ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಪಾಲಿನ ಅಕ್ಷಯಾಂಬರ ಮರೀ ಅಂದ್ರ ಹೆಂಗ ಮರತೇನು!

ನಿನ್ನಂಥ ಅಪ್ಪ ಇಲ್ಲ
Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಏಣಗಿ ಲಕ್ಷ್ಮಿಂಬಾಯಿ. ಡಾ. ಏಣಗಿ ಬಾಳಪ್ಪನವರ ಪತ್ನಿ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾದ ಕನ್ನಡ ರಂಗಭೂಮಿಯ ಹಿರಿಯ ಕಲಾವಿದೆ. ಈಗವರಿಗೆ 87ರ ವಯಸ್ಸು. ಇಲ್ಲದ್ದನ್ನು ಬಯಸಬಾರದು ಎಂಬ ಶರಣಭಾವ.

1928ರಲ್ಲಿ ಬಳ್ಳಾರಿಯಲ್ಲಿ ಜನನ. ತಮ್ಮ ಏಳನೇ ವಯಸ್ಸಿನಲ್ಲಿ ಬಣ್ಣ ಹಚ್ಚದೇ ಪಾತ್ರಾಭಿನಯ. 1982ರವರೆಗೆ ನಿರಂತರ ತಮ್ಮದೇ ಕಲಾ ವೈಭವ ಕಂಪೆನಿಯಲ್ಲಿ ಪ್ರಮುಖ ಭೂಮಿಕೆಯಲ್ಲಿ ಅಭಿನಯ.

ಅಂದದ ಚೆಲುವು ಮಾಸಿಲ್ಲ. ನೆನಪಿನ ಗಣಿಯಲ್ಲಿರುವ ಸಂಗತಿಗಳು ಕಾಲಗರ್ಭ ಸೇರದೇ ದಾಖಲಾಗಬೇಕು ಎನ್ನುವವರು. ಯಾವ ಗೌರವಧನವನ್ನಾಗಲೀ ಪ್ರಚಾರವನ್ನಾಗಲೀ ಬಯಸದವರು. ತಮ್ಮ ಅಪ್ಪ ವಿರುಪಾಕ್ಷಪ್ಪ ಬಳ್ಳಾರಿಯವರ ನೆನಪಲ್ಲಿ ಅರ್ಧ ಶತಮಾನದ ರಂಗ ಇತಿಹಾಸವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.

* * *
 ನಡೆದಾಡುವ ರಂಗಭೂಮಿ ಅಂತ ಹೆಸರಾದ ಏಣಗಿ ಬಾಳಪ್ಪನವರ ಪತ್ನಿ ನಾನು. ನಮ್ಮ ತಂದೆ ವಿರುಪಾಕ್ಷಪ್ಪ ಬಳ್ಳಾರಿ ನಾಟಕ ಕಂಪನಿಯ ಮ್ಯಾನೇಜರ್ ಆಗಿದ್ದರು. ತಾಯಿ ವೀರಮ್ಮ. ಏಣಗಿ ಲಕ್ಷೀಂಬಾಯಿ ಅಭಿನಯದಲ್ಲಿ ಕಲಿತದ್ದರ ಹಿಂದೆ ಒಂದು ಕಡೆ ಏಣಗಿ ಬಾಳಪ್ಪನವರಿದ್ದರೆ, ಇನ್ನೊಂದೆಡೆಗೆ ಅಪ್ಪ ವಿರುಪಾಕ್ಷಪ್ಪ ಬಳ್ಳಾರಿ ಇದ್ದರು. 
 
ಅಪ್ಪ ಮೊದಲು ಅಥಣಿಯ ಹೂಗಾರ ಭೀಮಣ್ಣನವರ ಭಾಗ್ಯೋದಯ ಕಂಪನಿಯಲ್ಲಿ ಮ್ಯಾನೇಜರ್. ಕಂಪೆನಿಯ ಇನ್ನೊಬ್ಬ  ನಟ ಹಾವೇರಿ ಮರ್ಧಾನ ಜಾನ್. ಅವರ ಮಗಳು ಹಸ್ಮತಬಿ. ಆಗ ಮಲಗಿಕೊಂಡಿದ್ದ ಏಳು ವರ್ಷದ ಹುಡುಗಿ ನನ್ನ ಎತ್ತಿಕೊಂಡು  ಹೋಗಿ ಅಕ್ಷಯಾಂಬರ ರಾಧೆ ಪಾತ್ರ ಮಾಡಿಸಿದರು. ಹಸ್ಮತ್‌ಬಿಗೆ ರುಕ್ಮಣಿಪಾತ್ರ. ಅದಾದ ಮೇಲೆ ಕೆಲವೇ ದಿವಸದಲ್ಲಿ ಭಾಗ್ಯೋದಯ ಕಂಪೆನಿ ಬಂದಾತು. 
 
ಆಗ ತಾಯಿ ತವರುಮನೆ ಕೂಡ್ಲಗಿಗೆ ಹೋದೆವು. ಅಪ್ಪ ಅಮೇಚೂರರ್ಸ್‌ಗೆ ಹೋಗುತ್ತಿದ್ದರು. ನಂತರ ನನಗೆ ಸುರಪೂರಿನ  ವೆಂಕಪ್ಪ ನಾಯಕರ ಕಂಪೆನಿಯಲ್ಲಿ ಉತ್ತರಭೂಪದ ಉತ್ತರೆಪಾತ್ರ ಮಾಡಿಸಿದರು. 16 ವರ್ಷ ಆಗಿರಬೇಕು ನನಗೆ. ಅದೂ ಬಹಳ ದಿನ ನಡೀಲಿಲ್ಲ.  ಮುಂದೆ ಅಪ್ಪ  ಗದಗದಲ್ಲಿ ಗರುಡ ಸದಾಶಿವರಾಯರ ಕಂಪೆನಿಯಲ್ಲಿ ಉಳಿದರು. ಅವರೇ ಏಣಗಿ ಬಾಳಪ್ಪನವರ ಕಂಪೆನಿಗೆ 1948ರಲ್ಲಿ ಕಳಿಸಿದರು.
 
ಅಲ್ಲಿಂದ ಮುಂದ ನನ್ನ ಜೀವನಕ್ಕೊಂದು ಭದ್ರತೆ ಬಂತು. ಅಪ್ಪನ ಅಲೆದಾಟದ ಜೀವನ ಕೊನೆಯಾತು. ದೇವರ ಅನುಗ್ರಹ – ಬಳ್ಳಾರಿ ವಿರುಪಾಕ್ಷಪ್ಪನವರ ಮಗಳು ಲಕ್ಷ್ಮೀಂಬಾಯಿ  ಏಣಗಿ ಬಾಳಪ್ಪನವರ ಕಂಪೆನಿಯಲ್ಲಿ ಖಾಯಂ ಆದಳು. ಮುಂದೆ ಏಣಗಿ ಬಾಳಪ್ಪವರೇ ನನಗೆಲ್ಲ ಕಲಿಸಿ ಕೊಟ್ಟಿದ್ದು ಹೆಚ್ಚು. ಋಣಾನುಬಂಧ.
 
ಒಂದಿನ ಶಾಲಿಯಿಂದ ಬಂದು ಎರೆಡನತ್ತೆ ಪಾಸಾದೆಂತ ಹೇಳಿದೆ. ‘ಬಾ... ಇದನ್ನು ಓದು’ ಅಂತ ಯಾವದೋ ಪುಸ್ತಕ ಅಪ್ಪ ಕೊಟ್ಟರು.. ಓದಾಕ ಬರಲಿಲ್ಲ. ‘ಅಯ್ಯೋ ವಿರುಪಾಕ್ಷಪ್ಪನ ಮಗಳು ಅಂತ ಪಾಸ ಮಾಡಿದಾರ. ನೀನೇನೂ ಸಾಲಿಗೆ ಹೋಗೋದು ಬೇಡ..!’  ಅಂದರು. ಎರಡನೇ ಕ್ಲಾಸಿಗೆ ಬಿಟ್ಟೆ. ಪಾತ್ರದ ಮಾತು ಬಾಯಿ ಪಾಠ ಮಾಡುವಾಗ ಎರಡು–ಮೂರು ಸಾರೆ ಹೇಳಿದ್ದು ಕೇಳಿ ಒಪ್ಪಿಸಿದೆ. ನಂತರ ಅಕ್ಷರಪ್ರಪಂಚಕ್ಕೆ ಕಾಲಿಟ್ಟೆ. ರಂಗಭೂಮಿಯೇ ಎಲ್ಲ ಕಲಿಸಿತು. ಅದರ ಹಿಂದೆ ಅಪ್ಪನ ಪ್ರೇರಣೆ. ಅವನ ಪ್ರೋತ್ಸಾಹ ದೊಡ್ಡದು.
 
ಅಪ್ಪದು ಹಾಲಂತ ಮನಸು. ಆಗಿನ ಕಾಲಕ್ಕೆ ಅಪ್ಪನದು ಎಂ.ಎ., ಇಂಗ್ಲಿಷ ಬಲ್ಲವ. ನಮ್ಮಜ್ಜ ಬಡಕುಂಟಿ ಮಹದೇವಪ್ಪ ಅಂದರೆ ದೊಡ್ಡ ಮನೆತನ. ಬಹಳ ಹೆಸರಿತ್ತ ಬಳ್ಳಾರಿಯಲ್ಲಿ. ನಮ್ಮ ಚಿಕ್ಕಪ್ಪ ಮರಿಯಪ್ಪ ಹೈಸ್ಕೂಲ್ ಮಾಸ್ತಾರು. ಆದರೂ ನಾನು ಹೆಚ್ಚು ಓದಲಿಲ್ಲ. ಆದರೆ ನಾಟಕದ ಸಂಭಾಷಣೆಯನ್ನು ಓದುವಂತೆ ಮಾತಾಡುವಂತೆ ಅಪ್ಪ ಹಚ್ಚಿದರಲ್ಲ..! ಅವರೇ ನನ್ನ ನಿಜವಾದ ಗುರು.
 
ಮನೆಕೆಲಸ ಮಾಡಲು ಬಿಡುತ್ತಿರಲಿಲ್ಲ. ಮಗಳು ಕೆಲಸ ಮಾಡಿದರ ಸವಿತಾಳೇನೋ ಅನ್ನುವಂತ ಕಾಳಜಿ. ನೋಡೋರ ಕಣ್ಣಿಗೆ ಗಂಭೀರವದನ. ಅಂತರಂಗದಲ್ಲಿ ಮಾತೃಹೃದಯ. ಸಣ್ಣಾಕಿ ಇದ್ದಾಗ ನನ್ನ ಕೂದಲು ನಾನೆಂದೂ ತೊಳೆದುಕೊಂಡಿಲ್ಲ. ಅವ್ವನೇ ಮಗಳಿಗೆ ಎರಿಬೇಕು ಇದು ಜಗದ ನಿಯಮ. ಅಪ್ಪ ಬಚ್ಚಲ ಮನಿಯಾಗ ಸುಡು-ಸುಡು ಹಂಡೇ ನೀರು ಕಾಯಿಸಿ ಸ್ಟೂಲ್ ಹಾಕಿ ಕುಂದ್ರಿಸಿ  ಕೂದಲ ತೊಳೆತಿದ್ದ.
 
ತಲೆಯೊಳಗಿನ ನೀರು ಹೋಗುತಕ ಒರೆಸುತ್ತಿದ್ದ. ದಟ್ಟ ಕೂದಲೊಳಗೆ ನೀರು ಉಳಿದರೆ ನೆಗಡಿ ಆಗುತ್ತ ಅನ್ನೊ ಕಳಕಳಿ. ಮುಂದೆ ನಾಟಕದ ಸ್ತ್ರೀಪಾತ್ರಕ್ಕೆ ಕೂದಲು ಚೆಲುವು ಎಷ್ಟು ಅನ್ನೋದು ಮನದಟ್ಟಾತು. ಅಪ್ಪ ಲೋಬಾನ ಹೊಗಿ ಹಾಕಿ ಕೂದಲ ಆರಿಸಿದ್ರ ಇಡೀ ಓಣಿಗೆ ಘಂ ಅಂತ ವಾಸನೆ ಬರತಿತ್ತು. ಈಗಲೂ ತಲೆಸ್ನಾನ ಮಾಡುವಾಗ ಅಪ್ಪ ನೆನಪಾಗತಾನ. ನನ್ನ ಮಗಳು ಇತರ ಹೆಣ್ಣುಮಕ್ಕಳಿಗಿಂತ ಚಂದ ಅದಾಳ.  ಅವಳ ಕೂದಲ ಉದ್ದ ದಟ್ಟ ಇದ್ದುದರಿಂದಲೇ ತಾರಾಮತಿ ಅಂತ ಪಾತ್ರ ಹೆಸರು ತೊಗೊಳ್ಳಾಕ ಕಾರಣ ಆತು. ಕೂದಲಿಂದನೇ ಹೆಣ್ಣುಮಕ್ಕಳ ಚೆಲುವು ಅಂತ ಅಂತಿದ್ದರು. ಮಗಳು ಚಂದ ಕಾಣಬೇಕು ಅಂತ ಹಡೆದವ್ವನಂಗ ಕಾಳಜಿ ಮಾಡಿದರು. 
 
ಸಣ್ಣ ವಯಸ್ಸಿಗೇ ಸೀರೆ ಉಟಕೋತಿದ್ದೆವು. ಅಂಗಡಿಯಿಂದ ಹನ್ನೆರಡು ಕಲರ್ ಸೀರಿ ತರತಿದ್ದರು. ಯಾವ ಕಲರ್ ಅಂತಿನಿ ಆ ಕಲರ್ ಸೀರಿ ಇರತಿತ್ತು. ‘ಬಂಗಾರದಂತಹ ಮಗಳು.  ಬಂಗಾರ ಅಕಿಗೆ ಯ್ಯಾಕ ಬಂಗಾರಬೇಕು? ಅಕೀ ಬಂಗಾರ ಹಾಕ್ಕೊಳ್ಳದಿದ್ದರೂ ಚೆಂದ ಕಾಣತಾಳ’ ಅಂತಿದ್ದರು. ನಾ ಅವಗ ಬಂಗಾರ ಅವ ನನಗ ಬಂಗಾರ. ಅದಕ್ಕೇ ಅಪ್ಪ ನನಗ - ಬಂಗಾರ ಕೊಡಸಲಿಲ್ಲ. ನಾನೂ ಬೇಡಲಿಲ್ಲ. ಆಗಿನಿಂದ ಈಗಿನವರೆಗೂ ನನಗ - ಬಂಗಾರ ಬೇಕು ಅನಸಿಲ್ಲ.
 
ನಾಟಕದ ಮಾತುಗಳನ್ನೇನೂ ಅಪ್ಪ ಹೇಳಿಕೊಟ್ಟಿಲ್ಲ. ಅವನು ವ್ಯವಹಾರ ಚತುರ. ನಾಟಕ ಮಾಡಿದ ಮೇಲೆ ಒಂದಿನಾನೂ ನೀ ಚಂದಗ ಮಾಡಲಿಲ್ಲ ಮಗಳ ಅನಲಿಲ್ಲ.  ಇದು ಚಂದಾ ಆತು ನೋಡು! ಹಿಂಗ್ ಮಾಡಕೋತ ಹೋಗು, ಇನ್ನೂ ಚಂದ ಮಾಡಾಕಹತ್ತೀ..! ಅಂತಿದ್ದರು.  ಅವರೇನೂ ಮೊದಲು ನಾಟಕ ಮಾಡತಿದ್ದಿಲ್ಲ. ಮ್ಯಾನೇಜರಕೀನೆ ಅವರ ಕೆಲಸ. ನಂತರ ಅಭಿನಯ ಶುರು ಮಾಡಿದರು. ನನ್ನ ಅಭಿನಯದ ಪ್ರಾರಂಭಕ್ಕೆ ಶ್ರೀಕಾರ ಅಪ್ಪನದೇ.  ಆ ಕಾಲದಲ್ಲಿ ಸ್ತ್ರೀಪಾತ್ರ  ಪುರುಷರೇ ಹಾಕತಿದ್ದರು.
 
ಅಂತಹುದರಲ್ಲಿ ಕಟ್ಟುನಿಟ್ಟಾದ ಸಂಪ್ರದಾಯದ ನಡವೆ ನಾಟಕ ಮಾಡಲು ಸ್ವಾತಂತ್ರ್ಯ ಕೊಟ್ಟ ಪುಣ್ಯಾತ್ಮ ನಮ್ಮಪ್ಪ. ನಾಟಕದ  ಪಾತ್ರ ಮಾಡಿಸಿದ ಕೀರ್ತಿ ಅಪ್ಪನಿಗೆ ಸಲ್ಲಬೇಕು.  ನನ್ನ ಎತ್ತಿಕೊಂಡು ಹೋಗಿ ರಾಧಾಪಾತ್ರಕ್ಕ ಮಾಡಿಸಿದ್ದಿಂಲ್ಲದ್ರ ನಾನು ಕಲಾವಿದೆ ಆಗತಿದ್ದಿಲ್ಲ.. ಮುಂದೆ ನನ್ನ ತಮ್ಮ ಕೃಷ್ಣಚಂದ್ರ ಬಳ್ಳಾರಿನೂ ನನ್ನ ಜೊತೆಗೆ ಬಂದು ನಾಟಕ ಕಂಪೆನಿ ಸೇರಿದ.  
 
 ಅಪ್ಪನ ಮುಂದೆ ಒಂದಿನಾನೂ ಮನಸಬಿಚ್ಚಿ ಮಾತಾಡಿಲ್ಲ.   ನಾನು ಬಹಳ ಅಂಜತಿದ್ದೆ. ಅವರ ಪಗಾರ ಏನೂ ಹೆಚ್ಚಿರಲಿಲ್ಲ.  1950–6ಸುಮಾರು ಒಂದು ನಾಟಕದಲ್ಲಿ ಪಾತ್ರ ಮಾಡಿದರೆ ನನಗೆ ನೂರು ರೂಪಾಯಿಗಳ ಪಗಾರ. ಅಪ್ಪಗೆ ಐವತ್ತು ರೂಪಾಯಿ. ನಂತರ ಅಪ್ಪನ ಪಗಾರನೂ ಹೆಚ್ಚು ಆತು. 
 
ಅಪ್ಪನಿಗೆ ಕಲಾವೈಭವ ಕಂಪೆನಿ ಅಂದ್ರ ಅದೆಷ್ಟು ಜೀವ.  ಬೆಳಿಗ್ಗೆ ಎದ್ದು ಇಡೀ ಕಂಪೆನಿ ಕಸ ಹೊಡೀತಿದ್ದ. ‘ಬರೀ ಇದು ಥೇಟರ್ ಅಲ್ಲ. ಅನ್ನ ಹಾಕು ರಂಗಭೂಮಿ, ತಾಯಿ’ ಅಂತಿದ್ರು. ಅಪ್ಪ ಕಸ ಬಳಿಯೋದರಿಂದ ಹಿಡಿದು ಕಂಪೆನಿಗೆ ನಾಟಕದ ಲೈಸೆನ್ಸ್ ತರುವವರೆಗೂ ಕೆಲಸ ಮಾಡಿದರು. ಒಂದಿನಾನೂ ಕಂಪೆನಿಯಲ್ಲಿ ಸಂಬಂಧದ ನೆಪ ಮಾಡಿ ಉಪಯೋಗ ತೊಗೊಂಡವರಲ್ಲ.   ಅವರು ನಾನು ನೌಕರಿ ಮಾಡುವ ನೌಕರಸ್ಥರಂತೆ ನಿಷ್ಠೆಯಿಂದ ದುಡಿದಿದ್ದೀವಿ ಅನ್ನೋ ತೃಪ್ತಿ ಈಗಲೂ ಇದೆ.
 
ಯಾವುದೇ ಮಾತಿಗೆ ಅಪ್ಪನಿಗೂ ಇವರಿಗೂ ಮನಸ್ತಾಪ ಬಂದಿತ್ತು.  ಕ್ಯಾಂಪ್‌ನಲ್ಲಿ ಅವರ ಸುಳಿವೇ ಇಲ್ಲ.  ಬೆಳಗಾಗುತ್ತೆಲ್ಲಾ ಹುಡುಕಿದರೂ ಸಿಗಲಿಲ್ಲ. ಹದಿನೈದು ದಿನ ಮನಸು ಗಲಿಬಿಲಿ ಆತು. ನನಗೂ ಸಮಾಧಾನ ಇಲ್ಲದಂಗಾತು. ಒಂದು ದಿನ ದಿಢೀರ್ ಪ್ರತ್ಯಕ್ಷ ಆದರು. ‘ನನ್ನ ಮನಿಗೆ ನಾ ಬರಾಕ ಏನೈತಿ!’ ಬಂದುಬಿಟ್ಟೆ ಎಂದರು. ನನ್ನ ಕಣ್ಣಾಗ ನೀರು. ‘ಕ್ಷಮಿಸಿಬಿಡ್ರಪ’ ಅಂದ ಇವರಿಗೆ ‘ದೊಡ್ಡ ಮಾತಾಡಿ ನೀವು ದೊಡ್ಡೋರು ಆಗಿ ನನ್ನ ಸಣ್ಣವ ಮಾಡಬೇಡ್ರಿ’ ಅಂದು ತಮ್ಮ ದೊಡ್ಡತನ ತೋರಿಸಿದರು.
 
ಅಪ್ಪನಿಂದ ಕಲಿತದ್ದು ಬಹಳ.. ಮೂರ್ನಾಲ್ಕು ಭಾಷೆ ಬಲ್ಲವ. ಯಾವತ್ತು ಇಂಗ್ಲಿಷ ಸಿನಿಮಾಕ್ಕೆ ನನ್ನ ತಮ್ಮನ್ನ ಅವ್ವನ್ನ ಕರಕೊಂಡು ಹೋಗತಿದ್ದರು. ಕತೆಯನ್ನು ಕನ್ನಡದಲ್ಲಿ ತಿಳಿಸಿ ಹೇಳತಿದ್ದರು. 
 
ಹುಕ್ಕೇರಿಯಲ್ಲಿ ಕ್ಯಾಂಪ ನಡೆದಿತ್ತು. ನಮ್ಮವರ ( ಬಾಳಪ್ಪ ಏಣಗಿ) ನಾಟಕ ಅಕಾಡೆಮಿ ಮೆಂಬರ್ ಆಗಿದ್ದರಿಂದ ಬೆಂಗಳೂರಿಗೆ ಹೊರಟಿದ್ದರು. ಹರಿಶ್ಚಂದ್ರ ನಾಟಕ. ನನದು ತಾರಾಮತಿ ಪಾತ್ರ . ಅಪ್ಪ ಕೌಶಿಕಬ್ರಾಹ್ಮಣ ಪಾತ್ರ ಮಾಡಿದ್ದ. ಒಂದು ಪ್ರವೇಶ ಮುಗಿಸಿ ಬಂದ ಅಪ್ಪ ಕೆಮ್ಮತೊಡಗಿದ. ಅಲ್ಲಿತನ ಆರಾಮ ಇದ್ದವ ದಬ ದಬ ರಕ್ತ ಖಾರಕೊಂಡ. ನಮ್ಮ ಕೈ ಕಾಲುಗಳೇ ಬಿದ್ದುಹೋದವು.  ಡಾಕ್ಟರ್ ತಕ್ಷಣ ಘಟಪ್ರಭಕ್ಕೆ ಕರಕೊಂಡು ಹೋಗಬೇಕು ಅಂದರು.
 
ನಾಟಕ ನಿಲ್ಲಿಸಲಿಲ್ಲ. ಅಪ್ಪನ ಪಾತ್ರ ಇವರೇ ಮಾಡಿದರು. ಅಪ್ಪ ಅಂತಹ ತ್ರಾಸನಲ್ಲೂ ‘ನನ್ನ ಸಂಬಂಧ ನಿಲ್ಲಬ್ಯಾಡರೀ, ನೀವು ಬೆಂಗಳೂರಿಗೆ ಹೋಗರೀ’ ಅಂದ್ರು. ನಾನು ನಮ್ಮ ತಾಯಿ ಘಟಪ್ರಭಕ್ಕ ಅಪ್ಪನ ತೋರಸಾಕ ಹೋದೆವು. ‘ನೀ ಯಾವದೇ ಕಾರಣಕ್ಕೂ ನಿಲ್ಲಬೇಡ. ದವಾಖಾನಿಯೊಳಗ ನಿಮ್ಮವ್ವ ಇರತಾಳಂತ’ ಕಳಿಸಿದರು. ಮನಸ್ಸಿಲ್ಲದ ಮನಸ್ಸು. ಒಂದ ಕಡೆ ನಾಟಕ. ಇನ್ನೊಂದು ಕಡೆ ಅಪ್ಪ. ನಾಟಕ ನಿಲ್ಲಬಾರದು ಅನ್ನೊ ಒಂದೇ ಕಾರಣಕ್ಕ ಬಂದೆ. ಯಾವುದೇ ಕೆಟ್ಟ ಸುದ್ದಿ ಬರಬಾರದು ಅಂತ ದೇವರಲ್ಲಿ ಬೇಡಿಕೊಂಡು ಬಣ್ಣ ಹಚ್ಚಿದ್ದೆ.
 
ನಾಟಕದ ಮಧ್ಯದಲ್ಲೇ ಅಪ್ಪ ಸತ್ತ ಸುದ್ದಿ ಬಂತು. ಕೌಶಿಕನ ಪಾತ್ರಧಾರಿಯಾಗಿ ಹೋದವ ಮರಳಿ ಬರಲಿಲ್ಲ. ಅಪ್ಪನ್ನ ಹುಕ್ಕೇರಿಗೆ ತಂದರು. ಶರಣರ ಗುಣ ಮರಣದಲ್ಲಿ ಅಂತಾರ. ಹುಕ್ಕೇರಿಯ ವಿರುಪಾಕ್ಷಪ್ಪ ಶೆಟ್ಟರು ಅಪ್ಪನ್ನ ತಮ್ಮ ಹೊಲದಾಗ ಮಣ್ಣ  ಮಾಡಿಸಿದರು. ಬಳ್ಳಾರಿಯ ಅಪ್ಪ ಹುಕ್ಕೇರಿ ಮಣ್ಣಲ್ಲಿ ಮಣ್ಣಾದ. 
 
ಅದು 1970ನೇ ಇಸ್ವಿ. ಕೊನೆಗೂ ಒಂದೂ ಮಾತೂ ಹೇಳದೇ ಹೋಗಿಬಿಟದ್ದ. ಮುಂದೆ ಮಗನಲ್ಲಿ ತಂದೆಯನ್ನ ಕಂಡೆ. ಸ್ವತಂತ್ರದ ಬದುಕು ರಂಗ ಭೂಮಿಯ ಒಡನಾಟ ಕಲಿತಿದ್ದು ಅಪ್ಪನಿಂದ. ಬ್ಯಾಡ ಅಂದಿದ್ದರ ಈ ಕಲಾವಿದೆ ಲಕ್ಷ್ಮಿಂಬಾಯಿ ಆಗಿರತಿದ್ದಿಲ್ಲ. ಅಪ್ಪ ಬೆನ್ನಿಗಿ ನಿಂತು ರಂಗ ಶಿಕ್ಷಣ ಕೊಡಿಸಿದ. ನಟನೆಯ  ಹಾದಿ ತೋರಿಸಿದ.  1982ರಲ್ಲಿ ಕಂಪೆನಿ ಬಂದ್ ಆಗುವರೆಗೂ ನಾ ಅಪ್ಪನಿಲ್ಲದ ಮಗಳಾಗಿ ಅಭಿನಯಿಸಿದೆ. ನಮ್ಮಪ್ಪ ದೇವರು. ಅಕ್ಷಯಾಂಬರ. ಅದಕ್ಕೆ ಅನ್ನೋದು ತಂದೆ ತಾಯಿ ಮಕ್ಕಳ ಪಾಲಿನ ದೈವ ಅಂತ. ಅರ್ಧ ಶತಮಾನದ ರಂಗಭೂಮಿಯ ಒಡನಾಟ ಮರೀ ಅಂದರ ಹೆಂಗ ಮರತೇನು..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT