ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ‘ಬಂಡಿ’ಯಲ್ಲಿ ಫೆನ್ಸಿಂಗ್‌ಪಟು ವೆಂಕಟೇಶ್

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ತಗ್ಗು, ದಿಣ್ಣೆಗಳಿದ್ದ ಹಾದಿಯಲ್ಲಿ ಹೊಲದತ್ತ ಸಾಗುತ್ತಿದ್ದ ಎತ್ತಿನ ಬಂಡಿ. ಅದರ ಮೇಲೆ ನಲಿಯುತ್ತಿದ್ದ ಐದು ವರ್ಷದ ಬಾಲಕ.  ಆದರೆ ಇದ್ದಕ್ಕಿದ್ದಂತೆ ನಡೆದ ಘಟನೆಯಲ್ಲಿ ನಲಿವು ಮರೆಯಾಯಿತು. ದುಃಖ ಮಡುಗಟ್ಟಿತು. ಬಂಡಿಯಿಂದ ಜಾರಿ ಕೆಳಗೆ ಬಿದ್ದಿದ್ದ ಆ ಬಾಲಕನ ಬಲಗಾಲು ಗಾಲಿಗೆ ಸಿಕ್ಕು ಮೊಣಕಾಲು
ದ್ದದವರೆಗೆ ತುಂಡಾಗಿ ಹೋಗಿತ್ತು. ಅಂದಿನಿಂದ ಕೃತಕ ಕಾಲು ಅಳವಡಿಸಿಕೊಂಡ ಆ ಹುಡುಗ ತನ್ನನ್ನು ಅಂಗವಿಕಲನನ್ನಾಗಿಸಿದ ವಿಧಿಯಾಟವನ್ನು ಸೋಲಿಸುವತ್ತ ಚಿತ್ತ ನೆಟ್ಟ. ಫಲವಾಗಿ ಇಂದು ಅಂತರರಾಷ್ಟ್ರೀಯ ಮಟ್ಟದ ವ್ಹೀಲ್‌ಚೇರ್ ಫೆನ್ಸಿಂಗ್ (ಕತ್ತಿವರಸೆ) ಪಟುವಾಗಿ ಬೆಳೆದಿದ್ದಾರೆ. 

ಫೆಬ್ರುವರಿ 16 ರಿಂದ 20ರವರೆಗೆ ಹಂಗರಿಯಲ್ಲಿ ನಡೆಯಲಿರುವ ವ್ಹೀಲ್‌ಚೇರ್ ಫೆನ್ಸಿಂಗ್ ವಿಶ್ವಕಪ್ ಟೂರ್ನಿಯ ‘ಎ’ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಎಚ್‌. ನಾಗಸಂದ್ರದ ಕೃಷಿಕ ನಾರಾಯಣ ರೆಡ್ಡಿ ಮತ್ತು ಲಕ್ಷ್ಮೀದೇವಿ ಅವರ ಮಗ ವೆಂಕಟೇಶಬಾಬು ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಈ ಹಂತಕ್ಕೆ ಬೆಳೆದಿದ್ದಾರೆ. ಆದರೆ ಈಗ ಹಂಗರಿಗೆ ಹೋಗಲು ಹಣ ಹೊಂದಿಸುವ ಸವಾಲು ಎದುರಿಸುತ್ತಿದ್ದಾರೆ.

ಕಠಿಣ ಹಾದಿಯಲ್ಲಿ ಒಂಟಿಗಾಲಿನ ಪಯಣ
ಅಪಘಾತದಲ್ಲಿ ಕಾಲು ಕಳೆದುಕೊಂಡ ವೆಂಕಟೇಶ್‌ ಬಾಬುಗೆ ಬಾಲ್ಯದಿಂದಲೂ ಕ್ರೀಡೆಯತ್ತ ಇದ್ದ ಆಕರ್ಷಣೆ ಕಡಿಮೆಯಾಗಿರಲಿಲ್ಲ.  ಆರನೇ ವಯಸ್ಸಿನಲ್ಲಿ ಕೃತಕ ಕಾಲು ಅಳವಡಿಸಿಕೊಂಡ ನಂತರ ಶಾಲೆಯಲ್ಲಿ ಕೆಲವು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ, ಉನ್ನತ ಸಾಧನೆ ಸಾಧ್ಯವಾ
ಗಲಿಲ್ಲ. ಬೆಂಗಳೂರಿಗೆ ಡಿಪ್ಲೋಮಾ ಓದಲು ಬಂದ ಮೇಲೆ ಅವರ ಜೀವನಕ್ಕೆ ಪ್ರಮುಖ ತಿರುವು ಲಭಿಸಿತು.

ಅಂಗವಿಕಲರ ಕ್ರೀಡಾಕೂಟಗಳ ಬಗ್ಗೆ ಅರಿತ ಅವರು ಆರಂಭದಲ್ಲಿ ಅಥ್ಲೆಟಿಕ್ಸ್‌, ಟೆನಿಸ್‌ಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡರು. ಆದರೆ, ಯಶಸ್ಸು ಸಿಗಲಿಲ್ಲ. ಆಗಲೇ ಅವರನ್ನು ಆಕರ್ಷಿಸಿದ್ದು ಕತ್ತಿವರಸೆ. ಟಿವಿ, ಇಂಟರ್‌ನೆಟ್‌ ಮೂಲಕ ಫೆನ್ಸಿಂಗ್ ಕುರಿತು ಅರಿತ ವೆಂಕಟೇಶಬಾಬು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಫೆನ್ಸಿಂಗ್ ತರಬೇತುದಾರ ದಬಾಂಗ್ ಸಿಂಗ್ ಅವರಲ್ಲಿ ತರಬೇತಿ ಪಡೆಯಲಾರಂಭಿಸಿದರು.

‘2013ರಿಂದ ನಾನು ಇಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸುಮಾರು ಇಪ್ಪತ್ತು ವರ್ಷಗಳಿಂದ ದಬಾಂಗ್ ಸಿಂಗ್ ಅವರು ಇಲ್ಲಿ ಫೆನ್ಸಿಂಗ್ ತರಬೇತಿ ನೀಡುತ್ತಿದ್ದಾರೆ. ಅಂತರರಾಷ್ಟ್ರೀಯ ದರ್ಜೆಯ ಕೋಚ್ ಆಗಿರುವ ಅವರಿಂದ ಸಾಕಷ್ಟು ಕಲಿತಿದ್ದೇನೆ. ಉಚಿತವಾಗಿ ಈ ತರಬೇತಿ ನೀಡುತ್ತಿರುವ ಅವರು ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ವೆಂಕಟೇಶ್ ಬಾಬು ನೆನಪಿಸಿಕೊಳ್ಳುತ್ತಾರೆ. ಅವರು ಅದೇ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ವ್ಹೀಲ್‌ಚೇರ್ ಫೆನ್ಸಿಂಗ್‌ನಲ್ಲಿ ಕಂಚಿನ ಪದಕ ಪಡೆದರು. 2015ರಲ್ಲಿ ಕೆನಡಾ ಮತ್ತು ಶಾರ್ಜಾದಲ್ಲಿ ನಡೆದ ಅಂತರರಾಷ್ಟ್ರೀಯು ಸ್ಪರ್ಧೆಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

‘ಈ ಕ್ರೀಡೆಗೆ ಬಳಕೆ ಮಾಡುವ ಸಲಕರಣೆಗಳು ದುಬಾರಿಯಾಗಿವೆ. ಎಲ್ಲ ಸ್ಪರ್ಧೆಗಳಿಗೆ ಹೋಗುವಾಗ ನನ್ನದೇ ದುಡ್ಡು ಖರ್ಚು ಮಾಡಿದ್ದೆ. ಕಳೆದ ಬಾರಿ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಹೋಗುವಾಗ ರಾಜ್ಯ ಕ್ರೀಡಾ ಇಲಾಖೆಯು ಪ್ರಯಾಣ ವೆಚ್ಚ ಭರಿಸಿತ್ತು. ಮನೆಯಲ್ಲಿ ಸಾಕಷ್ಟು ನೆರವು ನೀಡುತ್ತಿದ್ದಾರೆ’ ಎಂದು ವೆಂಕಟೇಶ್ ಹೇಳುತ್ತಾರೆ.

ಸಾಮಾನ್ಯ ವರ್ಗದ ಫೆನ್ಸಿಂಗ್ ಪಟುಗಳ ಎದುರು ಅವರು ಅಭ್ಯಾಸ ಪಡೆಯುತ್ತಿದ್ದಾರೆ. ಇವರು ವ್ಹೀಲ್‌ಚೇರ್ ಮೇಲೆ ಕುಳಿತರೆ ಎದುರಾಳಿ ಕುರ್ಚಿಯ ಮೇಲೆ ಕುಳಿತು ಅಭ್ಯಾಸ ಮಾಡುತ್ತಾರೆ. ಈ ಎಲ್ಲ ಕೊರತೆಗಳ ನಡುವೆಯೂ ಫೆನ್ಸಿಂಗ್‌ನ ಫಾರ್ ಫಾಲ್ ಮತ್ತು ಇಪೀ ವಿಭಾಗಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಭಾರತದ ಮಣಿಪುರ, ಹರಿಯಾಣ, ಅಸ್ಸಾಂ, ಕೇರಳ ರಾಜ್ಯಗಳನ್ನು ಹೊರತುಪಡಿಸಿದೆ ಉಳಿದ ಕಡೆ ಈ ಕ್ರೀಡೆ ಅಷ್ಟು ಜನಪ್ರಿಯವಾಗಿಲ್ಲ. ಆದರೂ ಇದೇ ಕ್ರೀಡೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಛಲ ವೆಂಕಟೇಶ್ ಅವರದ್ದು. 

‘ಹಂಗರಿಯ ಸ್ಪರ್ಧೆಗೆ ಹೋಗಲು 1.5 ಲಕ್ಷ  ರೂಪಾಯಿ ವೆಚ್ಚವಾಗಲಿದೆ. ನನ್ನ ಬಳಿ ಅಷ್ಟು ಹಣವಿಲ್ಲ. ಅದಕ್ಕಾಗಿ ಪ್ರಾಯೋಜಕರನ್ನು ಹುಡುಕುತ್ತಿದ್ದೇವೆ’ ಎಂದು ಹೇಳುವ  ಅವರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಗುರಿ ಇದೆ. ಉದ್ಯೋಗದ ಬೇಟೆಯನ್ನೂ ಮುಂದುವರಿಸಿದ್ದಾರೆ.

ಪ್ರಮುಖ ಸಾಧನೆಗಳು

2016: l8ನೇ ರಾಷ್ಟ್ರೀಯ ವ್ಹೀಲ್‌ಚೇರ್ ಫೆನ್ಸಿಂಗ್ ಚಾಂಪಿಯನ್‌ಷಿಪ್ –ಒಂದು ಬೆಳ್ಳಿ, ಎರಡು ಕಂಚು (ಸ್ಥಳ; ಹರಿಯಾಣ)
* ಐವಾಸ್ ಏಷ್ಯನ್ ಚೇರ್ ಫೆನ್ಸಿಂಗ್ ಚಾಂಪಿಯನ್‌ಷಿಪ್ (ಹಾಂಕಾಂಗ್)
* ಬೆಂಗಳೂರು ಯುವ ಪ್ರಶಸ್ತಿ ಪುರಸ್ಕೃತ

2015: * ಅಂತರರಾಷ್ಟ್ರೀಯ ವ್ಹೀಲ್ ಚೇರ್ ಫೆನ್ಸಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧೆ (ಕೆನಡಾ)
* ಅಂತರರಾಷ್ಟ್ರೀಯ ವ್ವೀಲ್ ಚೇರ್ ಫೆನ್ಸಿಂಗ್ –2015 (ಶಾರ್ಜಾ)

2014: * 8ನೇ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ (ಚೆನ್ನೈ)
* 7ನೇ ರಾಷ್ಟ್ರೀಯ ವ್ವೀಲ್ ಚೇರ್ ಫೆನ್ಸಿಂಗ್ –2014 ; ಒಂದು ಬೆಳ್ಳಿ, 2 ಕಂಚು (ಸ್ಥಳ: ಛತ್ತೀಸಗಡ)

2013: * 6ನೇ ರಾಷ್ಟ್ರೀಯ ವ್ಹೀಲ್‌ಚೇರ್ ಫೆನ್ಸಿಂಗ್  –ಕಂಚು (ಬೆಂಗಳೂರು)
* ರಾಷ್ಟ್ರೀಯ ವ್ಹೀಲ್‌ಚೇರ್ ಗೇಮ್ಸ್‌  –2013 (ಮುಂಬೈ)

****

ಸ್ಪರ್ಧಾತ್ಮಕ ಫೆನ್ಸಿಂಗ್‌ ಕಿಟ್ ಬಹಳ ದುಬಾರಿ. ಮಿಂಚುವ ತೆಳ್ಳನೆಯ ಕತ್ತಿಗೆ 15 ಸಾವಿರಕ್ಕೂ ಹೆಚ್ಚು ಬೆಲೆ ಇದೆ. ಪಂದ್ಯದಲ್ಲಿ ಆಡುವಾಗ ಮುರಿದು ಹೋದರೆ ಇನ್ನೊಂದು ಕತ್ತಿ ಇರಬೇಕು. ಅದಕ್ಕಾಗಿ ಎರಡು ಅಥವಾ ಮೂರು ಕತ್ತಿಗಳನ್ನು ಇಟ್ಟುಕೊಳ್ಳಬೇಕು.  ಧರಿಸುವ ಸಮವಸ್ತ್ರ, ಬಳಸುವ ವ್ಹೀಲ್‌ಚೇರ್ ಕೂಡ ದುಬಾರಿ. ಆದರು ಅಪಾರ ಆಸಕ್ತಿಯಿಂದ ವೆಂಕಟೇಶ್ ಕಲಿಯುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅಭ್ಯಾಸ ಮಾಡುತ್ತಾರೆ. ತಮ್ಮನ್ನು ಸಂಪೂರ್ಣವಾಗಿ ಈ ಕ್ರೀಡೆಗಾಗಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಉನ್ನತ ಸಾಧನೆ ಮಾಡುವ ಪ್ರತಿಭೆ ಇದೆ. ಪ್ರೋತ್ಸಾಹದ ಅಗತ್ಯವಿದೆ.
–ದಬಾಂಗ್ ಸಿಂಗ್, ಹಿರಿಯ ಫೆನ್ಸಿಂಗ್ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT