ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದುರಹಿತ ವಹಿವಾಟಿಗೆ ಧಾವಂತ ಏಕೆ?

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಾನು ಬ್ಯಾಂಕೊಂದರ ತರಬೇತಿ ಕಾಲೇಜಿನಲ್ಲಿದ್ದಾಗ ಬ್ಯಾಂಕಿನ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಗ್ರಾಹಕರಿಗೆ, ಬ್ಯಾಂಕಿಗೆ, ಆರ್ಥಿಕ ವ್ಯವಸ್ಥೆಗೆ ಆಗುವ  ಲಾಭಗಳ  ಬಗ್ಗೆ ಉಪನ್ಯಾಸ ನೀಡುತ್ತಿದ್ದೆ. ‘ನಿಮ್ಮ ಅಂಗೈಯಲ್ಲಿ ನಿಮ್ಮ ಬ್ಯಾಂಕ್’ ಎಂಬುದು ನನ್ನ ಧ್ಯೇಯ ವಾಕ್ಯವಾಗಿತ್ತು. ಮೊಬೈಲ್ ಹಾಗೂ ನೆಟ್ ಬ್ಯಾಂಕಿಂಗ್ ಸೇವಾ ಸೌಲಭ್ಯಗಳ ಪ್ರಾತ್ಯಕ್ಷಿಕೆಯನ್ನು ತೋರಿಸುತ್ತಿದ್ದೆ.

ಆದಾಗ್ಯೂ, ಪ್ರತಿಯೊಂದು ತರಗತಿಯಲ್ಲಿ ತಾಂತ್ರಿಕ ಜ್ಞಾನವಿರುವ ಅರ್ಧದಷ್ಟು ಮಂದಿ ಮಾತ್ರ ಅದನ್ನು ಬಳಸುವ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿರುತ್ತಿದ್ದರು ನಗದುರಹಿತ ವಹಿವಾಟು ರಾಕೆಟ್ ವಿಜ್ಞಾನವೇನಲ್ಲ. ಆದರೆ ಜನರು ಮಾನಸಿಕವಾಗಿ ಸಿದ್ಧರಾಗುವುದು ಮುಖ್ಶ. ಜತೆಗೆ ಅದಕ್ಕೆ ಕೆಲವು ಪೂರ್ವ ಸಿದ್ಧತೆಗಳು ಬೇಕು.

ಹೊಸ ನೋಟುಗಳಿಗೆ ಎಟಿಎಂಗಳನ್ನು ಹೊಂದಿಸುವುದು ಎರಡು ದಿನಗಳಲ್ಲಿ ಆಗಬಹುದಾದ ಕೆಲಸ. ಆದರೆ ದೇಶದ ಎಲ್ಲಾ ಎಟಿಎಂಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಮೂರು ವಾರ ಬೇಕಾಯಿತು. ಸರ್ಕಾರದ ಬಳಿ ಆಡಳಿತ ವ್ಯವಸ್ಥೆ ಇದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಈ ಕೆಲಸ ಮಾಡಬಹುದಿತ್ತು. ಆದರೆ ಆಗಲಿಲ್ಲ. ವಿಳಂಬದಿಂದ ಗ್ರಾಹಕರಿಗೆ ವಿಪರೀತ ತೊಂದರೆಯಾಯಿತು.

ಈ ಸಣ್ಣ ಕೆಲಸವನ್ನು ತುರ್ತಾಗಿ ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗದ ಮೇಲೆ, ಸುಮಾರು ಶೇ 25ರಷ್ಟು ಅನಕ್ಷರಸ್ಥರು ಇರುವ ಹಾಗೂ ಶೇ 45ರಷ್ಟು ಜನರು ಆರ್ಥಿಕ ಸೇರ್ಪಡೆಯಿಂದ ಹೊರಗುಳಿದಿರುವ ನಮ್ಮ ದೇಶದಲ್ಲಿ  ಜನಸಾಮಾನ್ಯರನ್ನು ಒಮ್ಮಿಂ ದೊಮ್ಮೆಗೇ ನಗದುರಹಿತ ವ್ಯವಹಾರಕ್ಕೆ ಹೊರಳಿಕೊಳ್ಳಿ ಎಂದು ಸೂಚಿಸಿದರೆ ಅದು ಪಾಲನೆಯಾಗುವುದು ಸಾಧ್ಯವೇ? ನಗದು ರಹಿತ ಪ್ರಕ್ರಿಯೆ ಬಗ್ಗೆ ಅವರಿಗೆ ತಿಳಿವಳಿಕೆ, ತರಬೇತಿ ಬೇಡವೇ? ಚೆಕ್‌ನಿಂದ ಹಣ ಪಡೆಯುವ ವ್ಯವಸ್ಥೆಯಿಂದ ಎಟಿಎಂ ವ್ಯವಸ್ಥೆಗೆ ಹೊಂದಿಕೊಳ್ಳಲು ಮೂರು–ನಾಲ್ಕು ವರ್ಷಗಳೇ ಬೇಕಾದವು.

ನೂರು ರೂಪಾಯಿ ಮುಖಬೆಲೆಯ ನೋಟುಗಳನ್ನು ಬೇಡಿಕೆಗೆ ತಕ್ಕಂತೆ ಪೂರೈಸಲು ಆಗುತ್ತಿಲ್ಲ. ತನ್ನ ಈ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಸರ್ಕಾರ, ನಗದುರಹಿತ ವಹಿವಾಟಿನ ಮಂತ್ರ ಜಪಿಸುತ್ತಿದೆ. ಅದೂ ಏಕಾಏಕಿ ಹೊರಳಿಕೊಳ್ಳಬೇಕು ಅಂತ ಬಯಸುತ್ತಿರುವುದು ಆಶ್ಚರ್ಯಕರ. ನೋಟು ರದ್ದತಿಯ ತನ್ನ  ದುಡುಕು ನಿರ್ಧಾರದಿಂದ ಆಗಿರುವ ಅವಾಂತರದಿಂದ ಪಾರಾಗಲು, ಜನರನ್ನು ಬಲವಂತದಿಂದ ಇನ್ನೊಂದು ಅಪಾಯಕ್ಕೆ ದೂಡಿದಂತೆ ಅನ್ನಿಸುತ್ತಿಲ್ಲವೇ?

ಹಿಟ್ಟಿನ ಗಿರಣಿಗಳು, ಹಾಲು ಮಾರಾಟ ಕೇಂದ್ರಗಳು, ಪಾನಿಪುರಿ ಅಂಗಡಿ, ಪಾನ್‌ ಅಂಗಡಿ, ಚಿಕ್ಕಪುಟ್ಟ ಹೋಟೆಲ್‌ಗಳು, ಕಾಫಿ–ಚಹಾ ಮಾರುವವರು, ಇಸ್ತ್ರಿ ಮಾಡುವವರು, ಆಟೊ ರಿಕ್ಷಾದವರು, ಬೀದಿ ಬದಿಯಲ್ಲಿ ಹಣ್ಣು–ತರಕಾರಿ ಮಾರುವವರು ಮತ್ತು ಇನ್ನಿತರ ಗೃಹಕೃತ್ಯದ ಸಾಮಾನುಗಳ ಚಿಲ್ಲರೆ ವ್ಯಾಪಾರಸ್ಥರು ನಗದುರಹಿತ ವ್ಯವಸ್ಥೆಗೆ ಹೋಗಬೇಕೆಂದರೆ ಇವರೆಲ್ಲರೂ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವುದು ಅವಶ್ಯ. ಇವರೆಲ್ಲರಿಗೂ ಸ್ವೈಪಿಂಗ್ ಯಂತ್ರಗಳ ಪೂರೈಕೆಯಾಗಬೇಕು.

ಕಡಿಮೆ ಮುಖಬೆಲೆಯ ನೋಟುಗಳ ಕೊರತೆಯಿಂದಾಗಿ ಸಣ್ಣಪುಟ್ಟ ಆರ್ಥಿಕ ಚಟುವಟಿಕೆಗಳಿಗೆ, ಕಿರಾಣಿ ಅಂಗಡಿಗಳ ದೈನಂದಿನ ವ್ಯಾಪಾರಕ್ಕೆ ಧಕ್ಕೆ ಆಗಿದೆ. ಇವರ ಆದಾಯ ಬಿದ್ದುಹೋಗಿದೆ. ಇಂಥವರು ವ್ಯಾಪಾರ ನಡೆಸುವುದೇ ಕಷ್ಟವಾಗಿರುವಾಗ, ಇವರು  ಸ್ವೈಪಿಂಗ್‌ ಯಂತ್ರಗಳನ್ನು ತಂದು ಬಳಸುವುದು ಯಾವ ಕಾಲಕ್ಕೆ? ನವೆಂಬರ್ ಒಂಬತ್ತರಿಂದ ನೋಟು ವಿನಿಮಯದಲ್ಲಿ ನಿರತರಾಗಿರುವ ಬ್ಯಾಂಕ್ ನೌಕರರಿಗೆ ಸ್ವೈಪಿಂಗ್‌ ಯಂತ್ರಗಳ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ಒದಗಿಸುವುದಕ್ಕೆ ಸಮಯಾವಕಾಶವೆಲ್ಲಿದೆ? ₹ 500 ಹಾಗೂ ₹ 100 ಮುಖಬೆಲೆಯ  ನೋಟುಗಳ ಮುದ್ರಣ– ಪೂರೈಕೆಯೇ  ಕಷ್ಟಸಾಧ್ಯವಾಗಿರುವಾಗ, ತಕ್ಷಣ ಲಕ್ಷಗಟ್ಟಲೆ ಸ್ವೈಪಿಂಗ್‌  ಯಂತ್ರ ಪೂರೈಸುವುದು ಸಾಧ್ಯವೇ?

ನಗದುರಹಿತ ವ್ಯವಹಾರ ಮಾಡಲು ಶಕ್ತರಾದವರು, ಹಣ್ಣು ತರಕಾರಿ, ದಿನಸಿ ತರಲು ದೊಡ್ಡ ಅಂಗಡಿಗಳಿಗೆ ಅಥವಾ ಮಾಲ್‌ ಗಳಿಗೆ ಹೋಗುತ್ತಿದ್ದಾರೆ. ಏಕೆಂದರೆ, ಸಣ್ಣ ವ್ಯಾಪಾರಸ್ಥರ ಬಳಿ ಸ್ವೈಪಿಂಗ್ ಯಂತ್ರಗಳಿಲ್ಲ. ಇದರಿಂದಾಗಿ ಸಣ್ಣ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ನಷ್ಟವಾಗಿದೆ. ಸರ್ಕಾರವು ಬಡವರ ಹಾಗೂ ಸಣ್ಣ ವ್ಯಾಪಾರಿಗಳ ಹಿತರಕ್ಷಣೆಗೆ ಗಮನ ಕೊಡುವ ಬದಲು ದೊಡ್ಡವರಿಗೆ ಮಣೆ ಹಾಕುತ್ತಿದೆ. ಇದು ಸರಿಯೇ?

ಡೆಬಿಟ್–ಕ್ರೆಡಿಟ್ ಕಾರ್ಡ್ ಉಳ್ಳವರು  ಅಂಗಡಿಯಲ್ಲಿ ತಮ್ಮ ಕಾರ್ಡ್‌ ಸ್ವೈಪ್ ಆದ ನಂತರ ರಹಸ್ಯ ಸಂಖ್ಯೆಯನ್ನು ಖುದ್ದಾಗಿ ಯಂತ್ರದ ಮೇಲಿನ ಕೀಲಿಮಣೆಯಲ್ಲಿ ಒತ್ತಬೇಕು. ಆದರೆ ಹೆಚ್ಚಿನ ಗ್ರಾಹಕರು, ಅಂಗಡಿಯವರಿಗೆ ಪಿನ್ (ಗೋಪ್ಯ ಸಂಖ್ಯೆ) ಹೇಳು ತ್ತಾರೆ. ಇದರೊಂದಿಗೆ ಕಾರ್ಡಿನ ಸಂಖ್ಯೆಯನ್ನು ಅವರು ಗೊತ್ತು ಮಾಡಿಕೊಂಡರೆ,  ಕಾರ್ಡ್  ನಕಲು ಮಾಡಿ ಮೋಸ ಮಾಡುವ ಸಾಧ್ಯತೆ ಇದೆ.

ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿಯೂ ಒಬ್ಬರ ಖಾತೆಯಿಂದ ಇನ್ನೊಬ್ಬರ ಯಾವುದೇ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸುವಾಗ ಕೂಡ ಪಿನ್  ಅವಶ್ಯಕತೆಯಿರುತ್ತದೆ. ವ್ಯವಹಾರವಾದ ತಕ್ಷಣ ಅಂತಹ ಸಂದೇಶಗಳನ್ನು ಮೊಬೈಲ್‌ನಿಂದ ಅಳಿಸದಿ ದ್ದರೆ, ಮೊಬೈಲ್ ಬೇರೆಯವರ ಕೈಗೆ ಸಿಕ್ಕಿದರೆ, ಮೋಸಕ್ಕೆ ಒಳ ಗಾಗುವ ಸಾಧ್ಯತೆ ಇದೆ. ವ್ಯವಹಾರ ಮಾಡುವ ಪ್ರತಿಯೊಬ್ಬರ ಬಳಿ ಮೊಬೈಲ್ ಇರಬೇಕು. 

ಮನೆಯಲ್ಲಿ ಒಂದು ಮೊಬೈಲ್ ಇದ್ದರೆ, ಉಳಿದವರು ಹೇಗೆ ವ್ಯವಹಾರ ಮಾಡಲು ಸಾಧ್ಯ? ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವ ಸೌಲಭ್ಯವಿದೆಯೇ? ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ವಂಚನೆಯಾ ದರೆ, ತಮ್ಮ ಹಣದ ವಸೂಲಾತಿಗೆ ಜನರು ಪೋಲಿಸ್‌ ಠಾಣೆಯಲ್ಲಿ ದೂರು ನೀಡುವುದು ಅವಶ್ಯ. ಸೈಬರ್ ಅಪರಾಧಗಳ ವಿಚಾರಣೆಗೆ ಪೋಲಿಸ್ ಪಡೆ ಎಷ್ಟು ತರಬೇತಿಯನ್ನು  ಹೊಂದಿದೆ? ದೂರು ಗಳನ್ನು ಎಷ್ಟು ಪೋಲಿಸ್ ಠಾಣೆಗಳು ಸ್ವೀಕರಿಸಿ, ಅಪರಾಧಿಗಳನ್ನು ಪತ್ತೆ ಮಾಡುವ ಸ್ಥಿತಿಯಲ್ಲಿವೆ?

ನಗದುರಹಿತ ವ್ಯವಹಾರಕ್ಕೆ ಅವಶ್ಯವಿರುವ  ಮೂಲ ಸೌಕರ್ಯ ಗಳಾದ ವಿದ್ಯುತ್, ಸಮರ್ಪಕ ಇಂಟರ್‌ನೆಟ್‌ ನೆಟ್‌ವರ್ಕ್‌, ಸಂಪರ್ಕದ ವೇಗ ಇವನ್ನೆಲ್ಲ ಮೊದಲು ಒದಗಿಸಬೇಕು. ನೆಟ್‌ ವರ್ಕ್‌ಗೆ ಸಂಬಂಧಿಸಿದಂತೆ ಇರುವ ತೊಂದರೆಗಳು  ನಿವಾರಣೆ ಆಗಬೇಕು. ಇವೆಲ್ಲವನ್ನೂ ಪೂರೈಸದೆ ನಗದುರಹಿತ ವಹಿವಾಟಿಗೆ ಹೊರಳಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ.

ಮೊನ್ನೆ ಎಟಿಎಂಗಳ ಕಾರ್ಯ ಸ್ಥಗಿತಗೊಂಡಿದ್ದಾಗ, ಚೆಕ್‌ಬುಕ್ ಇಲ್ಲದಿದ್ದರೆ, ನಾವು ಬ್ಯಾಂಕಿನಿಂದ ನಗದು ಪಡೆಯುವುದು ದುಸ್ತರ ವಾಗುತ್ತಿತ್ತು.  ಹಳೆಯದನ್ನು ಬಿಟ್ಟು ಹೊಸ ವ್ಯವಸ್ಥೆಗೆ ಹೊರಳಿ ಕೊಳ್ಳಬೇಕಾದರೆ ಅನುಷ್ಠಾನಕ್ಕೆ ಮೊದಲು ಅದರ  ಸಾಧಕ ಬಾಧಕ ಕುರಿತು ಪರಿಶೀಲನೆ ಆಗಬೇಕು. ತುರ್ತು ಪರ್ಯಾಯ ಸಾಧ್ಯವಾ ಗದೇ ಹೋದರೆ ಎಂತಹ ಗೊಂದಲ ಸೃಷ್ಟಿಯಾಗುತ್ತದೆನ್ನುವುದಕ್ಕೆ ನೋಟು ರದ್ದತಿಯ ನಂತರದ ಪರಿಸ್ಥಿತಿಯೇ ಜ್ವಲಂತ ನಿದರ್ಶನ.

ನಗದುರಹಿತ ವ್ಯವಸ್ಥೆಗೆ ತುರ್ತು ಪರ್ಯಾಯ ಮಾರ್ಗವೆಂದರೆ ನಗದೇ. ಆದ್ದರಿಂದ ನಗದುರಹಿತ ಎನ್ನುವುದರ ಬದಲು,  ಕಡಿಮೆ ನಗದು ವ್ಯವಸ್ಥೆ ಎನ್ನಬಹುದು. ನಗದುರಹಿತ ವಹಿವಾಟಿಗೆ ಉತ್ತೇ ಜನ, ಕಪ್ಪು ಹಣ  ಹಾಗೂ ನಕಲಿ ನೋಟುಗಳ ವಿರುದ್ಧದ ಸಮರದ ಬಗ್ಗೆ ತಕರಾರು ಇಲ್ಲ.  ಆದರೆ ಸರ್ಕಾರದ ಧಾವಂತ ಏಕೆ ಎಂಬುದು  ಅರ್ಥವಾಗುತ್ತಿಲ್ಲ. ಈ ಅವಸರದ ತೀರ್ಮಾನಕ್ಕೆ  ಆರ್ಥಿಕ ಅಗತ್ಯತೆಯೇ ಏಕೈಕ ಕಾರಣ ಆಗಿತ್ತೆಂದು ನಂಬುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT