ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಹಿತಕರಗೊಳಿಸುವುದು ಹೇಗೆ?

ಸಂಗತ
Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ
‘ಪ್ರವಾಸಿ ಭಾರತೀಯ ದಿವಸ್‌’ ಕಾರ್ಯಕ್ರಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ (ಜ. 7ರಿಂದ 9ರ ವರೆಗೆ).  ವಿವಿಧ ದೇಶಗಳ ಸಾವಿರಾರು ಜನ ಪಾಲ್ಗೊಳ್ಳಲಿದ್ದಾರೆ.  ಭಾರತದ ಎಲ್ಲಾ ರಾಜ್ಯಗಳು ತಮ್ಮ ರಾಜ್ಯಗಳಿಗೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದ ಮಹತ್ವದ ಈ ಕಾರ್ಯಕ್ರಮದಲ್ಲಿ, ಹಲವು ರಾಜ್ಯಗಳು ತಮ್ಮ ನೆಲದ ಅನನ್ಯ ಸೊಗಡನ್ನು ಬಿಂಬಿಸಲಿವೆ.
 
ಕಳೆದ ಗುರುವಾರವಷ್ಟೇ ಗೆಳತಿಯರೊಂದಿಗೆ ಬೆಂಗಳೂರಿನ ಸಮೀಪದಲ್ಲಿರುವ ದೇವರಾಯನ ದುರ್ಗ ಹಾಗೂ ಶಿವಗಂಗೆಗೆ ಪ್ರವಾಸ ಹೋಗಿ ಬಂದೆ. ದೂರದ ಪ್ರವಾಸಿ ತಾಣಗಳ ಬಗ್ಗೆ ಬರೆಯಲು ಕುಳಿತರೆ ಅದೇ ಒಂದು ಕಾದಂಬರಿಯಾಗಬಹುದು. ಆದರೆ ಇನ್ನೂ ಹಸಿಹಸಿಯಾಗಿರುವ ಪ್ರವಾಸದ ಅನುಭವ ಮನಸ್ಸಿಗೆ ಎಷ್ಟೊಂದು ಗಾಸಿ ಉಂಟುಮಾಡಿತೆಂದರೆ, ಬೆಂಗಳೂರಿಗೆ ಕೇವಲ 50 ಕಿ.ಮೀ. ಅಂತರದಲ್ಲಿರುವ, ಐತಿಹಾಸಿಕ ಮಹತ್ವದ  ಶಿವಗಂಗೆ ತಾಣ ಹೇಗಿದೆ ಎಂಬುದನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಖುದ್ದಾಗಿ  ನೋಡಿ ಬರಬೇಕು. ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಹಾಗೂ ಮಾಗಡಿ ಕೆಂಪೇಗೌಡರಿಂದ ಸಂರಕ್ಷಣೆಗೆ ಒಳಪಟ್ಟಿದ್ದ ಅಲ್ಲಿನ ಕೋಟೆ ಮತ್ತು ಒಟ್ಟು ಪರಿಸರ ಹೇಗಿದೆ ಎಂಬುದನ್ನು ಸ್ವತಃ ಅನುಭವಿಸಿ ಬಂದಿದ್ದೇನೆ.
 
1,368 ಮೀಟರ್ ಎತ್ತರದ,  ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧವಾದ ಗಂಗಾಧರೇಶ್ವರ, ಹೊನ್ನಾದೇವಿ, ಒಳಕಲ್ಲು ತೀರ್ಥ, ನಂದಿ ಮೂರ್ತಿ, ಪಾತಾಳಗಂಗೆ ಮುಂತಾದ ದೇವಾಲಯಗಳ ಸಮೂಹವಿರುವ ಈ  ಪರಿಸರದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅತ್ಯಂತ ಕೊಳಕಾದ ತಾಣವಾಗಿ ಪರಿವರ್ತನೆ ಕಂಡಿದೆ. ಬೆಟ್ಟವನ್ನು ಹತ್ತಲು ಯಾವ ಮಾರ್ಗಸೂಚಿಯೂ ಇಲ್ಲ. ಕ್ಷೇತ್ರ ಪರಿಚಯದ ಮಾಹಿತಿಯ ಫಲಕ   ಕೂಡ ಅಲ್ಲಿ ಸಿಗುವುದಿಲ್ಲ.  ಬೆಟ್ಟ  ಹತ್ತುವವರು  ಊಹೆಯ ಮೇಲೆ, ತಮಗೆ ಸಾಧ್ಯವೋ ಇಲ್ಲವೋ ಎಂಬುದು ತಿಳಿಯದೆ ಹತ್ತುವ ಸಾಹಸ ಮಾಡಬೇಕು. ಕಡಿದಾದ ಬೆಟ್ಟಹತ್ತಲಾಗದೆ ಅನೇಕರು ಅರ್ಧಕ್ಕೇ ಹಿಂದಿರುಗುತ್ತಾರೆ. ಒಳಕಲ್ಲು ತೀರ್ಥದವರೆಗೆ ಕಡಿದಾದ,  ಕೊಳಕಾದ, ಎಲ್ಲೆಂದರಲ್ಲಿ ಕಸದ ರಾಶಿಯ ಮಧ್ಯೆ ಜಾಗ ಮಾಡಿಕೊಂಡು ‘ಉಸ್ಸಪ್ಪಾ’ ಎನ್ನುತ್ತಾ ಹೋದರೆ ಅದು ಒಂದು ಸಾಹಸವೇ ಸರಿ.
 
ಮತ್ತೊಂದು ಸಾಹಸ ಕೋತಿಗಳನ್ನು ಎದುರಿಸುವುದು.  ಬೆಟ್ಟದ ಮೂಲೆ ಮೂಲೆಯಲ್ಲೂ ಅಡ್ಡಾಡುವ  ನೂರಾರು ಕೋತಿಗಳು ಯಾವ ಅಂಜಿಕೆಯೂ ಇಲ್ಲದೆ ಪ್ರವಾಸಿಗರ ಮೇಲೆ ಎರಗುತ್ತವೆ. ಹೆಂಗಸರ ಸೀರೆ ಜಗ್ಗುವ, ಕೈಯಲ್ಲಿರುವ ನೀರಿನ ಬಾಟಲಿಗಳನ್ನೂ ಬಿಡದೆ ಕಿತ್ತೊಯ್ಯುವ ಕಪಿಗಳಿಂದ ತಪ್ಪಿಸಿಕೊಂಡು ಬೆಟ್ಟವನ್ನು ಹತ್ತುವುದು ಮತ್ತೊಂದು ಸಾಹಸವೇ ಸರಿ. ಈ ಸ್ಥಿತಿ ದೇವರಾಯನ ದುರ್ಗಕ್ಕೂ ಅನ್ವಯಿಸುತ್ತದೆ.
 
ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕೂಡ ಇಲ್ಲಿ ಇಲ್ಲ. ಒಳಕಲ್ಲು ತೀರ್ಥದ ಬಳಿ ಇರುವ ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ. ಶೌಚಾಲಯಕ್ಕೆ ಬಳಸಲು ಒಂದು ತೊಟ್ಟಿ ಕಟ್ಟಿ ನೀರು ಸಂಗ್ರಹಿಸಿದ್ದಾರೆ. ಆ ನೀರು ಮಲೆತುಹೋಗಿದ್ದು, ಅದೂ ಇತಿಹಾಸದ ಸಾಕ್ಷಿಯೆಂಬಂತೆ ಅಣಕಿಸುತ್ತಿದೆ. ನೂರಾರು ಪ್ರವಾಸಿಗರನ್ನು ಸೆಳೆಯುವ ಈ ಜಾಗವು ಕಾಲೇಜು ಹುಡುಗ, ಹುಡುಗಿಯರು ಏಕಾಂತ ಬಯಸಿ ಬರುವ ತಾಣವೂ ಹೌದು. ನಮಗಂತೂ ದೇವರಾಯನ ದುರ್ಗ, ಶಿವಗಂಗೆಯಲ್ಲಿ ಇಂತಹದ್ದೇ ಜೋಡಿಗಳ ದರ್ಶನವಾಯಿತು. ಅಲ್ಲಿ ಯಾರು ಏನು ಮಾಡಿದರೂ ಕೇಳುವವರಿಲ್ಲ. ರಕ್ಷಣಾ ಸಿಬ್ಬಂದಿಯೂ  ಕಾಣಸಿಗುವುದಿಲ್ಲ. ನಾನು ಅಲ್ಲಿನ ಅಂಗಡಿಯವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಆತ ಹೇಳಿದ್ದು ಕೇಳಿ ಗಾಬರಿಯಾಯಿತು. 
 
ಅಲ್ಲಿಗೆ ಬರುವ ಹುಡುಗ,  ಹುಡುಗಿಯರ ಹಿಂದೆ ಬೀಳುವ  ಪಡ್ಡೆ ಹುಡುಗರು ಅವರನ್ನು  ಛೇಡಿಸುವುದು ತುಂಬಾ ಸಹಜವೆಂಬಂತೆ ತಿಳಿಸಿದ. ಕೋತಿಗಳಿಂದ ಕಚ್ಚಿಸಿಕೊಂಡ ಪ್ರಕರಣಗಳಿಗೆ ಲೆಕ್ಕವಿಲ್ಲವಂತೆ.  
 
ಶಿವಗಂಗೆ ಐತಿಹಾಸಿಕ, ಪೌರಾಣಿಕ ಸ್ಥಳ. ಇಲ್ಲಿನ ಗುಡಿಗಳನ್ನು ಸರ್ಕಾರ ‘ಕರ್ನಾಟಕದ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ’ ಎಂದು ಘೋಷಿಸಿದೆ. ಹಾಗಿದ್ದರೂ  ಗಂಗಾಧರೇಶ್ವರ, ಹೊನ್ನಾದೇವಿ ಗುಡಿಗಳಿಗೆ ಸುಣ್ಣ ಬಳಿದು ವಿರೂಪ ಮಾಡುತ್ತಿದ್ದಾರೆ. ಕಲ್ಲಿನ ಮಂಟಪಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ. ‘ಶಾಂತಲೆ ಮುಡುಪಿದಳು’ ಎಂಬ ಐತಿಹಾಸಿಕ ಜಾಗಕ್ಕೆ ಯಾವ ಕಟಕಟೆಯೂ ಇಲ್ಲ.
 
ಇದು ಬೆಂಗಳೂರಿನ ಸನಿಹದ  ಪ್ರವಾಸಿ ತಾಣದ ಒಂದು ಕಥೆ. ದೂರದಲ್ಲಿರುವ ಪ್ರವಾಸಿ ತಾಣಗಳ ಕಥೆಗಳು ಇದಕ್ಕಿಂತ ಭಿನ್ನವೇನಿಲ್ಲ. ಕರ್ನಾಟಕದಲ್ಲಿ ರಮಣೀಯವಾದ  ಪ್ರವಾಸಿ ತಾಣಗಳಿವೆ. ಅವುಗಳನ್ನು ಸುಂದರವಾಗಿಟ್ಟುಕೊಳ್ಳುವುದು, ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಅವುಗಳನ್ನು ರಕ್ಷಿಸುವುದು  ಹೇಗೆ ಎಂಬುದನ್ನು ರಾಜಸ್ತಾನವನ್ನು ನೋಡಿ  ಕಲಿಯಬೇಕಿದೆ. ಅಲ್ಲಿ ಪ್ರವಾಸಿಗರು ಎಲ್ಲಿ ಹೋದರೂ ಮಾರ್ಗದರ್ಶಿಗಳು ಸಿಗುತ್ತಾರೆ. ಪ್ರವಾಸಿಗರ  ಭಾಷೆಗಳಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ವಿವರಿಸುತ್ತಾರೆ. ರಾಜಸ್ತಾನ ಸಂಸ್ಕೃತಿ ಬಿಂಬಿಸುವ ಚಪ್ಪಲಿ, ಒಡವೆ, ಬಾಂದನಿ ಬಟ್ಟೆಗಳನ್ನು ಮಾರಾಟ ಮಾಡುವ, ಜನಪದ ಗೀತೆಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ವಾತಾವರಣ ನಿರ್ಮಿಸಿದ್ದಾರೆ. 
 
ಪ್ರವಾಸಿಗರು ಮಲೇಷ್ಯಾಗೆ ಹೋದರೆ ಅಲ್ಲಿನ ನೆನಪಾಗಿ ಟ್ವಿನ್ ಟವರ್‌ ಮಾದರಿಗಳನ್ನು, ಸಿಂಗಪುರದಿಂದ ಮರ್‌ಲಯನ್ ಮಾದರಿಯನ್ನು ತರುತ್ತಾರೆ. ಆಗ್ರಾದ ತಾಜ್‌ಮಹಲ್ ಬಿಟ್ಟರೆ ನಮ್ಮಲ್ಲಿ ಅಂತಹ ನೆನಪಿನ ಕಾಣಿಕೆಯ ಸಣ್ಣ ಸಣ್ಣ ನೆನಹುಗಳಾಗಿ ಯಾವುವೂ ಸಿಗುವುದಿಲ್ಲ. ‘ಪ್ರವಾಸಿ ದಿವಸ್’ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮಲ್ಲಿನ ಸ್ಮಾರಕಗಳಾದ ವಿಧಾನಸೌಧ, ಮೈಸೂರು ಅರಮನೆ, ಗೋಲ್‌ಗುಂಬಜ್, ಹಂಪಿಯ ಕಲ್ಲಿನ ರಥ, ಕಮಲಮಹಲು ಮುಂತಾದವುಗಳ ಮಾದರಿಯ ನೆನಪಿನ ಕಾಣಿಕೆಗಳು ದೊರೆಯುವಂತೆಯೂ, ಅವು ಕರ್ನಾಟಕದ ನೆನಪಾಗಿ ಉಳಿಯುವಂತೆ ಮಾಡುವತ್ತಲೂ ಸರ್ಕಾರ ಚಿಂತಿಸಬೇಕು.
 
ಅದಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಪ್ರವಾಸ ಮಾಡುವವರು ಪ್ರಯಾಸ ಹೊಂದದಂತೆ, ವಿದೇಶಿಯರು ಸುರಕ್ಷಿತವಾಗಿ ಬಂದು ಹಿತಕರ ನೆನಪುಗಳನ್ನು ಹೊತ್ತೊಯ್ಯುವಂತೆ ಆದಾಗ ಮಾತ್ರ ‘ಪ್ರವಾಸಿ ದಿವಸ್‌’ ಸಾರ್ಥಕವಾಗುತ್ತದೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಬಹುಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT