ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕಿಯರ ಸಂಘದ ಸಾಹಿತ್ಯಪಯಣ

Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನಾಡಿನ ಲೇಖಕಿಯರ ದನಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಲೇಖಕಿಯರ ಸಂಘ, ಇದುವರೆಗೆ ಸಂಘಕ್ಕಾಗಿ ದುಡಿದ ಎಂಟೂ ಜನ ಅಧ್ಯಕ್ಷೆಯರ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದೆ. ಪ್ರತಿಯೊಬ್ಬರ ಬಾಲ್ಯ, ವಿದ್ಯಾಭ್ಯಾಸ, ಬದುಕು, ಬರಹ ಮತ್ತು ಅವರು ಸಂಘಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಒಂದು ಪ್ರಯತ್ನವಿದು.
 
ಡಿಸೆಂಬರ್‌ 12ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಾಕ್ಷ್ಯಚಿತ್ರಗಳ ಬಿಡುಗಡೆ ಸಮಾರಂಭ ನಡೆಯಲಿದ್ದು, ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಅವರು ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ. 80ರ ಸಂಭ್ರಮದಲ್ಲಿರುವ ನಾಗಮಣಿ ಎಸ್‌. ರಾವ್‌ ಅವರಿಗೆ ಸಂಘವು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಿದೆ. 
 
ಬೆರಳೆಣಿಕೆಯಷ್ಟು ಸದಸ್ಯರೊಂದಿಗೆ 1979 ಜನವರಿ 26ರಂದು ಆರಂಭವಾಗಿ ಇಂದು ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಲೇಖಕಿಯರ ಸಂಘಕ್ಕೆ ಟಿ. ಸುನಂದಮ್ಮ ಅವರು ಮೊದಲ ಅಧ್ಯಕ್ಷರಾಗಿದ್ದರು. ಆನಂತರ ಎಚ್‌.ಎಸ್‌. ಪಾರ್ವತಿ, ಹೇಮಲತಾ ಮಹಿಷಿ, ನಾಗಮಣಿ ಎಸ್‌. ರಾವ್‌, ಶಶಿಕಲಾ ವೀರಯ್ಯಸ್ವಾಮಿ ವಸ್ತ್ರದ, ಉಷಾ ಪಿ. ರೈ, ಕೆ.ಆರ್‌. ಸಂಧ್ಯಾರೆಡ್ಡಿ ಅವರು ಸಂಘವನ್ನು ಮುನ್ನಡೆಸಿದ್ದರು. ಪ್ರಸ್ತುತಡಾ. ವಸುಂಧರಾ ಭೂಪತಿ ಅವರು ಅಧ್ಯಕ್ಷರಾಗಿದ್ದಾರೆ. ಅವರು ಸಂಘದ ಕಾರ್ಯಚಟುವಟಿಕೆಗಳನ್ನು ಕುರಿತು ಇಲ್ಲಿ ಸ್ಮರಿಸಿದ್ದಾರೆ. 
 
 
ಸಂಘಸ್ಥಾಪನೆಗೆ ಲೇಖಕಿಯರ ಮುನ್ನುಡಿ 
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ವಿಶಾಲ ಮೈಸೂರು ರಾಜ್ಯ ಕರ್ನಾಟಕವೆಂದು ಮರುನಾಮಕರಣಗೊಂಡಾಗ ಲೇಖಕಿಯರು ಸಾಕಷ್ಟು ಸಂಖ್ಯೆಯಲ್ಲಿದ್ದರು. ನಾನಾ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗುತ್ತಿದ್ದವು. ಆದರೂ ಅವರ ಸಾಹಿತ್ಯ ‘ಅಡುಗೆಮನೆ ಸಾಹಿತ್ಯ’ ಎಂಬ ಹಣೆಪಟ್ಟಿ ಇತ್ತು. ಲೇಖಕಿಯರಿಗೆ ಹೆಚ್ಚಿನ ಪ್ರೋತ್ಸಾಹವಿರಲಿಲ್ಲ. ಇದನ್ನೆಲ್ಲ ಗಮನಿಸಿ ಟಿ. ಸುನಂದಮ್ಮ, ಚಿ.ನ. ಮಂಗಳಾ, ನಿರುಪಮಾ, ನಾಗಮಣಿ ಎಸ್‌. ರಾವ್‌, ಲೀಲಾದೇವಿ ಆರ್‌. ಪ್ರಸಾದ್‌, ಪ್ರಮಿಳಾ ನೇಸರ್ಗಿ, ಎ. ಪಂಕಜಾ, ಹೇಮಲತಾ ಮಹಿಷಿ, ಉಷಾದೇವಿ, ಗೀತಾ ದೇಸಾಯಿ, ಶಾಂತಾ ನಾಗರಾಜ್‌ – ಹೀಗೆ ಅನೇಕ ಲೇಖಕಿಯರು ಕನ್ನಡ ಸಾಹಿತ್ಯ ಪರಿಷತ್ತಿನ ಆಗಿನ ಅಧ್ಯಕ್ಷ ನಾರಾಯಣ ಅವರೊಂದಿಗೆ ಚರ್ಚಿಸಿ ಲೇಖಕಿಯರಿಗಾಗಿಯೇ ಪ್ರತ್ಯೇಕ ಸಂಘವೊಂದನ್ನು ಸ್ಥಾಪಿಸಬೇಕೆಂದು ನಿರ್ಧರಿಸಿದರು. ಇದರ ಫಲವಾಗಿ ಸಂಘವು ಆರಂಭವಾಯಿತು.
 
ಕಾರ್ಯಚಟುವಟಿಕೆಗಳ ವಿಸ್ತರಣೆ
ಕವಿ ವಿ.ಕೃ. ಗೋಕಾಕ್‌ ಅವರು ಸಂಘಟನೆಗೆ ಚಾಲನೆ ನೀಡಿದರು. ನಾರಾಯಣ ಅವರ ವಿನೋದ ಪತ್ರಿಕಾ ಮುದ್ರಣಾಲಯ ಸಂಘದ ಆರಂಭಿಕ ಕಚೇರಿಯಾಗಿತ್ತು. ಕಾರ್ಯಕಾರಿ ಸಮಿತಿ ಸದಸ್ಯರೆಲ್ಲ ಸೇರಿ ತಲಾ ನೂರು ರೂಪಾಯಿ ನೀಡಿ ಸಂಘದ ಆಜೀವ ಸದಸ್ಯರಾದರು. ಅದರಿಂದಲೇ ಕಾರ್ಯಕ್ರಮಗಳನ್ನು ನಡೆಸಲಾಯಿತು. ‘ಕಥಾಲೋಕ’, ‘ಅರಳುವ ಮೊಗ್ಗು’ ಕೃತಿಗಳನ್ನು ಪ್ರಕಟಿಸಲಾಯಿತು. ಟಿ. ಸುನಂದಮ್ಮ ಅವರ ನಂತರ ಎಚ್‌.ಎಸ್‌. ಪಾರ್ವತಿ ಅವರು ಅಧ್ಯಕ್ಷರಾದರು. ಆರು ತಿಂಗಳ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ನಿರ್ವಹಿಸಿದರು. ಅವರ ಅವಧಿಯಲ್ಲಿಯೇ ಸಂಘದ 3ನೇ ವಾರ್ಷಿಕೋತ್ಸವ ಜರುಗಿತು. 5ನೇ ವಾರ್ಷಿಕೋತ್ಸವದಲ್ಲಿ ತುಮಕೂರಿನ ಸುಲೋಚನಾ ಆರಾಧ್ಯ ಅವರ ‘ಸೋಬಾನೆ ಎನ್ನಿರೆ ಸೋಬಾನೆ ಎನ್ನಿರೋ’ ಕ್ಯಾಸೆಟ್‌ ಬಿಡುಗಡೆಯಾಯಿತು. 
 
ಸ್ವಂತ ಕಟ್ಟಡಕ್ಕೆ ಪದಾರ್ಪಣೆ
1985 ಸಂಘದ ಪಾಲಿಗೆ ಮಹತ್ವಪೂರ್ಣ ವರ್ಷ. ಸಂಘದ ಮೊದಲ ಸಮ್ಮೇಳನ ನಡೆದ ವರ್ಷವದು. ಲೇಖಕಿ ಮತ್ತು ಸಂಸದೆ ಸರೋಜಿನಿ ಮಹಿಷಿ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಉಳಿತಾಯ ಹಣ ಮತ್ತು ದಾನಿಗಳ ದೇಣಿಗೆಯಲ್ಲಿ ಚಾಮರಾಜಪೇಟೆಯಲ್ಲಿ ಕೊಠಡಿಯ ಬಾಡಿಗೆ ಪಡೆದು ಸಂಘದ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. 1999ರಲ್ಲಿ ನಾಗಮಣಿ ಎಸ್‌. ರಾವ್‌ ಅವರು ಅಧ್ಯಕ್ಷರಾಗಿದ್ದಾಗ ಸ್ವಂತ ಫ್ಲ್ಯಾಟ್‌ ಖರೀದಿಸಲು ಸಾಧ್ಯವಾಗಿದ್ದು ಸಂಘದ ಹೆಗ್ಗಳಿಕೆ. ಹೇಮಲತಾ ಮಹಿಷಿ ಅವರು ಅಧ್ಯಕ್ಷರಾಗುವ ಹೊತ್ತಿಗೆ ಸಂಘ ಸ್ವತಂತ್ರವಾಗಿ ಬೆಳೆದಿತ್ತು. ಮಹಿಷಿ ಅವರು ಸಂಘಟನೆಯನ್ನು ಮತ್ತಷ್ಟು ಬಲಪಡಿಸಿದರು. ಇತರೆ ಯಾವುದೇ ಭಾಷೆಯಲ್ಲಿ ಲೇಖಕಿಯರಿಗೆಂದೇ ಪ್ರತ್ಯೇಕ ಸಂಘವಿರಲಿಲ್ಲ. ಕನ್ನಡದಲ್ಲಿ  ಮಾತ್ರವೇ ಇಂತಹ ಸಂಘಟನೆ ರೂಪುಗೊಂಡಿದ್ದು. ಸಮ್ಮೇಳನಕ್ಕೆ ಅತಿಥಿಗಳಾಗಿ ಬಂದಿದ್ದ ಹೊರನಾಡಿನ ಲೇಖಕಿಯರಾದ ಪ್ರತಿಭಾ ರೇ ಮತ್ತು ವೋಲ್ಗಾ ಅವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ಕೃತಿಗಳ ಬಿಡುಗಡೆ
ಮಹಿಷಿ ಅವರ ಅವಧಿಯಲ್ಲಿಯೇ ನಿರ್ಲಕ್ಷಿಸಲ್ಪಟ್ಟಿದ್ದ ಲೇಖಕಿಯರ ಬದುಕು, ಬರಹ, ಸಾಧನೆಗಳ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಲಾಯಿತು. ಲೇಖಕಿ ಅನುಪಮಾ ನಿರಂಜನ ಅವರ ಹೆಸರಿನಲ್ಲಿ ಸೇರಿದಂತೆ ಎರಡು ಪ್ರಮುಖ ದತ್ತಿ ನಿಧಿಗಳು ಸ್ಥಾಪನೆಯಾದವು. 
 
ಎಂ.ಕೆ. ಇಂದಿರಾ ಅವರಿಗೆ 75 ತುಂಬಿದಾಗ ಅವರ ಸಮಗ್ರ ಸಾಹಿತ್ಯವನ್ನು ಕುರಿತು ‘ಸುರಗಿ’ ಅಭಿನಂದನಾ ಗ್ರಂಥ ಹೊರತರಲಾಯಿತು. ಟಿ. ಸುನಂದಮ್ಮ ಅವರ ಸಮಗ್ರ ಹಾಸ್ಯಸಾಹಿತ್ಯದ ಬೃಹತ್‌ ಗ್ರಂಥವನ್ನೂ ಪ್ರಕಟಿಸಲಾಯಿತು. ಅನಂತರ  ಹಿಂದಿನ ಮತ್ತು ಇಂದಿನ ತಲೆಮಾರಿನ ಲೇಖಕಿಯರು ಎದುರಿಸಿದ ಅಡ್ಡಿ–ಆತಂಕಗಳು, ಇತಿಮಿತಿಗಳನ್ನು ತಿಳಿಸುವ ‘ಲೇಖ–ಲೋಕ’ ಪುಸ್ತಕ ಸರಣಿ ಯನ್ನು ನಾಗಮಣಿ ಎಸ್‌. ರಾವ್‌ ಅವರ ಅವಧಿಯಲ್ಲಿ ಪ್ರಾರಂಭಿಸಲಾಯಿತು. ಇದುವರೆಗೆ ಒಟ್ಟು ಆರು ಸಂಪುಟಗಳು ಮುದ್ರಣಗೊಂಡಿವೆ. 
 
ಕಾರ್ಯಾಗಾರಗಳ ಆಯೋಜನೆ
ಉಷಾ ಪಿ. ರೈ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಲೇಖಕಿಯರ ಭಾವಚಿತ್ರಗಳನ್ನು ಕಚೇರಿಯಲ್ಲಿ ಪ್ರದರ್ಶಿಸಲಾಯಿತು. ವ್ಯವಸ್ಥಿತವಾದ ಗ್ರಂಥಾಲಯವನ್ನು ಸಜ್ಜುಗೊಳಿಸಲಾಯಿತು. ಇದು ಮಹಿಳಾ ಸಾಹಿತ್ಯ ಮತ್ತು ಮಹಿಳಾ ಅಧ್ಯಯನದಲ್ಲಿ ಸಂಶೋಧನೆ ನಡೆಸುವವರಿಗೆ ಮಾಹಿತಿ ಕೇಂದ್ರವಾಗಿ ಸಂಘ ಹೊರಹೊಮ್ಮಿತು. ಕೆ.ಆರ್‌. ಸಂಧ್ಯಾ ರೆಡ್ಡಿ ಅವರು ರಾಜ್ಯಮಟ್ಟದ ಹವ್ಯಾಸಿ ಪತ್ರಿಕೋದ್ಯಮ ಶಿಬಿರ, ಚಿತ್ರದುರ್ಗದ ಸಾಣೆಹಳ್ಳಿಯಲ್ಲಿ ರೂಪಕ ಸಾಹಿತ್ಯರಚನಾ ಶಿಬಿರ, ಗ್ರಾಮೀಣ ಯುವ ಬರಹಗಾರ್ತಿಯರ ಶಿಬಿರ, ಶಿವಮೊಗ್ಗದಲ್ಲಿ ಲೇಖಕಿಯರ ನಾಟಕಗಳು ಮತ್ತು ಪ್ರಯೋಗ ಶಿಬಿರಗಳು ನಡೆದವು.
 
ಕ್ರಿಯಾಶೀಲತೆಯ ಮೆರುಗು
ಇತ್ತೀಚಿನ ವರ್ಷಗಳಲ್ಲಿ ಲೇಖಕಿಯರಿಗಾಗಿ ಕಂಪ್ಯೂಟರ್‌ ಕಾರ್ಯಾಗಾರ, ಪ್ರಕಾಶನ ಕಮ್ಮಟ, ಮಹಿಳಾ ಅಭಿವ್ಯಕ್ತಿ ಕುರಿತ ವಿಚಾರಸಂಕಿರಣ, ಕವಯಿತ್ರಿಯರಿಗಾಗಿ ಗೇಯಗೀತೆಗಳ ಕಮ್ಮಟಗಳನ್ನು ಆಯೋಜಿಸಲಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಆರಂಭಿಸಲಾದ ‘ಸಾಧಕಿಯರೊಂದಿಗೆ ಸಂವಾದ’ ಕಾರ್ಯಕ್ರಮ ಹಲವರ ಮೆಚ್ಚುಗೆ ಗಳಿಸಿತು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಪ್ರಾರಂಭಿಸಿರುವ ‘ಸಾಧಕರೊಂದಿಗೆ ಸಂವಾದ’ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 1992ರಿಂದ 2014ರವರೆಗೆ ಅನುಪಮಾ ಪ್ರಶಸ್ತಿ ವಿಜೇತ ಲೇಖಕಿಯರ ಸಾಕ್ಷ್ಯಚಿತ್ರಗಳ ನಿರ್ಮಾಣ, ಹೆಸರಾಂತ ಕವಯಿತ್ರಿಯರ ಭಾವಗೀತೆಗಳ ‘ಅವಳೇ ಅವಳು’ ಧ್ವನಿಸಾಂದ್ರಿಕೆ ಬಿಡುಗಡೆ ಸಂಘದ ಕ್ರಿಯಾಶೀಲತೆಗೆ ಉದಾಹರಣೆ. 
 
ಮಹಿಳಾ ವಿಜ್ಞಾನ ಲೇಖಕಿಯರ ಲೇಖನಗಳ ಸಂಕಲನ ‘ವಿಜ್ಞಾನಸಿರಿ’, ಲೇಖಕಿಯರ ವಿವರಗಳನ್ನು ಒಳಗೊಂಡ ‘ಮಾಹಿತಿಕೋಶ’ ಬೆಳಕು ಕಂಡವು. ಇಬ್ಬರು ಅಧ್ಯಕ್ಷರ ಅವಧಿಯಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಮಾಹಿತಿ ಕಲೆ ಹಾಕಿ ಸುದೀರ್ಘ ಪರಿಶ್ರಮದಿಂದ ಈ ಕೃತಿ ಹೊರಬಂದಿದೆ. ಉಷಾ ಪಿ. ರೈ ಅವರ ಅವಧಿಯಲ್ಲಿ ಸಂಘದ ವೆಬ್‌ಸೈಟ್‌ ಆರಂಭವಾಗಿತ್ತು. ನಂತರದಲ್ಲಿ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. 2013ರಲ್ಲಿ ಜರುಗಿದ ಸಂಘದ 7ನೇ ಸಮ್ಮೇಳನದಲ್ಲಿ ವೆಬ್‌ಸೈಟ್‌ಗೆ (www.lekhakiyarasangha.org) ಮತ್ತೆ ಚಾಲನೆ ನೀಡಲಾಯಿತು. ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಗದಗ, ಬಾಗಲಕೋಟೆ, ಮಂಡ್ಯ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ಸಂಘದ ಘಟಕಗಳು ಆರಂಭವಾದವು. ಹೀಗೆ ಕಳೆದ 37 ವರ್ಷಗಳಿಂದ ವೈವಿಧ್ಯಮಯ ಮತ್ತು ರಚನಾತ್ಮಕ ಕೆಲಸಗಳ ಮೂಲಕ ಲೇಖಕಿಯರ ಸಂಘವು ದೇಶದಲ್ಲಿಯೇ ವ್ಯವಸ್ಥಿತ ಮತ್ತು ಹೆಚ್ಚು ಸದಸ್ಯೆಯರನ್ನು ಒಳಗೊಂಡ ಸಂಘಟನೆ ಎಂಬ ಖ್ಯಾತಿಗೆ ಪಾತ್ರವಾಗಿದೆ. 
 
ಒಬ್ಬೊಬ್ಬ ಅಧ್ಯಕ್ಷರೂ ತಮ್ಮ ಅವಧಿಯಲ್ಲಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಸಂಘದ ಬೆಳವಣಿಗೆಗೆ ಉನ್ನತ ಕೊಡುಗೆಗಳನ್ನು ನೀಡಿದ್ದಾರೆ. ಅದನ್ನು ದಾಖಲಿಸುವುದು ಅಗತ್ಯ ಎನಿಸಿ ಟಿ. ಸುನಂದಮ್ಮ ಅವರನ್ನು ಹೊರತುಪಡಿಸಿ ಎಲ್ಲರ ಸಾಕ್ಷ್ಯಚಿತ್ರಗಳ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿತ್ತು. ಬಿ.ಟಿ. ಲಲಿತಾ ನಾಯಕ್‌ ಅವರು ಅನುಪಮಾ ಪ್ರಶಸ್ತಿ ವಿಜೇತೆಯಾಗಿರುವುದರಿಂದ ಅವರನ್ನು ಕುರಿತ ಸಾಕ್ಷ್ಯಚಿತ್ರವನ್ನೂ  ನಿರ್ಮಿಸಲಾಗಿದೆ. ನಿರ್ದೇಶಕ ಡಿ.ಎಸ್‌. ಸುರೇಶ್‌ ಅವರು ನಾಗಮಣಿ ಎಸ್‌. ರಾವ್‌ ಅವರ ಅವಧಿಯಲ್ಲಿಯ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಯೋಜನೆಯ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ನೆನೆಯಲು ಇಚ್ಛಿಸುತ್ತೇನೆ–  ಎನ್ನುತ್ತಾರೆ ವಸುಂಧರಾ.
 
ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಗಡಿನಾಡಿನ ನೂರಕ್ಕೂ ಹೆಚ್ಚು ಕವಯಿತ್ರಿಯರ ತಲಾ ಐದು ಕವಿತೆಗಳ ‘ನನ್ನ ಕವಿತೆ–ನನ್ನ ಹಾಡು’ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಯೋಜನೆ ಸಂಘದ ಮುಂದಿದೆ.
 
**
ಲೇಖಕಿಯರ ಸಂಘಕ್ಕೆ ದುಡಿದ ಮಾನಿನಿಯರು
ಕಾಲೇಜು ಮೆಟ್ಟಿಲು ಹತ್ತದಿದ್ದರೂ, ಕಲಿಯುವ ಆಸಕ್ತಿ ಮತ್ತು ಛಲದಿಂದಾಗಿ ಸ್ವ–ಅಧ್ಯಯನದ ಮೂಲಕ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದವರು ಎಚ್‌.ಎಸ್‌. ಪಾರ್ವತಿ. ಲೇಖಕಿಯಾಗಿ ಅಲ್ಲದೇ ಸಂಘಟಕಿಯಾಗಿ, ಆಕಾಶವಾಣಿ ಕಲಾವಿದೆಯಾಗಿ ಮಾಡಿದ ಕೆಲಸಗಳ ವಿವರ ಸಾಕ್ಷ್ಯಚಿತ್ರದಲ್ಲಿ ಉತ್ತಮವಾಗಿ ಮೂಡಿಬಂದಿದೆ.

ವೃತ್ತಿಯ ಜೊತೆಗೆ ಸಮಾಜಿಕ ಸಂಗತಿಗಳಿಗೆ ಬರಹ ಮತ್ತು ಭಾಷಣಗಳ ಮೂಲಕ ಸ್ಪಂದಿಸಿದ ಹೇಮಲತಾ ಮಹಿಷಿ ಅವರ ವಿಸ್ತೃತ ಕಾರ್ಯಚಟುವಟಿಕೆಗಳು ಸ್ಫೂರ್ತಿದಾಯಕವಾಗಿವೆ. ಆಕಾಶವಾಣಿ ಪ್ರದೇಶ ಸಮಾಚಾರದ ಮೂಲಕ ನಾಡಿನ ಮನೆ ಮಾತಾಗಿದ್ದ ನಾಗಮಣಿ ಎಸ್‌. ರಾವ್‌ ಅವರಿಗೆ ವಿಧಾನಮಂಡಲ ಕಲಾಪ ವರದಿ ಮಾಡಿದ ಪ್ರಥಮ ಪತ್ರಕರ್ತೆ ಎನ್ನುವ ಹೆಗ್ಗಳಿಕೆ ಇದೆ. ಇಂತಹ ಅದೆಷ್ಟೋ ರೋಚಕ ಸಂಗತಿಗಳು ಚಿತ್ರದಲ್ಲಿ ದಾಖಲಾಗಿವೆ.

ಉತ್ತರ ಕರ್ನಾಟಕದ ಭಾಷಾ ಸೊಗಡಿನಲ್ಲಿಯೇ ಕಾವ್ಯಗಳನ್ನು ರಚಿಸಿದ ಶಶಿಕಲಾ ವೀರಯ್ಯಸ್ವಾಮಿ ವಸ್ತ್ರದ ಅವರು ಗದ್ಯ, ಕಾದಂಬರಿ, ಸಂಪಾದನಾ, ಪತ್ರಿಕಾ ವೃತ್ತಿ, ಆಡಳಿತ ಕಚೇರಿಗಳಲ್ಲಿ ಸಲ್ಲಿಸಿದ ಸೇವೆ; ಬ್ಯಾಂಕ್‌ ಅಧಿಕಾರಿಯಾಗಿದ್ದ ಉಷಾ ಪಿ. ರೈ ಅವರು ಸಾಹಿತ್ಯ ಸೆಳೆತಕ್ಕೆ ಸಿಲುಕಿದ ಕಥೆ; ಸಂಧ್ಯಾ ರೆಡ್ಡಿ ಅವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ, ಅವರ ತಾಯಿ ಅನಸೂಯ ಅವರ ಪ್ರೇರಣೆಯಿಂದ ಲೇಖಕಿಯಾಗಿ ಬೆಳೆದದ್ದು;  ಬಿ.ಟಿ. ತುಳಸಮ್ಮ ಬಿ.ಟಿ. ಲಲಿತಾ ನಾಯಕ್‌ ಆಗಿ ರೂಪುಗೊಂಡಿದ್ದು; ವಸುಂಧರಾ ಅವರ ಪ್ರೀತಿ ಮತ್ತು ಲೇಖಕಿಯಾಗಿ ರೂಪುಗೊಂಡ ರೀತಿ... – ಹೀಗೆ ಅನೇಕ ಸಂಗತಿಗಳನ್ನು ನಿರ್ದೇಶಕ ಸುರೇಶ್‌ ಅವರು ಸಾಕ್ಷ್ಯಚಿತ್ರಗಳಲ್ಲಿ ಅದ್ಭುತವಾಗಿ ನಿರೂಪಿಸಿದ್ದಾರೆ. ಎಲ್ಲ ಲೇಖಕಿಯರ ಹುಟ್ಟೂರು, ಶಾಲಾ–ಕಾಲೇಜು, ಕೆಲಸ ನಿರ್ವಹಿಸಿದ ಮತ್ತು ಹಾಲಿ ನಿರ್ವಹಿಸುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅವರ ಸ್ನೇಹಿತರು, ಒಡನಾಡಿಗಳು ಮತ್ತು ಕುಟುಂಬ ಸದಸ್ಯರನ್ನು ಮಾತನಾಡಿಸಿದ್ದು, ನೈಜತೆಯ ಅನುಭವವನ್ನು ನೀಡುತ್ತದೆ.
 
**
ಸಾಕ್ಷ್ಯಚಿತ್ರಗಳ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭ
ದಿನಾಂಕ:
12.12.2016
ಸಮಯ: ಬೆಳಿಗ್ಗೆ 10.30
ಸ್ಥಳ: ನಯನ ಸಭಾಂಗಣ, ಬೆಂಗಳೂರು
ಮಾಹಿತಿಗೆ: 9986840477

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT