ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಅಂದ್ರೆ ನಂಗಿಷ್ಟ ಇಲ್ಲ!

Last Updated 27 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸೋಜಿಗವೆನ್ನಿಸಿದರೂ ಇದು ಸತ್ಯ!
ಬಹಳ ಜನರಿಗೆ ಅವರೆಂದರೆ ಅವರಿಗೆ ಇಷ್ಟ ಇರುವುದಿಲ್ಲ. ಅವರ ಬಗ್ಗೆ ಅವರಿಗೆ ಸಂತೋಷ ಇರುವುದಿಲ್ಲ. ಅವರ ಬಗ್ಗೆ ಅವರಿಗೆ ಗೌರವವೂ ಇರುವುದಿಲ್ಲ. ಅವರ ಬಗ್ಗೆ ಅವರಿಗೇ  ಸಾಕಷ್ಟು ಕೀಳರಿಮೆ ಇರುತ್ತದೆ.

ಯಾವಾಗಲೂ ಅವರು ಬೇರೆಯವರು ತಮ್ಮ ಬಗ್ಗೆ ಋಣಾತ್ಮಕವಾಗಿ ಏನೇನೋ ಅಂದುಕೊಂಡಿದ್ದಾರೆ ಎಂದು ಅಂದುಕೊಳ್ಳುತ್ತ ಇರುತ್ತಾರೆ. ತಾನು ಯಾರಂತೆಯೋ ಇಲ್ಲವಾಗಿರುವುದರಿಂದಲೇ, ತಾನು ಬೇರೇನನ್ನೋ ಓದಲಿಲ್ಲವಾಗಿರುವುದರಿಂದಲೇ ಜೀವನದಲ್ಲಿ ತಾನಿನ್ನೂ ಯಶಸ್ವಿಯಾಗಲಿಲ್ಲ ಎಂದು ನಂಬಿಕೊಂಡಿರುತ್ತಾರೆ. ತನ್ನ ಬಗ್ಗೆ ತಾನು ಹಾಗೆಲ್ಲ ಅಂದುಕೊಂಡಿರುವುದು ಒಂದು ಋಣಾತ್ಮಕ ಆಲೋಚನೆ ಅಂತಲೂ ಅವರಿಗೆ ಅನ್ನಿಸಿರುವುದಿಲ್ಲ. ಎಷ್ಟು ಬೇಗ ಅವರನ್ನು ಅಂತಹ ಮನಃಸ್ಥಿತಿಯಿಂದ ಹೊರಗೆ ತರಲಿಕ್ಕೆ ಆಗುತ್ತದೆಯೋ ಅಷ್ಟು ಬೇಗ ಅವರು ಜೀವನದಲ್ಲಿ ಸಂತೋಷದಿಂದ ಇರಲಿಕ್ಕೆ ಸಾಧ್ಯವಾಗುತ್ತದೆ. ಆದರೆ ನಿಜಕ್ಕೂ ಅದು ಅಷ್ಟು ಸುಲಭದ ಕೆಲಸವಲ್ಲ.

ಆಕೆ ತೀರಾ ಸ್ಪಷ್ಟವಾಗಿ, ‘ಹೌದು ಸಾರ್! ನಿಜಕ್ಕೂ ನನಗೆ ನಾನೆಂದ್ರೆ ಇಷ್ಟ ಇಲ್ಲ!’ ಎಂದು ಹೇಳಿದವಳೇ ಮುಖವನ್ನು ತಗ್ಗಿಸಿಕೊಂಡರು. ನಾನು ಆಕೆಯನ್ನು ಗಮನಿಸಿದೆ. ಆಕೆ ಮೂವತ್ತರ ವಿದ್ಯಾವಂತೆ. ವಕೀಲೆ. ಬುದ್ಧಿವಂತೆ. ಆರೋಗ್ಯವಂತರಂತೆ ಕಾಣುತ್ತಿದ್ದಾರೆ. ಮದುವೆಯಾಗಿ ಏಳು ವರ್ಷವಾಗಿದೆ. ಐದು ವರ್ಷದ ಮಗನಿದ್ದಾನೆ. ಗಂಡನಿಗೆ ಎಂಎನ್‌ಸಿಯಲ್ಲಿ ಒಳ್ಳೆಯ ಉದ್ಯೋಗವಿದೆ. ಸ್ವಂತ ಮನೆಯಿದೆ. ಅತ್ತೆ ಮಾವ ಜೊತೆಗಿಲ್ಲ. ಈಕೆಯ ಅಪ್ಪ ಅಮ್ಮ ಇದೇ ಊರಿನಲ್ಲಿದ್ದಾರೆ. ಉತ್ತರದಲ್ಲಿರುವ ತಮ್ಮ ಮನೆಯಿಂದ ಕಾರಿನಲ್ಲಿ ಹೊರಟರೆ ಪಶ್ಚಿಮದಿಕ್ಕಿನಲ್ಲಿರುವ ಮಗಳ ಮನೆಗೆ ಮುಕ್ಕಾಲು ಗಂಟೆಯ ಪ್ರಯಾಣ. ಎರಡು ವಾರಕ್ಕೊಮ್ಮೆಯಂತೂ ಮಗಳ ಮನೆಗೆ ಬಂದು ಹೋಗುತ್ತಾರೆ. ವಾರದ ಮಧ್ಯೆ ರಜ ಸಿಕ್ಕಾಗ ಈಕೆಯೇ ತವರುಮನೆಗೆ ಹೋಗುತ್ತಾಳೆ. ಅದಕ್ಕೆಲ್ಲ ಗಂಡನ ಆಕ್ಷೇಪವಿಲ್ಲ. ಅಷ್ಟೇ ಅಲ್ಲ, ಆಕೆಯ ಪ್ರಕಾರ, ಗಂಡ ಸಾಧು ಗುಣದ ಸಂಭಾವಿತ ಮನುಷ್ಯ. ಇಷ್ಟೆಲ್ಲ ಸುಖ–ಸೌಕರ್ಯಗಳಿದ್ದರೂ ಈಕೆಗೆ ಬದುಕಿನಲ್ಲಿ ಉತ್ಸಾಹವಿಲ್ಲ. ಸತ್ತುಹೋಗಬೇಕು ಎನ್ನುವಷ್ಟು ಸುಸ್ತಾಗಿದೆ. ಬದುಕಿದ್ದು ಏನಾಗಬೇಕು ಎನ್ನುವ, ಆತ್ಮಹತ್ಯೆಯೊಂದೇ ಮುಂದಿರುವ ದಾರಿ ಎನ್ನುವ ಆಲೊಚನೆಗಳೂ ಆಕೆಗೆ ಪದೇ ಪದೇ ಬರುತ್ತಿವೆಯಂತೆ! ಮಾತಿನ ಮಧ್ಯೆ ಕಣ್ಣೀರಧಾರೆ.

ಆಕೆ ಹೇಳುವಂತೆ ಆಕೆಯ ಮೈಬಣ್ಣ ಕಪ್ಪು. (ನನಗೆ ಖಂಡಿತವಾಗಿಯೂ ಹಾಗನ್ನಿಸಲಿಲ್ಲ.) ಕಪ್ಪಾಗಿರುವುದರಿಂದ ಆಕೆಯನ್ನು ಎಲ್ಲರೂ ಕಡೆಗಣಿಸುತ್ತಾರಂತೆ. ಯಾರೂ ಆಕೆಯನ್ನು ಪ್ರೀತಿಸುವುದಿಲ್ಲವಂತೆ. ಯಾರೂ ಆಕೆಗೆ ಗೌರವವನ್ನು ಕೊಡುವುದಿಲ್ಲವಂತೆ. ಹಾಗಾಗಿ ಆಕೆಗೆ ಆತ್ಮವಿಶ್ವಾಸ ಬಹಳ ಕಡಿಮೆಯಾಗಿದೆಯಂತೆ. ಆಕೆಯದ್ದು ಸೆಮಿ – ಅರೇಂಜಡ್ಡ್ ಮದುವೆಯಂತೆ. ವರ್ಷಗಳು ಕಳೆದಂತೆ ಗಂಡನಿಗೂ ಆಕೆಯ ಮೇಲೆ ಪ್ರೀತಿ ಕಡಿಮೆಯಾಗುತ್ತ ಇದೆಯಂತೆ. ಮತ್ತೆ ಕಣ್ಣಂಚಲ್ಲಿ ನೀರು.

ಅಪ್ಪ ಅಮ್ಮ ಯಾವಾಗಲೂ ಈಕೆಯನ್ನು ಅಲಕ್ಷ ಮಾಡಿದ್ದಾರಂತೆ. ಕಪ್ಪೆಂದೇ ಕಡೆಗಣಿಸಿದ್ದಾರಂತೆ. ಆದರೆ ಅಣ್ಣ ಮತ್ತು ಅಕ್ಕ ಇಬ್ಬರನ್ನೂ ಪ್ರೀತಿಸಿ, ಮುದ್ದಿಸಿ ಬೆಳೆಸಿದ್ದಾರಂತೆ. ಶಾಲೆಯಲ್ಲಿ ಸಹಪಾಠಿಗಳೂ ಈಕೆಯನ್ನು ಕಪ್ಪೆಂದು ಆಡಿಕೊಂಡು ಹಾಸ್ಯ ಮಾಡಿದ್ದೂ ಇದೆಯಂತೆ... ಪಟ್ಟಿ ಬೆಳೆಯುತ್ತ ಸಾಗಿತ್ತು. ಇಂತಹ ಬಹಳಷ್ಟು ಘಟನೆಗಳಿಂದ ಆಕೆಗೆ ಅವಳೆಂದರೆ ಇಷ್ಟವಿಲ್ಲ!

ಇನ್ನು ತನ್ನ ಮೂಗು ಡೊಂಕಾಗಿದೆ ಎ೦ದುಕೊ೦ಡು ಒಂದೆರಡುಮೂರಲ್ಲ ಬರೋಬ್ಬರಿ ಇಪ್ಪತ್ತು ವರ್ಷ ನರಳಿದ ವ್ಯಕ್ತಿಯೊಬ್ಬರು ನನಗೆ ಗೊತ್ತಿದೆ. ಬಹಳಷ್ಟು ಜನ ಸೊಟ್ಟ ಮೂಗಿನವರು, ಮೊ೦ಡು ಮೂಗಿನವರು, ಉದ್ದ ಮೂಗಿನವರು ಜೀವನದಲ್ಲಿ ಯಶಸ್ವಿಯಾಗಿದ್ದಾರೆ, ಮಹತ್ತರವಾದದ್ದನ್ನು ಸಾಧಿಸಿದ್ದಾರೆ ಎನ್ನುವುದನ್ನು ಆತ ಯಾವತ್ತೂ ಗಮನಿಸಿರಲಿಲ್ಲ. ಕಣ್ಣಲ್ಲಿ ಕಂಡಿದ್ದರೂ ಮನಸ್ಸಿನಿಂದ ನೋಡಿರಲಿಲ್ಲ. ಡೊಂಕುಮೂಗು ತನ್ನ ದುರದೃಷ್ಟವೆಂದೇ ಆತ ನಂಬಿಕೊಂಡಿದ್ದ. ತನ್ನ ಡೊಂಕು ಮೂಗನ್ನು ನೆಟ್ಟಗೆ ಮಾಡಿಕೊಳ್ಳಲಿಕ್ಕಾಗಿ ಮೂಗಿನ ಸರ್ಜರಿಯನ್ನೇ ಮಾಡಿಸಿಕೊಳ್ಳಲಿಕ್ಕೆ ಅತ ಮುಂದಾಗಿದ್ದ.

ಕೆಲವು ಸಿನಿಮಾನಟರು ಹೀಗೆ ಆಪರೇಶನ್ನನ್ನು ಮಾಡಿಕೊಂಡ ಬಗ್ಗೆ ಆತ ಪತ್ರಿಕೆಗಳಲ್ಲಿ ಓದಿಕೊಂಡಿದ್ದ. ಬೆಂಗಳೂರಿನ ಪ್ರಖ್ಯಾತ ಇಎನ್‌ಟಿ ಸರ್ಜನ್ ಒಬ್ಬರು ಕಾಸ್ಮೆಟಿಕ್ ಉದ್ದೇಶದಿಂದಾದರೆ ಸರ್ಜರಿ ಮಾಡಿಕೊಳ್ಳಬಹುದೆಂದೂ, ಆರೋಗ್ಯದ ಕಾರಣಕ್ಕಾದರೆ ಅಂತಹ ಸರ್ಜರಿಯ ಅಗತ್ಯ ಇಲ್ಲವೆಂದೂ, ಹುಟ್ಟಿನಿಂದ ಇರುವ ನೈಸರ್ಗಿಕವಾದ ಮೂಗು ಹೇಗಿದೆಯೋ ಹಾಗೆಯೇ ಇದ್ದರೇ ಆರೋಗ್ಯಕ್ಕೆ ಒಳ್ಳೆಯದು ಎಂದೂ ಅವರಿಗೆ ಬುದ್ಧಿಮಾತು ಹೇಳಿದ್ದರು. ಆ ಪ್ರಖ್ಯಾತ ವೈದ್ಯರು ಹಾಗೆ ಹೇಳುವುದಕ್ಕೂ ತನ್ನ ದುರದೃಷ್ಟವೇ ಕಾರಣ ಎಂದೇ ಆತ ಅಂದುಕೊಂಡಿದ್ದ!

ಅವನ ಇಂತಹ ನಂಬಿಕೆಯ ಪರಿಣಾಮ ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಒಂದೆರಡು ವರ್ಷಗಳಲ್ಲಿ ಅವರಿಗೆ ಆರೋಗ್ಯ ಹದಗೆಟ್ಟಿತು. ಪರೀಕ್ಷಿಸಿದ ವೈದ್ಯರು ಅದಕ್ಕೆ ಅಲರ್ಜಿ ಎಂದರು. ಅದರಿಂದ ಗುಣವಾಗಲಿಕ್ಕಾಗಿ ಆತ ಒಂದಾದ ನಂತರ ಒಂದರಂತೆ ವೈದ್ಯರನ್ನು ಬದಲಾಯಿಸಿದ. ಆಲೋಪತಿ, ಆಯುರ್ವೆದ, ಹೋಮಿಯೋಪತಿ ಅಂತೆಲ್ಲ ವೈದ್ಯಕೀಯ ಪದ್ಧತಿಗಳನ್ನು ಬದಲಾಯಿಸಿದ. ಆದರೂ ಅವರ ಸಮಸ್ಯೆ ಕಡಿಮೆಯಾಗಲಿಲ್ಲ. ಅವರನ್ನು ಪರಿಶೀಲಿಸಿದ ಬಹುತೇಕ ಎಲ್ಲ ವೈದ್ಯರು ಬೆಂಗಳೂರನ್ನು ಬಿಟ್ಟು ಹೋದರೆ ಆತನ ಆರೋಗ್ಯ ಸುಧಾರಿಸುತ್ತದೆ ಎಂದೇ ಹೇಳಿದ್ದರು. ಅವರ ಅವಸ್ಥೆಗೆ ಬೆಂಗಳೂರು ಅಲರ್ಜಿ ಅಂತಲೂ ಹೆಸರಿಟ್ಟರಂತೆ. ಹೀಗೆ ತನ್ನ ಮೂಗು ಡೊಂಕು ಎನ್ನುವಲ್ಲಿಂದ ಶುರುವಾದ ಅವರ ಸಮಸ್ಯೆ ಉಲ್ಭಣಿಸುತ್ತಾ ಹೋಯಿತು!

ಇಂತಹ ಬಹಳಷ್ಟು ಘಟನೆಗಳಿಂದಾಗಿ ಆತನಿಗೆ ಅವನೆಂದರೆ ಇಷ್ಟವಿಲ್ಲ!
ಇನ್ನು ತನ್ನ ಧ್ವನಿ ಚೆನ್ನಾಗಿಲ್ಲವೆಂದು, ತಾನು ದಪ್ಪಗಿದ್ದೇನೆಂದು, ತಾನು ತೆಳ್ಳಗಿದ್ದೇನೆಂದು, ತಾನು ಗಿಡ್ಡಗಿದ್ದೇನೆಂದು, ತಾನು ಎತ್ತರವಾಗಿದ್ದೇನೆಂದು, ತನ್ನ ಮೂಗು ಉದ್ದವೆಂದೂ, ತನ್ನ ಕಾಲುಗಳು ಚಿಕ್ಕವಾಗಿವೆಯೆಂದೂ, ತನ್ನ ಕುತ್ತಿಗೆ ಗಿಡ್ಡವೆಂದು.... ಹೀಗೇ ಹತ್ತು ಹಲವು ಕಾರಣಗಳನ್ನು ಪಟ್ಟಿ ಮಾಡಿಕೊಂಡು ತನ್ನನ್ನು ತಾನು ಇಷ್ಟಪಡದಿರುವವರ ಬಹುದೊಡ್ಡ ಯಾದಿಯನ್ನು ತಯಾರಿಸಬಹುದು.

ಹೀಗೆ ತನ್ನಲ್ಲಿ ಏನೋ ಐಬು ಇದೆ ಎಂದು ತಮ್ಮಷ್ಟಕ್ಕೆ ತಾವು ಅಂದುಕೊಂಡು, ಅದನ್ನು ನಂಬಿಕೊಂಡು ನರಳುವವರು ಸಾಕಷ್ಟು ಜನರು ಇದ್ದಾರೆ.
ಅವರ ಪ್ರಕಾರ ಅವರು ಬದುಕಬೇಕು ಅಂತಂದುಕೊಂಡಿರುವುದಕ್ಕೂ, ಈಗ ಬದುಕುತ್ತಿರುವುದಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಅವರ ಮನಸ್ಸಿನಲ್ಲಿ ಅವರ ಜೀವನದ ಗುರಿ ಬೇರೆಯಾಗಿರುತ್ತದೆ. ತಮ್ಮಲ್ಲಿರುವ (ಅವರ ಪ್ರಕಾರ ಮಾತ್ರ!) ಕೊರತೆಯ ಕಾರಣದಿಂದಾಗಿ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳುವತ್ತ ಪ್ರಯತ್ನವನ್ನು ಮಾಡದೆಯೇ, ಬೇರೆಯದೇ ರೀತಿಯಲ್ಲಿ ಬದುಕುತ್ತ ಇರುತ್ತಾರೆ. ಅದು ಬೇಸರದ ಬದುಕೇ ಆಗಿರುತ್ತದೆ.

ತನ್ನನ್ನು ಇಷ್ಟಪಡದವರಿಗೆ ಸಂತೋಷದಿಂದ ಇರಲಿಕ್ಕೆ ಸಾಧ್ಯವಿಲ್ಲ ಎನ್ನುವ ವಿಷಯವನ್ನು ಇತ್ತೀಚಿನ ಆಧುನಿಕ ಜಗತ್ತಿನ ಮನಃಶಾಸ್ತ್ರದ ಸಂಶೋಧನೆಗಳು ಕಂಡುಕೊಂಡಿವೆ. ಇಷ್ಟು ವರ್ಷ ತನ್ನನ್ನು ತಾನು ಇಷ್ಟಪಡದೇ ಇರುವುದನ್ನು ರೂಢಿಮಾಡಿಕೊಂಡವರಿಗೆ, ಅವರನ್ನು ಅವರು ಇಷ್ಟಪಡುವುದನ್ನು ಕಲಿಸುವುದು ಹೇಗೆ? ಕೆಲವರಂತೂ ಇಡೀ ಜೀವನಪೂರ್ತಿ ತನ್ನನ್ನು ತಾನು ಇಷ್ಟ ಪಡಲಿಕ್ಕೆ ಅಥವಾ ತನ್ನನ್ನು ತಾನು ಪ್ರೀತಿಸಲಿಕ್ಕೆ ಕಲಿಯಲಿಕ್ಕೆ ಸಾಕಷ್ಟು ಶ್ರಮಪಡುತ್ತ ಇರುತ್ತಾರೆ.

ಮಗುವಾಗಿದ್ದಾಗ ಒಂದು ಹೊಸ ವಿಷಯವನ್ನಾಗಲೀ, ಒಂದು ಹೊಸ ಭಾಷೆಯನ್ನಾಗಲೀ ಲೀಲಾಜಾಲವಾಗಿ ಕಲಿತುಬಿಡಬಹುದು. ಅದೇ ವಯಸ್ಕರಾದ ಮೇಲೆ ಅಷ್ಟೊಂದು ಸುಲಭವಾಗಿ ಹೊಸದೇನನ್ನೂ ಕಲಿಯಲಿಕ್ಕೆ ಸಾಧ್ಯವಾಗುವುದಿಲ್ಲ. ತನ್ನನ್ನು ತಾನು ಇಷ್ಟ ಪಡುವುದನ್ನು ಕಲಿಯುವುದೂ ಕೂಡ ಇದೇ ಸಾಲಿಗೆ ಸೇರುತ್ತದೆ. ವಯಸ್ಸು ಹೆಚ್ಚಾದಂತೆಯೇ ಕಲಿಯುವ ಮನಸ್ಸು ಕುಗ್ಗುತ್ತದೆ. ಋಣಾತ್ಮಕ ಭಾವನೆಗಳು ಮನಸ್ಸಿನಾಳದಲ್ಲಿ ಹೆಪ್ಪುಗಟ್ಟುತ್ತವೆ. ತನ್ನನ್ನು ಯಾರೂ ಪ್ರೀತಿಸುವುದಿಲ್ಲ ಎಂದೂ, ತನಗೆ ಬೇರೆಯವರಿಂದ ಪ್ರೀತಿಸಲ್ಪಡುವ ಯೋಗ್ಯತೆಯೇ ಇಲ್ಲವೆಂದೂ ಅವರ ಮನಸ್ಸು ನಿರ್ಧರಿಸಿರುತ್ತದೆ. ಹೀಗಾಗಿಯೇ ಅವರು ಯಾರಾದರೂ ತಮ್ಮನ್ನು ಪ್ರೀತಿಸುತ್ತಾರೆ ಎಂದಾಗಲೂ ಅವರ ಪ್ರೀತಿಯನ್ನು ಹೃತ್ಪೂರ್ವಕವಾಗಿ ನಂಬುವುದಿಲ್ಲ. ಅವರಿಂದಲೂ ಕೂಡ ಇನ್ನೊಬ್ಬರನ್ನು ಹೃತ್ಪೂರ್ವಕವಾಗಿ ಪ್ರೀತಿಸಲಿಕ್ಕೆ ಸಾಧ್ಯವಾಗುವುದಿಲ್ಲ. ಯಾವಾಗಲೂ ಎಲ್ಲರನ್ನೂ ಅಷ್ಟಿಷ್ಟು ಸಂಶಯದಿಂದಲೇ ನೋಡುತ್ತಿರುತ್ತಾರೆ. ಸಹಮಾನವರ ಸಂಗಡ ಅವರ ಸಂಬಂಧ ಸೌಹಾರ್ದಯುತವಾಗಿರುವುದಿಲ್ಲ.

ಹೊರಗಿನ ಯಾರೂ ಕೂಡ ನಮಗೆ ನಮ್ಮ ಬಗ್ಗೆ ಅನ್ನಿಸಿರುವ ಲೋಪದ ಬಗ್ಗೆ ಗಮನವನ್ನು ಕೊಟ್ಟಿರುವುದಿಲ್ಲ. ನಾವೂ ಕೂಡ ನಮ್ಮ ಸುತ್ತಲಿನ ಬಹಳಷ್ಟು ಜನರಲ್ಲಿರಬಹುದಾದ (ಅವರು ತಮಗಿದೆ ಅಂದುಕೊಂಡಿರುವ) ಲೋಪಗಳನ್ನು ಗಮನಿಸಿರುವುದಿಲ್ಲ. ಅವರ ಕುತ್ತಿಗೆ ಗಿಡ್ಡ ಎಂದೂ, ಅವರ ಮೂಗು ಮೊಂಡೆಂದೋ ನಾವು ಅವರ ಬಗ್ಗೆ ಅನಾದರವನ್ನು ಹೊಂದಿರುವುದಿಲ್ಲ. ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ನಾವು ಒಪ್ಪಿಕೊಂಡಿರುತ್ತೇವೆ. ಗೌರವಿಸುತ್ತೇವೆ.

ಅದೇ ಪ್ರಕಾರದಲ್ಲಿ ಬಹುತೇಕ ಎಲ್ಲರೂ ಕೂಡ ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ಒಪ್ಪಿಕೊಂಡಿರುತ್ತಾರೆ. ಆದರೆ ನಾವು ಮಾತ್ರ ನಮ್ಮನ್ನು ಸುತರಾಂ ಒಪ್ಪಿಕೊಂಡಿರುವುದಿಲ್ಲ! ದೇವರು ನಮ್ಮನ್ನು ದುರದೃಷ್ಟವಂತರನ್ನಾಗಿ ಹುಟ್ಟಿಸಿದ್ದಾನೆ ಅಂತಲೂ ಹಳಹಳಿಸುತ್ತೇವೆ.  ನಮ್ಮ ಬಗ್ಗೆ ನಾವು ಅಂದುಕೊಂಡದ್ದನ್ನು ಸಮರ್ಥಿಸುವ ಸಾಕಷ್ಟು ಘಟನೆಗಳೂ ನಡೆದಿರುತ್ತವೆ. ಅವುಗಳಿಂದಾಗಿ ನಮಗೆ ನಾವಂದುಕೊಂಡಂತೆಯೇ ಆಗುತ್ತದೆಯಲ್ಲ ಅನ್ನುವ ನಂಬಿಕೆ ಗಟ್ಟಿಯಾಗುತ್ತದೆ. ಮಾನಸಿಕವಾಗಿ ನಾವು ಮತ್ತಷ್ಟು ಕುಗ್ಗುತ್ತೇವೆ. ಇದರಿಂದಾಗಿ ಕಾಲಕಳೆದಂತೆ ನಮ್ಮಲ್ಲಿ ಬಹಳಷ್ಟು ಮನೋದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಅದಕ್ಕಾಗಿಯೇ ತಮಾಷೆಗೂ ಪಾಲಕರಾಗಲೀ, ಶಿಕ್ಷಕರಾಗಲೀ ಒಂದು ಮಗುವನ್ನು ಇನ್ನೊಂದು ಮಗುವಿಗೆ ಹೋಲಿಸಿ ಮಾತನಾಡಬಾರದು. ಹೀನಾಯಿಸಬಾರದು.  Each soul is potentially Divine – ಎನ್ನುವ ಸ್ವಾಮಿ ವಿವೇಕಾನಂದರ ಮಾತನ್ನು ನೆನಪಿನಲ್ಲಿಟ್ಟುಕೊ೦ಡಿರಬೇಕು. ಪ್ರತಿಯೊಂದು ಮಗುವೂ ಕೂಡ ಸೃಷ್ಟಿಕರ್ತನ ಅದ್ಭುತ ಸೃಷ್ಟಿ ಎನ್ನುವುದನ್ನು ಮನಗಾಣಬೇಕು. ಎಲ್ಲರಲ್ಲೂ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಸಹನೆ ಪಾಲಕರಲ್ಲಿರಬೇಕು. ಪಾಲಕರ ಅವಸರಕ್ಕೆ ಮಕ್ಕಳು ಬಲಿಯಾಗಬಾರದು.

ಪಾಲಕರಾಗಲೀ, ಶಿಕ್ಷಕರಾಗಲೀ ಮಗುವಿನ ಮನಸ್ಸಿಗೆ ಘಾಸಿಯಾಗುವಂತಹ ಮಾತನ್ನು ಒಮ್ಮೆಯೂ ಆಡಬಾರದು. ಪ್ರತಿಯೊಂದು ಮಗುವಿನಲ್ಲಿಯೂ ಇರುವ ವಿಶೇಷತೆಯನ್ನು ಗುರುತಿಸಿ ಅದು ಮತ್ತಷ್ಟು ಪ್ರಖರವಾಗಿ ಅರಳುವಂತೆ ಪ್ರೋತ್ಸಾಹಿಸಬೇಕು. ತನ್ನನ್ನು ತಾನು ಇಷ್ಟಪಡುವಂತೆ ಒಂದು ಮಗು ಬೆಳೆಯುವಲ್ಲಿ ಖಂಡಿತವಾಗಿಯೂ ಮಗುವಿನ ಪಾಲಕರದ್ದು ಒಂದು ಪಾಲಾದರೆ ಶಿಕ್ಷಕರದ್ದು ಮತ್ತೊಂದು ಪಾಲು.

ನಾನೂಂದ್ರೆ ನಂಗೆ ಇಷ್ಟ ಇಲ್ಲ ಎನ್ನುವ ಮನಃಸ್ಥಿತಿಯವರು ಆದಷ್ಟು ಬೇಗನೇ ತಜ್ಞ ಮನೋವೈದ್ಯರನ್ನು ಕಾಣಬೇಕು. ತಮ್ಮನ್ನು ತಾವು ಇಷ್ಟ ಪಡುವುದಕ್ಕೆ ಇರುವ ತೊಂದರೆಯನ್ನು ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ಜೀವನದ ಸ್ವಾದವನ್ನು ಅನುಭವಿಸಲಿಕ್ಕಾಗದೆಯೇ ಜೀವನಪೂರ್ತಿ ಸ್ವಯಂ ನಿರಾಕರಣೆಯಲ್ಲಿ ಮತ್ತು ಸ್ವಯಂ ದೂಷಣೆಯಲ್ಲಿಯೇ ಕಳೆಯಬೇಕಾಗುತ್ತದೆ. ಜೀವನದಲ್ಲಿ ಯಶಸ್ವಿಯಾದ ಎಲ್ಲರಲ್ಲೂ ಯಾವುದೋ ಒಂದು ಕೊರತೆ ಇರುತ್ತದೆ. ಆ ಕೊರತೆಯಿಂದ ಕುಗ್ಗದೆ, ಅದನ್ನು ಮೀರಿ ಬೆಳೆದಿರುತ್ತಾರೆ. ಕೆಲವರು ತಮ್ಮ ಜೀವನಸಾಧನೆಗೆ ತಮ್ಮಲ್ಲಿರುವ ಕೊರತೆಯನ್ನೇ ಮೆಟ್ಟಿಲನ್ನಾಗಿಯೂ ಮಾಡಿಕೊಂಡಿರುತ್ತಾರೆ.

ಪ್ರತಿಯೊಬ್ಬರೂ ಎಲ್ಲಕ್ಕಿಂತಲೂ ಮೊದಲು ತನ್ನನ್ನು ತಾನು ಇಷ್ಟಪಡಬೇಕು. ‘ನಾನೂಂದ್ರೆ ನಂಗಿಷ್ಟ’ ಎನ್ನುವಂತಾಗಬೇಕು. (ಆದರೆ ಇದು ಆತ್ಮರತಿಯೂ ಆಗಬಾರದು.) ಆಗ ಮಾತ್ರ ಉಳಿದವರು ತಮ್ಮನ್ನು ಇಷ್ಟ ಪಡುವಂತಾಗುತ್ತದೆ, ಅವರು ನಮ್ಮನ್ನು ಇಷ್ಟಪಟುತ್ತಿದ್ದಾರೆಂದೂ ತಿಳಿಯುತ್ತದೆ. ಆಗ ನಮ್ಮ ಜೀವನ ಸಂತೋಷದಾಯಕವಾಗಿರುತ್ತದೆ. ನಾವು ಆರೋಗ್ಯದಿಂದಲೂ ಇರುತ್ತೇವೆ.
- ಡಿ. ಎಂ. ಹೆಗಡೆ (ಲೇಖಕರು  ಆಪ್ತಸಮಾಲೋಚಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT