕಂಡಾಗ ಅತಿಯಾಗಿ ಟೀಕಾ ಪ್ರಹಾರ ನಡೆಸುವುದು ಈಗ ಸಹಜವಾಗಿ ಬಿಟ್ಟಿದೆ. ಕರ್ನಾಟಕದ ಕೆ.ಎಲ್‌. ರಾಹುಲ್‌  ಸೊಬಗಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಾಗ ಅವರನ್ನು ರಾಹುಲ್‌ ದ್ರಾವಿಡ್‌ ಅವರ ಆಟಕ್ಕೆ ಹೋಲಿಸಲಾಗಿತ್ತು. ಸಚಿನ್‌ ತೆಂಡೂಲ್ಕರ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ಅಂಚಿನಲ್ಲಿದ್ದಾಗ ಮತ್ತೊಬ್ಬ ಮುಂಬೈಕರ್‌ ಎಂದು ರೋಹಿತ್‌ ಶರ್ಮಾ ಅವರನ್ನು ಬಿಂಬಿಸಲಾಗಿತ್ತು. ಈಗ ವಿರಾಟ್‌ ಕೊಹ್ಲಿಯವರನ್ನು ಸಚಿನ್‌ಗೆ ಹೋಲಿಸಲಾಗುತ್ತಿದೆ. ಯಾಕೆ ಹೀಗೆ?
 
ರಿಷಬ್ ಪಂತ್ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಹೋದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ದೆಹಲಿಯ ಬ್ಯಾಟ್ಸ್‌ಮನ್ ಒಟ್ಟು ಏಳು (ಜಾರ್ಖಂಡ್‌ ಎದುರಿನ ಪಂದ್ಯದ ಅಂತ್ಯಕ್ಕೆ) ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ ನಾಲ್ಕು ಶತಕ ಮತ್ತು ಎರಡು ಅರ್ಧಶತಕ ಒಳಗೊಂಡಂತೆ ಒಟ್ಟು 907 ರನ್ ಗಳಿಸಿದ್ದಾರೆ. ವಿಕೆಟ್‌ ಕೀಪಿಂಗ್‌ನಲ್ಲಿಯೂ ಚುರುಕುತನ ತೋರುತ್ತಿದ್ದಾರೆ. ಆದ್ದರಿಂದ ರಿಷಬ್‌ ಅವರನ್ನು ಭಾರತ ತಂಡದ ಭರವಸೆಯ ವಿಕೆಟ್‌ ಕೀಪರ್‌ ಎಂದು ಬಿಂಬಿಸಲಾಗುತ್ತಿದೆ. ಮಹೇಂದ್ರ ಸಿಂಗ್ ದೋನಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ವಿಕೆಟ್‌ ಕೀಪರ್ ಸ್ಥಾನಕ್ಕೆ ಯಾರು ಸೂಕ್ತ ಎನ್ನುವ ಚರ್ಚೆ ನಡೆಯುತ್ತಿದೆ. ಈಗ ವೃದ್ಧಿಮಾನ್‌ ಸಹಾ ಈ ಸ್ಥಾನ ತುಂಬುತ್ತಿದ್ದಾರೆ. ಆದರೆ ಬೇರೆ ಆಟಗಾರರು ಟೆಸ್ಟ್‌ ತಂಡದ ವಿಕೆಟ್‌ ಕೀಪರ್‌ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ.
 
ದೇಶಿಯ ಟೂರ್ನಿಗಳಲ್ಲಿ ಭರವಸೆ ಮೂಡಿಸಿರುವ ವಿಕೆಟ್‌ ಕೀಪರ್‌ಗಳಾದ ಪಾರ್ಥಿವ್‌ ಪಟೇಲ್‌, ದಿನೇಶ್‌ ಕಾರ್ತಿಕ್‌, ಸಹಾ ಮತ್ತು ನಮನ್‌ ಓಜಾ ಅವರ ಸಾಲಿಗೆ ಈಗ ಪಂತ್‌ ಸೇರ್ಪಡೆಯಾಗಿದ್ದಾರೆ.
 
ರಿಷಭ್‌ ಪ್ರತಿಭಾನ್ವಿತ
ಮೂಲತಃ ಉತ್ತರಾಖಂಡದವರಾದ ರಿಷಬ್‌ ರಾಜೇಂದ್ರ ಪಂತ್‌ 12 ವರ್ಷದವರಾಗಿದ್ದಾಗ ಕ್ರಿಕೆಟ್‌ ಆಡುವ ಉದ್ದೇಶದಿಂದಾಗಿಯೇ ದೆಹಲಿಗೆ ಸ್ಥಳಾಂತರಗೊಂಡರು.
ಭಾರತದ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರ ಸಲಹೆಗಾರರಾಗಿರುವ ತಾರಕ್‌ ಸಿನ್ಹಾ ಬಳಿ ತರಬೇತಿ ಪಡೆದಿರುವ ರಿಷಬ್‌ ನಂತರ ರಾಜಸ್ತಾನಕ್ಕೆ ತೆರಳಿ ಜಿಲ್ಲಾ ಮತ್ತು ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ಆಡಿದ್ದರು. ಹೋದ ವರ್ಷ ಬಾಂಗ್ಲಾದೇಶದ ಆತಿಥ್ಯದಲ್ಲಿ ಜರುಗಿದ 19 ವರ್ಷದ ಒಳಗಿನವರ ವಿಶ್ವಕಪ್‌ನಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಹೊಡೆದು ದಾಖಲೆ ಮಾಡಿದ್ದರು. ಹೋದ ತಿಂಗಳು ಮಹಾರಾಷ್ಟ್ರ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ 308 ರನ್‌ ಗಳಿಸಿ ಈ ಸಾಧನೆ ಮಾಡಿದ ಭಾರತದ ಮೂರನೇ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 
 
ಈ ಎಲ್ಲಾ ಸಾಧನೆಗಳಿಗಿಂತ ಅವರು ಗಮನ ಸೆಳೆದಿದ್ದು ಪ್ರಥಮ ದರ್ಜೆಯ ಮಾದರಿಯಲ್ಲಿ ವೇಗವಾಗಿ ಶತಕ ಹೊಡೆದಾಗ. ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿ ರಾಜೇಶ್‌ ಬೋಹ್ರಾ ಮತ್ತು ವಿ.ಬಿ. ಚಂದ್ರಶೇಖರ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ 56 ಎಸೆತಗಳಲ್ಲಿ ಶತಕ ಹೊಡೆದಿದ್ದರು.
 
ಏಕೆ ಈ ಹೋಲಿಕೆ
ರಿಷಬ್‌ ಅವರಲ್ಲಿನ ಸಾಮರ್ಥ್ಯದ ಬಗ್ಗೆ ಮೊದಲು ಹೆಚ್ಚು ಜನಕ್ಕೆ ಗೊತ್ತಿರಲಿಲ್ಲ. ಅಷ್ಟೇ ಏಕೆ ದೆಹಲಿ ತಂಡದ ಆಯ್ಕೆ ಸಮಿತಿಯವರೂ ಗುರುತಿಸಿರಲಿಲ್ಲ. ಆದ್ದರಿಂದ ಅವರು ಪ್ರತಿಭೆಯಿದ್ದರೂ ಅವಕಾಶಕ್ಕಾಗಿ ವರ್ಷಗಟ್ಟಲೇ ಕಾಯಬೇಕಾಯಿತು. ಹೋದ ವರ್ಷ ಎರಡು ರಣಜಿ ಪಂದ್ಯಗಳಲ್ಲಷ್ಟೇ ಆಡಿದ್ದರು. ಈಗ ಎಲ್ಲಾ ಪಂದ್ಯಗಳಲ್ಲಿಯೂ ಅವಕಾಶ ಸಿಕ್ಕಿದೆ, ಇನ್ನು ರಣಜಿ ಟೂರ್ನಿಯ ಲೀಗ್‌ ಹಂತದ ಪಂದ್ಯಗಳೇ ಮುಗಿದಿಲ್ಲ, ಆಗಲೇ ರಿಷಬ್‌ ಭಾರತ ತಂಡಕ್ಕೆ ಸಮರ್ಥ ವಿಕೆಟ್‌ ಕೀಪರ್‌ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
 
19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿ ಮತ್ತು ದೇಶಿಯ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನದಿಂದ ರಿಷಬ್‌ ಅವರಿಗೆ ಐಪಿಎಲ್ ತಂಡದಲ್ಲಿ ಅವಕಾಶ ಲಭಿಸಿತು. ರಾಷ್ಟ್ರೀಯ ತಂಡದಲ್ಲಿ ಆಡದ 204 ಆಟಗಾರರು ಹೋದ ವರ್ಷದ ಐಪಿಎಲ್‌ ಹರಾಜಿನ ಆಯ್ಕೆ ಪಟ್ಟಿಯಲ್ಲಿದ್ದರು. ಇವರಲ್ಲಿ ರಿಷಬ್‌ ಕೂಡ ಒಬ್ಬರಾಗಿದ್ದರು. ಈ ಎಲ್ಲಾ ಆಟಗಾರರ ಮೂಲಬೆಲೆ ₹ 10 ಲಕ್ಷ ಮಾತ್ರ. ಆದರೆ ರಿಷಬ್‌ ಬ್ಯಾಟಿಂಗ್‌ ಅಬ್ಬರ ಐಪಿಎಲ್‌ ಫ್ರಾಂಚೈಸ್‌ಗಳ ಕಣ್ಣು ಕುಕ್ಕಿತ್ತು. ಆದ್ದರಿಂದ ಅವರನ್ನು ಖರೀದಿಸಲು ಭಾರಿ ಪೈಪೋಟಿ ಏರ್ಪಟ್ಟು ಅಂತಿಮವಾಗಿ ₹ 1.9 ಕೋಟಿಗೆ ಡೆಲ್ಲಿ ಡೇರ್‌ಡೆವಿಲ್ಸ್‌ ಪಾಲಾಗಿದ್ದರು.
 
ಆಸ್ಟ್ರೇಲಿಯಾದ ಆ್ಯಡಮ್‌ ಗಿಲ್‌ಕ್ರಿಸ್ಟ್‌ ಅವರಿಂದ ಪ್ರೇರಣೆ ಪಡೆದಿರುವ ರಿಷಬ್‌ ‘ಆಕ್ರಮಣಕಾರಿಯಾಗಿ ಆಡುವುದು ತುಂಬಾ ಇಷ್ಟ. ಸಂದರ್ಭ ಹೇಗೆ ಇರಲಿ ನನ್ನ ಸಹಜ ಆಟವಾಡಲು ಇಷ್ಟಪಡುತ್ತೇನೆ’ ಎನ್ನುತ್ತಾರೆ.
 
ಅಕ್ಟೋಬರ್‌ ನಾಲ್ಕರಂದು 19ನೇ ವಸಂತಕ್ಕೆ ಕಾಲಿಟ್ಟಿರುವ ರಿಷಬ್‌ ಜೂನಿಯರ್‌ ತಂಡದ ಮಾಜಿ ಫೀಲ್ಡಿಂಗ್‌ ಕೋಚ್‌ ಬಿಜು ಜಾರ್ಜ್‌, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಕಿರಣ್‌ ಮೋರೆ ಸೇರಿದಂತೆ ಹಲವರ ಜೊತೆ ಅಭ್ಯಾಸ ಮಾಡಿದ್ದಾರೆ. ಆದ್ದರಿಂದ ಅವರನ್ನು ಭಾರತ ತಂಡದ ವಿಕೆಟ್‌ ಕೀಪರ್‌ ಎಂದು ಬಿಂಬಿಸಲಾಗುತ್ತಿದೆ. ಈ ಸ್ಥಾನಕ್ಕೆ ಏರುವ ಅರ್ಹತೆ ಖಂಡಿತವಾಗಿಯೂ ರಿಷಬ್‌ ಅವರಿಗಿದೆ. ಆದರೆ ಈಗಲೇ ಯಾಕೆ ಅವಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT