ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಫಾರ್ಮ್ ಎಂಬ ಬೇಡಿ

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

ಯು.ಕೆ.ಜಿ. ಓದುವ ರಾಹುಲ್ ಎರಡು ದಿನಗಳಿಂದ ಮಂಕಾಗಿದ್ದಾನೆ. ಎಂದೂ ಒಳ ಉಡುಪು ಗಲೀಜು ಮಾಡಿಕೊಳ್ಳದ ಈ ಹುಡುಗ ಮೊನ್ನೆ ಶಾಲೆಯಿಂದ ಬರುವಾಗ ಕಕ್ಕ ಮಾಡಿಕೊಂಡಿದ್ದಾನೆ, ನಿನ್ನೆ ಅವನಿಗೆ ಗೊತ್ತಾಗುವ ಮೊದಲೇ ಸೂಸೂ ಮಾಡಿಕೊಂಡಿದ್ದಾನೆ. ಅವರಮ್ಮನಿಗೆ ಚಿಂತೆ. ಪಕ್ಕದಲ್ಲಿ ಕೂರಿಸಿಕೊಂಡು ತಲೆಯನ್ನು ಸವರಿ ನಿಧಾನಕ್ಕೆ ಕೇಳಿದಾಗ ರಾಹುಲ್ ಅಳುತ್ತಾ ಹೇಳತೊಡಗಿದ.

‘ಅಮ್ಮ... ಅಮ್ಮ... ನಂಗೆ, ಮತ್ತೆ ಚಡ್ಡಿ ತೆಕ್ಕೊಳೋಕೆ ಆಗಲ್ಲ. ಗುಂಡಿ ಬಿಚ್ಚಿ, ಜಿಪ್ ಬಿಚ್ಚಿ ಟಾಯ್‌ಲೆಟ್‌ಗೆ ಹೋಗಬೇಕು...  ಮತ್ತೆ... ನಮ್ಮ ಇನ್ನೊಂದು ಮೇಡಂ (ಆಯಾ) ‘‘ಪದೇ ಪದೇ ನಿಂದು ಇದೇ ಗೋಳು’’ ಅಂತ ಬೈದುಬಿಟ್ರು. ಅದ್ಕೆ... ’ ಎಂದು ಜೋರಾಗಿ ಅಳತೊಡಗಿದ.

ಊರಲ್ಲಿರುವ ಶಾಲೆಗಳ ಪೈಕಿ ತುಂಬ ಒಳ್ಳೆಯ ಶಾಲೆ ಎಂದುಕೊಂಡು, ದುಬಾರಿ ಫೀಸು ತೆತ್ತು ಸೇರಿಸಿದ ಶಾಲೆ ಅದು. ಸುಂದರವಾದ ಕಟ್ಟಡ, ಆಕರ್ಷಕ ಸಮವಸ್ತ್ರ ಎಲ್ಲವೂ ಜನರನ್ನು ಈ ಕಡೆಗೆ ಸೆಳೆಯುತ್ತಿತ್ತು. ನಿಜ, ಇಂದು ಉತ್ತಮ ಶಾಲೆಯ ಮಾನದಂಡಗಳು ಇವೇ ಆಗಿಬಿಟ್ಟಿರುವುದು ವಿಷಾದ. ಈ ಆಕರ್ಷಕತೆಯ ಹಿಂದೆ ಮಕ್ಕಳ ಚೈತನ್ಯವನ್ನು ಅರಳಿಸುವ ಅಂಶಗಳಿವೆಯೇ? – ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಾಗುತ್ತದೆ. ಶಾಲೆಯ ವಾತಾವರಣ ಎಷ್ಟೋ ಸಂದರ್ಭಗಳಲ್ಲಿ ಮಕ್ಕಳನ್ನು ವಿದ್ಯಾವಂತರಾಗಿಸುವ ಬದಲು ಅವರ ಚೈತನ್ಯ ಉಡುಗಿಸುವ ಸಂದರ್ಭಗಳೂ ಬಹಳ ಇವೆ.

ಭಾರತದಂತಹ ದೇಶದಲ್ಲಿ ವಿದೇಶಿ ಮಾದರಿಯ ಕೋಟು, ಟೈ, ಹಲವು ಬಗೆಯ ಶೂಗಳು, ಬೆಲ್ಟ್ ಇವುಗಳ ಅಗತ್ಯವಿದೆಯೇ? ನಿಜವಾದ ಶಿಸ್ತು ಅಂದರೆ ಏನು? ನಿಜವಾಗಿಯೂ ಮಕ್ಕಳ ದೃಷ್ಟಿಯಿಂದ ನೋಡಿದರೆ ಗಂಡುಮಕ್ಕಳು ಅವರು ಒಂದು ಸಣ್ಣ ನೇಚರ್ ಕಾಲ್‌ಗೆ ಹೋಗಬೇಕಾಗದರೆ ಬೆಲ್ಟ್ ಬಿಚ್ಚಿ, ಗುಂಡಿ ತೆಗೆದು, ಜಿಪ್ ತೆಗೆದು ಹೋಗಿ ಬರಬೇಕಾಗುತ್ತದೆ. ಎಷ್ಟೋ ಬಾರಿ ಜಿಪ್ ತೆಗೆಯುವಾಗ ಎಳೆಯ ಚರ್ಮ ಘಾಸಿಗೊಳ್ಳುವುದೂ ಇದೆ.

ಮತ್ತೆ ಸಿಕ್ಕಿಸಿಕೊಳ್ಳುವುದೂ ಅಷ್ಟೇ ಕಷ್ಟದ ಕೆಲಸ. ಇದು ಎಲ್.ಕೆ.ಜಿ, ಯು.ಕೆ.ಜಿ, ಒಂದನೇ ತರಗತಿಯ ವಿದ್ಯಾರ್ಥಿಗಳಿಗಂತೂ ಬೇರೆಯವರ ಸಹಾಯವಿಲ್ಲದೇ ಸಾಧ್ಯವಿಲ್ಲ. ಮಕ್ಕಳಿಗೆ ಇದು ಮಹಾನ್ ಮುಜುಗರ.  40–50 ಮಕ್ಕಳಿರುವ ತರಗತಿಯಲ್ಲಿ ಪ್ರತಿ ಮಕ್ಕಳಿಗೂ ಸ್ಪಂದಿಸಿ ಒಂದು ಹಂತದಲ್ಲಿ ಆಯಾಗೆ ರೋಸಿ ಹೋಗುವುದು ಸಹಜ. ಹಾಗೆ ಆಕೆ ರೇಗಿದಾಗ ಮಕ್ಕಳು ಎಷ್ಟೇ ಕಷ್ಟವಾದರೂ ತಡೆಹಿಡಿದುಕೊಳ್ಳುವುದನ್ನು ಕಲಿಯುತ್ತವೆ.

ಹಲ್ಲುಕಚ್ಚಿ ಕೂರುತ್ತವೆ. ಇದು ಆರೋಗ್ಯದ ದೃಷ್ಟಿಯಿಂದ ತುಂಬ ಹಾನಿಕಾರಕ. ಇವರ ಪ್ರಯತ್ನದ ಹೊರತಾಗಿಯೂ ಚಡ್ಡಿಯಲ್ಲಿಯೇ ಗಲೀಜು ಮಾಡಿಕೊಂಡರೆ ಮತ್ತೆ ಶಾಲೆಯಲ್ಲಿ ಬೈಗುಳ, ಮಕ್ಕಳಿಗೆ ನಾಚಿಕೆ, ಮುಜುಗರ. ಇದರಿಂದಾಗಿ ಶಾಲೆಯೆಂದರೆ ದುಃಸ್ವಪ್ನವಾಗುತ್ತದೆ.

ಎಳೆಯ ಮಕ್ಕಳನ್ನು ಮಾನಸಿಕವಾಗಿ ಪ್ರತಿನಿತ್ಯ ಅವಮಾನ, ಮುಜುಗರಕ್ಕೆ ದೂಡುವ ಈ ಬಗೆಯ ಸಮವಸ್ತ್ರಗಳನ್ನು ಯಾವ ಪುರುಷಾರ್ಥಕ್ಕಾಗಿ ಶಾಲೆಗಳು ನೀಡುತ್ತವೆಯೋ? ಸಮವಸ್ತ್ರ ಬೇಡವೆಂದಲ್ಲ. ಸಡಿಲವಾದ ಎಲಾಸ್ಟಿಕ್ ಇರುವ ಹಿತವೆನಿಸುವ ಬಟ್ಟೆಯ ಅಂಗಿ-ಚಡ್ಡಿ ಅಥವಾ ಲಂಗ-ರವಿಕೆ ಇದ್ದರೆ ಸಾಕಲ್ಲವೇ?

ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಾರೆ ಎಂಬುದು ಮುಖ್ಯವಾಗಬೇಕೇ ಹೊರತು ಹೊರನೋಟದ ಆಡಂಬರ ನಮ್ಮ ಮಕ್ಕಳನ್ನೇ ಮುದುಡಿಸುತ್ತದೆ ಎಂಬ ತಿಳಿವಳಿಕೆ ಪೋಷಕರಲ್ಲಿ, ಶಿಕ್ಷಕರಲ್ಲಿ ಹಾಗೂ ಆಡಳಿತ ಮಂಡಳಿಗಳಲ್ಲಿ ಮೂಡುವ ಅಗತ್ಯವಿದೆ. ಮೊದಲ ಹಂತದಲ್ಲೇ ತನ್ನ ದೈಹಿಕ ಕೃತ್ಯಗಳ ಬಗ್ಗೆ ನಕಾರಾತ್ಮಕ ಭಾವನೆ ಬೆಳೆಸಿಕೊಂಡ ಮಗುವಿಗೆ ಇದು ಅದರ ಆತ್ಮವಿಶ್ವಾಸದ ಮೇಲೇ ಪೆಟ್ಟು ನೀಡುತ್ತದೆ.

ಇಷ್ಟೇ ಅಲ್ಲ, ಚಳಿಗಾಲ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಟೈ, ಕೋಟು ಧರಿಸಿ ತರಗತಿಯಲ್ಲಿ ಒತ್ತೊತ್ತಾಗಿ ಕುಳಿತ ಮಕ್ಕಳು ಒಳಗೊಳಗೇ ಬೇಯುವುದನ್ನು ಕಲ್ಪಿಸಿಕೊಂಡರೆ ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆಂತ ಯಾತನೆ ನೀಡುತ್ತಿದ್ದೇವೆ ಎಂಬುದು ಅರಿವಾಗುತ್ತದೆ. ಇದು ಕಾಲೇಜುಗಳಿಗೂ ಅನ್ವಯವಾಗುತ್ತದೆ.

ಬಿರುಬಿಸಿಲಿನಲೂ ಬ್ಲೇಜರ್ ಹಾಕಿಕೊಂಡು ಕರೆಂಟ್ ಇಲ್ಲದೇ ತರಗತಿಯಲ್ಲಿ ಬೆವರಿ ಬಸವಳಿಯುತ್ತಾ ಕುಳಿತ ವಿದ್ಯಾರ್ಥಿಗಳ ತಲೆಗೆ ಯಾವ ಪಾಠ ಇಳಿದೀತು, ದೇವರೇ ಬಲ್ಲ. ವಸಾಹತುಶಾಹಿಯ ಹಿಡಿತದಿಂದ, ದಾಸ್ಯದ ಪೊರೆಯಿಂದ ನಾವಿನ್ನೂ ಹೊರಬಂದಿಲ್ಲ ಎಂಬುದಕ್ಕೆ ಇದು ಉದಾಹರಣೆ. ತಿರುಳಿಗಿಂತ ಹೊರನೋಟಕ್ಕೇ ಆದ್ಯತೆ ನೀಡಿದುದರ ಪರಿಣಾಮ ಇದು.

ಮಕ್ಕಳ ಸಮಗ್ರ ಬೆಳವಣಿಗೆಯ ಬಗ್ಗೆ ಚಿಂತಿತರಾದ ಎಲ್ಲರೂ ಶಾಲೆಗಳಲ್ಲಿರುವ ಈ ಬಗೆಯ ಸಮವಸ್ತ್ರಗಳ ವಿರುದ್ಧ ದನಿಯೆತ್ತಬೇಕು. ಮಕ್ಕಳು ಸಂಘಟಿತರಾಗಿ ತಮ್ಮ ನೋವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದ ಕಾರಣ ಮಕ್ಕಳ ಹಕ್ಕಿನ ಬಗ್ಗೆ ಹೋರಾಡುವ ಸಂಘಟನೆಗಳು ಈ ವಿಚಾರವನ್ನು ಕೈಗೆತ್ತಿಕೊಳ್ಳಬೇಕು. ಪೋಷಕರು, ಶಿಕ್ಷಕರು, ಆಡಳಿತ ವರ್ಗದವರು ಇನ್ನು ಮೇಲಾದರೂ ಭ್ರಮೆ ಬಿಟ್ಟು ಮಕ್ಕಳ ದೃಷ್ಟಿಯಿಂದ ಸಮವಸ್ತ್ರವನ್ನು ವಿನ್ಯಾಸ ಮಾಡಬೇಕು.

ಮಕ್ಕಳು ಸಹಜವಾದ ಆಸಕ್ತಿಯಿಂದ ತೊಡಗಿಕೊಳ್ಳುವಂತೆ ಮಾಡುವುದು ಶಿಸ್ತೋ ಅಥವಾ ಎಲ್ಲರೂ ಸೂಟು-ಟೈ ಧರಿಸಿದ ಮಾತ್ರಕ್ಕೆ ಶಿಸ್ತು ಬಂದುಬಿಡುತ್ತದೋ? ನಾವು ನಮ್ಮ ತೆವಲಿಗಾಗಿ ಮಕ್ಕಳ ಸುಂದರ ಬಾಲ್ಯವನ್ನು ಬಂಧಿಯಾಗಿಸುತ್ತಿದ್ದೇವೆ ಎಂಬುದನ್ನು ಯೋಚಿಸಬೇಕಾಗಿದೆ. ಅವರಿಗೆ ಬೇಕಾದುದು ಆತ್ಮವಿಶ್ವಾಸ ತುಂಬುವ, ಜಗತ್ತನ್ನು ತೆರೆದ ಕಣ್ಣುಗಳಿಂದ ನೋಡಿ ಹೊಸದನ್ನು ಕಲಿಯಲು ಅನುವುಮಾಡಿಕೊಡುವ, ಹೊಸ ಗೆಳೆತನವನ್ನು ಬೆಳೆಸಿಕೊಳ್ಳುವ ಆತ್ಮೀಯ ತಾಣ. ಶಾಲೆಗಳನ್ನು ಅಂತಹ ಜಾಗವಾಗಿಸುವ ಕಡೆ ನಮ್ಮ ಗಮನ ಇರಬೇಕೇ ಹೊರತು ಶಾಲೆಗಳನ್ನು ಮತ್ತೊಂದು ಬಂಧೀಖಾನೆಯಾಗಿಸುವ ಕಡೆ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT