ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಕ್ಕಳು ಯಾರಂತಾಗಬೇಕು?!

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
ನನಗೆ, ನನ್ನ ಮಗನನ್ನು ಸರಿಯಾಗಿ ಬೆಳೆಸಲಿಲ್ಲ ಎನ್ನುವ ಗಿಲ್ಟ್ ಇದೆ! - ಎಂದು ಆಕೆ ಹೇಳಿದರು. ಆಕೆ ಬಹಳ ನೊಂದುಕೊಂಡಂತೆ ಇದ್ದರು. ಮಧ್ಯವಯಸ್ಸಿನ ಮಹಿಳೆ. ಒಬ್ಬನೇ ಮಗನ ತಾಯಿ. ಮಗ ಪಿಯುಸಿ ಓದುತ್ತಿದ್ದಾನೆ. ಮಗ ವೈದ್ಯನಾಗಬೇಕೆಂಬುದು ಅಮ್ಮನ ಕನಸು. ಅವನಿಗೆ ಡಾಕ್ಟರಾಗಲಿಕ್ಕೆ ಕಿಂಚಿತ್ತೂ ಇಷ್ಟವಿಲ್ಲವಂತೆ. ಇಂಜನಿಯರಿಂಗೂ ಅಷ್ಟಕ್ಕಷ್ಟೇ! ಹಾಗಾಗಿ ಆತ ಓದುವುದು ಕಡಿಮೆ. ಆಟೋಟದಲ್ಲಿ ಅವನ ಆಸಕ್ತಿ ಜಾಸ್ತಿ. ಮಗನಿಗೆ ಏನು ಇಷ್ಟವೋ ಅದನ್ನು ಕಲಿಯಲಿ – ಎನ್ನುವುದು ಅವನ ಅಪ್ಪನ ಅಭಿಪ್ರಾಯ. 
 
ತನ್ನ ಕನಸನ್ನು ಆತ ಅರ್ಥಮಾಡಿಕೊಳ್ಳುವಂತೆ ತನ್ನಿಂದ ಮಗನನ್ನು ಬೆಳೆಸಲಿಕ್ಕೆ ಅಗಲಿಲ್ಲ ಎನ್ನುವ ಕೊರಗು ಆಕೆಗೆ. ಆಕೆಯ ಅಕ್ಕನ ಮಕ್ಕಳಿಬ್ಬರೂ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯವನ್ನು ಓದುತ್ತಿದ್ದಾರೆ. ಸಂಬಂಧಿಕರೆದುರಿಗೆ ತನ್ನ ವ್ಯಕ್ತಿತ್ವದ ಘನತೆ ಕಡಿಮೆಯಾಗುತ್ತಿದೆ ಎನ್ನುವ ದುಃಖ. ಇವೆಲ್ಲವೂ ಸೇರಿಕೊಂಡು ಆಕೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡಿವೆ. 
 
ತನ್ನ ಮಗ ಬಹಳ ದೊಡ್ಡ ಮನುಷ್ಯನಾಗಬೇಕು. ಬಹಳ ಜಾಣನಾಗಬೇಕು. ಬಹಳ ಉನ್ನತವಾದ ಸ್ಥಾನವನ್ನು ಏರಬೇಕು. ನನ್ನ ಮಗಳು ಗೋಲ್ಡ್ ಮೆಡಲ್ ಗಳಿಸಬೇಕು. ಗಂಡುಮಕ್ಕಳಿಗೇನೇನೂ ಕಡಿಮೆಯಾಗದಂತೆ ಸಮಾಜದಲ್ಲಿ ಗೌರವಯುತವಾದ ಸ್ಥಾನವನ್ನು ಏರಬೇಕು – ಎನ್ನುವ ಬಹಳಷ್ಟು ಆಸೆಗಳು ಪಾಲಕರಿಗೆ ಇರುತ್ತವೆ. ಅದು ತೀರ ಸಹಜ ಕೂಡ. ಬಹಳಷ್ಟು ಮಕ್ಕಳು ತಮ್ಮ ಪಾಲಕರ ಕನಸುಗಳನ್ನು ಬದುಕುತ್ತಿರುತ್ತಾರೆ. ಅದರಿಂದ ಅವರಿಗೇನೋ ತೊಂದರೆ ಎಂದು ಪ್ರಾರಂಭದಲ್ಲಿ ಅನ್ನಿಸಿರುವುದಿಲ್ಲ. ಅವರ ಪಾಲಕರೂ ತಮ್ಮ ಕನಸನ್ನು ಸಾಕಾರಗೊಳಿಸಿದ ಮಕ್ಕಳನ್ನು ಮತ್ತೂ ಪ್ರೀತಿಸುತ್ತಾರೆ. ಅದೂ ಅಸಹಜವೇನೂ ಅಲ್ಲ. ಇನ್ನು ಕೆಲವು ಮಕ್ಕಳು ತಮ್ಮ ದಾರಿಯಲ್ಲಿ ತಾವು ನಡೆಯುತ್ತಾರೆ. ತಮ್ಮ ಕನಸುಗಳನ್ನು ಹುಡುಕಿಕೊಂಡು ಹೊರಡುತ್ತಾರೆ. ಇದು ಕೂಡ ತಪ್ಪಲ್ಲ. ಆದರೆ ಇಂತಹ ಮಕ್ಕಳ ಪಾಲಕರಿಗೆ ದಿಗಿಲು ಜಾಸ್ತಿ. ತಮ್ಮ ಮಕ್ಕಳು ಜೀವನದಲ್ಲಿ ಸರಿಯಾಗಿ ಸೆಟ್ಲ್ ಆಗುತ್ತಾರೋ ಅಥವಾ ಮುಗ್ಗರಿಸಿಬಿಡುತ್ತಾರೋ ಎನ್ನುವ ಆತಂಕವಿರುತ್ತದೆ. 
ಇದು ಇರುವುದೇ ಹೀಗೆ!  
 
ಮಕ್ಕಳು ಬೆಳೆಯುತ್ತಿದ್ದಂತೆಯೇ ಅವರವರ ಅಭಿರುಚಿ ಹಾಗೂ ಅರ್ಹತೆಗೆ ತಕ್ಕಹಾಗೆ ಏನೋ ಒಂದು ಆಗಿಯೇ ಆಗುತ್ತಾರೆ. ಈ ಜಗತ್ತಿನಲ್ಲಿ ಯಾರೂ ವಿನಾ ಕಾರಣ ಹುಟ್ಟುವುದಿಲ್ಲ. ಪ್ರತಿಯೊಬ್ಬರ ಹುಟ್ಟಿಗೆ ಒಂದು ಬಲವಾದ ಕಾರಣವಂತೂ ಇದ್ದೇ ಇರುತ್ತದೆ. ಹುಟ್ಟಿದ ನಂತರ ಅವರ ಬದುಕು ಹೇಗೆ ಅರಳಬೇಕೋ ಅದರಂತೆಯೇ ಅರಳುತ್ತದೆ. ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಹೊರಳುತ್ತದೆ. ನದಿಯೊಂದು ಹುಟ್ಟಿ ಎಲ್ಲೆಲ್ಲಿಯೋ ಹರಿಯುತ್ತ, ಅಗಲ ಆಳಗಳನ್ನು ಹೆಚ್ಚಿಸಿಕೊಳ್ಳುತ್ತ, ತನ್ನ ದಾರಿಯನ್ನು ತಾನೇ ಮಾಡಿಕೊಳ್ಳುತ್ತ ಸಾಗರವನ್ನು ಸೇರುವಂತೆ, ಅಷ್ಟೇ ಸಹಜವಾಗಿ ಮತ್ತು ಅಷ್ಟೇ ಸರಿಯಾಗಿ ನಮ್ಮ ಮಗು ಕೂಡ ಬೆಳೆಯುತ್ತಾ ಬೆಳೆಯುತ್ತಾ ತನ್ನ ಬದುಕಿನ ಗಮ್ಯವನ್ನು ಸೇರುತ್ತದೆ.  
ಇದು ಇರುವುದೇ ಹೀಗೆ! 
 
ನಿಮ್ಮ ಮಗ ಯಾರಂತೆ ಆಗಬೇಕು? ಅಂತ ನನ್ನ ಎದುರಿಗೆ ಕುಳಿತಿದ್ದ ತಾಯಿಯನ್ನು ಕೇಳಿದೆ. ಆಕೆ ‘ಡಾಕ್ಟರಾದರೆ ಸಾಕಿತ್ತು!’ ಎಂದು ತಲೆ ತಗ್ಗಿಸಿಕೊಂಡು ಮೆತ್ತಗಿನ ಧ್ವನಿಯಲ್ಲಿ ಹೇಳಿದರು. 
 
‘ನಿಮ್ಮ ಮಗ ನಿಮ್ಮಂತೆ, ಎಂದರೆ ತಾಯಿಯಂತೆ ಅಥವಾ ನಿಮ್ಮ ಪತಿಯಂತೆ ಆಗುವುದು ಬೇಡಾಂತೀರಾ?!’ ಮತ್ತೊಂದು ಪ್ರಶ್ನೆ ಕೇಳಿದೆ. 
 
ಆಕೆ ಕಾಲುಮೇಲೆ ಜಿರಳೆ ಹರಿದು ಹೋದಂತೆ ಗಡಬಡಿಸುತ್ತಾ, ‘ಅಯ್ಯೋ, ಖಂಡಿತ ನನ್ನಂತೆ ಆಗುವುದು ಬೇಡ. ಅವನ ಅಪ್ಪನಂತೆ ಯಾರೂ ಆಗುವುದು ಬೇಡ!’ ಎಂದು ಧ್ವನಿಯೇರಿಸಿಯೇ ಹೇಳಿದರು. ಆಕೆ ಬಂದು ಒಂದು ಗಂಟೆಯಷ್ಟರಲ್ಲಿ ಬಹಳ ಸ್ಪಷ್ಟವಾಗಿ ಇದನ್ನಷ್ಟೇ ಹೇಳಿದ್ದು ಕೂಡ! ನಾನು ಸುಮ್ಮನೆ ಆಕೆಯನ್ನು ನೋಡಿದೆ. ಆಕೆ ಮತ್ತೆ ತಲೆತಗ್ಗಿಸಿಕೊಂಡು ಕುಳಿತರು. 
 
ನನ್ನ ಅನುಭವದ ಪ್ರಕಾರ ತಮ್ಮ ಮಕ್ಕಳು ತಮ್ಮಂತೆ ಆಗಬೇಕು ಅಥವಾ ತಮ್ಮಂತೆ ಆದರೆ ಸಾಕು ಎನ್ನುವ ಪಾಲಕರು ಬಹಳ ಕಡಿಮೆ. ತಮ್ಮ ಮಕ್ಕಳು ಬೇರೆ ಯಾರಂತೆಯೋ ಆಗಲಿ ಅಂತ ಆಶಿಸುವ ಬಹಳ ಜನರಿದ್ದಾರೆ. ತನ್ನ ಮಗ ಸಕಲಕಲಾವಲ್ಲಭನಾಗಬೇಕು ಎಂದು ಬಯಸುವವರೂ ಇದ್ದಾರೆ. ಮಕ್ಕಳನ್ನು ಏನೇನೋ ಮಾಡಬೇಕೆನ್ನುವ ಹುರುಪಿನಲ್ಲಿ ಕಷ್ಟಪಡುವ ಬಹಳಷ್ಟು ಪಾಲಕರಿದ್ದಾರೆ. ಇಲ್ಲಿ ಮಕ್ಕಳೂ ಕೂಡ ತಮ್ಮ ಪಾಲಕರು ಕೊಡುವ ಒತ್ತಡದಿಂದ ಬಹಳ ಕಷ್ಟ ಪಡುತ್ತಾರೆ. 
 
ಇಲ್ಲಿ ಒಂದು ಚಿಕ್ಕ ಸಮಸ್ಯೆ ಇದೆ. 
 
ಈವತ್ತಿನ ಆಧುನಿಕ ಮೆಟ್ರೋ ಸಮಾಜದಲ್ಲಿ ಬಹಳಷ್ಟು ದಂಪತಿಗಳಿಗೆ ಇರುವುದು ಒಂದು ಮಗು. ಅಬ್ಬಬ್ಬಾ ಎಂದರೆ ಇಬ್ಬರು ಮಕ್ಕಳು. ಮಕ್ಕಳನ್ನು ನಮ್ಮ ಸುತ್ತಲಿನ ಸಮಾಜದಲ್ಲಿ ಕಾಣುವ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹಳಷ್ಟು ದೊಡ್ಡ ದೊಡ್ಡ ವ್ಯಕ್ತಿಗಳಲ್ಲಿ ಯಾರಂತೆ ಮಾಡಬಹುದು ಎನ್ನುವ ಗೊಂದಲ ಬಹಳಷ್ಟು ಪಾಲಕರನ್ನು ಕಾಡುತ್ತಿರುತ್ತದೆ. ಇನ್ನು ಗೊಂದಲಕ್ಕೊಳಗಾದ ಅಂತಹ ಪಾಲಕರು ತಮ್ಮ ಮಕ್ಕಳಿಗೆ ಅವರ ಜೀವನದ ಗುರಿಯ ಬಗ್ಗೆ ಯಾವ ರೀತಿಯ ಸ್ಪಷ್ಟತೆಯನ್ನು ಕೊಡಲಿಕ್ಕೆ ಸಾಧ್ಯ? ಇದು ಇಂದಿನ ಆಧುನಿಕ ಪಾಲಕರ ಸಮಸ್ಯೆಯಾಗಿದೆ. ಸಾರಾಸಗಟಾಗಿ ಅವರು ತಮ್ಮ ಗೊಂದಲವನ್ನು ತಮ್ಮ ಮಕ್ಕಳಿಗೂ ವರ್ಗಾಯಿಸುತ್ತಾರೆ.
 
ಅಲ್ಲದೇ ಬಹಳಷ್ಟು ಪಾಲಕರು, ತಮ್ಮ ಜೀವನದಲ್ಲಿ ತಮ್ಮಿಂದ ಸಾಧಿಸಲಿಕ್ಕೆ ಆಗದಿರುವ ತಮ್ಮ ಕನಸನ್ನು ತಮ್ಮ ಮಗ/ಮಗಳು ನನಸುಮಾಡಲಿ ಅಂತ ಆಶಿಸುತ್ತಾರೆ. ತಮ್ಮ ಕನಸನ್ನು ಮಕ್ಕಳ ಮೇಲೆ ಹೇರುತ್ತಾರೆ. ತನ್ನಿಂದ ರ್‍ಯಾಂಕ್ ಗಳಿಸಲಿಕ್ಕೆ ಅಗದಿರುವ ತಂದೆ ತನ್ನ ಮಗ ಯೂನಿವರ್ಸಿಟಿಯಲ್ಲಿ ಗೋಲ್ಡ್ ಮೆಡಲ್ ಗಳಿಸಬೇಕು ಅಂತ ಆಶಿಸುತ್ತಾನೆ. ಇಂಟರ್ ಯೂನಿವರ್ಸಿಟಿಯ ಆಟೋಟ ಸ್ಪಧೆಯಲ್ಲಿ ಗೆಲ್ಲಲಿಕ್ಕಾಗದ ವ್ಯಕ್ತಿ ತನ್ನ ಮಗಳು ಏಶ್ಯಾಡಿನಲ್ಲಾದರೂ ಪದಕವನ್ನುಗಳಿಸಲಿ ಎಂದು ಬಯಸುತ್ತಾನೆ. ತಮ್ಮ ಕನಸುಗಳನ್ನು ಮಕ್ಕಳ ತಲೆಯಲ್ಲಿ ತುಂಬಿ ಮಕ್ಕಳು ಅದನ್ನು ಸಾಧಿಸಬೇಕು ಎಂದು ಪಾಲಕರು ಬಯಸುತ್ತಾರೆ. ಇಂಥವರು ನಿತ್ಯ ಅತೃಪ್ತ ಪಾಲಕರು. ತಮ್ಮ ಜೀವನದ ಬಗ್ಗೆ ಇವರಿಗೆ ನೆಮ್ಮದಿ ಇಲ್ಲ. ತಮ್ಮ ಮಕ್ಕಳ ಜೀವನದಲ್ಲಿ ಕೂಡ ನೆಮ್ಮದಿ ಸಿಗಲಿಕ್ಕೆ ಬಿಡುವುದಿಲ್ಲ. 
 
ಇದು ಸರಿಯಲ್ಲ!  
 
ಇಂತಹ ಪಾಲಕರು ಗಮನಿಸಲೇಬೇಕಾದ ಸಂಗತಿ ಅಂದರೆ, ಜಗತ್ತಿನ ಪ್ರಖ್ಯಾತ ವ್ಯಕ್ತಿಗಳ ಮಕ್ಕಳೆಲ್ಲರೂ ಅವರ ಪಾಲಕರಷ್ಟೇ ಪ್ರಖ್ಯಾತರಾಗಿದ್ದಾರೆಯೇ ಎನ್ನವುದನ್ನು ನೋಡಬೇಕು. ಮಹಾಭಾರತದ ಮಹಾವೀರ ಅರ್ಜುನನ ಮಕ್ಕಳು ಅಪ್ಪನಿಗಿಂತೇನೂ ವೀರರೂ, ಸಮರ್ಥರೂ ಆಗಿರಲಿಲ್ಲ. ಕೃಷ್ಣನ ಮಕ್ಕಳು ಕೃಷ್ಣನನ್ನು ಮೀರಿಸಲಿಲ್ಲ. ತೇನಸಿಂಗನ ಮಕ್ಕಳು ವಿಶ್ವದಾಖಲೆ ಮಾಡಲಿಲ್ಲ. ನೀಲ್ ಆರ್ಮ್‌ಸ್ಟ್ರಾಂಗನ ಮಕ್ಕಳು ಚಂದ್ರನ ಮೇಲೋ, ಮಂಗಳನ ಅಂಗಳಕ್ಕೋ ಹೋಗಲಿಲ್ಲ. ಲಾಲ್ ಬಹಾದ್ದೂರ ಶಾಸ್ತ್ರೀಜಿಯವರ ಮಕ್ಕಳು ಪ್ರಧಾನಮಂತ್ರಿಗಳಾಗಲಿಲ್ಲ. ಶ್ರೇಷ್ಠ ವಿಜ್ಙಾನಿಗಳ ಮಕ್ಕಳಾಗಲೀ, ಶ್ರೇಷ್ಠ ರಾಜಕಾರಣಿಗಳ ಮಕ್ಕಳಾಗಲೀ, ಶ್ರೇಷ್ಠ ನಟರ ಮಕ್ಕಳಾಗಲೀ, ಶ್ರೇಷ್ಠ ಅಧಿಕಾರಿಗಳ ಮಕ್ಕಳಾಗಲೀ ತಮ್ಮ ಪಾಲಕರಂತೆ ಶ್ರೇಷ್ಠರಾದ ಉದಾಹರಣೆಗಳು ಬಹಳ ವಿರಳ. ಹೀಗೇ ದೊಡ್ಡವರ ಮಕ್ಕಳೆಲ್ಲರೂ ತಮ್ಮ ಪಾಲಕರಿಗಿಂತ ಶ್ರೇಷ್ಠತೆಯನ್ನು ಗಳಿಸಲೇಬೇಕು ಅಂತೇನೂ ಇಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಅದು ಸಾಧ್ಯವೂ ಅಲ್ಲ. ಒಂದಂತೂ ಸತ್ಯ. ಅದೆಂದರೆ, ಈ ಜಗತ್ತಿನಲ್ಲಿ ಹುಟ್ಟಿದವರಲ್ಲಿ ಯಾರೂ ಕನಿಷ್ಠರಿಲ; ಯಾರೂ ಗರಿಷ್ಠರಿಲ್ಲ. ಎಲ್ಲರ ಹುಟ್ಟಿಗೂ ಬದುಕಿಗೂ ಅದರದ್ದೇ ಆದ ಮಹತ್ವ ಇದ್ದೇ ಇದೆ. 
 
ಇನ್ನು, ನಮ್ಮ ಮಕ್ಕಳು ನಮ್ಮ ಮಕ್ಕಳು ಮಾತ್ರ. 
 
ಅವರು ನಮ್ಮ ಸಂತೋಷಕ್ಕಾಗಿ ಹುಟ್ಟಿದವರು. ನಾವು ಬೇಕೂಂತ ಬಯಸಿ, ಪ್ರಾರ್ಥಿಸಿದ್ದರ ಫಲವಾಗಿ ನಮ್ಮ ಬದುಕಿನಲ್ಲಿ ಬಂದವರು. ನಮ್ಮ ಬದುಕಿಗೆ ಬೆಳಕನ್ನು ತಂದವರು. ನಮ್ಮ ಬದುಕಿಗೆ ಅರ್ಥವನ್ನು ತಂದವರು. ನಮ್ಮ ಬದುಕಿನ ಸಂಭ್ರಮವನ್ನು ಹೆಚ್ಚಿಸಿದವರು. ನಮ್ಮ ಮಕ್ಕಳು ಯಾವತ್ತಿದ್ದರೂ ನಮ್ಮ ಮಕ್ಕಳು ಮಾತ್ರ.
 
ಅವರನ್ನು ನಾವು ಪ್ರೀತಿಸಬೇಕು. ಅವರನ್ನು ಅವರಾಗಿ ಅರಳುವುದಕ್ಕೆ ಅವಕಾಶವನ್ನು ಪಾಲಕರು ಮಾಡಿಕೊಡಬೇಕು. ಯಾವಾಗಲೂ ಮಕ್ಕಳಿಗೆ ಆಸರೆಯಾಗಿರಬೇಕು. ಅವರ ಬದುಕಿಗೆ ಭರವಸೆಯಾಗಿರಬೇಕು. ಅವರ ಕನಸುಗಳನ್ನು ಅವರು ನನಸನ್ನಾಗಿ ಮಾಡಿಕೊಳ್ಳಲಿಕ್ಕೆ ಪಾಲಕರು ಸಹಕರಿಸಬೇಕು. ಮಕ್ಕಳ ಆಸಕ್ತಿಯನ್ನು ಗುರುತಿಸುವ, ಅದನ್ನು ಪೋಷಿಸುವ ಕೆಲಸವನ್ನು ಸಾಧ್ಯವಾದಷ್ಟು ಆಸಕ್ತಿಯಿಂದ ಮಾಡಬೇಕು. 
 
ಬದುಕಿನ ಕೆಲವಷ್ಟು ಸಂದರ್ಭಗಳಲ್ಲಿ ಬಹಳಷ್ಟು ಜನರಿಗೆ ತಾವು ತಮ್ಮ ಪಾಲಕರ ಕನಸನ್ನು ಹೊತ್ತು ಸಾಗುತ್ತಿರುವುದು ಗಮನಕ್ಕೆ ಬರುತ್ತದೆ. ಅವರು ತಮ್ಮ ಜೀವನದಲ್ಲಿ ಸಂತೋಷದಿಂದ ಬದುಕಲಿಕ್ಕೆ ಆಗದೇ ನರಳುತ್ತಿರುತ್ತಾರೆ. ತಮ್ಮ ಕನಸುಗಳನ್ನು ಗುರುತಿಸಿಕೊಂಡು ಬದುಕಲಾರದೆ, ತಮ್ಮ ಪಾಲಕರ ಕನಸನ್ನು ನನಸು ಮಾಡಲಿಕ್ಕಾಗದೇ ಅಂತೂ ಇಂತೂ ಚಡಪಡಿಸುತ್ತ, ಅಸಂತೋಷದಲ್ಲಿ ಬದುಕುತ್ತಿರುತ್ತಾರೆ. ಹೀಗೆ ನಮ್ಮ ಸುತ್ತಲೂ ಬಹಳ ಬೇಸರದಿಂದ ಬಹಳ ಜನರು ಬಳಲುತ್ತಿದ್ದಾರೆ. 
 
ನಮ್ಮ ಮಕ್ಕಳೂ ಕೂಡ ಅಪ್ಪಿತಪ್ಪಿಯೂ ಹಾಗೆಲ್ಲ ಆಗಬಾರದು. ನಮ್ಮ ಕನಸುಗಳನ್ನು ನಮ್ಮ ಮಕ್ಕಳ ಮೇಲೆ ಯಾವತ್ತಿಗೂ ಹೇರಬಾರದು. ನಮ್ಮ ಮಕ್ಕಳು ಅವರಿವರ ಮಕ್ಕಳಂತೆ ಆಗಬೇಕು ಅಂತ ಬಯಸಬಾರದು. ಎಂದೂ ನಮ್ಮ ಮಕ್ಕಳನ್ನು ಅವರಿವರ ಮಕ್ಕಳೊಟ್ಟಿಗೆ ಹೋಲಿಸಬಾರದು. ಅಷ್ಟು ಎಚ್ಚರವನ್ನು ನಾವು ವಹಿಸಬೇಕು. ನಮ್ಮ ಮಕ್ಕಳು ನಮ್ಮ ಮಕ್ಕಳಾಗಿಯೇ ಉಳಿದು, ಬೆಳೆಯಲಿಕ್ಕೆ ಅವಕಾಶವನ್ನು ಮಾಡಿಕೊಡಬೆಕು. 
 
ನರ್ಸರಿಯೊಂದರ ಗೇಟಿಗೆ ಹಾಕಿದ ‘ಹಿ ಈಸ್‌ ನಾಟ್ ಜಾಕ್ಸನ್; ಹೀ ಈಸ್ ಯುವರ್ ಸನ್!’ ಎಂದು ಬರೆದಿರುವ ಬೋರ್ಡನ್ನು ಬೆಳಿಗ್ಗೆ ಬರುವಾಗ ನೋಡಿದೆ. ಬಹಳ ಸಮಂಜಸವೆನ್ನಿಸಿತು.  ತನ್ನಿಂದ ಡಾಕ್ಟರ್ ಆಗಲಿಕ್ಕಾಗಲಿಲ್ಲವಾದ್ದರಿಂದ ತನ್ನ ಮಗ ಡಾಕ್ಟರಾಗಬೇಕೂಂತಲೂ, ತನ್ನಿಂದ ಇಂಜನಿಯರ್ ಆಗಲಿಕ್ಕಾಗಲಿಲ್ಲವಾದ್ದರಿಂದ ತನ್ನ ಮಗಳು ಇಂಜನಿಯರಾಗಬೇಕೂಂತಲೂ ಹಟ ಹಿಡಿಯುವುದು ಸರಿಯಲ್ಲ. ನನಗಂತೂ ಇಲ್ಲಿಯವರೆಗೆ ತನ್ನ ಮಕ್ಕಳು ಮಹಾತ್ಮಾ ಗಾಂಧಿಯ ಹಾಗೆ ಆಗಬೇಕು ಅಥವಾ ಬುದ್ಧ,  ಸ್ವಾಮಿ ವಿವೇಕಾನಂದರಂತೆ ಆಗಬೇಕು ಎಂದು ಹೇಳಿದ ಪಾಲಕರ ಯಾರೂ ಸಿಕ್ಕಿಲ್ಲ!
 
 ಜೀವನದಲ್ಲಿ ಯಾವುದೇ ಕೆಲಸವೂ ಸಹ ಸಣ್ಣದಲ್ಲ ಎನ್ನುವುದನ್ನು ನಮ್ಮ ಮಕ್ಕಳಿಗೆ ನಾವು ಮನದಟ್ಟು ಮಾಡಬೇಕು. ಕೆಲಸ ಯಾವುದೇ ಆಗಿರಲಿ ಅದನ್ನು ಎಷ್ಟು ಶ್ರದ್ಧೆಯಿಂದ ಎಷ್ಟು ಚೆನ್ನಾಗಿ ಮಾಡುತ್ತೀಯಾ ಎನ್ನುವುದರ ಮೇಲೆ ನಿನ್ನ ಜೀವನದ ಯಶಸ್ಸು ನಿಂತಿದೆ ಎನ್ನುವ ಸತ್ಯವನ್ನು ಮಕ್ಕಳಿಗೆ ತಿಳಿಸಲಿಕ್ಕೆ ಪ್ರಯತ್ನಿಸಬೇಕು. 
 
ಈಗ ಹೇಳಿ, ನಿಮ್ಮ ಮಕ್ಕಳು ಯಾರಂತೆ ಆಗಬೇಕು ಎಂದು ನಿಮ್ಮ ಆಸೆ?! 
 
**
* ಮಕ್ಕಳು ಬೆಳೆಯುತ್ತಿದ್ದಂತೆಯೇ ಅವರವರ ಅಭಿರುಚಿ ಹಾಗೂ ಅರ್ಹತೆಗೆ ತಕ್ಕ ಹಾಗೆ ಬೆಳೆಯುತ್ತಾರೆ ಎನ್ನುವ ವಾಸ್ತವವನ್ನು ಪಾಲಕರು ಅರ್ಥೈಸಿಕೊಳ್ಳಬೇಕು.
 
* ಮಕ್ಕಳು ತಮ್ಮಂತೆ ಆಗಬೇಕು ಎನ್ನುವ ಪಾಲಕರು  ಕಡಿಮೆ. 
 
* ತಮ್ಮ ಮಕ್ಕಳು ಬೇರೆ ಯಾರಂತೆಯೋ ಆಗಲಿ ಅಂತ ಆಶಿಸುವ ಬಹಳ ಜನರಿದ್ದಾರೆ.
 
* ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹಳಷ್ಟು ದೊಡ್ಡ ದೊಡ್ಡ ವ್ಯಕ್ತಿಗಳಲ್ಲಿ ಯಾರಂತೆ ಮಾಡಬಹುದು ಎಂಬ ಯೋಚನೆಯೇ ಬಹಳಷ್ಟು ಪಾಲಕರನ್ನು ಕಾಡುತ್ತಿರುತ್ತದೆ. 
 
* ಬಹಳಷ್ಟು ಪಾಲಕರು, ತಮ್ಮ ಜೀವನದಲ್ಲಿ ತಮ್ಮಿಂದ ಸಾಧಿಸಲಿಕ್ಕೆ ಆಗದಿರುವ ತಮ್ಮ ಕನಸನ್ನು ತಮ್ಮ ಮಗ/ಮಗಳು ನನಸು ಮಾಡಲಿ ಎಂದು ಆಶಿಸುತ್ತಾರೆ. 
 
* ಜಗತ್ತಿನ ಪ್ರಖ್ಯಾತ ವ್ಯಕ್ತಿಗಳ ಮಕ್ಕಳೆಲ್ಲರೂ ಅವರ ಪಾಲಕರಷ್ಟೇ ಪ್ರಖ್ಯಾತರಾಗಿಲ್ಲವಷ್ಟೆ. 
 
* ಮಕ್ಕಳನ್ನು ಪದೇ ಪದೇ ಇತರರ ಮಕ್ಕಳಿಗೆ ಹೋಲಿಸಬೇಡಿ. ಇದರಿಂದ ಅವರು ಮಾನಸಿಕವಾಗಿ ಕುಗ್ಗಬಹುದು.
 
* ಮಕ್ಕಳೂ ಪಾಲಕರಂತೆ ಆಗಬೇಕು ಎಂದಿಲ್ಲ. ಪ್ರತಿ ಮಗುವಿನ/ವ್ಯಕ್ತಿಯ ಮಾನಸಿಕ ಸಾಮರ್ಥ್ಯವೂ ಬೇರೆ ಬೇರೆ ಇರುತ್ತದೆ.
 
* ಹುಟ್ಟಿನಿಂದಲೇ ಯಾರೊಬ್ಬರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ. ಹೀಗೆಯೇ ಎಲ್ಲರೂ ಯಾವುದಾದರೊಂದು ಕಾರಣಕ್ಕಾಗಿಯೇ ಹುಟ್ಟಿರುತ್ತಾರೆ.
(ಲೇಖಕರು ಆಪ್ತಸಮಾಲೋಚಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT