ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಕರಣ ಸಲ್ಲದು

ಶಾಲಾ ಪಠ್ಯಕ್ರಮ ಹೇಗಿರಬೇಕು?
Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
* ಪಠ್ಯಪುಸ್ತಕಗಳ ಪರಿಷ್ಕರಣೆ ವೇಳೆ ಏನೆಲ್ಲ ದೋಷಗಳು ಕಂಡವು?
ಧಾರ್ಮಿಕ ಪ್ರಾತಿನಿಧ್ಯದಲ್ಲಿ ಅಸಮತೋಲನ ಇತ್ತು. ಲಿಂಗತ್ವ ಅಸಮಾನತೆಯು ವಿಶೇಷವಾಗಿ ಚಿತ್ರಗಳಲ್ಲಿ ಕಣ್ಣಿಗೆ ರಾಚುವಂತಿತ್ತು. ಹೆಣ್ಣುಮಗು ಪಾತ್ರೆ ತೊಳೆಯುತ್ತಿದ್ದರೆ, ಹುಡುಗನೊಬ್ಬ ಓದುತ್ತಿರುವಂಥ ಚಿತ್ರ ಇದಕ್ಕೊಂದು ನಿದರ್ಶನ. ಭಾಷಾ ಪುಸ್ತಕಗಳಲ್ಲಿ ಮಹಿಳೆಯರಿಗೆ ಹಾಗೂ ವಿವಿಧ ಪ್ರದೇಶಗಳಿಗೆ ಸೂಕ್ತ ಪ್ರಾತಿನಿಧ್ಯ ಇರಲಿಲ್ಲ.  ಮಾಹಿತಿ ದೋಷಗಳು ಕೂಡ ಇದ್ದವು. ಕೇಸರೀಕರಣದ ಬಗ್ಗೆ ದೂರುಗಳು ಇದ್ದವು. ಅದು ನೇರವಾಗಿ ಪ್ರತಿಪಾದನೆ ಆಗದಿದ್ದರೂ ಕೆಲವೆಡೆ ಒಳಗೆ ನುಸುಳಿದ್ದುದು ನಿಜ.
 
ಮಾಹಿತಿ ದೋಷ ಹಾಗೂ ಅರೆಕೊರೆಗಳ ಬಗ್ಗೆ 1000 ಪುಟಗಳಷ್ಟು ದೂರುಗಳು ಬಂದಿದ್ದವು. ಕೆಲವು ಸಂಘಟನೆಗಳು ಸಂಶೋಧನೆ ನಡೆಸಿ, ವಿಶ್ಲೇಷಿಸಿ ವರದಿ ನೀಡಿದ್ದವು. ಪಾಠ ಮಾಡುವಾಗ ಎದುರಾದ ಕಷ್ಟಗಳ ಬಗ್ಗೆ ಮೇಷ್ಟ್ರುಗಳು ಪತ್ರ ಬರೆದಿದ್ದರು. ವಿಷಯ ತಜ್ಞರು ಇದನ್ನೆಲ್ಲ ಪರಿಶೀಲಿಸಿ, ತಪ್ಪುಗಳನ್ನು ಸರಿಪಡಿಸಿದ್ದಾರೆ.
 
**
* ಪಠ್ಯಾಂಶ ಎಷ್ಟು ಪ್ರಮಾಣದಲ್ಲಿ ಪರಿಷ್ಕರಣೆಗೆ ಒಳಗಾಗಿದೆ. ಹೊಸದಾಗಿ ಏನೆಲ್ಲ ಸೇರ್ಪಡೆಯಾಗಿವೆ?
ಸರಾಸರಿ ಶೇ 25ರಷ್ಟು ಪಠ್ಯ ಪರಿಷ್ಕರಣೆಗೆ ಒಳಗಾಗಿದೆ. ಭಾಷಾ ಪಾಠಗಳಲ್ಲಿ ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಒತ್ತು ದೊರೆತಿದೆ. ಸಮಾಜ ವಿಜ್ಞಾನದಲ್ಲಿ ಎಲ್ಲ ರೀತಿಯ ಸಾಮಾಜಿಕ, ಪ್ರಾದೇಶಿಕ ವೈಶಿಷ್ಟ್ಯಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರತ್ಯೇಕ ಪಾಠವೊಂದನ್ನು ಸೇರಿಸಲಾಗಿದೆ. ಮಕ್ಕಳು ವಿಜ್ಞಾನ ಓದುವಾಗ ವೈಜ್ಞಾನಿಕ ಮನೋಧರ್ಮ ರೂಢಿಸಿಕೊಳ್ಳಲು ಅನುವಾಗುವಂತೆ  ಕೆಲವು ಬದಲಾವಣೆಗಳನ್ನು ತರಲಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಾಗಿದೆ. 
 
ಉರ್ದು ಭಾಷಾ ಪಠ್ಯದಲ್ಲಿ ರಾಷ್ಟ್ರೀಯ ಭಾವೈಕ್ಯ ಕುರಿತು ಪಾಠವೊಂದನ್ನು ಸೇರಿಸಲಾಗಿದೆ. ಮಠಾಠಿ ಪಠ್ಯದಲ್ಲಿ ಭಾಷಾ ಬಾಂಧವ್ಯ ಕುರಿತು ಒಂದು ಪಾಠ ಸೇರ್ಪಡೆ ಆಗಿದೆ.   
 
**
* ಪರಿಷ್ಕರಣೆಯ ಈ ಕೆಲಸಕ್ಕೆ ಅಗಾಧ ಶ್ರಮ ಹಾಕಿದ್ದೀರಿ ಎಂಬ ಮಾತಿದೆ...
ಹೌದು. ಪರಿಷ್ಕರಣೆಗೆ ಸರ್ಕಾರವೇ 27 ಉಪಸಮಿತಿಗಳನ್ನು ರಚಿಸಿತ್ತು. ಸಮಿತಿಗಳ ಪರಿಧಿಯಿಂದ ಆಚೆಗೂ ಚರ್ಚಿಸಬೇಕು ಅಂತ ಅನ್ನಿಸಿತು. ಅಧ್ಯಾಪಕರ ಸಂಘಗಳ ಪ್ರತಿನಿಧಿಗಳು ಪಠ್ಯ ಅಭ್ಯಸಿಸಿ  ಬಂದು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿಷಯ ಪರಿವೀಕ್ಷಕರ ಸಭೆ ನಡೆಸಿದ್ದೇವೆ. ‘ಡಯಟ್‌’ ಪ್ರಾಂಶುಪಾಲರೊಂದಿಗೆ ಚರ್ಚೆ ನಡೆಸಿದ್ದೇವೆ. ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಪರಿಷತ್ತು, ಮಹಿಳಾ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತರ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ನಡೆಸಿದ್ದೇವೆ.  ವಿಜ್ಞಾನ, ಪರಿಸರ ಮುಂತಾದ ಕ್ಷೇತ್ರಗಳ ತಜ್ಞರನ್ನು ಕರೆಸಿ, ಅವರ ಅಭಿಪ್ರಾಯವನ್ನೂ ಪಡೆದಿದ್ದೇವೆ. ಪ್ರಶ್ನಾವಳಿ ಕಳುಹಿಸಿ ತಾಲ್ಲೂಕು ಮಟ್ಟದಿಂದಲೂ ಅಭಿಪ್ರಾಯ ಸಂಗ್ರಹಿಸಿದ್ದೇವೆ. 
 
ನಾವು ಮಾಡಿರುವುದೇ ಅಂತಿಮವಲ್ಲ. ಆದರೆ ಸಮಗ್ರತೆಯ ಸಮೀಪಕ್ಕೆ ಬರುವ ಪ್ರಯತ್ನ ಮಾಡಿದ್ದೇವೆ. ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಈ ಪುಸ್ತಕಗಳು ಮುಂದೆ ಪರಿಷ್ಕರಣೆಗೊಂಡರೆ ಶೇಕಡ 5ರಷ್ಟು ಮಾತ್ರ ಬದಲಾವಣೆಗೆ ಒಳಗಾಗಬಹುದು.
 
**
* ಒಂಬತ್ತು ಮತ್ತು ಹತ್ತನೇ ತರಗತಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು (ಸಿಬಿಎಸ್‌ಇ) ಅನುವಾದಿಸಿ, ಯಥಾವತ್‌ ಅಳವಡಿಸುವ ಚಿಂತನೆ ಸರಿಯೇ?
ಎನ್‌ಸಿಇಆರ್‌ಟಿ ಪುಸ್ತಕಗಳೇ ಅಂತಿಮ, ಅವೇ ಮೋಕ್ಷಕ್ಕೆ ದಾರಿ ಅಂತ ಏಕೆ ತಿಳಿಯಬೇಕು? ಅಂತಹ ಭ್ರಮೆ ಮೂಡಿಸಿದ್ದೇವೆ. ಅದರಲ್ಲಿರುವ ಒಳ್ಳೆಯ ಅಂಶಗಳನ್ನು ತೆಗೆದುಕೊಳ್ಳೋಣ. ಜತೆಗೆ ಸ್ಥಳೀಯ ಸೊಗಡು ಉಳಿಸಿಕೊಳ್ಳೋಣ. ಗುಣಮಟ್ಟದ ವಿಚಾರದಲ್ಲಿ ನಾನು ಆ ಪುಸ್ತಕಗಳ ಪರವಾಗಿ ಇದ್ದೇನೆ. ನಾವು ಈಗ ಆ ಕೆಲಸ ಮಾಡಿದ್ದೇವೆ. 
 
9ನೇ ತರಗತಿಗೆ ಏಕಾಏಕಿ ಎನ್‌ಸಿಇಆರ್‌ಟಿ ಪುಸ್ತಕ ಪರಿಚಯಿಸಿದರೆ ಪಠ್ಯವಸ್ತುವಿನ ನಿರಂತರತೆಗೆ ಧಕ್ಕೆ ಆಗುತ್ತದೆ. ಅದಕ್ಕೆ ಮೊದಲು 7 ಮತ್ತು 8ನೇ ತರಗತಿಯಿಂದ ಸಂಪರ್ಕ ಕೊಂಡಿ ಜೋಡಿಸಬೇಕು. ಅದು ಇರುವುದಿಲ್ಲ, ಮೇಲಾಗಿ ಪಾಠ ಬೋಧಿಸುವ ಶಿಕ್ಷಕರು ಸಿದ್ಧಗೊಂಡಿರುವುದಿಲ್ಲ. ಇದು ಯಾವುದನ್ನೂ ಯೋಚಿಸದೆ ದಿಢೀರ್‌ ಜಾರಿಗೆ ಮುಂದಾದರೆ ಎಡವಟ್ಟು ಆಗುತ್ತದೆ. ಅಂತಹ ಕ್ರಮ, ಸ್ಥಳೀಯ ಸೊಗಡಿಗೆ ಅವಕಾಶ ಇರಬೇಕು ಎಂದು ಸೂಚಿಸಿರುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮಾರ್ಗಸೂಚಿಯ ಉಲ್ಲಂಘನೆಯೂ ಆಗುತ್ತದೆ.
 
ಬರೀ ನಗರ ಕೇಂದ್ರಿತವಾಗಿ ಯೋಚಿಸುವವರು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಯಥಾವತ್‌ ಅಳವಡಿಸಿದರೆ ಸಾಕು ಅಂತಾರೆ. ಆದರೆ ನಮ್ಮಲ್ಲಿ ಆ  ವರ್ಗದ ಮಕ್ಕಳಷ್ಟೇ ಇರುವುದಿಲ್ಲ. ವಿವಿಧ ಸಾಮಾಜಿಕ ಹಿನ್ನೆಲೆ ಹಾಗೂ ಶ್ರೇಣಿಯ ಮಕ್ಕಳಿದ್ದಾರೆ. ಗ್ರಾಮೀಣ, ಅರೆನಗರ ಹಾಗೂ ನಗರದ ಮಕ್ಕಳ ನಡುವೆ ಸಮನ್ವಯ ಸಾಧಿಸುವುದು ಹೇಗೆ ಎಂಬುದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ.
 
ಪಠ್ಯ ವಿಷಯಗಳನ್ನು ಕೇಂದ್ರೀಕರಿಸುವುದು ಒಳ್ಳೆಯದಲ್ಲ. ಹಾಗೆ ಮಾಡುವುದಾದರೆ ಒಕ್ಕೂಟ ವ್ಯವಸ್ಥೆ, ಭಾಷಾವಾರು ಪ್ರಾಂತ್ಯ ಏಕಿದೆ? ರಾಷ್ಟ್ರೀಯ ಮತ್ತು ಪ್ರಾದೇಶಿಕ ಈ ಎರಡು ಹಂತಗಳ ನಡುವೆ ಸಮನ್ವಯ ಸಾಧಿಸಬೇಕು. ಸ್ಥಳೀಯತೆ ಇಲ್ಲದೆ ರಾಷ್ಟ್ರೀಯತೆ, ಅಂತರರಾಷ್ಟ್ರೀಯತೆ ಇಲ್ಲ. ಸ್ಥಳೀಯತೆ ನಮ್ಮ ಮೂಲ ಬೇರು. ಏಕ್‌ದಂ ರಾಷ್ಟ್ರೀಯ ಹಂತಕ್ಕೆ ಜಿಗಿಯಬೇಕು ಅನ್ನುವುದು ಸರಿಯಾದ ಯೋಚನೆಯಲ್ಲ.
 
ಗುಣಮಟ್ಟದ ಹೆಸರಿನಲ್ಲಿ ಏಕಮುಖಿ ಚಲನೆ ಆಗುತ್ತಿದೆ. ಅದು ಆಗಬಾರದು. ನಮ್ಮಲ್ಲಿ ಸ್ಪರ್ಧೆ ಇರುವುದು ವೃತ್ತಿ ಶಿಕ್ಷಣಕ್ಕೆ. ವೃತ್ತಿ ಶಿಕ್ಷಣವೇ ಶ್ರೇಷ್ಠ ಅಂತ ಬಿಂಬಿಸಿ ಮೂಲ ಶಿಕ್ಷಣವನ್ನು ಕಡೆಗಣಿಸಲಾಗಿದೆ. ತಂತ್ರಜ್ಞಾನ ಮುಖ್ಯ ಆಗಿ ವಿಜ್ಞಾನ ಹಿಂದಕ್ಕೆ ಸರಿಯುತ್ತಿದೆ.  ಸಮಾಜ ವಿಜ್ಞಾನ, ಮಾನವಿಕ ವಿಷಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇವೆಲ್ಲದರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು.
 
**
* ಪಠ್ಯಪುಸ್ತಕಗಳ ರಚನೆ ಮತ್ತು ಪೂರೈಕೆಗೆ ಶಾಶ್ವತ ಹಾಗೂ ಸ್ವಾಯತ್ತ ವ್ಯವಸ್ಥೆ ಬೇಕು ಅನ್ನಿಸುವುದಿಲ್ಲವೇ?
 ಅಂತಹುದೊಂದು ವ್ಯವಸ್ಥೆ ಬೇಕು. ಪಠ್ಯಪುಸ್ತಕಗಳ ಪೂರೈಕೆ ಹೊಣೆ ಹೊತ್ತಿರುವ ‘ಕರ್ನಾಟಕ ಪಠ್ಯಪುಸ್ತಕ ಸಂಘ’ವನ್ನು ಶಾಸನಬದ್ಧ ಹಾಗೂ ಸ್ವಾಯತ್ತ ಸಂಸ್ಥೆಯಾಗಿ ಪುನರ್‌ ರಚಿಸುವ ಬಗ್ಗೆ ಯೋಚಿಸಬೇಕು. ಅಲ್ಲಿ ಅಧಿಕಾರಿಗಳ ಜತೆಗೆ ವಿಷಯ ತಜ್ಞರೂ ಇರುವಂತೆ ನೋಡಿಕೊಳ್ಳಬೇಕು.
 
ಮಹಾರಾಷ್ಟ್ರದಲ್ಲಿ ಇಂತಹುದೊಂದು ವ್ಯವಸ್ಥೆ ಇದೆ ಎಂದು ಕೇಳಿದ್ದೇನೆ. ಅಲ್ಲಿಗೆ ಹೋಗಿ ಪರಿಶೀಲಿಸಿ, ಅದರ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಬಹುದು.
 
**
* ಆಡಳಿತಾರೂಢ ಪಕ್ಷದ ಆಶಯಕ್ಕೆ ತಕ್ಕಂತೆ ಪಠ್ಯಪುಸ್ತಕಗಳು ಪರಿಷ್ಕರಣೆಗೊಳ್ಳುತ್ತವೆ ಎಂಬ ದೂರಿದೆ. ಇದಕ್ಕೆ ಕೊನೆ ಇಲ್ಲವೇ?
ಪಠ್ಯಪುಸ್ತಕದ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷದ ಪ್ರವೇಶ ಇರಬಾರದು. ಅವುಗಳ ಕಾರ್ಯಸೂಚಿ ನುಸುಳಬಾರದು. ಪಠ್ಯಪುಸ್ತಕ (ರಾಜಕೀಯ) ಪಕ್ಷ ಪುಸ್ತಕವಾಗಬಾರದು. ಕೇಸರೀಕರಣಕ್ಕೆ ಪರ್ಯಾಯ ಕಾಂಗ್ರೆಸ್ಸೀಕರಣ ಅಲ್ಲ.
 
ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಯಾವುದೂ ಪುಸ್ತಕಗಳ ಒಳಗೆ ನುಸುಳಬಾರದು. ಪುಸ್ತಕ ರೂಪಿಸುವವರಲ್ಲಿ ಅಂಥ ಎಚ್ಚರಿಕೆ  ಸದಾ ಜಾಗೃತವಾಗಿರಬೇಕು. ನಮ್ಮ ವೈಯಕ್ತಿಕ ಒಲವು–ನಿಲುವುಗಳೊಂದಿಗೆ ಮಾನಸಿಕ ಅಂತರ ಕಾಯ್ದುಕೊಳ್ಳಬೇಕು. ಮಕ್ಕಳು ನಮ್ಮ ಚಿಂತನೆಯ ಕೇಂದ್ರ ಬಿಂದು ಆಗಬೇಕು. ಅವರ ಜಾಗದಲ್ಲಿ ನಿಂತು ಯೋಚಿಸಬೇಕು. ವ್ಯಕ್ತಿ ನೆಲೆ, ಪಕ್ಷ–ಪಂಥ ನಿಷ್ಠೆಯಿಂದ ನೋಡದೆ ಸಮಷ್ಟಿ ದೃಷ್ಟಿಕೋನದಿಂದ ಯೋಚಿಸಬೇಕು.
 
**
* ದೋಷರಹಿತವಾದ ಮತ್ತು ಸೃಜನಾತ್ಮಕವಾದ ಪಠ್ಯಪುಸ್ತಕ ರೂಪಿಸಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ?
ಪಠ್ಯಪುಸ್ತಕ ರಚನೆ ಎಂಬುದು ಯಾಂತ್ರಿಕ ಕ್ರಿಯೆ ಆಗಿದೆ. ಅದು ಆಗಬಾರದು. ನಮ್ಮದು ಬಹುತ್ವದ ಭಾರತ. ನಾನಾ ದೃಷ್ಟಿಕೋನಗಳಿಂದ ನೋಡಬೇಕಾಗುತ್ತದೆ. ಧರ್ಮ, ಜಾತಿ ಅಷ್ಟೇ ಅಲ್ಲ; ಕಲಿಯುವ ಮಕ್ಕಳ ಹಿನ್ನೆಲೆಯೂ ಬೇರೆ ಬೇರೆ ಆಗಿರುತ್ತದೆ. ಅದನ್ನೆಲ್ಲ ಗಮನಿಸಬೇಕು. ಪಠ್ಯಪುಸ್ತಕಗಳು ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಗಾಗಬೇಕು. ಪುಸ್ತಕಗಳು ಪ್ರತೀ ವರ್ಷ ಹೊಸದಾಗಿ ಮುದ್ರಣಗೊಳ್ಳುತ್ತವೆ. ಉಳಿದಿರಬಹುದಾದ ಅಲ್ಪಸ್ವಲ್ಪ ದೋಷಗಳನ್ನು ತಕ್ಷಣ ಸರಿಪಡಿಸುವ ಕೆಲಸ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT