ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ
Last Updated 20 ಜನವರಿ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಇಬ್ಬರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಒಬ್ಬ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಪ್ರಕರಣಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಎಂ.ಬಸವರಾಜು, ಬಿಬಿಎಂಪಿಯ ಮಹದೇವಪುರ ವಲಯದ ಸಹಾಯಕ ಎಂಜಿನಿಯರ್ ಎಚ್‌.ಸಿ.ರಾಮಚಂದ್ರಪ್ಪ ಹಾಗೂ ಬಿಡಿಎ ಭೂಸ್ವಾಧೀನ ವಿಶೇಷ ಅಧಿಕಾರಿ ಜಿ.ಎಚ್‌.ನಾಗಹನುಮಯ್ಯ (ಕೆಎಎಸ್‌ ಶ್ರೇಣಿ) ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಅಡಿಯಲ್ಲಿ ಎಸಿಬಿಗೆ ಪೊಲೀಸ್‌ ಠಾಣೆ ಅಧಿಕಾರವಿಲ್ಲ. ಎಸಿಬಿ ವಿಭಾಗಗಳಿಗೆ ಕೇವಲ ಪೊಲೀಸ್ ಅಧಿಕಾರಿ ನಿಯುಕ್ತಿ ಮಾಡಲಾಗಿದೆ. ಅವರಿಗೆ ತನಿಖಾ  ಅಧಿಕಾರ ನೀಡಿಲ್ಲ. ಆದ್ದರಿಂದ ನಮ್ಮ ವಿರುದ್ಧ ದಾಖಲಿಸಲಾಗಿರುವ ಪ್ರಥಮ ವರ್ತಮಾನ ವರದಿಗಳಿಗೆ (ಎಫ್‌ಐಆರ್‌)  ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

ನಕ್ಷೆ ಪರವಾನಗಿ ನೀಡಲು ₹ 2.35 ಲಕ್ಷ ಲಂಚ ಕೇಳಿದ ಆರೋಪದಡಿ ಬಸವರಾಜು ಮತ್ತು ರಾಮಚಂದ್ರಪ್ಪ ವಿರುದ್ಧ ಎಚ್‌.ಎಸ್‌.ಮಂಜುನಾಥ್ ಅವರು ಎಸಿಬಿಗೆ 2016ರ ನವೆಂಬರ್ 29ರಂದು ದೂರು ಸಲ್ಲಿಸಿದ್ದರು.

ಭೂ ಪರಿವರ್ತನೆಗೆ ಸಂಬಂಧಿಸಿದಂತೆ ನಿರಾಕ್ಷೇಪಣೆ ಪತ್ರ ನೀಡಲು ನಾಗಹನುಮಯ್ಯ ₹ 40 ಸಾವಿರ ಲಂಚ ಕೇಳಿದ್ದರು ಎಂದು ಎಚ್.ಆರ್.ಉಮೇಶ್ ಎಂಬುವರು ಎಸಿಬಿಗೆ ಕಳೆದ ತಿಂಗಳ 14ರಂದು ದೂರು ನೀಡಿದ್ದರು. ಈ ದೂರುಗಳ ಅನುಸಾರ ಎಸಿಬಿ ಎಫ್‌ಐಆರ್‌ ದಾಖಲು ಮಾಡಿತ್ತು. ಅರ್ಜಿದಾರರ ಪರ ಎಂ.ಎಸ್‌.ಭಾಗವತ್‌ ಹಾಜರಾಗಿದ್ದರು.

ತನಿಖಾ ಅಧಿಕಾರ ಇಲ್ಲ...
‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 17ರ ಅಡಿಯಲ್ಲಿ ಎಸಿಬಿಯ ಎಲ್ಲಾ ಪೊಲೀಸ್ ಇನ್‌ಸ್ಪೆಕ್ಟ್‌ರ್‌ಗಳಿಗೆ ಪ್ರಕರಣಗಳ ತನಿಖೆ ನಡೆಸಲು ಅಧಿಕಾರ ನೀಡಿ ರಾಜ್ಯ ಸರ್ಕಾರ 2016ರ ಏಪ್ರಿಲ್‌ 21ರಂದು ಅಧಿಸೂಚನೆ ಹೊರಡಿಸಿದೆ. ಆದರೆ ಎಸಿಬಿಗಳನ್ನು ಪೊಲೀಸ್ ಠಾಣೆ ಎಂದು ಘೋಷಿಸದ ಹೊರತು ಇವುಗಳಿಗೆ ತನಿಖಾ ಅಧಿಕಾರ ಇಲ್ಲ’ ಎಂಬುದು ಅರ್ಜಿದಾರರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT