ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವರು ಇರುವುದೇ ಹಾಗೆ!

Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಅವರ ತಪ್ಪುಗಳನ್ನು ಗಮನಿಸುವುದು ಎಷ್ಟು ಸರಿ?
 
ಅವರಿಗೆ ಬೇರೆಯವರ ತಪ್ಪುಗಳು ಮಾತ್ರ ಕಾಣುತ್ತವೆ. ಬೇರೆಯವರ ತಪ್ಪುಗಳನ್ನು ಎತ್ತಿ ಆಡದಿದ್ದರೆ ಸಮಾಧಾನವೇ ಆಗುವುದಿಲ್ಲ. ಅಪ್ಪಿತಪ್ಪಿಯೂ ತಮ್ಮ ತಪ್ಪುಗಳು ಅವರಿಗೆ ಕಾಣುವುದಿಲ್ಲ. ಯಾವಾಗಲೂ ತಾನು ಸರಿಯಾಗಿದ್ದೇನೆ ಅಂತಲೇ ಅಂದುಕೊಂಡಿರುತ್ತಾರೆ. ತಾನು ತಪ್ಪನ್ನು ಮಾಡುವುದೇ ಇಲ್ಲ ಎನ್ನುವಂತೆ ಇರುತ್ತಾರೆ. ಅವರು ಮಾಡಿದ ತಪ್ಪುಗಳ ಬಗ್ಗೆ ಅಕಸ್ಮಾತ್ ಯಾರಾದರೂ ಹೇಳಿದರೆ, ಕೂಡಲೇ ಅವರು ಜಗಳಕ್ಕೆ ನಿಲ್ಲುತ್ತಾರೆ. ಅಂಥವರ ಹತ್ತಿರ ಏಕೆ ವಾದಮಾಡುವುದು ಎಂದು ವಿವೇಕಿಗಳು ಸುಮ್ಮನಾಗುತ್ತಾರೆ. ಇದೇ ತಮ್ಮ ಗೆಲುವು ಎಂದು ಇವರು ಅಂದುಕೊಳ್ಳುತ್ತಾರೆ. ತಾನು ಮಾತ್ರ ಯಾವಾಗಲೂ ಸರಿ. ಉಳಿದವರು ಮಾತ್ರ ಯಾವಾಗಲೂ ಸರಿಯಿಲ್ಲ ಎನ್ನವುದು ಅವರ ನಂಬಿಕೆ. ಅವರಿವರ ತಪ್ಪುಗಳ ಮೂಟೆಯನ್ನು ತಾವು ಹೊತ್ತುಕೊಂಡಿರುತ್ತಾರೆ. ಅದರ ಭಾರದಲ್ಲಿ ಕುಗ್ಗುತ್ತಿರುತ್ತಾರೆ. ಹೀಗೆ ಬೇರೆಯವರಲ್ಲಿ ತಪ್ಪುಗಳಷ್ಟನ್ನೇ ಹುಡುಕುವವರು ಕಾಲಾಂತರದಲ್ಲಿ ಒಂಟಿಗಳಾಗುತ್ತಾರೆ. ಅವರಿಗೆ ಆಪ್ತೇಷ್ಟರು ಇಲ್ಲವಾಗುತ್ತಾರೆ. ಖಿನ್ನತೆಗೊಳಗಾಗುತ್ತಾರೆ. ಮನೋವ್ಯಾಕಲತೆಗೆ ಒಳಗಾಗಿ ಬದುಕನ್ನು ನರಕವಾಗಿಸಿಕೊಳ್ಳುತ್ತಾರೆ.  
 
ಹೀಗಾಗಿ ನೀನು ಮಾತ್ರ ಬೇರೆಯವರಲ್ಲಿ ತಪ್ಪುಗಳನ್ನು ಹುಡುಕಬೇಡ. ಅದರಿಂದ ನಿನ್ನ ಮನಃಶಾಂತಿ ಹಾಳಾಗುತ್ತದೆ. ತಪ್ಪು ಮಾಡದಂತೆ ಅವರನ್ನು ತಡೆಯುವುದು ನಿನ್ನ ಕೆಲಸವಲ್ಲ. ಅದು ನಿನ್ನಿಂದ ಸಾಧ್ಯವೂ ಇಲ್ಲ. ಏಕೆಂದರೆ ಅವರ ಪ್ರಕಾರ ಅದು ತಪ್ಪು ಆಗಿರಲಾರದು. ತಾನು ಮಾಡುತ್ತಿರುವುದು ತಪ್ಪು ಎಂದು ಅನ್ನಿಸುವವರೆಗೆ ಅವರು ಅದನ್ನು ಮಾಡುವುದನ್ನು ನಿಲ್ಲಿಸಲಾರರು! ಹಾಗಿರುವಾಗ, ಅವರ ತಪ್ಪುಗಳ ಬಗ್ಗೆ ವಿಚಾರ ಮಾಡುತ್ತಾ ನೀನು ನಿನ್ನ ಮನಸ್ಸನ್ನು ಗಲೀಜುಮಾಡಿಕೊಳ್ಳುವುದೇಕೆ? ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಾದಾಗ ಅವರು ಅದನ್ನು ಮಾಡುವುದನ್ನು ಖಂಡಿತವಾಗಿಯೂ ನಿಲ್ಲಿಸುತ್ತಾರೆ! 
 
ನೀನು ಅವರಿಗೆ ಅವರ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಕೊಡಲಾರೆ. ಯಾಕೆಂದರೆ ನೀನು ಗಮನಿಸುತ್ತಿರುವುದು ನಿನಗಿಂತಲೂ ಬಹಳ ಎತ್ತರದಲ್ಲಿ ಇರುವವರು. ನಿನಗಿಂತ ಕೆಳಗಿರುವವರ ತಪ್ಪುಗಳ ಬಗ್ಗೆ ನೀನು ತಲೆಕೆಡಿಸಿಕೊಳ್ಳುವುದಿಲ್ಲ. ನಿನಗಿಂತ ಕೆಳಗಿರುವವರ ಬಗ್ಗೆ ನಿಜಕ್ಕೂ ನೀನು ಗಮನಿಸಿರುವುದೇ ಇಲ್ಲ. ಅವರ ತಪ್ಪುಗಳಿಂದ ನಿನಗೆ ಬೇಸರವಾಗುವುದಿಲ್ಲ. ಅವರ ತಪ್ಪುಗಳು ನಿನ್ನನ್ನು ಚಿಂತೆಗೀಡು ಮಾಡುವುದಿಲ್ಲ. ಇದು ಬಹುತೇಕ ಮನುಷ್ಯರ ಸ್ವಭಾವ. ನಿನ್ನ ಗಮನ, ಸ್ಪರ್ಧೆ ಏನಿದ್ದರೂ ನಿನಗಿಂತ ಎತ್ತರದಲ್ಲಿರುವವರ ಬಗ್ಗೆ ಆಗಿರುತ್ತದೆ. ಅವರ ತಪ್ಪುಗಳನ್ನು ಎತ್ತಿತೋರಿಸುವ ಮೂಲಕ ನೀನು ನಿನ್ನ ತಪ್ಪುಗಳನ್ನು ನಿನ್ನವರು ಕ್ಷಮಿಸಲಿ ಎನ್ನುವ ಬಯಕೆಯನ್ನು ಅವ್ಯಕ್ತವಾಗಿ ಹೊಂದಿರುವೆ! ಸರಿಯಾಗಿ ನೀನು ನಿನ್ನ ಮನಸ್ಸನ್ನು ಗಮನಿಸು. ಅದೇಕೆ ಅವರಿವರ ತಪ್ಪುಗಳನ್ನು ಗಮನಿಸುತ್ತಿದೆ ಎನ್ನುವ ಸತ್ಯ ನಿನಗೇ ತಿಳಿಯುತ್ತದೆ! 
 
ನಿನ್ನ ಇಂಥ ಆಲೋಚನೆಯ ಸುಳಿಯಲ್ಲಿ ನಿನ್ನನ್ನು ನಿಜಕ್ಕೂ ಕಾಡುತ್ತಿರುವ ಅಂತರಂಗದ ವಿಷಯವೊಂದಿದೆ. ಅದೇನೆಂದರೆ, ನೀನೂ ಅವನಂತೆ ಬಿಸಿನೆಸ್ ಮಾಡುವವನಾಗಿದ್ದು, ನೀನು ಅವನಂತೆ ಬ್ಯಾಂಕುಗಳಲ್ಲಿ ಯದ್ವಾ ತದ್ವಾ ಸಾಲ ಮಾಡಿಯಾದರೂ ಜೀವನವನ್ನು ರಾಜನಂತೆ ಮಜಾ ಮಾಡುತ್ತ ಕಳೆಯುವ ಅವಕಾಶದಿಂದ ವಂಚಿತನಾದ ಬಗ್ಗೆ ನಿನ್ನ ಬಗ್ಗೆಯೇ ನಿನ್ನಲ್ಲಿ ಕೀಳರಿಮೆ ಹುಟ್ಟತೊಡಗುತ್ತದೆ! ಎಂದರೆ ನೀನು ಬೇರೆಯವರಲ್ಲಿ ತಪ್ಪು ಹುಡುಕುವುದರ ಮೂಲ ನಿನ್ನೊಳಗಿನ ಕೀಳರಿಮೆ ಅಂತಾಯಿತು! 
 
ಕೀಳರಿಮೆ ಇರುವವನು ಮಾತ್ರ ತನ್ನ ತಪ್ಪುಗಳನ್ನು ಯಾರೂ ಗಮನಿಸದೇ ಇರಲಿ ಅಥವಾ ಎಲ್ಲರೂ ತನ್ನ ತಪ್ಪುಗಳನ್ನು ಬೇಷರತ್ತಾಗಿ ಕ್ಷಮಿಸಲಿ ಎಂದು ಬಯಸುತ್ತಿರುತ್ತಾನೆ. ಹಾಗಾಗಿಯೇ ಅವನು ಯಾವಾಗಲೂ ಬೇರೆಯವರಲ್ಲಿ ತಪ್ಪುಗಳನ್ನು ಹುಡುಕುತ್ತಿರುತ್ತಾನೆ. ತಪ್ಪು ಮಾಡುತ್ತಲೇ ತುಪ್ಪ ತಿನ್ನುತ್ತ ಹಾಯಾಗಿರುವ ಬಹಳ ಜನಗಳಿರುವಾಗ ಅವರಿಗೂ ಸಮಾಜದಲ್ಲಿ ಸಾಕಷ್ಟು ಮಾನ-ಮರ್ಯಾದೆ-ಗೌರವಾದರಗಳೂ ಸಿಗುತ್ತಿರುವಾಗ ತನ್ನದೇನು ಮಾಹಾ ಅಪರಾಧ?! – ಎಂದೂ ಆಲೋಚಿಸುತ್ತಿರುತ್ತಾರೆ. ತನಗೂ ಅವಕಾಶ ಸಿಕ್ಕಾಗ ತಾನೂ ತನ್ನ ಬುದ್ಧಿಮತ್ತೆಯನ್ನು ಸರಿಯಾಗಿಯೇ ಬಳಸಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಾನೆ. ಅಂತಹ ಅವಕಾಶ ಸಿಗದಿದ್ದವನು ಮತ್ತೆ ಅವರಿರವರ ತಪ್ಪುಗಳನ್ನು ಹುಡುಕುತ್ತ, ಅವರ ಬಗ್ಗೆ ಹಗುರವಾಗಿ ಮಾತನಾಡುತ್ತ ದಿನ ಕಳೆಯುತ್ತಾನೆ. ಇತರರ ಬಗ್ಗೆ ಹಗುರವಾಗಿ ಮಾತನಾಡುವವರನ್ನು ಯಾರೂ ಗೌರವಿಸುವುದಿಲ್ಲ. ಅಂತಹ ಗುಣಗಳಿರುವವರು ಎಲ್ಲರ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಕಾಲಾಂತರದಲ್ಲಿ ಸೋತು ಸುಣ್ಣವಾಗುತ್ತಾರೆ.
 
ಮನೆಯಲ್ಲಿ ಹದಿಹರೆಯಕ್ಕೆ ಬಂದ ಮಕ್ಕಳು ಕೆಲವು ಸಲ ತಮಗೆ ಬುದ್ಧಿ ಹೇಳುವ ಪಾಲಕರ ತಪ್ಪುಗಳನ್ನೇ ಅವರಿಗೆ ತಿರುಗಿಸಿ ಹೇಳುತ್ತಾರೆ. ಪಾಲಕರನ್ನು ಖಂಡಿಸುತ್ತಾರೆ. ಅಂತಹ ಸನ್ನಿವೇಶಗಳಲ್ಲಿ ಪಾಲಕರು ಕೋಪಗೊಳ್ಳಬಾರದು. ಕೂಡಲೇ ಮಕ್ಕಳನ್ನು ತೆಗಳಬಾರದು. ತಾವು ಪಾಲಕರು, ತಮ್ಮ ತಪ್ಪನ್ನು ತಮಗೆ ಹೇಳುವ ಅಧಿಕಾರವನ್ನು ಮಕ್ಕಳು ತೋರಿಸಬೇಕಾಗಿಲ್ಲ ಅಂತೆಲ್ಲ ಹೇಳಬಾರದು. ಬದಲಿಗೆ ಉದ್ವಿಗ್ನ ಮನಃಸ್ಥಿತಿಯ ಮಕ್ಕಳನ್ನು ಸಮಾಧಾನಿಸಲಿಕ್ಕೆ ಪ್ರಯತ್ನಿಸಬೇಕು. ನಂತರ ಸರಿಯಾದ ಸಮಯ ಸಂದರ್ಭಗಳನ್ನು ನೋಡಿ ಮಕ್ಕಳಿಗೆ ಸರಿಯಾದ ತಿಳಿವಳಿಕೆ ನೀಡಬೇಕು. ಮಕ್ಕಳಿಗೆ ತಿಳಿದು ಹೋದ ತಮ್ಮ ತಪ್ಪುಗಳನ್ನು ಮಕ್ಕಳೆದುರಿಗೆ ಒಪ್ಪಿಕೊಳ್ಳಬೇಕು. ಮತ್ತೆ ಅಂತಹ ತಪ್ಪುಗಳನ್ನು ಮಾಡುವುದಿಲ್ಲ ಎಂದುಹೇಳಬೇಕು. ಮಕ್ಕಳು ಹೆತ್ತವರ ತಪ್ಪುಗಳನ್ನು ತೋರಿಸುವ ಮೂಲಕ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಅಥವಾ ಹೆತ್ತವರು ತಮ್ಮನ್ನು ಕ್ಷಮಿಸಲಿ ಎಂದು ಆಶಿಸಲಿಕ್ಕೆ ಶುರುಮಾಡುತ್ತಾರೆ.
 
ಪಾಲಕರು ಅವುಗಳಿಗೆ ಅವಕಾಶ ಕೊಡಬಾರದು. ಪಾಲಕರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಮೂಲಕ ಮಕ್ಕಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡಬೇಕು. ಪರಸ್ಪರರ ಒಳಿತಿಗಾಗಿ ಪರಸ್ಪರರನ್ನು ಗಮನಿಸುವ ಒಪ್ಪಂದ ಮಾಡಿಕೊಳ್ಳುವುದು ಪಾಲಕರಿಗೆ ಮತ್ತು ಹರೆಯದ ಮಕ್ಕಳಿಗೆ ಬಹಳ ಪ್ರಯೋಜನಕಾರಿ. ಇದರಿಂದ ಪರಸ್ಪರರಲ್ಲಿ ಜವಾಬ್ದಾರಿಯೂ, ಕಾಳಜಿಯೂ ಬೆಳೆಯಲಿಕ್ಕೆ ಅನುಕೂಲವಾಗುತ್ತದೆ. ಇಂತಹ ತಿಳಿವಳಿಕೆಯಿಂದ ಮಕ್ಕಳು ಬೇರೆಯವರ ತಪ್ಪುಗಳತ್ತ ಗಮನಹರಿಸದಂತೆ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ. 
 
ಇತರರಲ್ಲಿ ತಪ್ಪುಗಳನ್ನು ಹುಡುಕುವುದರಿಂದ ಕನಿಷ್ಠ ಎರಡು ನಷ್ಟಗಳಾಗುತ್ತವೆ. ಮೊದಲನೆಯದ್ದೆಂದರೆ ಬೇರೆಯವರ ತಪ್ಪುಗಳನ್ನು ಹುಡುಕುವುದರಿಂದ ನಮ್ಮ ಮನಸ್ಸು ಶಾಂತಿಯನ್ನು ಕಳೆದುಕೊಳ್ಳುತ್ತದೆ. ಎರಡನೆಯದ್ದೆಂದರೆ, ನಾವು ತಪ್ಪನ್ನು ಹುಡುಕಿ ಹೇಳುವುದರಿಂದ ಅವರ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೆ. ಕಾರಣ ಯಾವುದೇ ಇರಲಿ, ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸುವಂತೆ ನಮ್ಮ ಬುದ್ಧಿಯನ್ನು ನಾವು ಹದಗೊಳಿಸಬೇಕು. ಎಲ್ಲರಲ್ಲಿಯೂ ಒಂದಿಷ್ಟು ಕೆಟ್ಟ ಗುಣಗಳಿರಬಹುದು. ಆದರೆ ಬಹಳಷ್ಟು ಒಳ್ಳೆಯ ಗುಣಗಳಿರುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. 
 
ನಾವು ಹೆಚ್ಚೆಚ್ಚು ಜನರಲ್ಲಿ ಹೆಚ್ಚೆಚ್ಚು ಒಳ್ಳೊಳ್ಳೆಯ ಗುಣಗಳನ್ನು ಗಮನಿಸುತ್ತ ಹೋದಂತೆ ನಮಗೆ ಹೆಚ್ಚೆಚ್ಚು ಜನರ ಗೆಳೆತನ ಸಿಗುತ್ತದೆ. ಸಜ್ಜನರ ಸಂಗದಿಂದ ಸಂತೋಷ ಸಿಗುತ್ತದೆ. ಸಂತೋಷದಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಅದರಿಂದಾಗಿ ನಮ್ಮ ಶರೀರದ ಆರೋಗ್ಯವೂ ವೃದ್ಧಿಸುತ್ತದೆ. ಅವರ ತಪ್ಪುಗಳನ್ನು ಕ್ಷಮಿಸುವುದರಿಂದ ಅವರಿಗೇನೂ ಲಾಭವಾಗಲಿಕ್ಕಿಲ್ಲ. ಆದರೆ, ನಮಗೆ ಖಂಡಿತವಾಗಿಯೂ ಮನಃಶಾಂತಿ ಸಿಗುತ್ತದೆ. ನಮ್ಮ ಮನಸ್ಸಿನ ನೆಮ್ಮದಿಗಾಗಿ ನಾವು ಇತರರಲ್ಲಿ ಒಳ್ಳೆಯ ಗುಣಗಳನ್ನು ಹುಡುಕಬೇಕು ಹಾಗೂ ಇತರರ ತಪ್ಪುಗಳನ್ನು ಕ್ಷಮಿಸಬೇಕು. ಸರಿಯಷ್ಟೆ?! ಸೂತ್ರ ಸರಳವಾಗಿದೆ. ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧಿಸುವುದರಲ್ಲಿಯೇ ನಿಜಕ್ಕೂ ಸವಾಲಿರುವುದು!
 
*
(ಲೇಖಕರು ಆಪ್ತಸಮಾಲೋಚಕ ಮತ್ತು ತರಬೇತುದಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT