ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿ ಬಸಿರು: ಸುಮ್ಮನೆ ಅಮ್ಮ ಆದ್ಹಾಗೆ

Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
‘ಯಾಕೊ ಗೊತ್ತಿಲ್ಲ... ನಾಲ್ಕಾರು ತಿಂಗ್ಳಿಂದ ಹೀಗೇ ಆಗುತ್ತಿದೆ... ವಾಂತಿ ಆದಹಾಗೆ, ಹೊಟ್ಟಿ ಭಾರ, ತಲೆ ಸುತ್ತು, ಮುಟ್ಟೂ ಆಗಿಲ್ಲ, ಈ ಸಲ ಆದ್ರೂ ನಿಜವಾದೀತೇನೊ ಅಂತ ಆಸ್ಪತ್ರೆಗೆ ಓಡುವೆ ಮತ್ತೂ ನೆಗೆಟಿವ್... ಇದ್ಯಾಕೆ ಹೀಗೆ...?’ ಕಂಗಾಲಾಗಿದ್ದಳು ಗೆಳತಿ.
 
ಇದನ್ನೇ ‘ಹುಸಿ ಬಸಿರು’ ಎನ್ನುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಸುಳ್ಳು ಗರ್ಭಧಾರಣೆ’ ಅಂದ್ರೆ ‘ಫಾಲ್ಸ್‌ ಪ್ರೆಗ್ನನ್ಸಿ’ ಎನ್ನುತ್ತಾರೆ. ಇದನ್ನು ‘ಸೂಡೊಸೈಸಿಸ್‌’ ಎಂತಲೂ ಕರೆಯುವುದುಂಟು.
 
ತಾಯ್ತನದ ತೀವ್ರ ನಿರೀಕ್ಷೆಯಲ್ಲಿರುವ ಹೆಣ್ಣುಮಕ್ಕಳಲ್ಲಿ ಈ ಭಾವ ಅಧಿಕ. ಇದೂ ಒಂದು ರೀತಿಯಲ್ಲಿ ನಮ್ಮ ಮನಸ್ಸೇ ನಮಗೆ ಸುಳ್ಳು ಹೇಳಿದ ಹಾಗೆ. ಆದರೆ ಎಲ್ಲಾ ತಪ್ಪೂ ಮನಸ್ಸಿನದೇ ಅಂತಲೂ ಹೇಳಲಾಗದು. ಮೆದುಳು ನೀಡುವ ಸುಳ್ಳು ಸಂದೇಶವನ್ನು ಮನಸ್ಸು ತಪ್ಪಾಗಿ ಗ್ರಹಿಸುತ್ತದೆ. ಇದರಲ್ಲಿ ಒಂದಲ್ಲ, ಎರಡಲ್ಲ ಅನೇಕ ಲಕ್ಷಣಗಳು ತೇಟ್ ಬಸಿರನ್ನು ಹೊತ್ತ ಅನುಭವವನ್ನೇ ನೀಡುತ್ತವೆ. ಒಮ್ಮೊಮ್ಮೆ ಹೊಟ್ಟೆಯಲ್ಲಿ ಕೂಸು ಓಡಾಡಿದ ಹಾಗೂ ಆಗುತ್ತದೆ.
 
ಇದು ನಿನ್ನೆ–ಮೊನ್ನೆಯ ದುಗುಡ ಏನಲ್ಲ. ಹಿಂದೆ ಅಜ್ಜಿ–ಮುತ್ತಜ್ಜಿಯರ ಕಾಲದಲ್ಲೂ ಇದಿತ್ತು. ಆಗೆಲ್ಲ ಒಂಬತ್ತು ತಿಂಗಳು ಮುಗಿಯುವವರೆಗೂ ಇದು ಹುಸಿ ಬಸಿರು ಎನ್ನುವ ಸುಳಿವೇ ಸಿಗುತ್ತಿರಲಿಲ್ಲ. ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಹೋದಾಗಲೇ ಇದು ನಿಜದ ಬಸಿರಲ್ಲ ಎನ್ನುವುದು ಗೊತ್ತಾಗುತ್ತಿತ್ತು. ಹೀಗಾದಾಗ ದೇವರ ಮುನಿಸು, ಶಾಪ, ಪಾಪ, ಮಾಟ, ಮಂತ್ರ ಅಂತೆಲ್ಲ ತಿಳಿಯುತ್ತಿದ್ದರು. ಬಸಿರಾಗಿಯೂ ಹೊಟ್ಟೆಯಲ್ಲಿ ಕೂಸಿಲ್ಲ ಎಂದರೆ ಏನೋ ಪವಾಡ ಅಂತಲೂ ತಿಳಿಯುತ್ತಿದ್ದರು. ಆಗ ಇಂತಹ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ ಇತ್ತು.
 
ಹೆಚ್ಚಿವೆ ಪ್ರಕರಣ
ಈಗೀಗ ಈ ಪ್ರಕರಣಗಳು ಹೆಚ್ಚುತ್ತಿವೆ. ವಿಳಂಬವಿವಾಹ ಹಾಗೂ ವಿಳಂಬ–ತಾಯ್ತನದಿಂದಾಗಿ ‘ಹುಸಿ ಬಸಿರಿನ’ ಪ್ರಕರಣಗಳೂ ಹೆಚ್ಚುತ್ತಿವೆ. ತಾಯ್ತನದ ತೀವ್ರ ನಿರೀಕ್ಷೆಯಲ್ಲಿರುವ ಹೆಣ್ಣುಮಕ್ಕಳಿಗಂತೂ ಪ್ರತಿ ತಿಂಗಳೂ ಇಂಥ ಲಕ್ಷಣಗಳು ಕಂಡು ಗೊಂದಲ ಮೂಡಿಸುವುದಿದೆ.
 
ಆದರೆ ಇಂದಿನ ಮಹಿಳೆಯರು ಶಿಕ್ಷಿತರೂ, ತಿಳಿದುಕೊಂಡವರೂ ಆಗಿರುತ್ತಾರೆ. ತಿಂಗಳು ಮುಗಿಯುವ ಒಳಗೇ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದು. ಆದರೂ ಅನುಮಾನವಿದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಮುಟ್ಟು ಮುಂದೂಡಿದ್ದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ. ಈ ಪ್ರಕ್ರಿಯೆ ಮುಗಿಯುವವರೆಗೂ ಮಾತ್ರ ಒಂದು ತೆರನಾದ ಮಾನಸಿಕ ಒತ್ತಡವನ್ನು ಎದುರಿಸಲೇಬೇಕಾಗುತ್ತದೆ.
 
ಯಾಕೆ ಹೀಗೆ?
ಆದರೆ ‘ಯಾಕೆ ಹೀಗೆ?’ ಎನ್ನುವ ಪ್ರಶ್ನೆ ಅನೇಕರನ್ನು ಕಾಡುವುದಿದೆ. ಕೆಲವು ಕಡೆ ವೈದ್ಯರು ಈ ಬಗ್ಗೆ ವಿವರಿಸಿ ಹೇಳುವ ಜೊತೆಗೆ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಾರೆ. ಇನ್ನೂ ಕೆಲವು ವೈದ್ಯರು ಅಷ್ಟೆಲ್ಲ ತೊಂದರೆ ತೆಗೆದುಕೊಳ್ಳಲಿಕ್ಕಿಲ್ಲ.
 
ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟ. ಆದರೂ ಒಂದಷ್ಟು ಕಾರಣಗಳ ಮೇಲೆ ವೈದ್ಯರು ಕಣ್ಣು ಹಾಕಿದ್ದಾರೆ. ‘ಮಹಿಳೆ ಗರ್ಭಧರಿಸುವ ತೀವ್ರ ಅಪೇಕ್ಷೆ ಹೊಂದಿದಾಗ, ಅನೇಕ ದಿನಗಳಿಂದ ಗರ್ಭಧಾರಣೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾಗ, ಅಥವಾ ಪದೇ ಪದೇ ಗರ್ಭಪಾತಕ್ಕೆ ಒಳಗಾಗುತ್ತಿದ್ದಾಗ ಹುಸಿ ಬಸಿರಿನ ಲಕ್ಷಣಗಳು ಕಾಡುವುದುಂಟು. ಅವಳ ದೇಹ ಕೆಲವು ಗರ್ಭಧಾರಣೆಯ ಚಿಹ್ನೆಗಳನ್ನು ಉಂಟುಮಾಡಬಹುದು. ಆಗ ಅವಳ ಮೆದುಳು ಆ ಸಂಕೇತಗಳನ್ನು ಗರ್ಭಧಾರಣೆಯ ಚಿಹ್ನೆಗಳೆಂದು ತಪ್ಪಾಗಿ ಅರ್ಥೈಸಿ, ನಿಜವಾದ ಗರ್ಭಧಾರಣೆಯ ಲಕ್ಷಣಗಳಿಗೆ ಕಾರಣವಾಗುವ ಹಾರ್ಮೋನುಗಳನ್ನು (ಉದಾಹರಣೆಗೆ ಈಸ್ಟ್ರೊಜೆನ್ ಮತ್ತು ಪ್ರೋಲ್ಯಾಕ್ಟಿನ್) ಬಿಡುಗಡೆ ಮಾಡುತ್ತದೆ.
 
ಎಲ್ಲಿದೆ ಪರಿಹಾರ?
ಇದೊಂದು ಕಾಯಿಲೆಯಂತೂ ಅಲ್ಲ ಎನ್ನುವುದನ್ನು ತಿಳಿದುಕೊಂಡ ಮೇಲೆ ಪರಿಹಾರ ಔಷಧಿಯಲ್ಲಿಲ್ಲ ಎನ್ನುವುದೂ ಸ್ಪಷ್ಟ. ಆದರೆ ಕೆಲವು ವೈದ್ಯಕೀಯ ತಪಾಸಣೆಗಳಿಗೆ ಒಳಗಾಗಬೇಕಾಗುತ್ತದೆ. ಆಗ ಕಾರಣ ಗ್ರಂಥಿಗಳ ಸ್ರವಿಸುವಿಕೆಯಲ್ಲಿದೆಯೊ, ಹಾರ್ಮೋನುಗಳಲ್ಲಿದೆಯೊ ಅಥವಾ ಮನಸ್ಸಿನಲ್ಲಿದೆಯೊ ಎನ್ನುವುದು ತಿಳಿದು ಬರುತ್ತದೆ. ಹಾರ್ಮೋನ್‌ನಿಂದ ಈ ವ್ಯತ್ಯಾಸಗಳು ಕಂಡುಬರುತ್ತಿರುವುದು ತಿಳಿದು ಬಂದರೆ ಅದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಲಾಗುತ್ತದೆ.
 
ಎಲ್ಲಕ್ಕಿಂತಲೂ ಮುಖ್ಯವಾಗಿ ಅಂತಹ ಮಹಿಳೆಯರಿಗೆ ಧೈರ್ಯ ಹೇಳಿ, ಮಾನಸಿಕ ಸ್ಥೈರ್ಯ ತುಂಬಬೇಕಾದ ಜವಾಬ್ದಾರಿ ವೈದ್ಯರ ಮೇಲಿರುತ್ತದೆ. ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚಾಗಿ ಕಾಣುವುದರಿಂದ ಅವರಿಗೆ ಬಂಜೆತನದ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.
 
**
ಆತ್ಮಸ್ಥೈರ್ಯದ ಅಗತ್ಯ
ಗರ್ಭಾವಸ್ಥೆಯ ಬಹುತೇಕ ಎಲ್ಲಾ ಲಕ್ಷಣಗಳನ್ನೂ ನಾವಿಲ್ಲಿ ಕಾಣಬಹುದು. ಸಮಯಕ್ಕೆ ಸರಿಯಾಗಿ ಮುಟ್ಟಾಗದೇ ಇರುವುದು, ಹೊಟ್ಟೆ ಉಬ್ಬುವುದು, ಸ್ತನಗಳಲ್ಲಿ ಬದಲಾವಣೆ, ಹೊಟ್ಟೆಯಲ್ಲಿ ಮಗು ಚಲಿಸಿದಂತೆ ಆಗುವುದು, ವಾಕರಿಕೆ ಮತ್ತು ವಾಂತಿ, ತೂಕ ಹೆಚ್ಚಳ ಇತ್ಯಾದಿ.
 
ತಾನು ಬಸುರಿ ಎಂದು ನಂಬಿ ಬಂದ ಮಹಿಳೆಗೆ ಅದು ಸುಳ್ಳು ಎಂದು ಹೇಳುವುದು ದೊಡ್ಡ ಸವಾಲಿನ ಸಂಗತಿಯೇ ಸರಿ. ಮೊದಲು ಅಂಥದ್ದೊಂದು ಕಹಿ ಸತ್ಯವನ್ನು ಅರಗಿಸಿಕೊಳ್ಳುವ ಮನಃಸ್ಥಿತಿಗೆ ಅವಳನ್ನು ತರಬೇಕು. ನಂತರ ಅದರ ಬಗ್ಗೆ ತಿಳಿ ಹೇಳಬೇಕು. ಕಾರಣ ಪರಿಣಾಮಗಳ ಬಗ್ಗೆ ವಿವರಿಸಬೇಕು. ಜೊತೆಗೆ ಮುಂದೆ  ಅವಳ ಗರ್ಭದಲ್ಲಿ ನಿಜಕ್ಕೂ  ನವಜೀವವೊಂದು  ಕುಡಿಯೊಡೆಯುವ ಹಾಗೆ ಚಿಕಿತ್ಸೆ ನೀಡಬೇಕಾಗುತ್ತದೆ.
 
ಹಾರ್ಮೋನ್‌ ವ್ಯತ್ಯಾಸಗಳ ಜೊತೆಗೆ ತಾಯಿಯಾಗುವ ಹೆಬ್ಬಯಕೆಯ ಮನಃಸ್ಥಿತಿಯೂ ಸೇರಿ ‘ಹುಸಿ ಬಸಿರು’ ಭಾವ ಬೆಳೆಯುತ್ತದೆ. ಖಿನ್ನತೆಯ ಇತಿಹಾಸ ಇರುವವರಲ್ಲಿ ಈ ಸಾಧ್ಯತೆ ಹೆಚ್ಚು. ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೂ ಸಹ ಈ ಸ್ಥಿತಿಗೆ ಬಲು ಬೇಗ ಜಾರುವುದುಂಟು. ಯಾವುದೇ ದೈಹಿಕ ಕಾರಣಗಳು ಕಂಡುಬಂದಲ್ಲಿ ಅದಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಅಂತಹ ಮಹಿಳೆಗೆ ಅತ್ಯುತ್ತಮ ಮಾನಸಿಕ ಸಮಾಲೋಚನೆಯ ಅಗತ್ಯವಿರುತ್ತದೆ.
-ಡಾ. ಶೋಭಾ ವೆಂಕಟ್‌, ಸ್ತ್ರೀರೋಗತಜ್ಞೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT