ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಮಾಂಸೆಯಲ್ಲೂ ದಲಿತ ಸಾಹಿತ್ಯಕ್ಕೆ ಅನ್ಯಾಯ

ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಸಮಾಧಾನ
Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಂಗಳೂರು: ದಲಿತ ಸಾಹಿತ್ಯವನ್ನು ಮುಖ್ಯವಾಹಿನಿಯ ಸಾಹಿತ್ಯದ ಹೊರಗಿಟ್ಟು ನೋಡುವ ಮೂಲಕ ದಲಿತ ಸಾಹಿತಿಗಳಿಗೆ ಅನ್ಯಾಯ ಮಾಡಿಕೊಂಡು ಬರಲಾಗಿದೆ. ಅದರ ಜೊತೆಯಲ್ಲೇ ಸಾಹಿತ್ಯ ಮೀಮಾಂಸೆಯಲ್ಲೂ ದಲಿತ ಸಾಹಿತ್ಯಕ್ಕೆ ಅನ್ಯಾಯ ಆಗಿದೆ ಎಂದು ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಸಂದೇಶ ಪ್ರತಿಷ್ಠಾನದಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ‘ದಲಿತ ಕಾವ್ಯ ಮೀಮಾಂಸೆ’ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಹಿತ್ಯ ಮೀಮಾಂಸೆಯಲ್ಲಿ ತೊಡಗಿಸಿಕೊಂಡ ಬಹುಪಾಲು ಜನರು ದಲಿತ ಸಾಹಿತ್ಯವನ್ನು ನಿರ್ಲಕ್ಷಿಸಿಕೊಂಡು ಬಂದಿದ್ದಾರೆ. ದಲಿತ ಸಾಹಿತ್ಯದ ಮೀಮಾಂಸೆಯನ್ನೂ ದಲಿತರೇ ಮಾಡಬೇಕೆಂಬ ವಾತಾವರಣ ನಿರ್ಮಾಣವಾಗಿದೆ’ ಎಂದರು.

ಬಹುಪಾಲು ದಲಿತ ಸಾಹಿತ್ಯದಲ್ಲಿ ಮೇಲ್ವರ್ಗಗಳ ಜನರು ಶೋಷಕರ ಪಾತ್ರದಲ್ಲಿ ಇದ್ದಾರೆ. ಅದೇ ವರ್ಗದ ಜನರು ಸಾಹಿತ್ಯ ಮೀಮಾಂಸಕರಲ್ಲಿ ಹೆಚ್ಚಿನವರಿದ್ದಾರೆ. ಅವರ ಮನಸ್ಸಿನ ಆಳದಲ್ಲಿ ಬೆಳೆದ ಅಸಹನೆ ದಲಿತ ಸಾಹಿತ್ಯದ ಮೀಮಾಂಸೆ ಕೈಗೆತ್ತಿಕೊಳ್ಳದಂತೆ ಅವರನ್ನು ತಡೆದಿರುವ ಸಾಧ್ಯತೆಗಳಿವೆ. ಸ್ಪೃಶ್ಯ ಮತ್ತು ಅಸ್ಪೃಶ್ಯರ ನಡುವಿನ ಸಂಬಂಧ ಮನೆಯ ಅಂಗಳದ ಹೊರಗಡೆಯೇ ಉಳಿದಿರುವುದು ಇದಕ್ಕೆ ಕಾರಣ. ಒಬ್ಬರು ಇನ್ನೊಬ್ಬರನ್ನು ಅನುಮಾನಿಸುವ ಪ್ರವೃತ್ತಿ ಸಾಹಿತ್ಯ ವಲಯವನ್ನೂ ಬಿಟ್ಟಿಲ್ಲ ಎಂದು ಹೇಳಿದರು.

ಇಬ್ಬರಿಗೆ ಸೀಮಿತ: ದಲಿತ ಸಾಹಿತ್ಯ ಎಂದರೆ ಮೂರು ದಶಕಗಳ ಹಿಂದೆ ಬರವಣಿಗೆಯಲ್ಲಿ ಸಕ್ರಿಯರಾಗಿದ್ದ ಇಬ್ಬರು ದಲಿತ ಸಾಹಿತ್ಯಗಳು ರಚಿಸಿದ್ದು ಮಾತ್ರ ಎಂಬ ತಪ್ಪು ಕಲ್ಪನೆಯೊಂದನ್ನು ಕೆಲವು ವಿಮರ್ಶಕರು ಸೃಷ್ಟಿಸಿದ್ದಾರೆ. ಇದರ ಪರಿಣಾಮವಾಗಿ ಈಗಲೂ ದಲಿತ ಸಾಹಿತ್ಯದ ಹೆಸರಿನಲ್ಲಿ ಆ ಇಬ್ಬರ ಹಳೆಯ ಕೃತಿಗಳ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ದಲಿತ ಸಮುದಾಯದ ಹೊಸ ತಲೆಮಾರಿನ ಬರಹಗಾರರ ಕೃತಿಗಳ ಬಗ್ಗೆ ನ್ಯಾಯಯುತವಾದ ವಿಮರ್ಶೆ ನಡೆಯದೇ ಇರುವುದು ದುರದೃಷ್ಟಕರ ಎಂದು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಹಲವು ಬಾರಿ ವೈಯಕ್ತಿಕ ಭೇಟಿಯ ವೇಳೆ ವಿಮರ್ಶಕರು ನನ್ನ ಕವನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೆ, ವಿಮರ್ಶೆಯ ಸಂದರ್ಭ ಬಂದಾಗ ಅದರಿಂದ ದೂರ ಉಳಿಯುತ್ತಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಸಾಹಿತ್ಯ ಮೀಮಾಂಸೆಯಲ್ಲಿ ಇಂತಹ ಅಶಿಸ್ತು ಕಾಣಲು ಸಿಗುವುದಿಲ್ಲ’ ಎಂದರು.

ದಲಿತ ಸಾಹಿತ್ಯವೆಂದರೆ ದಲಿತರ ದುಃಖವನ್ನು ನಿವಾರಿಸಿಕೊಳ್ಳುವ ಒಂದು ಮಾರ್ಗ. ವ್ಯವಸ್ಥೆಯ ವಿರುದ್ಧವೇ ದಲಿತರು ಕಹಳೆ ಮೊಳಗಿಸಲು ಬಳಸಿಕೊಂಡ ಅಸ್ತ್ರ. ಹೀಗಾಗಿ ಅಲ್ಲಿ ಸಿಟ್ಟು, ಆಕ್ರೋಶ, ನೋವು ಎಲ್ಲವೂ ವ್ಯಕ್ತವಾಗುತ್ತವೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಎಸ್‌.ವಿ.ಪರಮೇಶ್ವರ ಭಟ್ಟ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಶಿವರಾಮ ಶೆಟ್ಟಿ ಮಾತನಾಡಿ, ‘ಭಾರತೀಯ ಕಾವ್ಯಮೀಮಾಂಸೆಯ ಚೌಕಟ್ಟನ್ನು ಮುರಿದು ದಲಿತ ಕಾವ್ಯಮೀಮಾಂಸೆಯನ್ನು ಕಟ್ಟುವ ಅನಿವಾರ್ಯ ಇದೆ. ದಲಿತ ಎಂಬ ಪರಿಕಲ್ಪನೆಯನ್ನು ಬಹುರೂಪಿಯಾಗಿ ಗ್ರಹಿಸುವ ಕ್ರಮ ಅಗತ್ಯ. ಆ ದಿಸೆಯಲ್ಲಿ ಸಾಹಿತ್ಯ ಮೀಮಾಂಸೆಯೂ ಬದಲಾಗಬೇಕು’ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕ ಡಾ.ಅಪ್ಪಗೆರೆ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ವಿಕ್ಟರ್ ವಿಜಯ್ ಲೋಬೊ, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಸೌಭಾಗ್ಯ, ಸದಸ್ಯ ಸಂಚಾಲಕ ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT