ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ತಾಂಬುಲ್‌ ದಾಳಿ: ಹೊಣೆ ಹೊತ್ತ ಐಎಸ್‌

ದಾಳಿಕೋರನ ಪತ್ತೆಗಾಗಿ ಟರ್ಕಿ ಪೊಲೀಸರ ಹುಡುಕಾಟ
Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ಇಸ್ತಾಂಬುಲ್‌ (ಎಪಿ): ಇಲ್ಲಿನ ರೀನಾ ನೈಟ್‌ಕ್ಲಬ್‌ನ ಮೇಲೆ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌  ಸಂಘಟನೆ ಹೊತ್ತುಕೊಂಡಿದೆ. ಖಲೀಫನ ಸೈನಿಕರು ಈ ದಾಳಿ ನಡೆಸಿದ್ದಾರೆ ಎಂದು ಜಿಹಾದಿ ತಂಡವು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.

ಮುಸಲ್ಮಾನರು ಬಹುಸಂಖ್ಯಾತ ರಾಗಿರುವ ರಾಷ್ಟ್ರವು ಕ್ರೈಸ್ತರ ಅಡಿಯಾಳುಗಳಂತೆ ಕೆಲಸ ಮಾಡುತ್ತಿದೆ. ಸಿರಿಯಾ ಹಾಗೂ ಇರಾಕ್‌ನಲ್ಲಿ ಐಎಸ್‌ ವಿರುದ್ಧದ ಹೋರಾಟಕ್ಕೆ ಅಂತರರಾಷ್ಟ್ರೀಯ ಒಕ್ಕೂಟದ ಜತೆಗೆ ಅಂಕಾರ ಕೈ ಜೋಡಿಸಲು ಮುಂದಾಗಿರುವುದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಮುಂದುವರಿದ ಹುಡುಕಾಟ:   ನೈಟ್‌ಕ್ಲಬ್‌ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರನ ಪತ್ತೆಗಾಗಿ ಟರ್ಕಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಇಸ್ತಾಂಬುಲ್‌ನ ಅಟಾಟುರ್ಕ್‌ ವಿಮಾನ ನಿಲ್ದಾಣದ ಮೇಲೆ ತ್ರಿವಳಿ ಬಾಂಬ್‌ ಸ್ಫೋಟ ನಡೆಸಿದ ದಾಳಿಕೋರರೊಂದಿಗೆ ನೈಟ್‌ಕ್ಲಬ್‌ ದಾಳಿಕೋರನಿಗೆ ನಂಟು ಇರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ರಾತ್ರಿ ಮೋಜಿಗೆ ಪ್ರಸಿದ್ಧವಾಗಿರುವ ರೀನಾ  ಕ್ಲಬ್ ದ್ವಾರದಲ್ಲಿ ನಿಂತಿದ್ದ ಒಬ್ಬ ಪೊಲೀಸ್ ಮತ್ತು ನಾಗರಿಕರೊಬ್ಬರನ್ನು ಹತ್ಯೆ ಮಾಡಿದ ಸಾಂಟಾಕ್ಲಾಸ್ ದಿರಿಸಿನಲ್ಲಿದ್ದ ಬಂದೂಕುಧಾರಿ, ಕ್ಲಬ್‌ ಒಳಗಡೆ ನುಗ್ಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದನು.

ದಾಳಿಕೋರ 120 ಗುಂಡು ಹಾರಿಸಿದ್ದು, ಬಟ್ಟೆ ಬದಲಾಯಿಸಿ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದನು ಎಂದು ವಿಶೇಷ ಪೊಲೀಸ್‌ ಪಡೆ ಅನುಮಾನ ವ್ಯಕ್ತಪಡಿಸಿದೆ.
ದಾಳಿಯಲ್ಲಿ ಇಬ್ಬರು ಭಾರತೀಯರೂ ಸೇರಿದಂತೆ 16 ವಿದೇಶಿಯರು ಮೃತಪಟ್ಟಿದ್ದರು. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆ ನಡೆದಾಗ ಕ್ಲಬ್‌ನಲ್ಲಿ ಸುಮಾರು 700 ಜನರು ಇದ್ದರು ಎನ್ನಲಾಗಿದೆ.

8 ಮಂದಿ ಶಂಕಿತರ ಬಂಧನ:  ನೈಟ್‌ಕ್ಲಬ್‌ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಸ್ತಾಂಬುಲ್‌ನ ಭಯೋತ್ಪಾದನಾ ನಿಗ್ರಹ ದಳ ಸೋಮವಾರ 8 ಮಂದಿ ಶಂಕಿತರನ್ನು ಬಂಧಿಸಿದೆ.

ದಾಳಿಕೋರನ ಜತೆಗೆ ಬಂಧಿತರು ಸಂಬಂಧ ಹೊಂದಿರುವ ಬಗ್ಗೆ ಯಾವುದೇ  ಸೂಚನೆಗಳು ಕಂಡುಬಂದಿಲ್ಲ ಎಂದು ಡೊಂಗನ್‌ ಸುದ್ದಿಸಂಸ್ಥೆ ತಿಳಿಸಿದೆ. ಶಂಕಿತ ಪ್ರಮುಖ ದಾಳಿಕೋರ  ಪರಾರಿಯಾಗಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT