ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನವೆಂಬರ್ 8 ರಿಂದಲೇ ರದ್ದು ಮಾಡಿದೆ. ಜನಸಾಮಾನ್ಯರು ಅವುಗಳನ್ನು ಬ್ಯಾಂಕ್‌ಗಳಿಗೆ ಜಮಾ ಮಾಡುವ ಅವಧಿ ಕೂಡ ನಿನ್ನೆಗೆ ಮುಗಿದಿದೆ. ಅಕಸ್ಮಾತ್ ಹಳೆಯ ನೋಟುಗಳಿದ್ದರೆ ಕೆಲವು ಕಠಿಣ ಷರತ್ತುಗಳಿಗೆ ಒಳಪಟ್ಟು, ಬರುವ ಮಾರ್ಚ್ 31ರವರೆಗೂ ರಿಸರ್ವ್ ಬ್ಯಾಂಕ್ ಶಾಖೆಗಳಲ್ಲಿ ಜಮಾ ಮಾಡಲು ಅವಕಾಶವಿದೆ. ಇಷ್ಟನ್ನು ಬಿಟ್ಟರೆ ನಿತ್ಯದ ವಹಿವಾಟಿನಲ್ಲಿ ಆಗಲಿ ಅಥವಾ ಬ್ಯಾಂಕ್ ವಹಿವಾಟಿನಲ್ಲಿ ಆಗಲಿ ಈ ನೋಟುಗಳಿಗೆ ನಯಾಪೈಸೆಯ ಕಿಮ್ಮತ್ತೂ ಇಲ್ಲ.

ಇವೇನಿದ್ದರೂ ರದ್ದಿ ಕಾಗದಕ್ಕೆ ಸಮಾನ. ಆದರೂ ಜನಸಾಮಾನ್ಯರ ಬಳಿ 10ಕ್ಕಿಂತ ಹೆಚ್ಚು ಮತ್ತು ನಾಣ್ಯ– ನೋಟು ಸಂಗ್ರಹಕಾರರ ಬಳಿ 25ಕ್ಕಿಂತ ಹೆಚ್ಚು ರದ್ದಾದ ಈ ಹಳೆಯ ನೋಟುಗಳಿದ್ದರೆ ಅದು ದಂಡನಾರ್ಹ ಅಪರಾಧ ಎಂದು ಪರಿಗಣಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿರುವುದು ಆಶ್ಚರ್ಯದ ಸಂಗತಿ. ಅಷ್ಟೇ ಅಲ್ಲ; ಇದು ತರ್ಕಹೀನ ಮತ್ತು ತೀರಾ ಅಸಂಬದ್ಧ ಎಂದೇ ಹೇಳಬಹುದು. ಬೆಲೆಯೇ ಇಲ್ಲದ ನೋಟು ಇದ್ದರೆಷ್ಟು, ಬಿಟ್ಟರೆಷ್ಟು? ಅದನ್ನೇನಾದರೂ ಚಲಾವಣೆಗೆ ತರಲು ಸಾಧ್ಯ ಇದೆಯೇ? ಖಂಡಿತ ಇಲ್ಲ. ಹೀಗಿರುವಾಗ ಸರ್ಕಾರ ಏಕೆ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂಬುದೇ ಅರ್ಥವಾಗದ ಸಂಗತಿ.

ನೋಟು ರದ್ದು ಘೋಷಣೆಯಿಂದ ಅನೇಕ ಕಾನೂನು ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದೇನೋ ನಿಜ. ಏಕೆಂದರೆ ಒಂದು ನೋಟಿನ ಮೌಲ್ಯಕ್ಕೆ ಸರಿಸಮಾನವಾದ ಮೊತ್ತವನ್ನು ನೀಡುವುದಾಗಿ ರಿಸರ್ವ್ ಬ್ಯಾಂಕ್‌ನ ಗವರ್ನರ್ ಅವರ ವಾಗ್ದಾನ ಮತ್ತು ಅದಕ್ಕೆ ಕೇಂದ್ರ ಸರ್ಕಾರದ ಖಾತರಿ ಇರುವ ಕಾರಣದಿಂದಲೇ ನೋಟುಗಳಿಗೆ ಬೆಲೆ. ಹೀಗಾಗಿ ನೋಟು ರದ್ದತಿಗೆ ಕಾನೂನಿನ ತಿದ್ದುಪಡಿ ಅನಿವಾರ್ಯ. ಈ ಹಿಂದೆ 1978ರಲ್ಲಿ ಮೊರಾರ್ಜಿ ದೇಸಾಯಿ ಅವರ ಸರ್ಕಾರ ಅಧಿಕ ಮೌಲ್ಯದ ನೋಟುಗಳನ್ನು ರದ್ದು ಮಾಡಿತ್ತು.

ನಂತರ ಆ ತೀರ್ಮಾನಕ್ಕೆ ಶಾಸನಬದ್ಧ ಮಾನ್ಯತೆ ದೊರಕಿಸಲು ಕಾನೂನು ತಿದ್ದುಪಡಿ ಮಾಡಿತ್ತು. ಅವೆಲ್ಲ ತಾಂತ್ರಿಕ ಮತ್ತು ಶಾಸನಾತ್ಮಕ ವಿಚಾರಗಳು. ಮೋದಿ ಸರ್ಕಾರದ ತೀರ್ಮಾನ ಕೂಡ, ನೋಟುಗಳ ಮಾನ್ಯತೆ– ಅಮಾನ್ಯತೆಗೆ ಸಂಬಂಧಪಟ್ಟ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿ ತರಲು ಸೀಮಿತವಾಗಿದ್ದರೆ ತಕರಾರು ಇರುತ್ತಿರಲಿಲ್ಲ. ಅದನ್ನೂ ದಾಟಲು ಹೊರಟಿರುವುದು ಅನುಮಾನಗಳಿಗೆ ಎಡೆ ಮಾಡುತ್ತದೆ. ಹೆಚ್ಚು ನೋಟು ಇದೆ ಎಂದು ಜನಸಾಮಾನ್ಯರಿಗೆ ಕಿರುಕುಳ ಕೊಡಲು ಈ ಸುಗ್ರೀವಾಜ್ಞೆಯನ್ನು ಅಧಿಕಾರಶಾಹಿ ಬಳಸಿಕೊಳ್ಳುವುದಿಲ್ಲ ಎಂಬ ಖಾತರಿ ಏನಿದೆ?

ಮೂಲತಃ ಇಂತಹ ವಿಷಯಗಳಿಗೆ ಸುಗ್ರೀವಾಜ್ಞೆ ತರುವ ಮನೋಭಾವವೇ ಸರಿಯಲ್ಲ. ಏಕೆಂದರೆ ಹಳೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್‌ಗೆ ಕಟ್ಟಲು ಇನ್ನೂ ಮೂರು ತಿಂಗಳು ಅವಕಾಶ ಇದೆ. ಅಲ್ಲಿಯವರೆಗೂ ಕಾಯದೆ ಈಗಲೇ ತರಾತುರಿ ಮಾಡುವುದರ ಉದ್ದೇಶ ಏನು? ಅಷ್ಟಕ್ಕೂ ಮುಂದಿನ ತಿಂಗಳು ಸಂಸತ್ತಿನ ಅಧಿವೇಶನ ನಡೆಯುತ್ತದೆ. ಅಲ್ಲಿ ನೇರವಾಗಿ ಆರ್‌ಬಿಐ ಕಾನೂನು ತಿದ್ದುಪಡಿ ಮಸೂದೆಯನ್ನೇ ಮಂಡಿಸಿ ಒಪ್ಪಿಗೆ ಪಡೆಯಬಹುದಿತ್ತು.

ರಾಜ್ಯಸಭೆಯಲ್ಲಿ ಬಹುಮತ ಇಲ್ಲ ಎಂಬ ಕಾರಣಕ್ಕಾಗಿ ಸಂಸತ್ತನ್ನು ಎದುರಿಸುವುದನ್ನು ಬಿಟ್ಟು ಸುಗ್ರೀವಾಜ್ಞೆಯ ಒಳದಾರಿಗೆ ಸರ್ಕಾರ ಶರಣಾಗುತ್ತಿದೆ ಎಂಬ ಅನುಮಾನ ಬರುತ್ತದೆ. ಸಂಸತ್ತಿನಲ್ಲಿ ಕಲಾಪವೇ ನಡೆಯುತ್ತಿಲ್ಲ ಎಂದರೆ ಅದರ ಹೊಣೆಯನ್ನು ವಿರೋಧ ಪಕ್ಷಗಳಿಗಿಂತಲೂ ಹೆಚ್ಚಾಗಿ ಸರ್ಕಾರವೇ ಹೊರಬೇಕಾಗುತ್ತದೆ. ಏಕೆಂದರೆ ಕಲಾಪ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಅಧಿಕಾರದಿಂದ ಹೊರಗಿದ್ದಾಗ ಬಿಜೆಪಿ ಕೂಡ ಸುಗ್ರೀವಾಜ್ಞೆ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಬಂದಿತ್ತು. ಆದರೆ ಈಗ ಅದರ ಧೋರಣೆ ಬದಲಾಗಿದೆ.

ಮೋದಿಯವರ ಸರ್ಕಾರವೂ ಸುಗ್ರೀವಾಜ್ಞೆ ಮೂಲಕವೇ ಆಡಳಿತ ನಡೆಸುವ ಇರಾದೆ ಹೊಂದಿದಂತಿದೆ. ಸುಗ್ರೀವಾಜ್ಞೆ ಎಂಬ ಅಸ್ತ್ರವನ್ನು ಅಪರೂಪಕ್ಕೆ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಆದರೆ ಈ ಸರ್ಕಾರ ಈಗಾಗಲೇ 20ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಶಾಸನ ಮಾಡುವ ಸಂಸತ್ತನ್ನು ಹೀಗೆ ಕಡೆಗಣಿಸುವುದು ಜನತಂತ್ರದ ದೃಷ್ಟಿಯಿಂದ ಒಳ್ಳೆಯದಲ್ಲ. ಅಗತ್ಯವೇ ಇಲ್ಲದೆ ಸುಗ್ರೀವಾಜ್ಞೆ ತರುವುದಕ್ಕೆ ಸಮರ್ಥನೆಯೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.