ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನೊಡಲ ಪಕ್ಷಿ ಪ್ರಪಂಚ

Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನಾನು, ಸೂಳೆಕೆರೆ. ನೀವಂದುಕೊಂಡಂತೆ ದಾವಣಗೆರೆಯ ಸೂಳೆಕೆರೆಯಲ್ಲ, ‘ಸೂಳೆಕೆರೆ’ ಅನ್ನೋ ಹೆಸರು ಸಭ್ಯವಲ್ಲ ಅಂತ ನೀವೇನೋ ಅದಕ್ಕೆ ಶಾಂತಿಸಾಗರ ಅಂತ ಹೆಸರಿಟ್ಟಿದ್ದೀರಂತೆ? ಇರಲಿ. ಅದು ನನ್ನ ದೊಡ್ಡಮ್ಮನ ಸಮಾನ. ನಾನು ಅಷ್ಟು ದೊಡ್ಡಾಕಿಯೇನಲ್ಲ. 6,550 ಎಕರೆಯಷ್ಟು ಕೆರೆ ಅಂಗಳವಿರುವ ಶಾಂತಿಸಾಗರಕ್ಕೆ ಹೋಲಿಸಿದರೆ ನನ್ನ ಅಂಗಳ ಇರುವುದು 948 ಎಕರೆಯಷ್ಟು ಮಾತ್ರ. ನಾನಿರೋದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ, ಮುಟ್ಟನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ.

ಹೋದ ವರ್ಷ ಒಳ್ಳೆ ಮಳೆಯಾಗಿತ್ತು ನೋಡಿ, ನನ್ನೊಡಲ ತುಂಬಾ ಪಕ್ಷಿಗಳೋ ಪಕ್ಷಿಗಳು. ಒಂದೊಂದರದ್ದೂ ಒಂದೊಂದು ರೀತಿಯ ಚೆಲುವು. ನೋಡುವುದಕ್ಕೆಎರಡು ಕಣ್ಣು ಸಾಲದಾಗಿತ್ತು. ತವರು ಮನೆಗೆ ಬಂದು ಪ್ರಣಯ ನಡೆಸಿ ಮಕ್ಕಳು ಮರಿ ಮಾಡಿಕೊಂಡು ಹೋಗಲು ಬರುವ ಹೆಚ್ಚರ್ಲೆ, ದಾಸ ಕೊಕ್ಕರೆ ಲೆಕ್ಕವಿಲ್ಲದಷ್ಟು ಬರುತ್ತಿದ್ದವು. ಕೊಕ್ಕರೆ ಬೆಳ್ಳೂರು ಗೊತ್ತಿರಬೇಕಲ್ಲ ನಿಮಗೆ? ಅಲ್ಲಿ ಗೂಡು ಕಟ್ಟಿಕೊಂಡು ಆಹಾರವನ್ನರಸಿ ನನ್ನೊಡಲು ಸೇರುತ್ತಿದ್ದವು.


(ಸೂಳೆಕೆರೆಯಲ್ಲಿ ನೀರು ತುಂಬಿದಾಗ...)

ಹೆಚ್ಚರ್ಲೆ ಶಾಂತವಾಗಿ ಚಲಿಸುತ್ತ ಜೋಳಿಗೆಯಂತಹ ಕೊಕ್ಕಿನಲ್ಲಿ ಮೀನು ತುಂಬಿಕೊಂಡರೆ ದಾಸ ಕೊಕ್ಕರೆ ಅಲುಗಾಡದಂತೆ ಒಂದೇ ಕಡೆ ನಿಂತು ಮೀನು, ಹಾವು ಮರಿಯನ್ನು ಗಬಕ್ಕಂತ ಹಿಡಿದುಬಿಡುತ್ತಿದ್ದವು. ಇನ್ನು ವರ್ಷ ಪೂರ್ತಿ ಇಲ್ಲೇ ಇರುವ ಕೆಸರುಗುಪ್ಪಿ, ಬೆಳ್ಳಕ್ಕಿ, ಬಾತುಕೋಳಿ, ನೀರುಕಾಗೆ, ಮೀನುಗುಟುರ, ಕೆಸರು ಗೊರವ, ನೇರಳೆ ಕೊಕ್ಕರೆ, ದಾಸ ಕೊಕ್ಕರೆ, ಮಿಂಚುಳ್ಳಿ, ಬಿಳಿ ಕರಿ ಕುಂಡೆಕುಸ್ಕ, ಕಪ್ಪು ಗರುಡ, ಬಿಳಿ ಗರುಡ, ಅಂಬರಗುಬ್ಬಿ, ಮೈನಾ... ಒಂದೇ ಎರಡೇ, ಹುಳ ಹುಪ್ಪಟೆ ತಿನ್ನುವ ಪಕ್ಷಿಗಳಿಂದ ಹಿಡಿದು, ನೀರು ಗಿಡಗಳನ್ನು ತಿನ್ನುವ ಪಕ್ಷಿಗಳು, ಚಿಕ್ಕ ಪುಟ್ಟ ಮೀನನ್ನು ಹಿಡಿಯುವ ಪಕ್ಷಿಗಳು, ಹಾವನ್ನೇ ಕಾಡಿ ಹಿಡಿದುಬಿಡುವ ಪಕ್ಷಿಗಳೆಲ್ಲ ನನ್ನ ಮನಸ್ಸನ್ನು ತೃಪ್ತಿಗೊಳಿಸುತ್ತಿದ್ದವು. ಸೂರ್ಯ ಹುಟ್ಟುವಾಗ, ಸೂರ್ಯ ಮುಳುಗುವಾಗ ನನಗಡ್ಡಲಾಗಿ ಕಟ್ಟಿರುವ ಏರಿಯ ಮೇಲೆ ನೀವು ಅಡ್ಡಾಡಿದರೆ ಸಾಕು, ವ್ಯಾಯಾಮಕ್ಕೆ ವ್ಯಾಯಾಮವೂ ಆಯಿತು, ಕಣ್ಣಿಗೆ ಮನಸ್ಸಿಗೆ ಒಂದಷ್ಟು ಸಂತಸವೂ ದಕ್ಕೀತು.

ನನ್ನ ನೀರು ನೆಚ್ಚಿಕೊಂಡು ಬೆಳೆ ಬೆಳೆಯುವ ಪ್ರದೇಶ ಆರು ಸಾವಿರ ಎಕರೆಗಳಿಗಿಂತಲೂ ಅಧಿಕ. ನೀರು ಹರೀತಾನೇ ಇತ್ತು, ಖಾಲಿಯಾದ ನೀರನ್ನು ಮತ್ತೆ ತುಂಬಿಸಲು ಈ ಸಲ ನೆಟ್ಟಗೆ ಮಳೆಯೇ ಆಗಲಿಲ್ಲ. ನನ್ನೊಡಲ ನೀರು ಬರಿದಾಗುತ್ತಿರುವಂತೆಯೇ ಪಕ್ಷಿಗಳ ಸಂಖ್ಯೆಯೂ ಕಡಿಮೆಯಾಗಿಬಿಟ್ಟಿತು. ಪಕ್ಷಿಗಳ ಸಡಗರ ಸಂಭ್ರಮವಿರದೇ ಹೋದರೆ ನನಗೆ ಎಲ್ಲಿಲ್ಲದ ಬೇಸರ. ಹೆಚ್ಚರ್ಲೆ, ದಾಸ ಕೊಕ್ಕರೆ, ಮೀನುಗುಟುರಗಳೆಲ್ಲ ಕಣ್ಮರೆಯೇ ಆಗಿಹೋದವು. ಇದ್ದ ಒಂದಷ್ಟು ನೀರಿನಲ್ಲಿಯೇ ಜಕಾಣ, ಬೆಳ್ಳಕ್ಕಿ, ಹೊಳೆಯುವ ಮೈಬಣ್ಣದ ಐಬಿಸ್, ಬಿಳಿ ಐಬಿಸ್, ಬಾಯ್ಕಳಕ, ಕೆಸರುಗುಪ್ಪಿ, ವಿಧ ವಿಧದ ಬಾತುಕೋಳಿಗಳು ಹೊಂದಿಕೊಂಡು ಜೀವನ ನಡೆಸುತ್ತಿದ್ದುವು. ಕಷ್ಟ ಕಾಲದಲ್ಲಿಯೇ ಅಲ್ಲವೇ ಹೊಂದಾಣಿಕೆ ಮೂಡುವುದು? ಏನೋ ಇಷ್ಟಾದರೂ ಇವೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಂತೆಯೇ ಬರ ಬಡಿಯಿತಲ್ಲ....

ಕೆರೆಯೆಂದು ಸಾಬೀತುಪಡಿಸುವುದಕ್ಕೆ ಪಾದ ಸೋಕುವಷ್ಟು ನೀರಿತ್ತಷ್ಟೆ. ಅಲ್ಲೊಂದು ಇಲ್ಲೊಂದು ಬಿಟ್ಟರೆ ಯಾವ ಪಕ್ಷಿಗಳೂ ಇಲ್ಲ. ಜನರ ಸುಳಿದಾಟವೂ ಇಲ್ಲ. ಅಸುನೀಗುವ ಭೀತಿಯಲ್ಲಿದ್ದೆ. ಸಾವಿಗೆ ಅಂಜಿಕೆಯಿಲ್ಲ. ಪಕ್ಷಿಗಳಿಲ್ಲದೆ ಬೇಸರ. ಇದೇ ಬೇಸರದಲ್ಲಿ ಕೆಲವು ದಿನ ನೂಕಿದೆ. ನನ್ನಂಗಳದಲ್ಲೆಲ್ಲ ಹುಲ್ಲು ಹಾಸು ಬೆಳೆದಿತ್ತು. ಅದೊಂದು ದಿನ ಬೇಸರದಿಂದ ಹೊತ್ತಿಗಿಂತ ಮುಂಚೆಯೇ ನಿದ್ದೆ ಹೋಗಿದ್ದೆ. ಮಾರನೇ ದಿನ ಕಣ್ಣುಬಿಟ್ಟಾಗ ಏನಾಶ್ಚರ್ಯ! ಹುಲ್ಲಿನ ಹಾಸಿನ ತುಂಬೆಲ್ಲ ಪಕ್ಷಿಗಳು. ಇದು ಕನಸಲ್ಲ ತಾನೇ ಎಂದೊಮ್ಮೆ ಜಿಗುಟಿಕೊಂಡು ನೋಡಿದೆ.


(ನೀರಿಲ್ಲದೇ ಕಳೆಗುಂದಿದ್ದ ಕೆರೆ)

ಇಲ್ಲ ಕನಸಲ್ಲ! ಬಿಳಿ ಐಬಿಸ್, ಕೆಂಪು ನೆತ್ತಿಯ ಐಬಿಸ್, ಬೆಳ್ಳಕ್ಕಿಗಳು ನೂರಾರು...ನೂರಾರೇಕೆ ಸಾವಿರಾರು ಸಂಖ್ಯೆಯಲ್ಲಿ ಆಟವಾಡುತ್ತಿದ್ದವು. ಆ ಪಕ್ಷಿಗಳ ಹಿಂಡಿನ ಹಿಂದೆ ಅಗೋ ಅಲ್ಲಿ ಹತ್ತಾರು ಎತ್ತಿನಗಾಡಿಗಳು. ಹೂಳು ತೆಗೆದು ಗಾಡಿಗೆ ತುಂಬಿಕೊಳ್ಳುತ್ತಿದ್ದ ಜನರು. ನೀರಿಲ್ಲದಿದ್ದರೇನಂತೆ, ಪ್ರಕೃತಿ ಮಾತೆ ನನ್ನನ್ನು ಹೊಸ ರೀತಿಯಲ್ಲಿ ಜೀವಂತವಾಗಿರಿಸಿದ್ದಳು. ಇದೇ ಸಮಯಕ್ಕೆ ನಾಲೆಗೆ ನೀರು ಹರಿಸಿದರು.

ಮತ್ತೆ ನನ್ನೊಡಲಲ್ಲಿ ನೀರು ತುಂಬಿದೆ. ಹೆಚ್ಚರ್ಲೆಗಳು ಬರಲಾರಂಭಿಸಿವೆ. ಕೆಸರೊಳಗೆ ಜೀವ ಉಳಿಸಿಕೊಂಡಿದ್ದ ಮೀನುಗಳು ಮತ್ತೆ ಲವಲವಿಕೆಯಿಂದ ಪಕ್ಷಿಗಳ ಕಣ್ಣು ತಪ್ಪಿಸಿ ಓಡಾಡಿಕೊಂಡಿವೆ... ಸುತ್ತಮುತ್ತೆಲ್ಲ ಬರ ಬಿದ್ದಿದೆ. ಕಾಳುಕಡಿ ಕಡಿಮೆಯಾದ ಕಾರಣ ಪಕ್ಷಿಗಳ ಸಂಖ್ಯೆಯೂ ಕಡಿಮೆಯೇ. ಆದರೂ ಹಲವಾರು ಪಕ್ಷಿಗಳು ಮತ್ತೆ ನನ್ನೊಡಲಲ್ಲಿ ನಲಿಯುತ್ತಲಿವೆ. ನೀವು ಈ ಕಡೆ ಬಂದಾಗೊಮ್ಮೆ ಬನ್ನಿ. ಮಂಡ್ಯ ಬೆಂಗಳೂರು ಹೆದ್ದಾರಿಯಲ್ಲಿರುವ ಬೂದನೂರಿನಿಂದ ಒಳಬಂದರೂ ಆಯಿತು, ಅಥವಾ ಮಂಡ್ಯ ಕೆ.ಎಂ. ದೊಡ್ಡಿ ಮಾರ್ಗದಲ್ಲಿ ಬಂದು ನನ್ನ ಸೇರಿದರೂ ಆಯಿತು. ಬಿಡುವು ಮಾಡಿಕೊಂಡು ಬನ್ನಿ ಒಂದ್ಸಲ.
-ಇಂತಿ,
ಸೂಳೆಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT