ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಭೇರುಂಡದ ಎರಡು ಕೊರಳಿನ ದನಿ

Last Updated 12 ಡಿಸೆಂಬರ್ 2016, 20:32 IST
ಅಕ್ಷರ ಗಾತ್ರ

‘ಏನೇ ಬಂದರೂ ನೀತಿ ಬಿಡದಿರುವುದು ಹೇಗೆ ಎಂಬ ಶಾಸ್ತ್ರವನ್ನು ಕಲಿಸುವ ದೇಶ ಸುಖವಾಗಿರುತ್ತದೆ’ ಎಂದು ರಸ್ಕಿನ್‌ನಿಂದ ಅರಿತ ಗಾಂಧೀಜಿಯ ಪಾಠವನ್ನು ಜನರಿಗೆ ತಿಳಿಸುವುದು ನಾಯಕರ ಕರ್ತವ್ಯವಲ್ಲವೇ! ‘ಜನಧನ ಖಾತೆಗಳಿಗೆ ಹಣ ಹಾಕುತ್ತೇನೆಂದು ಮಾತು ಕೊಟ್ಟಿದ್ದೆ; ಈಗದು ಬಂದಿದೆ; ಅದು ನಿಮ್ಮದು. ವಾಪಸು ಕೊಡಬೇಡಿ’ ಎಂದು ಉತ್ತರ ಪ್ರದೇಶದ ಮೊರಾದಾಬಾದಿನಲ್ಲಿ ಪ್ರಧಾನಿಯವರು ಗಾಂಧಿ ನೋಟಿನ ಅರ್ಥಶಾಸ್ತ್ರ ಹೇಳಿದ್ದಾರೆ.

ಇದರೊಂದಿಗೆ, ‘ಇದು ಕಡೆಯ ಸರತಿಯ ಸಾಲು. ನಾನು ನಿಮ್ಮ ಬಳಿಗೆ ಬರುವ ಬೈರಾಗಿ; ನಿಮ್ಮ ಜೇಬಿನೊಳಗೆ ದೇಶದ ಬ್ಯಾಂಕುಗಳಿವೆ’ ಎಂದು ಬಡವರೆಲ್ಲ ಸಿರಿವಂತರಾದ ಮಾಂತ್ರಿಕ ಭಾಷಣ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ದೇಶದ ದೊಡ್ಡ ಧನಿಕ ಮುಕೇಶ್ ಅಂಬಾನಿ, ‘ಜಿಯೊ ಪಡೆಯಿರಿ ಮಾರ್ಚ್‌ವರೆಗೂ ಮಾತು ವ್ಯವಹಾರವೆಲ್ಲ ಪುಕ್ಕಟೆ’ ಎಂದು ಹೇಳಿದ್ದಾರೆ.

ಇದೇನು? ದೇಶದಲ್ಲಿ ಬಡತನ ಮಾಯವಾಯಿತೇ? ಬಡವ– ಬಲ್ಲಿದರ ಅಂತರ ಇಲ್ಲವಾಯಿತೇ? ಇದೇನು ಕನಸೋ ನನಸೋ? ಎಂದು ಭ್ರಮೆಯಲ್ಲಿ ಪ್ರಜೆಗಳು ಆಲಿಸುತ್ತಿದ್ದಾರೆ. ಈ ಆಲಿಕೆ ಗಂಡಭೇರುಂಡ ಪಕ್ಷಿಯ ಎರಡು ಕೊರಳಿನ ದನಿಯೇ? ಈ ಪಕ್ಷಿ ಕಾಲ್ಪನಿಕವೋ, ಪುನಃ ಬಂದಿರುವ ಆಳುವವರ ರಾಜಚಿಹ್ನೆಯೋ? ಒಂದೂ ಅರಿಯದ ಸ್ಥಿತಿ ಈಗ ಭಾರತದ ಪ್ರಜೆಗಳನ್ನು ಕಾಡುತ್ತಿದೆ.

‘ಸದ್ಯಕ್ಕೇನೂ  ಹೇಳುವುದಿಲ್ಲ’ ಎಂದು ಚದುರಂಗದ ಕಾಯಿ ನಡೆಸುತ್ತಾ ಬುದ್ಧನಾಡಿನ ನಿತೀಶ್‌ಕುಮಾರ್ ಮೌನವಾಗಿದ್ದಾರೆ. ‘ಇದೊಂದು ಆರ್ಥಿಕ ತುರ್ತು ಪರಿಸ್ಥಿತಿ. ಸೇನೆಯ ನಡುವಿನ ಬದುಕು’ ಎಂದು ಕವಿ ರವೀಂದ್ರರ ನಾಡಿನ ದೀದಿ ಅಬ್ಬರಿಸುತ್ತಿದ್ದಾರೆ. ದಿಲ್ಲಿಯ ಕೇಜ್ರಿವಾಲ್ ಸಡ್ಡು ಹೊಡೆಯುತ್ತಿದ್ದಾರೆ.
ಈ ನಡುವೆ ಬಡವರ ಸರದಿಯ ಸಾಲು ಕರಗಿಲ್ಲ. ಗುಲಾಬಿ ಬಣ್ಣದ ಎರಡು ಸಾವಿರದ ನೋಟುಗಳು ಹೊರಗೆಲ್ಲೂ ಕಾಣುತ್ತಿಲ್ಲ. ಕಾಳಧನಿಕರ ಮಹಲುಗಳೊಳಗೆ ಅದಲು ಬದಲಾಗಿವೆ. ಅಡಗಿದ್ದೆಲ್ಲವನ್ನೂ, ಸರ್ಕಾರಿ ಕೃಪಾಪೋಷಿತ ಧನಿಕರನ್ನೂ ಮಾಧ್ಯಮಗಳು ದೇಶದೆಲ್ಲೆಡೆ ತೋರಿಸುತ್ತಲೇ ಇವೆ. ಯಾರೂ ಹಳೇ ನೋಟು ಬಿಸಾಕಿರುವ ದೃಶ್ಯ ಕಾಣುತ್ತಿಲ್ಲ.

‘ಮೋದಿಯವರ ಮಾತು ಜನರನ್ನು ಅಪ್ರಾಮಾಣಿಕತೆ ಕಡೆಗೊಯ್ಯುವ ಮಾರ್ಗವೆಂದು, ಇಡೀ ನೋಟು ಬದಲಾವಣೆ ಪ್ರಕ್ರಿಯೆ ಪೂರ್ವ ತಯಾರಿಯಿಲ್ಲದ, ದಿನಕ್ಕೊಂದು ಬದಲಾವಣೆಯ ಧೃತರಾಷ್ಟ್ರ ಮಾದರಿಯೆಂದೂ, ಅದಕ್ಕಾಗಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು’ ಎಂದು ಹಿಂದೂ ಮಹಾಸಭಾ ಒತ್ತಾಯಿಸಿದೆ. ಹಾಗಾದರೆ ಇದೇನು? ‘ಮುಗಿಲು ಮುಟ್ಟಿದ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಎಚ್ಚರವಿರಬೇಕು. ಇಲ್ಲದಿದ್ದರೆ ಅನಾಹುತವಾಗುತ್ತದೆ.

ಅಲ್ಲದೆ ಜಿಡಿಪಿ ಶೇ 2ಕ್ಕಿಂತ ಹೆಚ್ಚು ಕುಸಿಯುತ್ತದೆ’ ಎಂದು ರಿಸರ್ವ್‌ ಬ್ಯಾಂಕ್ ಗವರ್ನರ್‌ ಹುದ್ದೆಯಿಂದ ಹಿಡಿದು ಪ್ರಧಾನಿವರೆಗೆ ಹೊಣೆ ನಿಭಾಯಿಸಿ ಎಲ್ಲಾ ಆರ್ಥಿಕ ಅನುಭವವಿರುವ  ಮನಮೋಹನ್‌ ಸಿಂಗ್ ಮೌನ ಮುರಿದು ಭಾಷಣ ಮಾಡಿ ಹೋಗಿದ್ದಾರೆ. ಹಾಲಿ ಪ್ರಧಾನಿ ಕೈಕುಲುಕಿದ್ದಾರೆ. ಜನ ಯಾವುದನ್ನು ನಂಬಬೇಕು? ಇದೇ ಈಗ ದೇಶವನ್ನು ಕಾಡುತ್ತಿರುವ ಅರ್ಥಶಾಸ್ತ್ರದ ಅರಿವಿನ ಇಕ್ಕಟ್ಟು.

ರಾಜ್ಯಗಳು ಹೊಸದಾಗಿ ಬರಲಿರುವ ಜಿಎಸ್‌ಟಿ ವರಮಾನ ಹಂಚಿಕೆಯ ಹಕ್ಕನ್ನು ಮುಂದಿಡುತ್ತಿವೆ. ಇದು ಶೇ 30 ರಿಂದ 40 ರಷ್ಟು ಅರ್ಥ ಕುಸಿತದ ದಿಗಿಲು. ಪ್ರಜೆಗಳು ಈ ದೇಶದಲ್ಲಿ ಕ್ರಾಂತಿ ಎಂದರೆ ಏನು ಎಂದು ಅರಿಯದ, ಬುದ್ಧ- ಗಾಂಧಿಯ ಠಸ್ಸೆಯನ್ನು ಜೇಬಿನೊಳಗೆ ಇಟ್ಟುಕೊಂಡವರು. ಅವರಿಗೆ ಜಿಯೊ ಮಾದರಿಯ ಯಂತ್ರ ಹುಳವನ್ನು ನೀಡಿದರೆ ಅದು ಯಂತ್ರ ಮಾರಿದ ಅದೇ ಧಣಿಗೇ ಪುನಃ ರೇಷ್ಮೆದಾರ ನೇಯ್ದು ಕೊಡಬಲ್ಲ ಮುಗ್ಧತೆಯದು.

ಸ್ಮಾರ್ಟ್‌ಫೋನ್ ಎಂದರೆ ಸಾಮಾನ್ಯ ಜನರಿಗೆ ಈಗಲೂ ಕಂಬಳಿ ಹುಳು ಮುಟ್ಟುವ ಭಯ. ಹಾಗಾಗಿಯೇ ಜಿಯೊ ಎಂಬ ಕಾಯಿ ಕೊರಕನ ಹುಳಗಳ ತಯಾರಿಕೆಗೆ ಹೂಡಿಕೆಯ ಪರದೆಯೊಳಗೆ ಎಂಥೆಂಥಾ ಮುಖವಾಡದ ರಾಕ್ಷಸರಿದ್ದಾರೋ ಆ ಶ್ರೀರಾಮ ಶ್ರೀಕೃಷ್ಣರ ವರ್ಣವೇ ಬಲ್ಲದು. ‘ಹಳ್ಳಿಯ ಜನರು ಆಹಾರ ಉತ್ಪಾದಿಸುತ್ತಾರೆ; ಆದರೆ ಹಸಿದಿರುತ್ತಾರೆ. ಹಾಲು ಉತ್ಪಾದಿಸುತ್ತಾರೆ; ಆದರೆ ಅವರ ಮಕ್ಕಳಿಗೆ ಹಾಲಿಲ್ಲ! ಇದು ನಾಚಿಕೆಗೇಡು’ ಎಂದು ಗಾಂಧೀಜಿ ಅಂದು ಹೇಳಿದ ಮಾತು ಇಂದೂ ಬದಲಾಗಿಲ್ಲ. ಹೀಗಿರುವಾಗ ಅಂತರ್ಜಾಲ-ಸ್ಮಾರ್ಟ್‌ಫೋನ್- ನೆಟ್‌ವರ್ಕ್- ಅದರ ವೇಗ, ಎಲ್ಲಕ್ಕಿಂತ ಹೆಚ್ಚಾಗಿ ಸುರಕ್ಷತೆ... ಇವೆಲ್ಲವನ್ನೂ 130 ಕೋಟಿ ಜನಕ್ಕೆ ಒದಗಿಸಲು ದೇಶ ಸಜ್ಜಾಗಿದೆಯೇ? ಅದು ಹೌದಾದರೂ ಜನಸಾಮಾನ್ಯರು ಅತಿಭಾರದ ಹೊರೆ ಹೊರಬಲ್ಲರೇ!

ಹೊರಲೇಬೇಕೆಂಬುದು ಸಂಜಯ ಗಾಂಧಿ ನ್ಯಾಯದ ಸರ್ವಾಧಿಕಾರದ ನುಡಿಯಲ್ಲವೇ! ಅಮೆರಿಕ ಎಂಬ ಜೂಜಿನ ಕುದುರೆ ಓಡುತ್ತಿದೆ. ಈ ದೇಶದ ಜಟಕಾ ಕುದುರೆಗೆ ಆ ವೇಗವಿದೆಯೇ? ಒಳ್ಳೆಯದಕ್ಕೆ ಇರುವೆಯ ವೇಗ. ಅದಕ್ಕೂ ರೈಲಿಗೂ ಎಲ್ಲಿಯ ಜೋಡಿ ಎಂದು ‘ಹಿಂದ್ ಸ್ವರಾಜ್’ ಮೂಲಕ ರಾಷ್ಟ್ರಪಿತ ಹೇಳಿದ ಮಾತನ್ನು ಸವಾಲಾಗಿ ಸ್ವೀಕರಿಸುವಷ್ಟು ದೇಶ ಪ್ರಗತಿ ಹೊಂದಿದೆಯೇ? ಇಲ್ಲವೆ ಇದು ಈ ದೇಶದ ಬಡವರನ್ನು ಭ್ರಮಾಧೀನಗೊಳಿಸುವ ರಾಜಕೀಯ ಚದುರಂಗದಾಟವೇ? ಯಾಕಿಷ್ಟು ತವಕ, ಆತುರ. ಅವನು ನೋಟು ನೀಡುವ ಬ್ಯಾಂಕಿನೆದುರು ಬೆರಳಿಗೆ ಕಪ್ಪುಶಾಯಿ ಹಾಕಿಸಿಕೊಳ್ಳುತ್ತಾನೆ. ಮತಗಟ್ಟೆ ಎದುರೂ ಕಪ್ಪು ಶಾಯಿ ಹಾಕಿಸಿಕೊಳ್ಳುತ್ತಾನೆ. ಇದೊಂದನ್ನೂ ತಿಳಿಯದಾಗಿದ್ದಾನೆ ಭಾರತದ ಮತದಾರ.

₹ 15 ಲಕ್ಷ ಕೋಟಿ ರದ್ದಾದ ಹಣದಲ್ಲಿ ಶೇ 2 ರಷ್ಟು ಮಾತ್ರ ಕಾಳಧನಿಕರಿದ್ದಾರೆ. ಶೇ 98 ರಷ್ಟು ಬಡವರಿಗೇಕೆ ಶಿಕ್ಷೆ ಎಂದು ಅರುಣ್‌ ಶೌರಿ ಹೇಳಿರುವ ಮಾತಿನಲ್ಲೂ ಅರ್ಥವಿದೆ. ಕಾಳಧನ ನಿಯಂತ್ರಣಕ್ಕೆ ನೋಟು ರದ್ದು ಮಾಡುವಲ್ಲಿಯೂ ಅರ್ಥವಿದೆ. ಇವೆರಡರ ನಡುವೆ ಸೇತುವೆ ನಿರ್ಮಾಣ ಮಾಡುವಾಗ ಎಡವಿರಬಹುದಾದ ಪೂರ್ವ ತಯಾರಿಯ ಲೋಪದ ಎಲ್ಲಾ ಛಾಯೆಗಳು ಅರ್ಥಶಾಸ್ತ್ರಜ್ಞರಿಗೇ ಅರ್ಥವಾಗಿಲ್ಲವೆಂದರೆ ಸಾಮಾನ್ಯ ಪ್ರಜೆಗಳು ಸರದಿಯಲ್ಲಿ ನಿಂತು ಕಾಯದೆ ಬೇರೆ ವಿಧಾನವೆಲ್ಲಿದೆ? ಸರಿಯಾದ ಪೂರ್ವತಯಾರಿ ಇದ್ದದ್ದೇ ಆದರೆ ಅತ್ತ ಇತ್ತ ಇಲಿ ಬಿಲಗಳನ್ನು ಸೇರುವ ನೋಟು ರಾಶಿಯು ಸರ್ಕಾರಿ ಖಜಾನೆಗೇ ಸೇರುತ್ತಿತ್ತು. ಆದರೀಗ ಬೆಟ್ಟ ಅಗೆದು ಇಲಿ ಹಿಡಿಯುವ ಮಾದರಿ ಎನ್ನಲಾಗುತ್ತಿದೆ. ಆತುರಗಾರನಿಗೆ ಬುದ್ಧಿ ಮಂದವೋ; ಚುನಾವಣಾ ಪೂರ್ವ ಉದ್ರೇಕ ರೀತಿಯೋ... ಅಂತೂ ದೇಶದ ಜನರ ಮೇಲೆ ಪ್ರಯೋಗ ನಡೆಯುತ್ತಿದೆ. ಅದು ಏನು ಎಂದು ನಿರ್ಣಯವಾಗುವಷ್ಟರಲ್ಲಿ ದೇಶದ ಜನರ ಮೇಲೆ ಮತ್ತೊಂದು ಪ್ರಯೋಗ ಪ್ರಾರಂಭವಾಗಿರುತ್ತದೆ. ಇದೇ ಈಗಿನ ಪ್ರಜಾಪ್ರಭುತ್ವ.

‘ಎದ್ದ ಕಲ್ಲು ಪೂಜಾರಿಗೆ ಬಿದ್ದ ಕಲ್ಲು ಮಡಿವಾಳನಿಗೆ’ ಎಂಬುದು ಗಾದೆ. ದುಡಿಯುವ ವರ್ಗ ಮಡಿ ಮಾಡುವುದನ್ನು ನಿಲ್ಲಿಸಬಾರದೆಂದರೆ ಇಂತಹ ಪ್ರಭಾವಳಿ ಪೂಜೆಗಳು ನಡೆಯುತ್ತಲೇ ಇರಬೇಕು. ರೈತ ಭೂಮಿಯ ಉಪ್ಪುಸಾರ. ಯಂತ್ರ ಕಾರ್ಖಾನೆ ಹಾವಿನ ಹುತ್ತದಂತೆ. ಹೀಗೆ ಗಾಂಧೀಜಿ ಹೇಳಿದ ಅನೇಕ ಆರ್ಥಿಕ ತಿಳಿವಳಿಕೆಗಳನ್ನು ಒಳಗಿಳಿಸಿಕೊಳ್ಳುವ ಸಾವಧಾನವೇ ದೇಶಕ್ಕೆ ಮರೆತು ಹೋಗಿದೆ. ಬೆವರು ಸುರಿಸಿ ಬೆಳೆದು ತಂದ ಆಹಾರ ತರಕಾರಿಗಳನ್ನೆಲ್ಲ ರಸ್ತೆಗೆ ಹಾಕಿ ಕೇವಲ  ಬಸ್ ಚಾರ್ಜು ಬೇಡುವ ರೈತ  ಹಾಗೂ ಜೀಯ್ಗುಟ್ಟುವ ಜಿಯೊ ಹಾಗೂ ಗುಲಾಬಿ ಬಣ್ಣದ ಗಾಂಧಿ ನೋಟುಗಳ ನಡುವೆ ಮತದಾರರು ಇಸ್ಪೀಟಾಟದ ಜೋಕರ್ ಎಲೆಗಳಾಗಿದ್ದಾರೆ.  ವೇದಿಕೆ ಮೇಲಿನ ಭಾಷಣಕ್ಕೆ ಆಯುಧಗಳಾಗಿದ್ದಾರೆ. ಇದೇ  ದುರ್ದೈವ.

ಗಡಿಯಲ್ಲಿ ಯೋಧರ ಪ್ರಾಣಕ್ಕೆ ಕೊರಗುವ ದೇಶ ಈಗ 80 ರೈತರು ಕಾರ್ಮಿಕರು ಸರದಿ ಸಾಲಿನಲ್ಲಿ ಜೀವ ಬಿಟ್ಟಿರುವುದನ್ನು ಕಂಡೂ ಕಾಣದಂತಿದೆ. ಹಾಗಾದರೆ ದೇಶಸೇವೆ ಎಂದರೇನು?

ಮಹಾನ್ ಸಂತ ಪದವಿಗೇರಿದ ತೆರೇಸಾ ಬಲಗೈಲಿ ದೀಪವನ್ನು ಎಡಗೈಯಲ್ಲಿ ನೀರಿನ ಪಾತ್ರೆಯನ್ನು ಇಟ್ಟುಕೊಂಡಿದ್ದರು. ಒಂದರಿಂದ ಸ್ವರ್ಗದ ವೈಭವವನ್ನು ಸುಟ್ಟು ಹಾಕಬೇಕು; ಇನ್ನೊಂದರಿಂದ ನರಕದ ಬೆಂಕಿಯನ್ನು ಆರಿಸಬೇಕು ಎಂದು. ಈ ಉದಾತ್ತ ದೈವಾಡಳಿತ ವ್ಯವಸ್ಥೆಯನ್ನು ದೇಶ ನಿರೀಕ್ಷಿಸುತ್ತಿಲ್ಲ. ಅದು ಬರುತ್ತದೆಂಬ ಭ್ರಮೆಯೂ ಜಗತ್ತಿನಲ್ಲಿಲ್ಲ. ಆದರೆ ಪ್ರಜಾ ಪ್ರಭುತ್ವವೆಂದರೆ ಪ್ರಜೆಗಳೆಲ್ಲ ಸಮಾನರಾಗುತ್ತ ಹೋಗುವ ಆ ಒಂದು ಮಾದರಿಯಾಗಬೇಡವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT